Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಶಾಯ


1 : “ಕೇಳೀಗ ನನ್ನ ದಾಸ ಯಕೋಬೇ, ನಾನು ಆರಿಸಿಕೊಂಡ ಇಸ್ರಯೇಲೇ,
2 : ನಿನ್ನನ್ನು ಸೃಷ್ಟಿಸಿದ ಸರ್ವೇಶ್ವರ ನಾನೆ ತಾಯ ಗರ್ಭದಿಂದ ನಿನ್ನನ್ನು ರೂಪಿಸಿದವನು ನಾನೆ ಅಂದಿನಿಂದ ನಿನಗೆ ನೆರವಾಗುತ್ತಾ ಬಂದವನು ನಾನೆ. ಭಯಪಡಬೇಡ, ನನ್ನ ದಾಸ ಯಕೋಬನೇ, ಅಂಜಬೇಡ, ನಾನು ಆರಿಸಿಕೊಂಡ ಯೆಶುರೂನೇ.
3 : ಮಳೆಗರೆವೆನು ಬತ್ತಿದ ಭೂಮಿಯಲಿ ಹರಿಸುವೆನು ಕಾಲುವೆಗಳನು ಒಣನೆಲದಲಿ. ಮಳೆಗರೆವೆನು ನನ್ನಾತ್ಮವನು ನಿನ್ನ ಸಂತಾನದ ಮೇಲೆ ನನ್ನ ಆಶೀರ್ವಾದವನು ನಿನ್ನ ಸಂತತಿಯ ಮೇಲೆ.
4 : ವೃದ್ಧಿಯಾಗುವರವರು ನೀರನಾಲೆ ಬದಿಯ ಪಚ್ಚೆಪಸಿರಂತೆ, ಹರಿವ ಕಾಲುವೆಗಳ ಬಳಿಯ ಜೊಂಡುಹುಲ್ಲಿನಂತೆ.
6 : ಇಂತೆನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರ, ಇಸ್ರಯೇಲರ ಅರಸ, ಅವರ ಉದ್ಧಾರಕ: “ಆದಿಯು ನಾನೇ, ಅಂತ್ಯವು ನಾನೇ, ನನ್ನ ಹೊರತು ದೇವರಾರು ಇಲ್ಲ ಬೇರೆ.
7 : ನನಗೆ ಸಮಾನರು ಯಾರು? ರುಜುಪಡಿಸಲಿ, ನನ್ನ ಎದುರಿಗೆ ಬಂದು ವಾದಿಸಿ ಸ್ಥಿರಪಡಿಸಲಿ. ನರ ಸೃಷ್ಟಿಯಾದಂದಿನಿಂದ ನಡೆದುದೆಲ್ಲವನು ತಿಳಿಸಲಿ ಮುಂದಿನವುಗಳನು, ಭವಿಷ್ಯತ್ತುಗಳನು, ಈಗ ಊಹಿಸಿ ಹೇಳಲಿ.
8 : ಹೆದರಬೇಡಿ, ಅಂಜದಿರಿ, ನನ್ನ ಜನರೇ, ನನಗೆ ಸಾಕ್ಷಿಗಳು ನೀವೇ: ಪೂರ್ವಕಾಲದಿಂದ ನಡೆದವುಗಳನು ನಾ ನಿಮಗೆ ಮುಂತಿಳಿಸಿ ಶ್ರುತಪಡಿಸಿಲ್ಲವೆ? ನನ್ನ ಹೊರತು ಬೇರೆ ದೇವನಿರುವನೆ? ನನ್ನ ಹೊರತು ಬೇರೆ ಸೇನಾಧೀಶ್ವರನಿರುವನೆ? ಅಂಥವನಾರೋ ನಾನರಿಯೆ.” ವಿಗ್ರಹಾರಾಧನೆ ಹಾಸ್ಯಾಸ್ಪದ
9 : ವಿಗ್ರಹಗಳನ್ನು ಕೆತ್ತುವವರೆಲ್ಲರು ನಿರರ್ಥಕರು; ಅವರ ಇಷ್ಟಬೊಂಬೆಗಳು ಏತಕ್ಕೂ ಬಾರವು; ಅವುಗಳಲ್ಲಿ ವಿಶ್ವಾಸವಿಡುವವರು ಕುರುಡರು, ತಿಳುವಳಿಕೆ ಇಲ್ಲದವರು. ಅಂಥವರು ನಾಚಿಕೆಗೆ ಗುರಿಯಾಗುವರು.
10 : ದೇವತೆಯನ್ನು ರೂಪಿಸುವವರು ಹಾಗೂ ನಿರರ್ಥಕ ಬೊಂಬೆಗಳನ್ನು ಎರಕ ಹೊಯ್ಯುವವರು ನಿಷ್ಪ್ರಯೋಜಕರು.
11 : ವಿಗ್ರಹಾರಾಧಕರೆಲ್ಲರೂ ಆಶಾಭಂಗ ಪಡುವರು. ಅದನ್ನು ಕೆತ್ತಿದವರು ಕೇವಲ ಮನುಷ್ಯ ಮಾತ್ರರು. ಅವರೆಲ್ಲರು ಇಲ್ಲಿಗೆ ಕೂಡಿಬರಲಿ; ನಿಶ್ಚಯವಾಗಿ ಅವರು ಹೆದರಿ ಲಜ್ಜೆಪಡುವರು.
12 : ಕಮ್ಮಾರನು ಮುಟ್ಟನ್ನು ತೆಗೆದುಕೊಂಡು ಕೆಂಡದಲ್ಲಿ ಕೆಲಸ ಮಾಡುತ್ತಾನೆ; ಬಲವಾದ ತೋಳಿನಿಂದ ಚಮಟಿಕೆ ಹಿಡಿದು ಬಡಿದು ವಿಗ್ರಹವನ್ನು ರೂಪಿಸುತ್ತಾನೆ; ಹಸಿದು ಬಳಲುತ್ತಾನೆ, ಬಾಯಾರಿ ಸೊರಗುತ್ತಾನೆ.
13 : ಬಡಗಿಯು ಮರಕ್ಕೆ ನೂಲು ಹಿಡಿದು, ಮೊಳೆಯಿಂದ ಗೆರೆ ಎಳೆಯುತ್ತಾನೆ; ಕೈವಾರದಿಂದ ಗುರುತಿಸುತ್ತಾನೆ, ಉಳಿ ಬಾಚಿಗಳಿಂದ ಕೆತ್ತುತ್ತಾನೆ; ಸುಂದರವಾದ ನರನಂತೆ ರೂಪಿಸಿ ಮಂದಿರದಲ್ಲಿ ಇಡಲು ಯೋಗ್ಯವಾಗುವಂತೆ ಮಾಡುತ್ತಾನೆ.
14 : ತನ್ನ ಕೆಲಸಕ್ಕಾಗಿ ದೇವದಾರುಗಳನ್ನು ಕಡಿಯುತ್ತಾನೆ, ತುರಾಯಿ ಅಲ್ಲೋನ್ ಮರಗಳನ್ನು ಆರಿಸಿಕೊಳ್ಳುತ್ತಾನೆ; ಅವುಗಳನ್ನು ವನವೃಕ್ಷಗಳ ನಡುವೆ ಬೆಳೆಸುತ್ತಾನೆ; ಪೀತದಾರ ಮರವನ್ನು ನೆಟ್ಟು, ಮಳೆಸುರಿದು ಬೆಳೆಯುವವರೆಗೂ ಕಾಯುತ್ತಾನೆ,
15 : ಅದರ ಒಂದು ಭಾಗ ಒಲೆಗಾಗುತ್ತದೆ, ಚಳಿ ಕಾಯಿಸಿಕೊಳ್ಳುವುದಕ್ಕೆ ಆಗುತ್ತದೆ, ರೊಟ್ಟಿಸುಡುವುದಕ್ಕಾಗುತ್ತದೆ. ಇನ್ನೊಂದು ಭಾಗದಿಂದ ದೇವತೆಯನ್ನು ಮಾಡಿ ಮನುಷ್ಯ ಪೂಜಿಸುತ್ತಾನೆ; ವಿಗ್ರಹ ಕೆತ್ತಿ ಅದಕ್ಕೆ ಮನುಷ್ಯ ಪೂಜಿಸುತ್ತಾನೆ; ವಿಗ್ರಹ ಕೆತ್ತಿ ಅದಕ್ಕೆ ಅಡ್ಡಬೀಳುತ್ತಾನೆ.
16 : ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸುತ್ತಾನೆ. ಅದು ಮಾಂಸ ಬೇಯಿಸಲಾಗುತ್ತದೆ, ಆ ಸುಟ್ಟ ಮಾಂಸದಿಂದ ಹಸಿವೆ ತೀರಿಸಿಕೊಳ್ಳುತ್ತಾನೆ. ಆ ಬೆಂಕಿಯಿಂದ ಮೈ ಬೆಚ್ಚಗಾಯಿತು,’ ಎಂದುಕೊಳ್ಳುತ್ತಾನೆ.
17 : ಉಳಿದ ಭಾಗದಿಂದ ತನ್ನ ದೇವತೆಯ ವಿಗ್ರಹವನ್ನು ಕೆತ್ತಿ, ಅದಕ್ಕೆ ಎರಗಿ ಅಡ್ಡಬೀಳುತ್ತಾನೆ; “ನೀನೇ ನನ್ನ ದೇವರು; ನನ್ನನ್ನು ರಕ್ಷಿಸು,” ಎಂದು ಪ್ರಾರ್ಥಿಸುತ್ತಾನೆ.
18 : ಇಂಥವರು ಮಂದಮತಿಗಳು, ಏನೂ ಗ್ರಹಿಸಲಾಗದವರು; ಅವರ ಕಣ್ಣು ಕಾಣದಂತೆಯೂ ಹೃದಯ ಗ್ರಹಿಸದಂತೆಯೂ ಅವರಿಗೆ ಅಂಟು ಬಳಿಯಲಾಗಿದೆ.
19 : “ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸಿದ್ದೇನೆ. ಹೌದು. ಅದರ ಕೆಂಡದಲ್ಲಿ ರೊಟ್ಟಿಮಾಡಿ, ಮಾಂಸ ಸುಟ್ಟು ತಿಂದಿದ್ದೇನೆ; ಮಿಕ್ಕಿದ್ದರಿಂದ ವಿಗ್ರಹ ಮಾಡುವುದು ಸರಿಯೇ? ಆ ಮರದ ತುಂಡಿಗೆ ಅಡ್ಡ ಬೀಳುವುದು ಅಸಹ್ಯವಲ್ಲವೆ?” ಎಂದುಕೊಳ್ಳುವಷ್ಟು ವಿವೇಕ ಯಾರಿಗೂ ಇಲ್ಲ; ಯಾರೂ ಇದನ್ನು ಮನಸ್ಸಿನಲ್ಲಿ ಅರ್ಥೈಸಿಕೊಳ್ಳುವುದಿಲ್ಲ
20 : ಅಂಥವನು ಮುಕ್ಕುವುದು ಬೂದಿಯನ್ನೇ; ಅವನ ಹೃದಯ ಮೋಸಗೊಂಡು ಅವನನ್ನು ತಪ್ಪು ದಾರಿಗೆ ಎಳೆದಿದೆ. ಎಂದೇ, ಅವನು ಅಂಗೈ ಹುಣ್ಣಿನಂತಿರುವ ಆ ಸುಳ್ಳನ್ನೂ ಅರಿಯದೆ ಇದ್ದಾನೆ; ತನ್ನನ್ನೇ ರಕ್ಷಿಸಿಕೊಳ್ಳಲು ಆಗದೆ ಇದ್ದಾನೆ.
21 : “ಯಕೋಬೇ, ಇಸ್ರಯೇಲೇ, ನೆನಪಿನಲ್ಲಿಡು ಇದನ್ನು: ನೀನೆನ್ನ ದಾಸನು, ಇಸ್ರಯೇಲ್, ನಿನ್ನ ನಿರ್ಮಿಸಿದವನು ನಾನು; ನೀನೆನ್ನ ದಾಸನು, ನಿನ್ನನ್ನು ನಾನು ಮರೆತುಬಿಡೆನು.
22 : ಪರಿಹರಿಸಿದೆ ನಿನ್ನ ದ್ರೋಹಗಳನ್ನು ಮಂಜಿನಂತೆ ಚದರಿಸಿದ್ದೇನೆ ನಿನ್ನ ಪಾಪಗಳನು ಮೋಡದಂತೆ ವಿಮೋಚಿಸಿದ್ದೇನೆ ನೀ ನನಗೆ ಅಭಿಮುಖನಾಗಬೇಕೆಂದೆ.”
23 : ಜಯ ಜಯಕಾರ ಮಾಡು ಓ ಆಕಾಶವೇ, ಜಯಘೋಷ ಮಾಡು ಭೂ ತಳವೇ, ಹರ್ಷಧ್ವನಿಗೈಯಿರಿ ಬೆಟ್ಟಗುಡ್ಡಗಳೇ ವನವೃಕ್ಷಗಳೇ. ವಿಮೋಚಿಸಿದನು ಸರ್ವೇಶ್ವರ ಯಕೋಬನನು, ಇಸ್ರಯೇಲನ್ನು ರಕ್ಷಿಸಿ ಪ್ರಚಾರಗೊಳಿಸಿದನು ತನ್ನ ಮಹಿಮೆಯನು.
24 : ತಾಯ ಗರ್ಭದಿಂದ ರೂಪಿಸಿ ನಿನ್ನನು ಹೊರತಂದ ಸರ್ವೇಶ್ವರ ಹೇಳಿಹನು ಇದನ್ನು: “ಸರ್ವವನು ಸೃಷ್ಟಿಸಿದ ಸರ್ವೇಶ್ವರನು ನಾನೆ ಗಗನಮಂಡಲವನು ವಿಸ್ತರಿಸಿದವನು ನಾನೆ ಭೂಮಂಡಲವನು ಹರಡಿದವನು ನಾನೆ ನನಗಾಗ ನೆರವಾಗಲು ಯಾರಾದರೂ ಇದ್ದರೆ?
25 : ಸುಳ್ಳುಶಕುನ ಹೇಳುವವರನು ನಿರರ್ಥಕಗೊಳಿಸುವವನು ನಾನೆ ಕಣಿಹೇಳುವವರನು ಮರುಳುಗೊಳಿಸುವವನು ನಾನೆ ವಿವೇಕಿಗಳೊಡನೆ ವಾದಿಸಿ ಅವರ ವಿವೇಕವೇ ಅವಿವೇಕವೆಂದು ತೋರಿಸಿದವನು ನಾನೆ.
26 : ನನ್ನ ದಾಸನ ಮಾತನ್ನಾದರೋ ದೃಢೀಕರಿಸುವವನು ನಾನೆ ನನ್ನ ದೂತರ ಯೋಜನೆಯನ್ನು ಸಫಲಗೊಳಿಸುವವನು ನಾನೆ. ಆನನಿವಾಸವಾಗುವುದು ಜೆರುಸಲೇಮ್ ನಗರವು ಪುನಃ ಕಟ್ಟಲ್ಪಡುವುವು ಜುದೇಯ ಪಟ್ಟಣಗಳು. ಅಲ್ಲಿ ಹಾಳುಬಿದ್ದವುಗಳು ಮರಳಿ ಎದ್ದು ನಿಲ್ಲುವುವು.
27 : ‘ಬತ್ತಿಹೋಗು’ ಎಂದು ಜಲರಾಶಿಗಳಿಗೆ ‘ಒಣಗಿ ಹೋಗು’ ಎಂದು ನಿನ್ನ ಸೇರುವ ನದಿಗಳಿಗೆ ಅಪ್ಪಣೆ ಕೊಡುವಾತನು ನಾನೆ.
28 : ಕೋರೆಷನಿಗೆ ಇಂತೆನ್ನುವೆನು ನಾನು: ನನ್ನ ಮುಂದೆ ಕಾಯುವವನು ನೀನು ನನ್ನ ಇಷ್ಟಾರ್ಥವನು ನೆರವೇರಿಸುವವನು ನೀನು; ‘ಪುನಃ ನಿರ್ಮಾಣವಾಗುವೆ’ ಎನ್ನುವೆ ಜೆರುಸಲೇಮಿಗೆ, ನೀನು; ‘ಪುನಃ ನಿನಗೆ ಅಸ್ತಿವಾರ ಹಾಕಿಸುವೆ’ ಎನ್ನುವೆ ಆ ದೇವಾಲಯಕೆ ನೀನು.”

· © 2017 kannadacatholicbible.org Privacy Policy