1 : ಕಾಲ ಬರುವುದು; ಆಗ ಹಾಡುವರು ಜುದೇಯ ನಾಡಿನಲ್ಲಿ ಈ ಗೀತೆಯನು:
ನಮಗಿದೆ ಸುಭದ್ರ ನಗರ,
ದೇವರೇ ಅದರ ದುರ್ಗ, ಪ್ರಾಕಾರ.
2 : ತೆರೆಯಿರಿ ನಗರ ದ್ವಾರಗಳನು,
ಪ್ರವೇಶಿಸಲಿ ವಿಶ್ವಾಸವುಳ್ಳ ಸಜ್ಜನರು.
3 : ನಿನ್ನ ನೆಚ್ಚಿದವರಿಗೆ, ಸ್ಥಿರ ಚಿತ್ತವುಳ್ಳವರಿಗೆ,
ಚಿರಶಾಂತಿಯ ನೀ ನೀಡುವೆ.
4 : ಶಾಶ್ವತ ಆಶ್ರಯಗಿರಿ, ಸ್ವಾಮಿ ಸರ್ವೇಶ್ವರನೇ,
ಸತತ ಭರವಸೆಯಿಡಿರಿ ಆತನಲ್ಲೇ.
5 : ತಗ್ಗಿಸುವನಾತ ಎತ್ತರದಲಿ ವಾಸಿಸುವವರನು,
ಕೆಡವಿ, ನೆಲಸಮಮಾಡಿ, ಧೂಳಾಗಿಸುವನು
ಅವರು ವಾಸಮಾಡುವಾ ಉನ್ನತ
ನಗರವನು.
6 : ಈಡಾಗುವುದದು ಕಾಲತುಳಿತಕೆ
ದೀನದಲಿತರ ಪಾದತುಳಿತಕೆ.
7 : ನೇರವಾಗಿದೆ ಸಜ್ಜನನ ದಾರಿ
ಸುಗಮವಾಗಿದೆ ನಿನ್ನಿಂದ ಆತನ ಹಾದಿ.
8 : ನಡೆವೆವು ನಾವು, ಸರ್ವೇಶ್ವರಾ,
ನಿನ್ನ ನೀತಿ ಮಾರ್ಗದೊಳು
ಕಾದಿರುವೆವು ನಿನಗಾಗಿ ಭರವಸೆಯಿಟ್ಟು
ನಿನ್ನೊಳು
ನಿನ್ನ ನಾಮಸ್ಮರಣೆಯ ಬಯಕೆ
ನಮ್ಮ ಅಂತರಾತ್ಮದೊಳು.
9 : ಹಾರೈಸಿದೆ ಎನ್ನಾತ್ಮ ನಿನ್ನನು ಇರುಳೊಳು
ಅರಸಿತೆನ್ನ ಮನ ನಿನ್ನನು
ಮುಂಜಾನೆಯೊಳು.
ನೀನೀಯುವಾಗ ಜಗಕೆ ನ್ಯಾಯತೀರ್ಪನು
ಕಲಿತುಕೊಳ್ಳುವರು ಭೂನಿವಾಸಿಗಳು
ನ್ಯಾಯನೀತಿಯನು.
10 : ದಯೆತೋರಿದರೂ ಕಲಿಯನು ದುಷ್ಟನು
ಆ ನ್ಯಾಯನೀತಿಯನು
ಧರ್ಮಕ್ಷೇತ್ರದೊಳು ಸಹ ಗೈವನು
ಅಕ್ರಮವನು
ಗೌರವಿಸನು ಸರ್ವೇಶ್ವರನ ಮಹಿಮೆಯನು.
11 : ಅವರ ಮೇಲೆ ನೀ ಕೈಯೆತ್ತಿದರೂ,
ಸರ್ವೇಶ್ವರಾ, ಲಕ್ಷಿಸರವರು ನಿನ್ನನ್ನು.
ನಾಚಲಿ ಅವರು ನೋಡಿ ನಿನ್ನ
ಸ್ವಜನಾಭಿಮಾನವನು
ದಹಿಸಿಬಿಡಲಿ ಅಗ್ನಿಜ್ವಾಲೆಯು ಆ ನಿನ್ನ
ವಿರೋಧಿಗಳನು.
12 : ಸರ್ವೇಶ್ವರಾ, ನೀಡೆಮಗೆ ಶಾಂತಿ ಸಮಾಧಾನ
ನಮ್ಮ ಸತ್ಕಾರ್ಯಗಳೆಲ್ಲವೂ ನಿನ್ನ
ಕೃಪಾಸಾಧನ.
13 : ನಮ್ಮ ದೇವರಾದ ಸರ್ವೇಶ್ವರಾ,
ಇಗೋ, ನೋಡು
ನಮ್ಮ ನಾಳಿಹರು ಭೂರಾಜರು ನಿನ್ನ ಬಿಟ್ಟು.
ಆದರೇನು, ಹೊಗಳುವೆವು ನಿನ್ನ ನಾಮವನೆ
ಮುನ್ನಿಟ್ಟು.
14 : ಮಡಿದುಹೋದರು ಆ ಒಡೆಯರೆಲ್ಲ
ಮರಳಿ ಅವರ ಪ್ರೇತಗಳು ಎದ್ದು
ಬರುವಂತಿಲ್ಲ.
ನೀನವರನು ಬಡಿದು ನಸುಕಿ ಹಾಕಿರುವೆ
ಅವರ ನೆನಪನೆ ಅಳಿಸಿ ಹಾಕಿರುವೆ.
15 : ಹೆಚ್ಚಿಸಿರುವೆ ಸರ್ವೇಶ್ವರಾ, ನಿನ್ನ ಜನರನು
ಹೌದು, ವೃದ್ಧಿಗೊಳಿಸಿರುವೆ ನಿನ್ನ ಪ್ರಜೆಯನು.
ವಿಸ್ತರಿಸಿರುವೆ ನಾಡಿನ ಮೇರೆಗಳನು
ಈಪರಿ ಪಡೆದಿರುವೆ ಮಹಿಮೆಯನು.
16 : ನಿನ್ನಾಶ್ರಯ ಕೋರಿದರು, ಸರ್ವೇಶ್ವರಾ,
ಜನ ಇಕ್ಕಟ್ಟಿಗೆ ಸಿಕ್ಕಿದಾಗ
ಪ್ರಾರ್ಥನೆ ಗೈದರವರು ನಿನ್ನ ಶಿಕ್ಷೆಗೆ
ಗುರಿಯಾದಾಗ.
17 : ಹೆರಿಗೆ ಹತ್ತಿರವಾದ ಗರ್ಭಿಣಿ ಚೀರುವಂತೆ
ಯಾತನೆಪಡುವ ಬೇನೆಯಿಂದಾಕೆ
ಅರಚುವಂತೆ
ಮಾಡಿರುವೆ, ಸರ್ವೇಶ್ವರಾ, ನಿನಗಾಗಿ ನಾವು
ಮೊರೆಯಿಡುವಂತೆ.
18 : ಪ್ರಸವವೇದನೆಪಟ್ಟು ನಾವು ಹಡೆದದ್ದು
ಗಾಳಿಯನ್ನೆ
ಆಗಲಿಲ್ಲ ಜಗಕೆ ನಮ್ಮಿಂದ ಯಾವ ರಕ್ಷಣೆ
ನೀಡಲಿಲ್ಲ ನಾವು ಜನ್ಮ ಲೋಕನಿವಾಸಿಗಳಿಗೆ.
19 : ಬದುಕುವರು ನಿಧನರಾದ ನಮ್ಮ ಜನರು
ಜೀವದಿಂದೇಳುವುವು ನಮ್ಮವರ ಶವಗಳು.
ಎದ್ದು ಹರ್ಷಧ್ವನಿಗೈಯಲಿ ನೆಲದಲಿ
ಬಿದ್ದಿರುವವರು.
ನೀ ಸುರಿಸುವ ಇಬ್ಬನಿ ಜ್ಯೋತಿರ್ಮಯ,
ಆದುದರಿಂದ
ಸತ್ತವರು ಪುನರುತ್ಥಾನ ಹೊಂದುವರು
ನೆಲದಿಂದ.
ದೈವದಂಡನೆ
20 : ನನ್ನ ಜನರೇ, ಹೋಗಿ; ನಿಮ್ಮ ನಿಮ್ಮ ಮನೆಗಳನ್ನು ಸೇರಿ ಬಾಗಿಲು ಮುಚ್ಚಿಕೊಳ್ಳಿ. ದೇವರ ಕೋಪ ತೀರುವತನಕ ಕೊಂಚಕಾಲ ಅವಿತುಕೊಳ್ಳಿ.
21 : ಇಗೋ, ಸರ್ವೇಶ್ವರ ಜಗದ ಜನಕ್ಕೆ ಅವರವರ ಪಾಪದ ಫಲವನ್ನು ಉಣಿಸಲು ತಮ್ಮ ನಿವಾಸದಿಂದ ಹೊರಟಿರುವರು. ಭೂಮಿ ತನ್ನಲ್ಲಿ ಇಂಗಿದ ರಕ್ತವನ್ನು ಬೆಳಕಿಗೆ ತರುವುದು; ಭೂನಿವಾಸಿಗಳಲ್ಲಿ ಹತರಾದವರನ್ನು ಇನ್ನು ಮರೆಮಾಚದು.