1 : ಇಸ್ರಯೇಲರ ಪರಮಪಾವನ ಸ್ವಾಮಿಯನ್ನು ಆಶ್ರಯಿಸದೆ, ಸಹಾಯಕ್ಕಾಗಿ ಈಜಿಪ್ಟಿಗೆ ತೆರಳುವವರಿಗೆ ಧಿಕ್ಕಾರ! ಅವರಿಗೆ ಬೇಕು ಆ ನಾಡಿನ ಅಶ್ವಬಲ, ರಥಗಳ ಸಂಖ್ಯಾಬಲ, ಸವಾರರ ಶೌರ್ಯ.
2 : ಆದರೆ ಸರ್ವೇಶ್ವರ ಸ್ವಾಮಿ ಬುದ್ಧಿವಂತರು, ಆಡಿದ ಮಾತನ್ನು ಹಿಂದಕ್ಕೆ ತೆಗೆದುಕೊಳ್ಳದವರು, ಕೇಡನ್ನು ಬರಮಾಡಬಲ್ಲವರು. ಕೆಡುಕರ ಕೊಂಪೆಗೂ ದುರುಳರ ಸಹಾಯಕರಿಗೂ ವಿರುದ್ಧವಾಗಿ ನಿಲ್ಲಬಲ್ಲವರು.
3 : ಈಜಿಪ್ಟಿನವರು ಕೇವಲ ಮನುಷ್ಯರೇ ಹೊರತು ದೇವರಲ್ಲ. ಅವರ ಅಶ್ವಗಳು ಮೂಳೆಮಾಂಸವೇ ಹೊರತು ಆಧ್ಯಾತ್ಮಿಕ ದಿವ್ಯಶಕ್ತಿಯಲ್ಲ. ಸರ್ವೇಶ್ವರ ಕೈಯೆತ್ತುವಾಗ ಅದಕ್ಕೆ ವಿರುದ್ಧ ಸಹಾಯ ಮಾಡಿದ ಅವನು ಮುಗ್ಗರಿಸುವನು. ಆ ಸಹಾಯ ಪಡೆದ ಅವನು ಬಿದ್ದು ಹೋಗುವನು. ಎಲ್ಲರೂ ಒಟ್ಟಿಗೆ ಅಳಿದು ಹೋಗುವರು.
4 : ಸರ್ವೇಶ್ವರ ನನಗೆ ಹೀಗೆಂದು ಹೇಳಿದ್ದಾರೆ: “ಸಿಂಹವೋ ಪ್ರಾಯದ ಸಿಂಹವೋ ಬೇಟೆಯ ಮೇಲೆ ಬಿದ್ದು ಗುರುಗುಟ್ಟುತ್ತಿರುವಾಗ, ಆ ಕೂಗನ್ನು ಕೇಳಿ ಕುರುಬರನೇಕರು ಕೂಡಿಬಂದರೂ ಅದು ಅವರ ಕೂಗಾಟಕ್ಕೆ ಹೆದರದು, ಅವರ ಗದ್ದಲಕ್ಕೆ ಎದೆಗುಂದದು. ಅಂತೆಯೇ ಸೇನಾಧೀಶ್ವರ ಸರ್ವೇಶ್ವರಸ್ವಾಮಿ ಆದ ನಾನು ಯುದ್ಧಮಾಡಲು ಸಿಯೋನ್ ಶಿಖರದ ಮೇಲೆ ಇಳಿದು ಬರುವಾಗ ನನ್ನನ್ನು ಯಾರೂ ಹೆದರಿಸುವುದಿಲ್ಲ, ಎದೆಗುಂದಿಸುವಂತಿಲ್ಲ.
5 : ಹಕ್ಕಿಗಳು ಹಾರಾಡುತ್ತಾ ತನ್ನ ಮರಿಗಳನ್ನು ಕಾಪಾಡುವಂತೆ ಸೇನಾಧೀಶ್ವರ ಸರ್ವೇಶ್ವರನಾದ ನಾನು ಜೆರುಸಲೇಮನ್ನು ಕಾಪಾಡುವೆನು. ಅದನ್ನು ಸಂರಕ್ಷಿಸಿ ಕಾಯುವೆನು, ಅಪಾಯದಿಂದ ತಪ್ಪಿಸುವೆನು.”
6 : ಸರ್ವೇಶ್ವರ ಇಂತೆಂದರು: “ಇಸ್ರಯೇಲಿನ ಜನರೇ, ನೀವು ನನಗೆ ದೊಡ್ಡ ದ್ರೋಹ ಮಾಡಿದಿರಿ. ಈಗಲಾದರೂ ನನ್ನ ಕಡೆಗೆ ತಿರುಗಿಕೊಳ್ಳಿರಿ.
7 : ನೀವು ಪಾಪಕಳಂಕಿತವಾದ ನಿಮ್ಮ ಕೈಯಿಂದ ನಿರ್ಮಿಸಿರುವ ಬೆಳ್ಳಿಬಂಗಾರದ ವಿಗ್ರಹಗಳನ್ನು ಎತ್ತಿ ಬಿಸಾಡುವ ದಿನ ಬರಲಿದೆ.
8 : ಆ ಅಸ್ಸೀರಿಯಾದವರು ಕತ್ತಿಯಿಂದ ಹತರಾಗುವರು, ಮನುಷ್ಯರ ಕತ್ತಿಯಿಂದಲ್ಲ; ಖಡ್ಗವು ಅವರನ್ನು ಕಬಳಿಸುವುದು, ಅದು ಮಾನವ ಖಡ್ಗವಲ್ಲ. ಅವರು ಕತ್ತಿಗೆ ಹೆದರಿ ಓಡುವರು. ಅವರ ಯುವಕರು ಗುಲಾಮರಾಗುವರು.
9 : ಅವರಿಗೆ ಆಶ್ರಯ ನೀಡಿದವನು, ಭಯದಿಂದ ಪಲಾಯನ ಮಾಡಿಬಿಡುವನು, ಅವರ ದಳಪತಿಗಳು ಧ್ವಜವನ್ನೇ ಬಿಟ್ಟು ದಿಕ್ಕು ಪಾಲಾಗುವರು.” ಇದು ಸರ್ವೇಶ್ವರಸ್ವಾಮಿಯ ನುಡಿ. ಪ್ರಭುವಿನ ಅಗ್ನಿ ಇರುವುದು ಸಿಯೋನಿನಲ್ಲಿ, ಅವರ ಅಗ್ನಿಕುಂಡ ಜೆರುಸಲೇಮಿನಲ್ಲಿ.