Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಶಾಯ


1 : ಸರ್ವೇಶ್ವರಾ, ನೀನೆನ್ನ ದೇವನು, ಏಕೆನೆ ನೀನು ಸತ್ಯಸ್ವರೂಪನು, ನಿಷ್ಟಾವಂತನು, ಆದಿ ಯೋಜನೆಗಳನು ಪೂರೈಸುವವನು, ಅದ್ಭುತಕಾರ್ಯಗಳನು ಎಸಗಿದಂತವನು. ಘನಪಡಿಸುವೆ ನಾ ನಿನ್ನನು, ಸ್ತುತಿಸುವೆನು ನಿನ್ನ ನಾಮ ಮಹಿಮೆಯನು.
2 : ನಾಶಪಡಿಸಿದೆ ನೀ ನಗರವನು, ದಿಬ್ಬವಾಗಿಸಿದೆ ದುರ್ಗವನು, ಕೆಡವಿದೆ ವಿದೇಶೀಯರ ಕೋಟೆಯನು, ಮರಳಿ ಕಟ್ಟಲಾಗದ ಹಾಳೂರನ್ನಾಗಿಸಿದೆ ಅದನು.
3 : ಹೊಗಳುವುವು ನಿನ್ನನ್ನು ಬಲಿಷ್ಟ ರಾಷ್ಟ್ರಗಳು, ನಿನಗಂಜುವುವು ಕ್ರೂರಿಗಳ ಪಟ್ಟಣಗಳು.
4 : ದುರ್ಗವಾಗಿರುವೆ ನೀನು ದೀನದಲಿತರಿಗೆ, ಸುರಕ್ಷಿತ ಕೋಟೆಯಾಗಿರುವೆ ದಟ್ಟದರಿದ್ರರಿಗೆ, ನೆರಳಾಗಿರುವೆ ಬಿಸಿಲೊಳು ಬೆಂದವರಿಗೆ. ಕ್ರೂರಿಗಳ ಹೊಡೆತ ಚಳಿಗಾಲದ ಚಂಡಮಾರುತವಾಗಿರೆ, ಬಿರುಗಾಳಿಯ ಆ ಬಡಿತಕೆ ನೀನಾದೆ ಆಸರೆ,
5 : ಅನ್ಯರ ಆರ್ಭಟವನು ನೀ ಅಡಗಿಸುವೆ, ಸುಡುವ ಒಣ ನೆಲವನು ಮೇಘ ತಣಿಸುವಂತೆ. ಕ್ರೂರಿಗಳ ಹರ್ಷೋದ್ಗಾರವನು ನಿಲ್ಲಿಸುವೆ, ಬಿಸಿಲನು ತಡೆಯುವ ಮೋಡದ ನೆರಳಿನಂತೆ. ದೇವರು ಬಡಿಸುವ ಭೋಜನ
6 : ಇದಲ್ಲದೆ ಸೇನಾಧೀಶ್ವರ ಸರ್ವೇಶ್ವರ ಈ ಪರ್ವತದಲ್ಲಿ ಸಕಲ ರಾಷ್ಟ್ರಗಳಿಗೆ ಸಾರವತ್ತಾದ ಮೃಷ್ಟಾನ್ನವನ್ನೂ ಶ್ರೇಷ್ಟವಾದ ದ್ರಾಕ್ಷಾರಸವನ್ನೂ ಭೋಜನಕ್ಕಾಗಿ ಅಣಿಗೊಳಿಸುವರು.
7 : ಸಮಸ್ತ ರಾಷ್ಟ್ರಗಳನ್ನು ಆವರಿಸಿರುವ ಮುಸುಕನ್ನೂ ಸಕಲ ದೇಶಗಳನ್ನು ಮುಚ್ಚಿರುವ ತೆರೆಯನ್ನೂ ಇದೇ ಪರ್ವತದಲ್ಲಿ ನಾಶಮಾಡುವರು.
8 : ಮರಣವನ್ನು ಶಾಶ್ವತವಾಗಿ ನಿರ್ನಾಮ ಮಾಡುವರು. ಸರ್ವೇಶ್ವರಸ್ವಾಮಿ ಎಲ್ಲರ ಕಣ್ಣೀರನ್ನು ಒರೆಸಿಬಿಡುವರು. ತಮ್ಮ ಪ್ರಜೆಗಾದ ಅವಮಾನವನ್ನು ಜಗದಿಂದಲೇ ತೊಲಗಿಸಿಬಿಡುವರು. ಸರ್ವೇಶ್ವರಸ್ವಾಮಿಯೇ ಇಂತೆಂದು ನುಡಿದಿದ್ದಾರೆ.
9 : ಇದು ನೆರವೇರಿದಾಗ ಜನರು: “ಇವರೇ ನಮ್ಮ ದೇವರು; ನಮ್ಮನ್ನು ರಕ್ಷಿಸುವರೆಂದು ಇವರನ್ನೇ ನೆಚ್ಚಿಕೊಂಡಿದ್ದೆವು. ಇವರೇ ಸರ್ವೇಶ್ವರ; ಇವರನ್ನೇ ನೆಚ್ಚಿಕೊಂಡಿದ್ದೆವು. ಇವರು ನೀಡುವ ರಕ್ಷಣೆಯಲ್ಲಿ ಆನಂದಿಸೋಣ!” ಎಂದು ಹೇಳಿಕೊಳ್ಳುವರು. ದೇವರು ನೀಡುವ ದಂಡನೆ
10 : ಸರ್ವೇಶ್ವರಸ್ವಾಮಿಯ ಅಭಯ ಹಸ್ತವು ಈ ಪರ್ವತದ ಮೇಲೆ ಶಾಶ್ವತವಾಗಿ ನೆಲಸುವುದು. ಮೋವಾಬಾದರೋ ತಿಪ್ಪೆಗುಂಡಿಯ ರೊಚ್ಚಿನಲ್ಲಿ ಒಣಹುಲ್ಲು ತುಳಿತಕ್ಕೆ ಈಡಾಗುವಂತೆ ತಾನಿದ್ದಲ್ಲೇ ತುಳಿತಕ್ಕೀಡಾಗುವುದು.
11 : ಈಜುವವರು ಕೈಯಾಡಿಸುವಂತೆ ಮೋವಾಬ್ ರೊಚ್ಚಿನಲ್ಲಿ ಕೈಯಾಡಿಸುವುದು. ಅದರ ಗರ್ವವನ್ನೂ ಕೈಚಳಕವನ್ನೂ ಸರ್ವೇಶ್ವರಸ್ವಾಮಿ ಅಡಗಿಸಿ ಬಿಡುವರು. ದುರ್ಗದಂತೆ ಎತ್ತರವಾಗಿರುವ ಅದರ ಕೋಟೆಕೊತ್ತಲಗಳನ್ನು ಕೆಳಕ್ಕೆ ಕೆಡವಿ ನೆಲಸಮ ಮಾಡುವರು. ಅದು ಧೂಳು ಪಾಲಾಗುವುದು.

· © 2017 kannadacatholicbible.org Privacy Policy