1 : ಅರಸ ಹಿಜ್ಕೀಯನ ಆಳ್ವಿಕೆಯ ಹದಿನಾಲ್ಕನೆಯ ವರ್ಷದಲ್ಲಿ, ಅಸ್ಸೀರಿಯದ ಅರಸ ಸನ್ಹೇರೀಬನು ಬಂದು ಜುದೇಯ ಪ್ರಾಂತ್ಯದ ಸುಭದ್ರ ಪಟ್ಟಣಗಳನ್ನೆಲ್ಲಾ ಸ್ವಾಧೀನ ಮಾಡಿಕೊಂಡನು.
2 : ಬಳಿಕ ಅವನು ಲಾಕೀಷಿನಿಂದ ರಬ್ಷಾಕೆ ಎಂಬ ಒಬ್ಬ ದಳಪತಿಯನ್ನು ಮಹಾಸೈನ್ಯದೊಂದಿಗೆ ಜೆರುಸಲೇಮಿನಲ್ಲಿದ್ದ ರಾಜ ಹಿಜ್ಕೀಯನ ಬಳಿಗೆ ಕಳುಹಿಸಿದನು. ಈ ದಳಪತಿ ಅಗಸರ ಹೊಲದಮೇಲೆ ಹಾದು ಹೋಗುವ ರಾಜಮಾರ್ಗದ ಹತ್ತಿರವಿರುವ ಕೆರೆಯ ಕಾಲುವೆಯ ಬಳಿ ಪಾಳೆಯ ಮಾಡಿಕೊಂಡನು.
3 : ಆಮೇಲೆ ಹಿಲ್ಕೀಯನ ಮಗನೂ ರಾಜಗೃಹಾಧಿಪತಿಯೂ ಆದ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ ಮತ್ತು ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಎಂಬ ಮೂವರು ಅಲ್ಲಿಗೆ ಬಂದರು.
4 : ದಳಪತಿ ಅವರಿಗೆ “ನೀವು ಹೋಗಿ ಅಸ್ಸೀರಿಯದ ಮಹಾರಾಜನ ಈ ಮಾತುಗಳನ್ನು ಹಿಜ್ಕೀಯನಿಗೆ ತಿಳಿಸಿರಿ: ‘ನಿನ್ನ ಭರವಸೆಗೆ ಆಧಾರವಾದರೂ ಏನು?
5 : ಯುದ್ಧಕ್ಕೆ ಬೇಕಾದ ವಿವೇಕ ಹಾಗೂ ಶಕ್ತಿ ಉಂಟೆಂಬ ನಿನ್ನ ಮಾತು ಬರೀ ಬಾಯಿಮಾತು ಎಂದು ನಾನು ಹೇಳಬಲ್ಲೆ. ನೀನು ಯಾರನ್ನು ನಂಬಿಕೊಂಡು ನನಗೆ ವಿರೋಧವಾಗಿ ಎದ್ದಿರುವೆ?
6 : ಮುರಿದ ಜೊಂಡಿಗೆ ಸಮಾನವಾದ ಈಜಿಪ್ಟ್ ಎಂಬ ಊರುಗೋಲಿನ ಮೇಲೆ ನಿನಗೆ ಭರವಸೆಯಿದೆಯಷ್ಟೆ. ಆದರೆ ಅದು ಊರಿಕೊಳ್ಳುವವನ ಕೈಯನ್ನು ಚುಚ್ಚಿ ತಿವಿಯುವ ಕೋಲು. ಈಜಿಪ್ಟಿನ ರಾಜ ಫರೋಹನಲ್ಲಿ ಭರವಸೆಯಿಟ್ಟವರಿಗೆ ಆಗುವ ಗತಿ ಇದೇ.
7 : ‘ಬಹುಶಃ, ನೀನು ‘ನಮ್ಮ ದೇವರಾದ ಸರ್ವೇಶ್ವರನನ್ನೇ ನಂಬಿಕೊಂಡಿದ್ದೇವೆ’, ಎಂದು ಹೇಳಬಹುದು. ಹಿಜ್ಕೀಯನು, ಇದೇ ಬಲಿಪೀಠದ ಮುಂದೆ ಆರಾಧನೆ ಮಾಡಬೇಕು ಎಂದು ಯೆಹೂದ್ಯರಿಗೆ ಮತ್ತು ಜೆರುಸಲೇಮಿನವರಿಗೆ ಆಜ್ಞಾಪಿಸಿ ಆ ಸರ್ವೇಶ್ವರಸ್ವಾಮಿಯ ಪೂಜಾಸ್ಥಳಗಳನ್ನೂ ಬೇರೆ ಎಲ್ಲಾ ಬಲಿಪೀಠಗಳನ್ನೂ ಹಾಳುಮಾಡಿದನಲ್ಲವೆ?
8 : ಆದುದರಿಂದ ಬಾ, ಬಂದು ನನ್ನ ಒಡೆಯನಾದ ಅಸ್ಸೀರಿಯದ ಅರಸನೊಂದಿಗೆ ಒಂದು ಒಪ್ಪಂದ ಮಾಡಿಕೊ. ಅವನು ನಿನಗೆ ಎರಡು ಸಾವಿರ ಕುದುರೆಗಳನ್ನು ಕೊಡುವನು; ಅವುಗಳ ಮೇಲೆ ಕೂರಿಸುವಷ್ಟು ಮಂದಿ ಸವಾರರು ನಿನಗಿದ್ದಾರೋ?
9 : ಇದು ಕೂಡ ನಿನಗೆ ಅಸಾಧ್ಯವಾದರೆ ನನ್ನ ಒಡೆಯನ ಸೇನಾಪತಿಗಳಲ್ಲಿ ಅತ್ಯಲ್ಪನನ್ನಾದರೂ ಸೋಲಿಸುವುದು ಹೇಗೆ? ರಥಾಶ್ವಬಲಗಳಿಗಾಗಿ ಈಜಿಪ್ಟಿನವರನ್ನು ನೀನು ನಂಬಿಕೊಂಡಿರುವಂತೆ ಕಾಣುತ್ತದೆ.
10 : ಈ ನಾಡನ್ನು ಹಾಳುಮಾಡುವುದಕ್ಕೆ ಸರ್ವೇಶ್ವರ ಸ್ವಾಮಿಯ ಒಪ್ಪಿಗೆಯಿಲ್ಲದೆ ಇಲ್ಲಿಗೆ ನಾನು ಬಂದೆನೆಂದು ನೆನಸುತ್ತೀಯೋ? ‘ಇಲ್ಲಿಗೆ ಬಂದು ಇದನ್ನು ಹಾಳುಮಾಡಿಬಿಡು’ ಎಂದು ಆ ಸರ್ವೇಶ್ವರಸ್ವಾಮಿಯೇ ನಿನಗೆ ಆಜ್ಞೆ ಮಾಡಿದ್ದಾರೆ,’ ಎಂಬ ಈ ಮಾತುಗಳು ಅರಸನ ಮಾತುಗಳೆಂದು ಹೋಗಿ ತಿಳಿಸಿರಿ” ಎಂದನು.
11 : ಆಗ ಎಲ್ಯಾಕೀಮ್, ಶೆಬ್ನ ಮತ್ತು ಯೋವ ಎಂಬವರು ಆ ದಳಪತಿಗೆ, “ದಯವಿಟ್ಟು ನಿನ್ನ ಸೇವಕರಾದ ನಮ್ಮೊಡನೆ ಆರಾಮಾಯಿಕ ಭಾಷೆಯಲ್ಲಿ ಮಾತನಾಡಿ, ಅದು ನಮಗೆ ಅರ್ಥವಾಗುತ್ತದೆ. ಆದರೆ ಹಿಬ್ರು ಭಾಷೆಯಲ್ಲಿ ಮಾತನಾಡಬೇಡಿ, ಅದು ನಮಗೆ ಅರ್ಥವಾಗುತ್ತದೆ. ಆದರೆ ಹಿಬ್ರು ಭಾಷೆಯಲ್ಲಿ ಮಾತನಾಡಬೇಡಿ, ಅದು ಪೌಳಿಗೋಡೆಯ ಮೇಲಿರುವ ಎಲ್ಲರಿಗೂ ಅರ್ಥವಾಗುತ್ತದೆ,” ಎಂದರು.
12 : ಅದಕ್ಕೆ ಆ ದಳಪತಿಯು, “ನನ್ನ ಯಜಮಾನನು, ನಿಮ್ಮ ಸಂಗಡವಾಗಲಿ ಮತ್ತು ನಿಮ್ಮ ಒಡೆಯರ ಸಂಗಡವಾಗಲಿ ಮಾತ್ರ ಮಾತನಾಡಬೇಕೆಂದು ನನ್ನನ್ನು ಕಳುಹಿಸಲಿಲ್ಲ. ಆ ಗೋಡೆಯ ಮೇಲೆ ಕುಳಿತಿರುವ ಜನರ ಸಂಗಡವೂ ಮಾತನಾಡುವುದಕ್ಕಾಗಿ ಕಳುಹಿಸಿದ್ದಾರೆ. ಈ ಜನರು ನಮಗೆ ವಿರುದ್ಧವಾಗಿ ಹೋರಾಡಿದರೆ ನಿಮ್ಮ ಹಾಗೆ ಇವರು ಕೂಡ ತಮ್ಮ ಸ್ವಂತ ಮಲಮೂತ್ರವನ್ನು ತಿಂದು ಕುಡಿಯಬೇಕಾಗುತ್ತದೆ” ಎಂದು ಉತ್ತರಕೊಟ್ಟನು.
13 : ಬಳಿಕ ಆ ದಳಪತಿಯು ಆ ಗೋಡೆಯ ಮೇಲೆ ನಿಂತಿದ್ದವರನ್ನು ಉದ್ದೇಶಿಸಿ ಹಿಬ್ರು ಭಾಷೆಯಲ್ಲಿ, “ನೀವು ಅಸ್ಸೀರಿಯದ ರಾಜಾಧಿರಾಜನ ಮಾತನ್ನು ಕೇಳಿರಿ;
14 : ಹಿಜ್ಕೀಯನ ಮಾತನ್ನು ಕೇಳಿ ಮೋಸಹೋಗಬೇಡಿ; ನಿಮ್ಮನ್ನು ಬಿಡಿಸಲು ಅವನಿಂದಾಗದು.
15 : ಹಿಜ್ಕೀಯನು ನಿಮಗೆ, ‘ಸರ್ವೇಶ್ವರಸ್ವಾಮಿಯಲ್ಲಿ ನಂಬಿಕೆಯಿಡಿ; ಅವರು ನಿಮ್ಮನ್ನು ಹೇಗಾದರೂ ಮಾಡಿ ರಕ್ಷಿಸುವರು; ಈ ಪಟ್ಟಣವು ಅಸ್ಸೀರಿಯದ ರಾಜನ ವಶವಾಗುವುದಿಲ್ಲ,’ ಎಂಬುದಾಗಿ ಹೇಳಿದರೆ ಅವನಿಗೆ ಕಿವಿಗೊಡಬೇಡಿ, ಒಪ್ಪಿಕೊಳ್ಳಬೇಡಿ.
16 : ಅಸ್ಸೀರಿಯದ ಅರಸನಾದ ನನ್ನ ಒಡೆಯನ ಮಾತನ್ನು ಕೇಳಿ; ಆತನೊಡನೆ ಒಪ್ಪಂದ ಮಾಡಿಕೊಂಡು ಆತನ ಆಶ್ರಯವನ್ನು ಸೇರಿರಿ. ಆಗ ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ಅಂಜೂರಮರದ ಹಾಗೂ ದ್ರಾಕ್ಷಾಲತೆಯ ಹಣ್ಣುಗಳನ್ನು ತಿನ್ನುವನು; ತನ್ನ ಬಾವಿಯ ನೀರನ್ನು ಕುಡಿಯುವನು.
17 : ಸ್ವಲ್ಪ ಕಾಲವಾದನಂತರ ಆತನು ಬಂದು ನಿಮ್ಮನ್ನು ಇನ್ನೊಂದು ನಾಡಿಗೆ ಕರೆದುಕೊಂಡು ಹೋಗುವನು. ಅಲ್ಲಿ ಧಾನ್ಯ, ದ್ರಾಕ್ಷಾರಸ, ಆಹಾರ, ದ್ರಾಕ್ಷಿತೋಟ ಇವು ಸಮೃದ್ಧಿಯಾಗಿರುವುವು, ನಿಮ್ಮ ನಾಡಿಗೆ ಸರಿ ಸಮಾನವಾಗಿರುವುವು;
18 : ‘ಸರ್ವೇಶ್ವರ ನಮ್ಮನ್ನು ರಕ್ಷಿಸುವರು’ ಎಂಬ ನಂಬಿಕೆಯನ್ನು ಹಿಜ್ಕೀಯನು ನಿಮ್ಮಲ್ಲಿ ಮೂಡಿಸದಂತೆ ಎಚ್ಚರಿಕೆಯಾಗಿರಿ. ಯಾವ ರಾಷ್ಟ್ರದ ದೇವರುಗಳು ತಾನೇ ಅಸ್ಸೀರಿಯದ ಅರಸನ ಕೈಯಿಂದ ನಾಡನ್ನು ಬಿಡಿಸಿಕೊಂಡಿದ್ದಾರೆ?
19 : ಹಮಾತ್, ಅರ್ಪಾದ್, ಸೆಫರ್ವಯಿಮ್ ಎಂಬ ಊರುಗಳ ದೇವರುಗಳು ಏನಾದರು? ಅವರು ಸಮಾರ್ಯವನ್ನು ನನ್ನ ಅರಸನ ಕೈಯಿಂದ ಬಿಡಿಸಿಕೊಂಡರೋ?
20 : ಯಾವ ರಾಷ್ಟ್ರದ ದೇವರುಗಳೂ ತಮ್ಮ ನಾಡನ್ನು ನನ್ನ ಅರಸನ ಕೈಯಿಂದ ಬಿಡಿಸಲಾರದೆ ಹೋದಮೇಲೆ ಸರ್ವೇಶ್ವರ ಜೆರುಸಲೇಮನ್ನು ಆತನ ಕೈಯಿಂದ ಬಿಡಿಸಿ ಕಾಪಾಡಲು ಸಾಧ್ಯವೋ?” ಎಂದು ಕೇಳಿದನು.
21 : ಆ ಸೇನಾಧಿಪತಿಗೆ ಯಾವ ಉತ್ತರವನ್ನು ಕೊಡಬಾರದೆಂದು ರಾಜ ಹಿಜ್ಕೀಯನು ಆಜ್ಞಾಪಿಸಿದ್ದರಿಂದ ಆ ಮೂವರು ಏನನ್ನು ಹೇಳದೆ ಸುಮ್ಮನಿದ್ದರು.
22 : ಬಳಿಕ, ಹಿಲ್ಕೀಯನ ಮಗನೂ ರಾಜ ಗೃಹಾಧಿಪತಿಯೂ ಆಗಿದ್ದ ಎಲ್ಯಾಕೀಮ್, ಕಾರ್ಯದರ್ಶಿ ಶೆಬ್ನ, ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಎಂಬವರು ಸಿಟ್ಟಿನಿಂದ ಬಟ್ಟೆಗಳನ್ನು ಹರಿದುಕೊಂಡು, ಅರಸ ಹಿಜ್ಕೀಯನ ಬಳಿಗೆ ಬಂದು, ಅವನಿಗೆ ಆ ಸೇನಾಪತಿಯ ಮಾತುಗಳನ್ನು ತಿಳಿಸಿದರು.