Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಶಾಯ


1 : “ಕೆಳಕ್ಕಿಳಿದು ಬಾ, ಯುವತಿಯೇ ಧೂಳಲ್ಲಿ ಕುಳಿತುಕೋ, ಬಾಬೆಲೆ! ಕುವರಿಯೇ, ಕುಕ್ಕರಿಸು ನೆಲದಲಿ ಸಿಂಹಾಸನವಿಲ್ಲ ಇಲ್ಲಿ. ಎಲೈ, ಕಸ್ದೀಯರ ನಗರಿಯೇ, ನೀನಲ್ಲ ಇನ್ನು ಕೋಮಲೆ, ಸುಕುಮಾರಿ ಎಂದು ಎನಿಸಿಕೊಳ್ಳೆ.
2 : ಬೀಸುವ ಕಲ್ಲನು ಹಿಡಿ, ಹಿಟ್ಟಿಗಾಗಿ ನೆರಿಗೆಯನ್ನು ಹರಿ, ಮುಸುಕನ್ನು ತೆಗೆದುಹಾಕಿ ಹೊಳೆಗಳನ್ನು ಹಾದುಹೋಗು, ನಡೆ ಬರೆಗಾಲಿನಲ್ಲಿ.
3 : ಮುಯ್ಯಿತೀರಿಸುವೆನು ಯಾರನ್ನೂ ಕರುಣಿಸದೆ ಬೀದಿಪಾಲಾಗುವೆ ನೀನು ಲಜ್ಜೆಗೆಟ್ಟು ಮಾನವಿಲ್ಲದೆ.”
4 : ನಮ್ಮ ಉದ್ಧಾರಕನ ನಾಮಧೇಯ ಸೇನಾಧೀಶ್ವರ ಸರ್ವೇಶ್ವರ ಆತನೇ ಇಸ್ರಯೇಲರಿಗೆ ಪರಮಪವಿತ್ರ.
5 : “ಕಸ್ದೀಯ ನಗರಿಯೇ, ಕುಳಿತುಕೊ ಮೌನವಾಗಿ ಕತ್ತಲೆಯೊಳಗೆ ಇನ್ನು ಎನಿಸಿಕೊಳ್ಳೆ ರಾಣಿಯೆಂದು ರಾಜ್ಯಗಳಿಗೆ.”
6 : “ನಾ ರೋಷಗೊಂಡು ನನ್ನ ಜನರನ್ನೇ ನಿನ್ನ ಕೈವಶಮಾಡಿದೆ ನನಗೆ ಸ್ವಂತವಾದವರನ್ನೆ ಈ ಪರಿ ಹೊಲೆಗೆಡಿಸಿದೆ. ನೀನಾದರೋ ಕರುಣೆ ತೋರಿಸದೆ ಹೋದೆ ಮುದುಕರ ಮೇಲೂ ತೂಕದ ನೊಗವನು ಹೊರಿಸಿದೆ.
7 : ನನ್ನ ಜನರ ಹಿಂಸೆಬಾಧೆಗಳನ್ನು ಗಮನಿಸದೆ ಬರಲಿರುವ ಪರಿಣಾಮವನ್ನು ನೆನೆಸಿಕೊಳ್ಳದೆ ನೀನೇ ಶಾಶ್ವತ ರಾಣಿಯೆಂದು ಮೆರೆದೆ.
8 : ಭೋಗಾಸಕ್ತಳೆ, ನೆಮ್ಮದಿಯಾಗಿ ನೆಲೆಗೊಂಡಿರುವವಳೇ, ‘ಏಕೈಕಳು ನಾನೇ, ನನ್ನ ಹೊರತು ಇನ್ನಾರು ಇಲ್ಲ,’ ಎನ್ನುವವಳೇ, ‘ವಿಧವೆಯಾಗೆನು, ಪುತ್ರಶೋಕ ಎನಗಿರದು’ ಎನ್ನುವವಳೇ, ಇದನು ಕೇಳು:
9 : ಒಂದೇ ದಿನದೊಳಗೆ, ಒಂದೇ ಕ್ಷಣದೊಳಗೆ ಪುತ್ರಶೋಕ, ವೈಧವ್ಯ – ಇವೆರಡು ಒದಗುವುವು ನಿನಗೆ. ಎಷ್ಟೇ ಮಂತ್ರತಂತ್ರಗಳನು ನಡೆಸಿದರೂ ಅನುಭವಿಸುವೆ ನೀ ಪೂರ್ತಿಯಾಗಿ ಇವುಗಳನು.
10 : ಕೇಡನು ನೀ ಮಾಡಿದೆ ಭಯಪಡದೆ ನೋಡರಾರೂ ಎಂದುಕೊಂಡಿದ್ದೆ, ನೀನು ಜ್ಞಾನಿ ವಿವೇಕಿಯೆಂದು ತಿಳಿದುಕೊಂಡೇ ಮರುಳಾದೆ; ‘ಏಕೈಕಳು ನಾನೇ, ಇನ್ನಾರೂ ಇಲ್ಲ’ ಎಂದುಕೊಂಡೆ.
11 : ಇಂತಿರಲು ನಿನಗೊದಗುವುದು ಮಂತ್ರಕ್ಕು ಮೀರಿದ ಆಪತ್ತು ನಿನ್ನ ಮೇಲೆರಗುವುದು ಪರಿಹರಿಸಲಾಗದ ವಿಪತ್ತು ತಟ್ಟನೆ ತಟ್ಟುವುದು ನಿನಗೆ ತಪ್ಪಿಸಲಾಗದ ಕುತ್ತು.
12 : ಪ್ರಯೋಗಿಸಿ ನೋಡು ನಿನ್ನ ಅಗಣಿತ ಮಂತ್ರತಂತ್ರಗಳನು ಬಾಲ್ಯಾರಭ್ಯ ನೀ ಕಲಿತ ಮಾಯಮಾಟಗಳನು ಪ್ರಾಯಶಃ ನಿನಗವು ಪ್ರಯೋಜನವಾದಾವು ಬಹುಶಃ ನಿನಗವು ಭಯಹುಟ್ಟಿಸಿಯಾವು.
13 : ಬೇಸರವಾಯಿತೆ ನಿನಗೆ ಕೇಳಿ ಮಂತ್ರಾಲೋಚನೆಗಳನು? ಉದ್ಧರಿಸಲಿ ಬರಲಿರುವ ಆ ವಿಪತ್ತುಗಳಿಂದ ನಿನ್ನನು ಖಗೋಳಜ್ಞರು, ಜೋಯಿಸರು ನೋಡಿ ಪಂಚಾಂಗವನು.
14 : ಇರುವರವರೆಲ್ಲರು ಒಣಹುಲ್ಲಿನ ಕೂಳೆಯಂತೆ ಸುಟ್ಟುಬಿಡುವುದವರನು ಉರಿಯುವ ಚಿತೆ ತುತ್ತಾಗುವರವರು ಆ ಜ್ವಾಲಾಗ್ನಿಗೆ ತಪ್ಪದೆ. ಅದು ಚಳಿಗೆ ಮೈಕಾಯಿಸಿಕೊಳ್ಳುವ ಬೆಂಕಿಯಂತಲ್ಲ ಮೈಬೆಚ್ಚಗಾಗಿಸಿಕೊಳ್ಳುವ ಉರಿಯಂತಲ್ಲ.
15 : ಇಂತಾಗುವುದು ನೀ ಗೈದ ಪ್ರಯತ್ನಗಳೆಲ್ಲ. ಬಾಲ್ಯದಿಂದ ನಿನ್ನೊಡನೆ ವ್ಯವಹರಿಸಿದವರು ಸರಿವರು ದೂರಕೆ ಹಿಂದಿರುಗುವರೆಲ್ಲರು ತಂತಮ್ಮ ನಾಡಿಗೆ ಅಂತ್ಯದಲಿ ಯಾರೂ ಆಗರು ರಕ್ಷಣೆ ನಿನಗೆ.”

· © 2017 kannadacatholicbible.org Privacy Policy