1 : ನಿಮ್ಮ ದೇವರು ಇಂತೆನ್ನುತ್ತಾರೆ:
“ಸಂತೈಸಿ, ನನ್ನ ಜನರನ್ನು ಸಂತೈಸಿರಿ.
2 : ಜೆರುಸಲೇಮಿನೊಡನೆ ಪ್ರೀತಿಯಿಂದ
ಮಾತನಾಡಿ;
ಅದರ ಊಳಿಗತನ ಮುಗಿಯಿತೆನ್ನಿ;
ತಕ್ಕ ಪ್ರಾಯಶ್ಚಿತ್ತವಾಗಿದೆ ಅದು ಗೈದ
ದೋಷಕೆ
ಸರ್ವೇಶ್ವರಸ್ವಾಮಿಯಿಂದಲೇ ಅದರ
ಎಲ್ಲಾ ಪಾಪಕೃತ್ಯಗಳಿಗೆ
ಇಮ್ಮಡಿ ಶಿಕ್ಷೆಯಾಗಿದೆ ಎಂದು ಕೂಗಿ
ಹೇಳಿ ಆ ನಗರಿಗೆ”
3 : ಇಗೋ, ಈ ವಾಣಿಯನ್ನು ಕೇಳಿ:
“ಸರ್ವೇಶ್ವರಸ್ವಾಮಿಗೆ ಮಾರ್ಗವನ್ನು
ಸಿದ್ಧಮಾಡಿ ಅರಣ್ಯದಲಿ
ನಮ್ಮ ದೇವರಿಗೆ ರಾಜಮಾರ್ಗವನ್ನು
ಸರಾಗಮಾಡಿ ಅಡವಿಯಲಿ.
4 : ತುಂಬಬೇಕು ಎಲ್ಲ ಹಳ್ಳಕೊಳ್ಳಗಳನು
ಮಟ್ಟಮಾಡಬೇಕು ಎಲ್ಲ ಬೆಟ್ಟ
ಗುಡ್ಡಗಳನು.
ನೆಲಸಮಮಾಡಬೇಕು ದಿಬ್ಬದಿಣ್ಣೆಗಳನು
ಸಮತಲಗೊಳಿಸಬೇಕು ತಗ್ಗು
ಮುಗ್ಗಾದ ಸ್ಥಳಗಳನು.
5 : ಗೋಚರವಾಗುವುದಾಗ ಸರ್ವೇಶ್ವರ
ಸ್ವಾಮಿಯ ಮಹಿಮೆಯು,
ಮಾನವರೆಲ್ಲರೂ ಅದನ್ನು ಕಾಣುವರು
ಒಟ್ಟಿಗೆ,
ಸರ್ವೇಶ್ವರಸ್ವಾಮಿಯೇ ಇದನ್ನು
ಬಾಯಾರೆ ನುಡಿದಿದ್ದಾರೆ.”
6 : ಆ ವಾಣಿ ಮತ್ತೆ ಕೇಳಿಸಿತು:
‘ಗಟ್ಟಿಯಾಗಿ ಕೂಗು’ ಎಂದಿತು
ನಾನೇನೆಂದು ಕೂಗಲಿ ಎನ್ನಲು
ಈ ಪರಿಯಾಗಿ ಉತ್ತರಿಸಿತು:
“ನರಮಾನವರೆಲ್ಲ ಬರೀ ಹುಲ್ಲಿನಂತೆ
ಅವರ ಸೊಬಗೆಲ್ಲಾ ಬಯಲಿನ
ಕುಸುಮದಂತೆ.
7 : ಪ್ರಭುವಿನ ಶ್ವಾಸ ಬೀಸಲು
ಒಣಗಿ ಹೋಗುವುದಾ ಹುಲ್ಲು
ಬಾಡಿ ಹೋಗುವುದಾ ಹೂವು
ಮಾನವರೆಲ್ಲ ಹುಲ್ಲೇ ಹುಲ್ಲು.
8 : ಒಣಗಿ ಹೋಗುವುದಾ ಹುಲ್ಲು,
ಬಾಡಿಹೋಗುವುದಾ ಹೂವು,
ನಮ್ಮ ದೇವರ ನುಡಿಯಾದರೋ
ಇರುವುದು ಚಿರಕಾಲವು.”
9 : ಪರ್ವತವನ್ನೇರು ಶುಭಸಂದೇಶಕಳಾದ
ಸಿಯೋನೇ,
ಧ್ವನಿಯೇರಿಸು, ಶುಭವಾರ್ತೆ ಸಾರಬಲ್ಲ
ಜೆರುಸಲೇಮೇ,
ಧ್ವನಿಯೇರಿಸು, ನಿರ್ಭಯದಿಂದ ಏರಿಸು
‘ಇಗೋ, ನಿಮ್ಮ ದೇವರು’ ಎಂದು
ಜೂದ ನಗರಗಳಿಗೆ ಸಾರು.
10 : ಇಗೋ, ಬರುತಿಹನು ಸ್ವಾಮಿ ಸರ್ವೇಶ್ವರ
ಶೂರನಂತೆ
ರಾಜ್ಯವಾಳುವನು ತನ್ನ ಭುಜಬಲದಿಂದಲೇ
ಇಗೋ, ಶ್ರಮಕ್ಕೆ ತಕ್ಕ ಪ್ರತಿಫಲ ಆತನ
ಕೈಯಲ್ಲಿದೆ
ಆತ ಜಯಿಸಿದ ಪರಿವಾರ ಆತನ ಮುಂದಿದೆ.
11 : ಆತ ಮೇಯಿಸುವನು ತನ್ನ ಮಂದೆಯನ್ನು ಕುರುಬನ ಹಾಗೆ ಮರಿಗಳನ್ನು ಕೈಗೆ ಎತ್ತಿಕೊಳ್ಳುವನು, ಅಪ್ಪಿಕೊಳ್ಳುವನು ಎದೆಗೆ ನಡೆಸುವನು ಹಾಲೂಡಿಸುವ ಕುರಿಗಳನ್ನು ಮೆಲ್ಲಗೆ.
12 : ಅಳೆವನಾರು ಸಮುದ್ರಸಾಗರಗಳನ್ನು
ಬೊಗಸೆಗೈಯಿಂದ?
ಮೊಳ ಹಾಕುವವನಾರು ಆಕಾಶಮಂಡಲ
ವನ್ನು ಕೈಗೇಣಿನಿಂದ?
ತುಂಬುವವನಾರು ಧರೆಯ ಮರಳನ್ನೆಲ್ಲಾ
ಕೊಳಗದೊಳಗೆ?
ತೂಗಿದವನಾರು ಬೆಟ್ಟಗುಡ್ಡಗಳನ್ನು
ತ್ರಾಸುತಕ್ಕಡಿಯೊಳಗೆ?
13 : ಆದೇಶವಿತ್ತವನಾರು ಸರ್ವೇಶ್ವರನ ಆತ್ಮಕೆ?
ಉಪದೇಶವಿತ್ತ ಸಲಹೆಗಾರನಾರು ಆತನಿಗೆ?
14 : ಜ್ಞಾನೋದಯ ನೀಡಿದವನಾರು ಆತನಿಗೆ?
ನ್ಯಾಯಮಾರ್ಗ ತೋರಿಸಿದವನಾರು
ಆತನಿಗೆ?
ಬುದ್ಧಿ ಕಲಿಸಿದವನಾರು ಆತನಿಗೆ?
ಏನೇ ಮಾರ್ಗವನ್ನು ಸೂಚಿಸಿದವನಾರು
ಆತನಿಗೆ?
15 : ಆತನ ಗಣನೆಗೆ ರಾಷ್ಟ್ರಗಳು ಕಪಿಲೆಯಿಂದ
ಉದುರುವ ತುಂತುರುಗಳು
ತ್ರಾಸಿನ ತಟ್ಟೆಯ ಮೇಲಿರುವ ಧೂಳಿನ
ಕಣಗಳು
ದ್ವೀಪಗಳೋ ಆತನ ತೂಕಕ್ಕೆ
ಅಣುರೇಣುಗಳು.
16 : ಲೆಬನೋನಿನ ಪಶುಗಳು ಸಾಲವು
ದಹನಬಲಿಗೆ
ಅಲ್ಲಿನ ಮರಗಳು ಸಾಲವು ಅದರ ಸೌದೆಗೆ.
17 : ಸಕಲ ರಾಷ್ಟ್ರಗಳು ಆತನ ದೃಷ್ಟಿಗೆ ಏನೂ
ಇಲ್ಲದಂತೆ
ಅವುಗಳು ಆತನ ಎಣಿಕೆಗೆ ಶುದ್ಧ
ಸೊನ್ನೆಯಂತೆ.
18 : ಇಂತಿರಲು ಯಾರಿಗೆ ಹೋಲಿಸಬಲ್ಲಿರಿ
ದೇವರನು?
ಕೊಡಬಲ್ಲಿರಾ ಆತನಿಗೆ ಯಾವುದಾದ
ರೊಂದು ಉಪಮಾನವನು?
19 : ವಿಗ್ರಹವಾದರೋ ಎರಕ ಹೊಯ್ಯಲ್ಪಟ್ಟಿತು
ಶಿಲ್ಪಿಯಿಂದ
ಅದಕ್ಕೆ ಬಡಿದಿರುವ ಚಿನ್ನದ ಕವಚ
ಅಕ್ಕಸಾಲಿಗನಿಂದ
ಅದಕ್ಕೆ ತೊಡಿಸಿರುವ ಬೆಳ್ಳಿಸರಪಣಿ ಆ
ವಾಜನಿಂದ.
20 : ಇಷ್ಟು ಹಣವನ್ನು ವೆಚ್ಚ ಮಾಡಲಾಗದ
ಬಡವನು
ಹುಡುಕುವನು ಹುಳಿತು ಹೋಗದ
ಮರವನು
ಬಾಗಿ ಬೀಳದ ವಿಗ್ರಹವನ್ನು ಮಾಡಬಲ್ಲಾ
ಕುಶಲವನು.
21 : ನಿಮಗೆ ತಿಳಿದಿಲ್ಲವೋ, ನೀವು ಕೇಳಿಲ್ಲವೋ
ಆದಿಯಿಂದ ನಿಮಗೆ ಉಪದೇಶವಾಗಿ
ಬಂದಿಲ್ಲವೋ?
ಪೃಥ್ವಿಸ್ಥಾಪನೆ ಹೇಗಾಯಿತೆಂದು ನೀವು
ಗ್ರಹಿಸಿಲ್ಲವೋ?
22 : ಆಸೀನನಾಗಿಹನು ಆತ ಭೂಮಂಡಲಕ್ಕಿಂತ
ಮೇಲೆ
ಭೂನಿವಾಸಿಗಳು ಕಾಣುತಿಹರು ಆತನಿಗೆ
ಮಿಡತೆಗಳಂತೆ
ಹರಡಿಹನು ಆಕಾಶಮಂಡಲವನು ನವಿರು
ಬಟ್ಟೆಯಂತೆ
ಮೇಲೆತ್ತಿಕಟ್ಟಿಹನು ಅದನ್ನು ನಿವಾಸದ
ಗುಡಾರದಂತೆ.
23 : ನಾಶಗೊಳಿಸುವನಾತ ದೇಶಾಧಿಪತಿಗಳನು
ನಿರ್ನಾಮಗೊಳಿಸುವನು ರಾಜಾಧಿರಾಜರನು.
24 : ನೆಟ್ಟಕೂಡಲೇ, ಬಿತ್ತಿದಾಕ್ಷಣವೇ,
ಭೂಮಿಯಲ್ಲಿ ಬೇರೂರುವಾಗಲೆ
ಬಾಡುವುದು ಇವರ ಸಂತಾನ
ಆತನ ಶ್ವಾಸದಿಂದಲೆ;
ಬಡಿದು ಹೊಯ್ಯಲ್ಪಡುವುದು
ಒಣಹುಲ್ಲಿನಂತೆ ಬಿರುಗಾಳಿಯಿಂದಲೆ.
25 : “ಇಂತಿರಲು ನನ್ನನ್ನು ಯಾರಿಗೆ
ಹೋಲಿಸಬಲ್ಲಿರಿ?”
ಯಾರಿಗೆ ನನ್ನನ್ನು ಸರಿಸಮಾನ
ಮಾಡಬಲ್ಲಿರಿ?”
ಎಂದು ಕೇಳುತ್ತಿಹರು ಪರಮಪಾವನಸ್ವಾಮಿ.
26 : ಕಣ್ಣೆತ್ತಿ, ದಿಟ್ಟಿಸಿನೋಡಿ ಆಕಾಶದತ್ತ
ಯಾರು ಆ ತಾರೆಗಳನ್ನು ರಚಿಸಿದಾತ?
ಆ ತಾರಾಸಮೂಹವನ್ನು ಕ್ರಮಾನುಸಾರ
ನಡೆಸುವಾತ,
ಒಂದೊಂದನ್ನೂ ಹೆಸರಿಟ್ಟು ಕರೆಯುವಾತ,
ಅವುಗಳಲ್ಲಿ ಒಂದನ್ನೂ ಕಾಣೆಯಾಗಲು
ಬಿಡದಾತ,
ಅಷ್ಟು ಬಲಾಢ್ಯನು, ಶಕ್ತಿವಂತನು ಆಗ !
27 : ಹೀಗಿರಲು ಎಲೈ ಯಕೋಬ್ಯರೇ,
ಇಸ್ರಯೇಲರೇ,
‘ಮರೆಯಾಗಿದೆ ಪ್ರಭುವಿಗೆ ನನ್ನ
ಕುಂದುಕೊರತೆ,
ನ್ಯಾಯನೀತಿ ದೊರಕದಿದೆ ನನಗೆ
ಇದರತ್ತ ದೇವರ ಲಕ್ಷ್ಯ ಬೀಳದಿದೆ’
ಎನ್ನುತ್ತಿರುವಿರಿ ಏಕೆ?
28 : ನೀವು ಕೇಳಿಲ್ಲವೇ? ನಿಮಗೆ ತಿಳಿದಿಲ್ಲವೇ?
ಸರ್ವೇಶ್ವರ ಅನಂತ ದೇವರಲ್ಲವೇ?
ಭೂದಿಗಂತಗಳನ್ನು ಆತ ಸೃಜಿಸಿದನಲ್ಲವೇ?
ದಣಿವೆಂಬುದು ಇಲ್ಲ, ಬಳಲಿಕೆ
ಎಂಬುದು ಇಲ್ಲ ಆತನಿಗೆ.
ಆತನ ದಕ್ಷಸಾಮಥ್ರ್ಯ ಅಗಮ್ಯ
ಪರಿಶೋಧನೆಗೆ.
29 : ದಯಪಾಲಿಸುವನಾತ ಬಲಾಭಿವೃದ್ಧಿಯನ್ನು
ಬಳಲಿದವನಿಗೆ
ಅನುಗ್ರಹಿಸುವನಾತ ಚೈತನ್ಯವನು
ನಿತ್ರಾಣನಿಗೆ.
30 : ಯುವಕರೂ ದಣಿದು ಬಳಲುವರು
ತರುಣರೂ ಸೊರಗಿ ಮುಗ್ಗರಿಸುವರು.
31 : ಸರ್ವೇಶ್ವರನನ್ನು ಎದುರು ನೋಡುವವರು
ಹೊಸ ಚೇತನವನ್ನು ಹೊಂದುವರು.
ರೆಕ್ಕೆ ಚಾಚಿದ ಹದ್ದುಗಳಂತೆ ಹಾರುವರು
ಓಡಿದರೂ ದಣಿದರು, ನಡೆದರೂ
ಬಳಲರು.