Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಶಾಯ


1 : ತಗ್ಗಿದೆ ಬೇಲ್ ದೇವತೆ ಕುಗ್ಗಿದೆ ನೆಬೋ ದೇವತೆ ಅವುಗಳ ಪ್ರತಿಮೆಗಳನು ಕತ್ತೆಗಳು ಹೊತ್ತಿವೆ. ನೀವು ಮೆರವಣಿಗೆಯಾಗಿ ಹೊರುತ್ತಿದ್ದ ಆ ಬೊಂಬೆಗಳೆ, ಭಾರವಾದ ಹೊರೆಯಾಗಿವೆ, ಬಳಲಿದಾ ಪಶುಗಳಿಗೆ.
2 : ಆ ಬೊಂಬೆಗಳೆಲ್ಲ ಬಗ್ಗಿ ಕುಗ್ಗಿ ಹೋಗಿವೆ ಭಾರವನ್ನು ನೀಗಿಸಲು ಅವು ನಿಶ್ಯಕ್ತವಾಗಿವೆ ತಾವೆ ಸೆರೆಮನೆ ಸೇರಿಹೋಗಿವೆ.
3 : “ಕಿವಿಗೊಡು, ಓ ಯಕೋಬ ಮನೆತನವೆ, ಅಳಿದುಳಿದಾ ಇಸ್ರಯೇಲಿನ ಮನೆತನವೆ, ಹೊರುತ್ತಿರುವೆ ನಿಮ್ಮನು ಗರ್ಭದಿಂದ ಸಾಕಿ ಸಲಹುತ್ತಿರುವೆ ಹುಟ್ಟಿದಂದಿನಿಂದ.
4 : ನಾನೇ ನಿಮಗೆ ಆಧಾರ ಮುಪ್ಪಿನ ತನಕ ಹೊತ್ತು ಸಲಹುವೆನು ನಿಮ್ಮನು ನರೆಬಂದಾಗ. ಉಂಟುಮಾಡಿದವನು ನಾನೇ, ಹೊರುವವನು ನಾನೇ ಹೌದು, ನಿಮ್ಮನು ಹೊತ್ತು ಸಲಹುವವನು ನಾನೇ.
5 : ನನ್ನನ್ನು ಯಾರಿಗೆ ಸರಿಹೋಲಿಸಬಲ್ಲಿರಿ? ನನ್ನನ್ನು ಯಾರಿಗೆ ಸಾಟಿಮಾಡಬಲ್ಲಿರಿ?
6 : ಸುರಿಯುತ್ತಾರೆ ಜನರು ಚಿನ್ನವನು ಚೀಲದಿಂದ ತೂಗಿ ತೂಕಹಾಕುತ್ತಾರೆ ಬೆಳ್ಳಿಯನ್ನು ತಕ್ಕಡಿಯಿಂದ. ದೇವರನ್ನು ಮಾಡಿಸುತ್ತಾರೆ ಕೂಲಿಕೊಟ್ಟು ಅಕ್ಕಸಾಲಿಗನಿಂದ ಪೂಜಿಸುತ್ತಾರೆ ಅದನ್ನು ಸಾಷ್ಟಾಂಗ ನಮಸ್ಕಾರದಿಂದ.
7 : ಅದನ್ನು ಮೆರವಣಿಗೆ ಮಾಡುತ್ತಾರೆ ಹೊತ್ತು ಹೆಗಲಮೇಲೆ ಪ್ರತಿಷ್ಠಾಪನೆ ಮಾಡುತ್ತಾರೆ ಇಟ್ಟು ಪೀಠದ ಮೇಲೆ. ಕೂಗಿಕೊಂಡರೂ ಜರುಗದದು ಅಲ್ಲಿಂದ ಉತ್ತರಿಸಿ ಬಿಡಿಸದು ಯಾರನ್ನು ಕಷ್ಟದಿಂದ.
8 : ಮತಭ್ರಷ್ಟರೇ, ಜ್ಞಾಪಕದಲ್ಲಿಡಿ ಇದನ್ನು ಧೈರ್ಯದಿಂದ ಒಪ್ಪಿಕೊಳ್ಳಿ ನಿಮ್ಮ ತಪ್ಪನ್ನು.
9 : ನೆನಪಿಗೆ ತಂದುಕೊಳ್ಳಿ ಪ್ರಾಚೀನ ಘಟನೆಗಳನ್ನು ಅರಿತುಕೊಳ್ಳಿ ನಾನೇ ದೇವರು, ಇನ್ನಾರೂ ಇಲ್ಲ ಎಂಬುದನ್ನು ನಾನೇ ಪರಮದೇವರು, ನನಗೆ ಸರಿಸಮಾನವಿಲ್ಲ ಎಂಬುದನ್ನು.
10 : ಆರಂಭದಲ್ಲಿಯೇ ಅಂತ್ಯವನು ತಿಳಿಸಿದವನು ನಾನು ಭೂತಕಾಲದಲ್ಲಿಯೆ ಭವಿಷ್ಯವನು ಅರುಹಿದವನು ನಾನು. ಸ್ಥಿರವಿರುವುದು ನನ್ನ ಸಂಕಲ್ಪ, ನೆರವೇರುವುದು ನನ್ನ ಇಷ್ಟಾರ್ಥ.
11 : ಮೂಡಲಿಂದ ಬೇಟೆಗಾಗಿ ರಣಹದ್ದನು ಕರೆದಂತೆ ಕರೆದಿಹೆನು ದೂರದೇಶದಿಂದ ನನ್ನ ಸಂಕಲ್ಪ ಈಡೇರಿಸಲೆಂದೇ. ನುಡಿದಿರುವೆನು ನಾನು; ಈಡೇರಿಸುವೆನು ಅದನ್ನು ಯೋಜಿಸಿರುವೆನು ನಾನು; ಸಾಧಿಸುವೆನು ಅದನ್ನು.
12 : ಧರ್ಮಕ್ಕೆ ದೂರವಾದ ಹಟಮಾರಿಗಳೇ, ಕಿವಿಗೊಡಿರಿ ನೀವು ನನ್ನ ಮಾತಿಗೆ.
13 : ಬರಮಾಡುವೆನು ಮುಕ್ತಿಯನು ಹತ್ತಿರಕೆ ಅದಿನ್ನು ದೂರವಿರದು ನಿಮಗೆ. ತಡವಾಗದು ನಿಮಗೆ ನನ್ನ ರಕ್ಷಣೆ ಸಾಧಿಸುವೆನು ರಕ್ಷಣೆಯನ್ನು ಸಿಯೋನಿನಲೇ, ಬೀರುವೆನು ನನ್ನ ಮಹಿಮೆಯನ್ನು ಇಸ್ರಯೇಲ ಮೇಲೆ.”

· © 2017 kannadacatholicbible.org Privacy Policy