1 : ಆನಂದ ಗೀತೆಯನು ಹಾಡು
ಹೆರದವಳೇ, ಬಂಜೆಯಾಗಿದ್ದವಳೇ;
ಉಲ್ಲಾಸದಿಂದ ಅರಚು, ಬೇನೆಯನು
ಅನುಭವಿಸದವಳೇ.
‘ಗಂಡನುಳ್ಳವಳಿಗಿಂತ ಹೆಚ್ಚು ಮಕ್ಕಳನ್ನು
ಹೆರುವೆ’
ಎಂದು ಹೇಳುತ್ತಾರೆ ಸರ್ವೇಶ್ವರಸ್ವಾಮಿ ನಿನಗೆ.
2 : ವಿಸ್ತರಿಸು ನಿನ್ನ ಗುಡಾರವನು, ಚಾಚು ಮುಂದಕೆ
ಗುಡಾರದ ಬಟ್ಟೆಗಳನು,
ಹೆದರಬೇಡ; ಉದ್ದಮಾಡು ಹಗ್ಗಗಳನು,
ಬಲಪಡಿಸು ಗೂಟಗಳನು.
3 : ಏಕೆಂದರೆ ಹಬ್ಬಿಕೊಳ್ಳುವೆ ನೀನು
ಎಡಬಲದೊಳು ಎಲ್ಲೆಲ್ಲು,
ವಶಮಾಡಿಕೊಳ್ಳುವರು ನಿನ್ನ ಸಂತಾನದವರು
ಜನಾಂಗಗಳನು.
ಜನಭರಿತವಾಗುವಂತೆ ಮಾಡುವರು
ಪಾಳುಬಿದ್ದ ಪಟ್ಟಣಗಳನು.
4 : ಅಂಜಬೇಡ, ನಿನಗಾಗುವುದಿಲ್ಲ ಅವಮಾನ ನಾಚಬೇಡ, ನಿನಗಾಗದು ಆಶಾಭಂಗ. ಮರೆವೆ ಯೌವನದಲ್ಲಿ ನಿನಗಾದ ಅವಮಾನವನು ವೈಧವ್ಯದಲ್ಲಾದ ನಿಂದೆ ನೆನಪಿಗೆ ಬಾರದಿನ್ನು.
5 : ನಿನ್ನ ಸೃಷ್ಟಿಕರ್ತನೆ ನಿನಗೆ ಪತಿಯು ‘ಸೇನಾಧೀಶ್ವರನಾದ ಸರ್ವೇಶ್ವರ’ ಆತನ ಹೆಸರು. ಇಸ್ರಯೇಲಿನ ಪರಮಪಾವನನೆ ನಿನ್ನ ಉದ್ಧಾರಕನು. ‘ಸರ್ವಲೋಕದ ದೇವ’ ಆತನ ನಾಮಧೇಯ.
6 : ಗಂಡಬಿಟ್ಟು ಮನನೊಂದಿರುವ ಪತ್ನಿ ನೀನು ಹೌದು, ತ್ಯಜಿಸಲಾದ ಯೌವನದ ಪತ್ನಿ ನೀನು. ಸರ್ವೇಶ್ವರ ಕನಿಕರಿಸಿ ಕರೆದಿಹನು ನಿನ್ನನು. ಆ ನಿನ್ನ ದೇವರ ನುಡಿಯಿದು:
7 : “ಬಿಟ್ಟಿದ್ದೆನು ನಿನ್ನನು ಕ್ಷಣಮಾತ್ರ ಪ್ರೀತಿಯಿಂದ ಸೇರಿಸಿಕೊಳ್ಳುವೆ ಹತ್ತಿರ.
8 : ತಟ್ಟನೆ ಉಕ್ಕು ಹರಿಯುವ ಕೋಪದಿಂದ
ಕ್ಷಣಮಾತ್ರ ಮುಖಮರೆಸಿಕೊಂಡೆ ನಿನ್ನಿಂದ
ಕರುಣಿಸುವೆನು ನಿನ್ನನು ಶಾಶ್ವತ
ಕೃಪೆಯಿಂದ.”
ಇಂತೆನ್ನುತಿಹನು ನಿನ್ನ ಉದ್ಧಾರಕ ಸರ್ವೇಶ್ವರ.
9 : “ಶಪಥಮಾಡಿದೆ ನಾನು ನೋಹನ
ದಿನದಂದು:
ಜಲಪ್ರಳಯವು ಭೂಮಿಯನು ಇನ್ನು
ಮುಳುಗಿಸದೆಂದು.
ಶಪಥಮಾಡುವೆ ಈಗ ‘ಕೋಪಮಾಡೆನು’
ಎಂದು
‘ಇನ್ನು ನಿನ್ನನು ಗದರಿಸೆನು’ ಎಂದು.
10 : ಬಿರುಕುಬಿಟ್ಟಾವು ಬೆಟ್ಟಗಳು, ಕದಲಿಯಾವು
ಗುಡ್ಡಗಳು,
ನನ್ನ ಅಚಲ ಪ್ರೀತಿಯಾದರೊ
ಬಿಟ್ಟುಹೋಗದು ನಿನ್ನನು.
ಶಾಂತಿಸಮಾಧಾನದ ನನ್ನೀ ಒಪ್ಪಂದವು
ಕದಲದು.
ನಿನ್ನ ಮೇಲೆ ಕರುಣೆಯಿಟ್ಟಿರುವ
ಸರ್ವೇಶ್ವರನ ನುಡಿಯಿದು.”
ಜೆರುಸಲೇಮಿನ ಭವ್ಯ ಭವಿಷ್ಯ
11 : “ಶೋಷಣೆಗೆ, ಬಿರುಗಾಳಿಗೆ, ನಿರ್ಗತಿಗೆ
ಗುರಿಯಾದವಳೇ,
ನಿರ್ಮಿಸುವೆ ನಿನ್ನನು ವಜ್ರವೈಡೂರ್ಯಗಳಿಂದ
ಅಸ್ತಿವಾರ ಹಾಕುವೆ ನಿನಗೆ ನೀಲಮಣಿ
ಗಳಿಂದ.
12 : ನಿರ್ಮಿಸುವೆ ನಿನ್ನ ಗೋಪುರಗಳನು
ಮಾಣಿಕ್ಯಗಳಿಂದ
ನಿನ್ನ ಪೌಳಿಗೋಡೆಯನು
ಅನಘ್ರ್ಯ ರತ್ನಗಳಿಂದ.
13 : ನಿನ್ನ ಮಕ್ಕಳು ಶಿಕ್ಷಿತರಾಗುವರು ನನ್ನಿಂದ
ಸಮೃದ್ಧವಾಗಿ ಬಾಳುವರು ಅವರು
ಸುಖಶಾಂತಿಯಿಂದ.
14 : ನ್ಯಾಯನೀತಿ ನಿನಗಾಧಾರ; ದೂರವಿರುವುದು
ಹಿಂಸಾಚಾರ.
ಭಯಭೀತಿಗೆ ದೂರ, ಅವು ಬಾರವು ನಿನ್ನ
ಹತ್ತಿರ.
15 : ನಿನ್ನ ಮೇಲೆ ಆಕ್ರಮಣಕೆ ಬರುವವನು
ಪಡೆದಿಲ್ಲ ಅನುಮತಿ ನನ್ನಿಂದ
ನಿನ್ನ ಮೇಲೆ ಆಕ್ರಮಣ ಮಾಡುವವನು
ಪಡೆವನು ಸೋಲನು ನಿನ್ನಿಂದ.
16 : ಕೆಂಡ ಊದಿ ಕುಲುಮೆಯಲ್ಲಿ ಆಯುಧ
ಮಾಡುವ ಕಮ್ಮಾರನನು
ನಾನೇ ಸೃಷ್ಟಿಸಿದಾತ.
ವಿನಾಶಮಾಡಲು ಬರುವ ಕೆಡುಕರನು
ನಾನೇ ಉಂಟುಮಾಡಿದಾತ.
17 : ಸಫಲವಾಗದು ನಿನ್ನ ವಿರುದ್ಧ
ಪ್ರಯೋಗಿಸಿದ ಆಯುಧ
ನ್ಯಾಯಸ್ಥಾನದಲ್ಲಿ ನಿನ್ನ ಪ್ರತಿವಾದಿ
ಪಡೆವನು ಅಪಜಯ
ನನ್ನ ದಾಸನನು ರಕ್ಷಿಸಿ ಆತನಿಗೆ
ನೀಡುವೆ ವಿಜಯ”
ಇದು ಸರ್ವೇಶ್ವರನ ವಾಕ್ಯ.