Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಶಾಯ


1 : ಈಗಲಾದರೋ ಯಕೋಬ ವಂಶವೇ, ಇಸ್ರಯೇಲ್ ಸಂತಾನವೇ ಕೇಳು: ನಿನ್ನನ್ನು ಸೃಷ್ಟಿಸಿದ, ರೂಪಿಸಿದ ಸರ್ವೇಶ್ವರನ ನುಡಿಯನ್ನು ಕೇಳು: “ಭಯಪಡಬೇಡ, ನಿನ್ನನ್ನು ರಕ್ಷಿಸಿದಾತ ನಾನಲ್ಲವೆ? ನಿನ್ನನ್ನು ಹೆಸರು ಹಿಡಿದು ಕರೆದಾತ ನಾನಲ್ಲವೆ? ನೀನು ನನ್ನವನೇ ಅಲ್ಲವೆ?
2 : ನಾನೇ ಇರುವೆ ನಿನ್ನ ಸಂಗಡ ನೀ ಜಲರಾಶಿಯನ್ನು ದಾಟುವಾಗ ಮುಳುಗಿಸದು ನದಿ ನೀ ಅದನ್ನು ಹಾದುಹೋಗುವಾಗ ಸುಡದು ಬೆಂಕಿ, ದಹಿಸದು ಜ್ವಾಲೆ, ಅದರ ಮಧ್ಯೆ ನೀ ನಡೆಯುವಾಗ.
3 : ನಿನ್ನ ದೇವರಾದ ಸರ್ವೇಶ್ವರ ನಾನು, ಇಸ್ರಯೇಲರ ಪರಮಪಾವನ ಸ್ವಾಮಿ, ನಿನ್ನ ರಕ್ಷಕ ನಾನು. ಈಡುಮಾಡಿದ್ದೇನೆ ಈಜಿಪ್ಟನ್ನು ನಿನ್ನ ವಿಮೋಚನೆಗಾಗಿ ಕೊಟ್ಟಿದ್ದೇನೆ ಸುಡಾನ್ ಸೆಬಾ ನಾಡುಗಳನ್ನು ನಿನಗೆ ಈಡಾಗಿ.
4 : ನೀನೆನ್ನ ದೃಷ್ಟಿಗೆ ಅಮೂಲ್ಯನು, ಘನವಂತನು, ಅತಿಪ್ರಿಯನು. ಎಂದೇ ನಿನ್ನ ಪ್ರಾಣರಕ್ಷಣೆಗಾಗಿ ತ್ಯಜಿಸುವೆನು ಜನರನ್ನೂ ಜನಾಂಗಗಳನ್ನೂ.
5 : ಭಯಪಡಬೇಡ, ನಾನಿರುವೆ ನಿನ್ನ ಸಂಗಡ ಕರೆತರುವೆ ನಿನ್ನ ಸಂತತಿಯನ್ನು ಮೂಡಣದಿಂದ ಒಟ್ಟುಗೂಡಿಸುವೆ ನಿನ್ನವರನ್ನು ಪಡುವಣದಿಂದ.
6 : ನಾನಪ್ಪಣೆ ಕೊಡುವೆ ‘ಬೀಳ್ಕೊಡು’ ಎಂದು ಬಡಗಲಿಗೆ ‘ತಡೆಯಬೇಡ’ ಎಂದು ನಾನೇ ಹೇಳುವೆ ತೆಂಕಲಿಗೆ. ಹೀಗೆ ಬರಮಾಡುವೆ ನನ್ನ ಕುವರರನ್ನು ದೂರದಿಂದ ಬರಮಾಡುವೆ ನನ್ನ ಕುವರಿಯರನ್ನು ದಿಗಂತಗಳಿಂದ.
7 : ಕರೆತರುವೆ ಈಪರಿ ನನ್ನ ನಾಮಧಾರಿಗಳೆಲ್ಲರನು ನನ್ನ ಮಹಿಮೆಗಾಗಿ ನಾನು ಸೃಷ್ಟಿಸಿ ರೂಪಿಸಿದವರನು. ಸರ್ವೇಶ್ವರನಿಗೆ ಇಸ್ರಯೇಲರೇ ಸಾಕ್ಷಿ
8 : ಕರೆಗೊಡಿರಿ ಆ ಜನರಿಗೆ ಕಣ್ಣಿದ್ದರೂ ಕುರುಡರಾದವರಿಗೆ ಕಿವಿಯಿದ್ದರೂ ಕಿವುಡಾದವರಿಗೆ.
9 : ಬರಲಿ, ಎಲ್ಲಾ ಜನಾಂಗಗಳು ಒಟ್ಟಿಗೆ ನೆರೆಯಲಿ, ಸಕಲ ದೇಶಿಯರು ಇಲ್ಲಿಯೇ. ಅವರ ದೇವರುಗಳಲ್ಲಿ ಭವಿಷ್ಯವನ್ನು ನುಡಿಯಬಲ್ಲವರು ಯಾರು? ಗತಿಸಿದ ಘಟನೆಗಳನ್ನು ಮುಂತಿಳಿಸಿದವರಾರು? ಕರೆತರಲಿ, ಆ ದೇವರುಗಳು ಸಾಕ್ಷಿಗಳನು ಸ್ಥಾಪಿಸಿಕೊಳ್ಳಲಿ, ತಾವು ಸತ್ಯವಂತರೆಂಬುದನು; ರುಜುಪಡಿಸಲಿ ಕೇಳುವವರಿಗೆ ತಮ್ಮ ಮಾತು ನಿಜವೆಂಬುದನು.
10 : ಇಂತೆನ್ನುತ್ತಾರೆ ಸರ್ವೇಶ್ವರ: “ನೀವೇ ನನಗೆ ಸಾಕ್ಷಿಗಳು; ನನ್ನಿಂದ ಆಯ್ಕೆಯಾದ ನನ್ನ ದಾಸರು; ಏಕೆನೆ ನಾನೇ ಪರಮಾತ್ಮನೆಂದು ಅರಿತು, ವಿಶ್ವಾಸವಿಟ್ಟು, ಗ್ರಹಿಸಬೇಕಾದವರು; ದೇವರಾರೂ ನನಗಿಂದ ಮುಂದೆ ಇರಲಿಲ್ಲ ನನ್ನಾನಂತರವೂ ಇರುವುದಿಲ್ಲ.
11 : “ನಾನು, ನಾನೇ ಸರ್ವೇಶ್ವರ, ನನ್ನ ಹೊರತು ಇಲ್ಲ ಬೇರೆ ಉದ್ಧಾರಕ.
12 : ಶ್ರುತಪಡಿಸಿದವನು ನಾನೇ, ಉದ್ಧರಿಸಿದವನು ನಾನೇ, ಘೋಷಿಸಿದವರು ನಾನೇ. ಇದನ್ನು ಮಾಡಿಲ್ಲ ಅನ್ಯದೇವರಾರು ನಿಮ್ಮ ಮಧ್ಯೆ. ನನಗೆ ಸಾಕ್ಷಿಗಳು ನೀವೇ, ದೇವರು ನಾನೊಬ್ಬನೇ.
13 : ಹೌದು, ನಾನೇ ಪರಮಾತ್ಮ ಆದಿಯಿಂದ ಬಿಡಿಸುವವರಾರು ಇಲ್ಲ ನನ್ನ ಕೈಯಿಂದ ನಾಗೈದುದನು ತಡೆಯಲಾಗದು ಯಾರಿಂದ.” ಬಾಬಿಲೋನಿನ ವಿನಾಶ ಈ ಪರಿ ನುಡಿದಿಹನು ಸರ್ವೇಶ್ವರನು, ನಿಮ್ಮ ಉದ್ಧಾರಕನು, ಇಸ್ರಯೇಲಿನ ಪರಮಪಾವನನು:
14 : “ಬಾಬಿಲೋನಿಯಗೆ ಕಳಿಸುವೆನು ಒಬ್ಬಾತನನು ನಿಮಗಾಗಿ ಮುರಿವನಾತ ಆ ಕಾರಾಗೃಹದ ಕಂಬಿಗಳನು ತುಂಡುತುಂಡಾಗಿ ಬಾಬಿಲೋನಿಯರ ಕೂಗಾಟವನು ಮಾರ್ಪಡಿಸುವೆನು ಗೋಳಾಟವನ್ನಾಗಿ.
15 : ನಾನೇ ಸರ್ವೇಶ್ವರನು, ನಿಮ್ಮ ಪರಮಪೂಜ್ಯನು ಇಸ್ರಯೇಲಿನ ಸೃಷ್ಟಿಕರ್ತನು, ನಿಮ್ಮ ಅರಸನು.”
16 : ಸಮುದ್ರದ ಮಧ್ಯೆ ದಾರಿಮಾಡಿದವನಾರೋ, ಭೋರ್ಗರೆವ ಜಲರಾಶಿಗಳಲ್ಲಿ ಮಾರ್ಗವೇರ್ಪಡಿಸಿದವನಾರೋ,
17 : ಅಶ್ವರಥಭಟಸೈನ್ಯಗಳನ್ನು ಹೊರಡಿಸಿದವನಾರೋ, ಅವು ಬಿದ್ದು ಏಳಲಾಗದೆ, ಬತ್ತಿಕರಗಿ ಹೋಗುವಂತೆ ಮಾಡಿದವನಾರೋ, ಆ ಸ್ವಾಮಿ ಸರ್ವೇಶ್ವರ ನುಡಿದ ಮಾತಿದೋ:
18 : “ಗತಿಸಿಹೋದ ಘಟನೆಗಳನ್ನು ನೆನೆಯಬೇಕಾಗಿಲ್ಲ ಪುರಾತನ ಕಾರ್ಯಗಳ ನೆನಸಿಕೊಳ್ಳಬೇಕಾಗಿಲ್ಲ.
19 : ಇಗೋ, ನೂತನ ಕಾರ್ಯವನು ನಾನೆಸಗುವೆ ಈಗಲೇ ಅದು ತಲೆದೋರುತಲಿದೆ, ನಿಮಗೆ ಕಾಣುವುದಿಲ್ಲವೇ? ಮಾರ್ಗವನ್ನು ಏರ್ಪಡಿಸುವೆ ಮರುಭೂಮಿಯಲಿ, ಹರಿಸುವೆ ತೊರೆಗಳನ್ನು ಅರಣ್ಯದಲಿ.
20 : ಕಾಡುಮೃಗಗಳು, ನರಿ, ಉಷ್ಟ್ರಪಕ್ಷಿಗಳು ಕೂಗಿ ಕೊಂಡಾಡುವುವು ನನ್ನನ್ನು. ಏಕೆನೆ ಕೊಡುವೆನು ನೀರನ್ನು ಮರುಭೂಮಿಯಲಿ ಹರಿಸುವೆನು ತೊರೆನದಿಗಳನ್ನು ಅರಣ್ಯದಲಿ.
21 : ನಾ ಸೃಷ್ಟಿಸಿದ ಆಪ್ತ ಜನಕೆ ನೀಡುವೆನು ಜಲಪಾನವನು; ಎಂದೇ ಸ್ತುತಿಸಿಕೊಂಡಾಡುವರು ನನ್ನನು.” ಇಸ್ರಯೇಲಿನ ಪಾಪದೋಷ
22 : “ಯಕೋಬೇ, ನೀನೆನ್ನ ನಾಮಸ್ಮರಣೆ ಮಾಡದೆ ಹೋದೆ; ಇಸ್ರಯೇಲೇ, ನನ್ನ ವಿಷಯದಲ್ಲಿ ನೀನು ಬೇಸರಗೊಂಡೆ.
23 : ಕುರಿಮೇಕೆಗಳನ್ನು ನೀನು ತರಲಿಲ್ಲ ನನಗೆ ಹೋಮಕ್ಕಾಗಿ ಬಲಿಗಳನ್ನು ಅರ್ಪಿಸಲಿಲ್ಲ ನನ್ನ ಘನತೆಗಾಗಿ ನಾ ನಿನ್ನನ್ನು ಒತ್ತಾಯಿಸಲಿಲ್ಲ ನೈವೇದ್ಯಕ್ಕಾಗಿ ನಾ ನಿನ್ನನ್ನು ಬೇಸರಗೊಳಿಸಲಿಲ್ಲ ಧೂಪಾರತಿಗಾಗಿ.
24 : ನನಗೋಸ್ಕರ ನೀನು ಹಣ ತೆತ್ತು ಅಗರಬತ್ತಿ ತರಲಿಲ್ಲ ಯಜ್ಞಪಶುಗಳ ವಪೆಯಿಂದ ನನ್ನನ್ನು ತೃಪ್ತಿಪಡಿಸಲಿಲ್ಲ. ಬದಲಿಗೆ ನನ್ನನ್ನು ಪೀಡಿಸಿರುವೆ ನಿನ್ನ ಪಾಪಗಳಿಂದ ಬೇಸರಗೊಳಿಸಿರುವೆ ನನ್ನನು ನಿನ್ನ ದೋಷಗಳಿಂದ.
25 : ಆದರೂ ನಾನೇ ನಾನಾಗಿ ಅಳಿಸಿಬಿಡುವೆ ನಿನ್ನ ದ್ರೋಹಗಳನು, ನನ್ನ ನೆನಪಿನಿಂದ ತೆಗೆದು ಹಾಕುವೆ ನಿನ್ನ ಪಾಪಗಳನು.
26 : ಮಂಡಿಸು ನನ್ನ ವಿರುದ್ಧ ನಿನ್ನ ಆಪಾದನೆ ಯನ್ನು; ಒಟ್ಟಿಗೆ ವಾದಿಸೋಣ ಮಂಡಿಸು ನಿನ್ನ ನ್ಯಾಯವನ್ನು: ನೀನು ನಿರ್ದೋಷಿಯೆಂದು ರುಜುಪಡಿಸು ನೋಡೋಣ.
27 : ಪಾಪಿಷ್ಟನಾಗಿದ್ದನು ನಿನ್ನ ಮೂಲಪಿತೃವು ನನಗೆ ದ್ರೋಹಿಗಳಾಗಿದ್ದರು ನಿನ್ನ ಪರವಾದಿಗಳು ನನ್ನ ಪವಿತ್ರಾಲಯವನ್ನು ಹೊಲೆಮಾಡಿದರು ನಿನ್ನ ಅಧಿಪತಿಗಳು.
28 : ಎಂದೇ ಗುರಿಮಾಡಿದೆ ಯಕೋಬನ್ನು ಶಾಪಕ್ಕೆ ಈಡುಪಡಿಸಿದೆ ಇಸ್ರಯೇಲನ್ನು ನಿಂದೆದೂಷಣೆಗೆ.”

· © 2017 kannadacatholicbible.org Privacy Policy