1 : ಎಚ್ಚರಗೊಳ್ಳು, ಎಚ್ಚರಗೊಳ್ಳು
ಓ ಸಿಯೋನೇ,
ಶಕ್ತಿಶಾಲಿಯಾಗು ಪವಿತ್ರನಗರ ಜೆರುಸಲೇಮೆ.
ಧರಿಸಿಕೊ ನಿನ್ನ ಚಂದದ ಉಡುಪನು
ನಿನ್ನೊಳಗೆ ಪ್ರವೇಶಿಸರು ಇನ್ನು
ಅಪವಿತ್ರರು, ಅನ್ಯಧರ್ಮೀಯರು.
2 : ಖೈದಿಯಾಗಿ ಬಿದ್ದಿರುವ ಸಿಯೋನ್ ಕನ್ಯೆಯೆ,
ಕಿತ್ತುಬಿಡು ಬಂಧನವನು ನಿನ್ನ
ಕುತ್ತಿಗೆಯಿಂದ
ಸಿಂಹಾಸನಾರೂಢಳಾಗು ಜೆರುಸಲೇಮೆ
ಝಾಡಿಸಿ ಎದ್ದುನಿಂತು ದುಂಬುಧೂಳಿನಿಂದ !
3 : ಏಕೆಂದರೆ ಸರ್ವೇಶ್ವರ ಹೀಗೆಂದು ಹೇಳಿದ್ದಾರೆ – ‘ಬೆಲೆಯಿಲ್ಲದೆ ಮಾರಲ್ಪಟ್ಟಿರಿ; ಹಣವಿಲ್ಲದೆ ಮುಕ್ತರಾಗುವಿರಿ.’
4 : ದೇವರಾದ ಸರ್ವೇಶ್ವರ ಹೇಳಿಕೊಳ್ಳುವುದೇನೆಂದರೆ: “ಹಿಂದೆ ನನ್ನ ಜನರು ಈಜಿಪ್ಟಿನಲ್ಲೆ ಇಳಿದುಕೊಳ್ಳಲು ಹೋದರು. ಕೊನೆಗೆ ಅಸ್ಸೀರಿಯರು ಅವರನ್ನು ನಿಷ್ಕಾರಣವಾಗಿ ಹಿಂಸಿಸಿದರು.
5 : ಈಗಲೂ ಅನ್ಯರು ನನ್ನ ಜನರನ್ನು ಕಾರಣವಿಲ್ಲದೆ ಕರೆದೊಯ್ದಿದ್ದಾರೆ. ಇಲ್ಲಿ ನಾನು ಸುಮ್ಮನಿರುವುದಾದರೂ ಹೇಗೆ? ಆಳುತ್ತಿರುವವರು ನನ್ನ ಪ್ರಜೆಯಾದವರನ್ನು ಗೋಳಿಡಿಸುತ್ತಿದ್ದಾರೆ, ಎಡೆಬಿಡದೆ ನನ್ನ ಶ್ರೀ ನಾಮವು ದಿನವೆಲ್ಲ ದೂಷಣೆಗೆ ಗುರಿಯಾಗುತ್ತಿದೆ.
6 : ಹೀಗಿರಲು ನನ್ನ ಜನರು ನನ್ನ ನಾಮದ ಮಹತ್ವವನ್ನು ಒಂದು ದಿನ ಅರಿತುಕೊಳ್ಳುವರು.” ಇದು ಸರ್ವೇಶ್ವರ ಸ್ವಾಮಿಯ ನುಡಿ.
7 : ಶುಭಕರ ಸಮಾಚಾರವನು ತರುವ
ಶಾಂತಿಸಮಾಧಾನವನು ಸಾರುವ
ಸಂತಸದ ಸಂದೇಶವನು ಅರುಹುವ
ಜೀವೋದ್ಧಾರವನು ಪ್ರಕಟಿಸುವ
‘ನಿನ್ನ ದೇವರೇ ರಾಜ್ಯಭಾರ ವಹಿಸುವ’
ಎಂದು ಸಿಯೋನಿಗೆ ತಿಳಿಯಪಡಿಸುತ್ತ
ಪರ್ವತಗಳಿಂದ ಇಳಿದುಬರುವ
ಶಾಂತಿದೂತನ ಪಾದಪದ್ಮಗಳು
ಎಷ್ಟೊಂದು ಸುಂದರ !
8 : ಆಲಿಸಿ ಕೇಳು ನಿನ್ನ ಕಾವಲುಗಾರರ ಕೂಗನು:
ಸರ್ವೇಶ್ವರ ಸಿಯೋನಿಗೆ ಮರಳಿ
ಬರುತ್ತಿರುವುದನು
ಕಣ್ಣಾರೆ ಕಂಡು ಕೂಡಿಹಾಡುತ್ತಿಹರು
ಗೀತವನು.
9 : ಜೆರುಸಲೇಮಿನ ಹಾಳುಬಿದ್ದ ಪ್ರದೇಶಗಳೇ,
ಜಯಕಾರಮಾಡಿ ತಟ್ಟನೆ, ಹಾಡಿರಿ ಒಟ್ಟಿಗೆ.
ಬಿಡುಗಡೆ ಮಾಡಿರುವನು ಸರ್ವೇಶ್ವರ
ಜೆರುಸಲೇಮನು
ತಂದಿರುವನು ತನ್ನ ಜನರಿಗೆ ಸಮಾಧಾನವನು.
10 : ಪ್ರದರ್ಶಿಸಿಹನು ಸ್ವಾಮಿ ಸರ್ವೇಶ್ವರನು
ರಾಷ್ಟ್ರಗಳಿಗೆಲ್ಲ ತನ್ನ ಶ್ರೀಶಕ್ತಿಯನು.
ಕಾಣುವುವು ಜಗದ ಎಲ್ಲೆಎಲ್ಲೆಗಳು
ನಮ್ಮ ದೇವ ಸಾಧಿಸುವ ಮುಕ್ತಿಯನು.
11 : ಹೊರಡಿರಿ, ನೀವು ಹೊರಡಿರಿ
ಬಾಬಿಲೋನಿನಿಂದ
ಅಶುದ್ಧವಾದುವನ್ನು ಮುಟ್ಟದೆ ತೆರಳಿ
ಅಲ್ಲಿಂದ.
ಸರ್ವೇಶ್ವರನ ಆರಾಧನಾ ಉಪಕರಣಗಳನು
ಹೊರುವವರೇ,
ನಿಮ್ಮನು ನೀವೆ ಪರಿಶುದ್ಧವಾಗಿರಿಸಿಕೊಂಡು
ತೆರಳಿ ಹೊರಗೆ.
12 : ಅವಸರವಾಗಿ ನೀವು ಹೊರಡಬೇಕಿಲ್ಲ
ನೆಗೆನೆಗೆದು ನೀವು ಓಡಬೇಕಿಲ್ಲ.
ಹೋಗುವನು ಸರ್ವೇಶ್ವರ ನಿಮಗೆ
ಮುಂಬಲವಾಗಿ,
ನಿಮಗಿರುವನು ಇಸ್ರಯೇಲ್ ದೇವರು
ಹಿಂಬಲವಾಗಿ.
13 : ನನ್ನ ದಾಸನಿದೋ, ಕೃತಾರ್ಥ
ಆಗುವವನಾತ ಮಹಿಮಾನ್ವಿತ
ಏರುವನು ಉನ್ನತ ಪದವಿಗಾತ.
14 : ಆತನ ಮುಖ ನರಮಾನವರ ಮುಖಕ್ಕಿಂತ
ಆತನ ರೂಪ ನರಪುತ್ರರ ರೂಪಕ್ಕಿಂತ
ವಿಕಾರಗೊಂಡಿದೆ ನಿಜ;
ಆದರೆ ಹಲವರು ನೋಡಿ ಆದರು ಚಕಿತ.
15 : ಅಂತೆಯೆ ಹಲರಾಷ್ಟ್ರಗಳು ಚಕಿತವಾಗುವುವು
ಅಚ್ಚರಿಗೊಂಡು
ಬಾಯಿಮುಚ್ಚಿಕೊಳ್ಳುವರು ಅರಸರು
ಆತನನು ಕಂಡು.
ಏಕೆನೆ, ನೋಡುವರವರು ಅಪೂರ್ವ
ಸಂಗತಿಯೊಂದನು
ಗ್ರಹಿಸಿಕೊಳ್ಳುವರವರು ಎಂದೂ ಕೇಳದ
ವಿಷಯವನು.