Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಶಾಯ


1 : ಇಸ್ರಯೇಲೆಂಬ ನಾಮಧಾರಿಗಳೇ, ಯೆಹೂದ ವಂಶೋತ್ಪನ್ನರೇ, ಯಕೋಬ ಮನೆತನದವರೇ, ಇಡುತ್ತೀರಿ ನೀವು ಸರ್ವೇಶ್ವರನ ಮೇಲೆ ಆಣೆ ಸ್ಮರಿಸುತ್ತೀರಿ ನಿಸ್ಸಂದೇಹವಾಗಿ ಇಸ್ರಯೇಲಿನ ದೇವರನೆ. ಆದರೆ, ದೂರವಾಗಿದೆ ಸತ್ಯಕ್ಕೂ ಧರ್ಮಕ್ಕೂ ನಿಮ್ಮ ಕಾರ್ಯಾಚರಣೆ.
2 : ಹೆಮ್ಮೆ ಪಡುವರಿವರು ತಾವು ಪವಿತ್ರ ನಗರದವರೆಂದು ಭರವಸೆಯಿಂದಿರುವರು ದೇವರು ಇಸ್ರಯೇಲಿನವನೇ ಎಂದು ಆತನ ಹೆಸರು ಸೇನಾಧೀಶ್ವರ ಸರ್ವೇಶ್ವರನೇ ಎಂದು.
3 : “ಕೇಳು, ಎಲೈ ಯಕೋಬ ಮನೆತನವೇ, ನಿನಗೆ ತಿಳಿಸಿದೆ ಈವರೆಗೆ ನಡೆದ ಸಂಗತಿಗಳನು ಪೂರ್ವದಲೇ. ಹೌದು ಪ್ರಕಟಿಸಿದೆ ನಾನು, ಹೊರಡಿಸಿದೆ ನನ್ನ ಬಾಯಿಂದಲೇ ಕೈಗೂಡುವಂತೆ ಮಾಡಿದೆ ನಾನವುಗಳನು ಕೂಡಲೆ.
4 : ತಿಳಿದಿದೆ ನನಗೆ ನಿನ್ನ ಹಟಮಾರಿತನ ನಿನ್ನ ಕುತ್ತಿಗೆಯ ನರಗಳು ಕಬ್ಬಿಣ ನಿನ್ನ ಹಣೆ ಕಂಚಿನಂತೆ ಕಠಿಣ.
5 : ‘ಈ ಕಾರ್ಯಗಳನ್ನು ನಡೆಸಿದ್ದು ನನ್ನ ವಿಗ್ರಹವೇ ವಿಧಿಸಿದ್ದು ನನ್ನ ಕೆತ್ತನೆಯ ಬೊಂಬೆಯೇ, ಎರಕದ ಮೂರ್ತಿಯೇ’ ಎಂದು ನೀ ಜಂಬ ಕೊಚ್ಚಿಕೊಳ್ಳದಂತೆ ಪುರಾತನ ಕಾಲದಲ್ಲೆ ನಾನಿವುಗಳನು ಮುಂತಿಳಿಸಿದೆ. ಅವುಗಳು ನೆರವೇರುವುದಕ್ಕೆ ಮುಂಚೆಯೇ ಪ್ರಕಟಿಸಿದೆ.
6 : ನೋಡು, ನೀ ಕೇಳಿದವೆಲ್ಲ ನಡೆದಿದೆಯೊ ಇಲ್ಲವೋ ಎಂಬುದನು. ಆದರೂ ಘೋಷಿಸುತ್ತಾರೆಯೇ ನಿನ್ನವರು ಅವುಗಳನ್ನು? ಅರುಹುವೆನು ನಿನಗಿಂದಿನಿಂದ ಹೊಸ ಸಂಗತಿಗಳನು ಈವರೆಗೂ ನೀನರಿಯದ ಗುಪ್ತ ವಿಷಯಗಳನು.
7 : ಪುರಾತನ ಕಾಲದಲ್ಲಿ ಅಲ್ಲ, ಈಗ ನಡೆಯುತ್ತಿವೆ ಈ ಘಟನೆಗಳೆಲ್ಲ. ‘ಇದೆಲ್ಲ ನನಗೆ ಮೊದಲೇ ತಿಳಿದಿತ್ತಲ್ಲಾ,’ ಎಂದು ನೀ ಕೊಚ್ಚಿಕೊಳ್ಳದಂತೆ, ನಾ ನಿನಗೆ ಮುಂತಿಳಿಸಲಿಲ್ಲ.
8 : ಹೌದು, ಹೌದು ನೀ ಕೇಳಿಲ್ಲ, ತಿಳಿದೂ ಇಲ್ಲ ಆದಿಯಿಂದ ನಿನ್ನ ಕಿವಿ ತೆರೆದೂ ಇಲ್ಲ ನೀನು ಆಗರ್ಭ ದ್ರೋಹಿ, ಮಹಾ ಕುಟಿಲ ಎಂಬುದು ನನಗೆ ತಿಳಿದಿದೆಯಲ್ಲ !
9 : ಆದರೂ ನನ್ನ ಹೆಸರು ಕೆಡದಂತೆ ತಡೆಹಿಡಿವೆನು ನಿನ್ನ ಮೇಲಣ ಕೋಪವನು; ನನ್ನ ಕೀರ್ತಿಗೆ ಕಳಂಕ ಬಾರದಂತೆ ತಾಳಿಕೊಳ್ಳುವೆನು, ನಿರ್ಮೂಲಮಾಡದೆ ನಿನ್ನನು.
10 : ಬೆಳ್ಳಿಯನು ಪುಟಕ್ಕೆ ಹಾಕಿದಂತಲ್ಲ; ನಿನ್ನನು ಸಂಕಟವೆಂಬ ಕೆಂಡಕ್ಕೆ ಹಾಕಿರುವೆ. ಶೋಧಿಸಿರುವೆನು, ಪರಿಶೋಧಿಸಿರುವೆನು ನಿನ್ನನು ನನಗಾಗೆ;
11 : ಇದನ್ನು ಮಾಡುವೆ ನನಗೋಸ್ಕರವೆ ಇದನ್ನು ಮಾಡುವೆ ಕಳಂಕಬಾರದಂತೆ ನನ್ನ ಹೆಸರಿಗೆ ಸಲ್ಲಗೊಡಿಸೆನು ನನ್ನ ಮಹಿಮೆಯನು ಮತ್ತೊಬ್ಬನಿಗೆ.” ಸರ್ವೇಶ್ವರನಿಂದ ಆಯ್ಕೆಯಾದ ಸೈರಸನು
12 : “ಯಕೋಬೆ, ನಾ ಕರೆದ ಇಸ್ರಯೇಲೆ ನನಗೆ ಕಿವಿಗೊಡು, ಪರಮಾತ್ಮ ನಾನೆ ಆದಿಯು ನಾನೆ, ಅಂತ್ಯವು ನಾನೆ.
13 : ಭೂಮಿಗೆ ಅಸ್ತಿವಾರ ಹಾಕಿದ್ದು ನನ್ನ ಕೈಯೇ, ಆಕಾಶವನ್ನು ಹರಡಿದ್ದು ನನ್ನ ಬಲಗೈಯೇ ಇವೆರಡೂ ಬರುತ್ತವೆ ನಾ ಕರೆದ ಮಾತ್ರಕ್ಕೇ.
14 : ಒಟ್ಟುಗೂಡಿ ಕೇಳಿ ನೀವೆಲ್ಲರು ಇದನ್ನು: ಆ ದೇವರುಗಳಲ್ಲಿ ಮುಂತಿಳಿಸಿದವನಾರು ಈ ಸಂಗತಿಯನು? ನನ್ನ ಪ್ರೀತಿಗೆ ಪಾತ್ರನಾದ ವ್ಯಕ್ತಿ ಸೈರಸನು ಕಸ್ದೀಯರ ಮೇಲೆ ಕೈಯೆತ್ತುವನು, ಈಡೇರಿಸುವನು ಬಾಬೆಲಿನಲ್ಲಿ ನನ್ನ ಇಷ್ಟಾರ್ಥವನು.
15 : ಆತನನ್ನು ಹೆಸರಿಸಿ ಕರೆದವನು ನಾನೇ ಆತನನ್ನು ಬರಮಾಡಿದವನೂ ನಾನೇ. ಆತನು ಗಳಿಸುವುದು ಜಯವನ್ನೇ.
16 : ಬಂದು ಕೇಳಿ ಇದನ್ನು ಹತ್ತಿರದಿಂದ ನಾ ಮಾತಾಡಿಲ್ಲ ಗುಟ್ಟಾಗಿ ಆದಿಯಿಂದ ಪ್ರಸನ್ನನಾಗಿಹೆನು ಭುವಿ ಉಂಟಾದಂದಿನಿಂದ.” (ಕಳುಹಿಸಿದ್ದಾರೆ ದೇವರಾದ ಸರ್ವೇಶ್ವರ ನನ್ನನ್ನೀಗ ತಮ್ಮ ಪವಿತ್ರಾತ್ಮರ ಸಮೇತ). ಇಸ್ರಯೇಲಿನ ಬಗ್ಗೆ ದೇವರ ಸಂಕಲ್ಪ
17 : ನಿನ್ನ ಜೀವೋದ್ಧಾರಕನು ಇಸ್ರಯೇಲಿನ ಪರಮಪಾವನನು ಆದ ಸರ್ವೇಶ್ವರಸ್ವಾಮಿಯೆ ನುಡಿದಿಹನು: “ನಿನಗೆ ಕ್ಷೇಮಕರವಾದ ಮಾರ್ಗವನು ಬೋಧಿಸುವವನೂ ನೀ ಹೋಗಬೇಕಾದ ಹಾದಿಯಲಿ ನಡೆಯಿಸುವವನೂ ಆದಂಥ ಸರ್ವೇಶ್ವರಸ್ವಾಮಿ ದೇವರು ನಾನು.
18 : ಎಷ್ಟೋ ಚೆನ್ನಾಗಿರುತ್ತಿತ್ತು ನೀ ನನ್ನ ಆಜ್ಞೆಗಳನ್ನು ಪಾಲಿಸಿದ್ದರೆ ಇರುತಿತ್ತು ನಿನಗೆ ಸುಖಶಾಂತಿ ಮಹಾನದಿಯಂತೆ ನಿನ್ನ ಸತ್ಯಸಂಧತೆ ಸಮುದ್ರ ಅಲೆಗಳಂತೆ.
19 : ಅಗಣಿತವಾಗಿರುತಿತ್ತು ನಿನ್ನ ಸಂತತಿ ಕಡಲ ಮರಳಿನಂತೆ, ನಿನ್ನ ಕರುಳಿನ ಕುಡಿಗಳು ಉಸುಬಿನ ಅಣುರೇಣುಗಳಂತೆ, ಅವರ ಹೆಸರುಗಳು ಕೆಟ್ಟು ಅಳಿದುಹೋಗುತ್ತಿರಲಿಲ್ಲ ನನ್ನ ಮುಂದೆ.”
20 : ಹೊರಡಿರಿ ಬಾಬಿಲೋನ್ ನಗರದಿಂದ, ಓಡಿರಿ ಕಸ್ದೀಯರ ಕಡೆಯಿಂದ ಪ್ರಚುರಪಡಿಸಿರಿ ಹರ್ಷಧ್ವನಿಯಿಂದ, ಪ್ರಕಟಿಸಿರಿ ಭೂಮಿಯ ಕಟ್ಟಕಡೆಯತನಕ, ಈ ಪರಿ ತಿಳಿಸಿರಿ: “ಸರ್ವೇಶ್ವರ, ತಮ್ಮ ದಾಸ ಯಕೋಬನ ಉದ್ಧಾರಕ”.
21 : ಆತ ಮರುಭೂಮಿಯಲ್ಲಿ ತನ್ನ ಜನರನ್ನು ನಡೆಸಿದಾಗ ಬಳಲಲಿಲ್ಲ ಅವರು ಬಾಯಾರಿಕೆಯಿಂದ; ಹರಿಸಿದನು ನೀರನ್ನು ಅವರಿಗಾಗಿ ಕಲ್ಲಿನೊಳಗಿಂದ ಜಲವಾಹಿನಿ ಹರಿಯಿತು ಆತ ಸೀಳಿದ ಬಂಡೆಯಿಂದ.
22 : “ದುಷ್ಟರಿಗಿಲ್ಲ ಶಾಂತಿಸಮಾಧಾನ’ ಇದು ಸರ್ವೇಶ್ವರಸ್ವಾಮಿಯ ವಚನ.

· © 2017 kannadacatholicbible.org Privacy Policy