1 : ಇಗೋ, ಸರ್ವೇಶ್ವರ ಬರಿದುಮಾಡು
ವರು ಧರೆಯನ್ನು,
ನಿರ್ಜನ ಪ್ರದೇಶವಾಗಿಸುವರು
ವಿರೂಪಗೊಳಿಸಿ ಅದನು,
ಚದರಿಸುವರು ಅದರ ನಿವಾಸಿಗಳನು.
2 : ಪ್ರಜೆಗೆ ಹೇಗೋ ಹಾಗೆ ಯಾಜಕನಿಗೆ,
ದಾಸನಿಗೆ ಹೇಗೋ ಹಾಗೆ ಯಾಜಕನಿಗೆ,
ದಾಸಿಗೆ ಹೇಗೋ ಹಾಗೆ ಯಜಮಾನಿಗೆ,
ಕೊಳ್ಳುವವನಿಗೆ ಹೇಗೋ ಹಾಗೆ ಕೊಡು
ವವನಿಗೆ
ಸಾಲ ಕೊಡುವವನಿಗೆ ಹೇಗೋ ಹಾಗೆ ಸಾಲ
ಪಡೆಯುವವನಿಗೆ,
ಬಡ್ಡಿ ತೆಗೆಯುವವನಿಗೆ ಹೇಗೋ ಹಾಗೆ ಬಡ್ಡಿ
ತೆರುವವನಿಗೆ,
- ಬರುವುದು ಒಂದೇ ಗತಿ ಇವರೆಲ್ಲರಿಗೆ.
3 : ಬೆಟ್ಟ ಬರಿದಾಗಿ ಸಂಪೂರ್ಣ ಸುಲಿಗೆ
ಯಾಗುವುದು ಜಗವು
ಸರ್ವೇಶ್ವರಸ್ವಾಮಿಯ ನುಡಿಗಳಿವು:
4 : ಸೊರಗಿಹೋಗುವುದು ಲೋಕ ದುಃಖಿಸುತ್ತಾ
ಕುಗ್ಗಿ ಹೋಗುವುದು ಬುವಿ ಗೋಳಾಡುತ್ತಾ
ಕಂಗೆಟ್ಟು ಹೋಗುವನು ಪ್ರತಿಯೊಬ್ಬ ವಿಶ್ವ
ವಿಖ್ಯಾತ.
5 : ಭೂನಿವಾಸಿಗಳು ಮೀರಿಹರು
ದೈವಾಜ್ಞೆಗಳನು
ಉಲ್ಲಂಘಿಸಿಹರು ದೈವನಿಯಮಗಳನು,
ಭಂಗಪಡಿಸಿಹರು ಶಾಶ್ವತ
ಒಡಂಬಡಿಕೆಯನ್ನು,
ಮಲಿನವಾಗಿಸಿಹರು ನಡತೆಯಿಂದ
ಲೋಕವನು.
6 : ಇದಕಾರಣ ಕಬಳಿಸಿದೆ ಜಗವನು ಶಾಪ,
ತಟ್ಟಿದೆ ಆ ಜನರಿಗೆ ದಂಡನೆಯ ತಾಪ.
ಸುಟ್ಟಮೇಲೆ ಉಳಿದಿಹರು ಅವರಲಿ ಕೆಲವರು
ಮಾತ್ರ.
7 : ಬಾಡಿ ಹೋಗಿದೆ ದ್ರಾಕ್ಷಾಲತೆ,
ದುಬಾರಿಯಾಗಿದೆ ದ್ರಾಕ್ಷಾರಸ,
ನರಳುತಿದೆ ನಲಿಯುತ್ತಿದ್ದ ಜನಸಮೂಹ.
8 : ನಿಂತುಹೋಗಿದೆ ದಮ್ಮಡಿಗಳ ಹರ್ಷನಾದ, ಕೊನೆಗೊಂಡಿದೆ ಉಲ್ಲಾಸಿಗಳ ಕೋಲಾಹಲ, ಅಡಗಿ ಹೋಗಿದೆ ಕಿನ್ನರಿಯ ಮಧುರ ಸ್ವರ.
9 : ಇನ್ನಿಲ್ಲ ಮದ್ಯಪಾನ ಗೀತಾಗಾನ,
ಕಹಿಪಾನವಾಯಿತು ಕುಡುಕನಿಗೆ ಸುರಾಪಾನ.
10 : ಪಾಳುಬಿದ್ದಿದೆ ಅಸ್ತವ್ಯಸ್ತವಾದ ನಗರ,
ಯಾರೂ ಪ್ರವೇಶಿಸದಂತೆ ಮುಚ್ಚಿದೆ
ಪ್ರತಿಯೊಂದು ಗೃಹ.
11 : ಮದ್ಯಪಾನವಿಲ್ಲವೆಂದು ಬೀದಿಗಳಲಿ ಬೊಬ್ಬೆ
ಇಡುತಿಹರೆಲ್ಲ,
ಅಸ್ತಮಿಸಿ ಹೋಯಿತು ಜಗದ ಉಲ್ಲಾಸವೆಲ್ಲ,
ಸೆರೆಯಾಗಿ ತೊಲಗಿತು ಅದರ ಸಡಗರವೆಲ್ಲ.
12 : ಪಾಳುಬಿದ್ದಿದೆ ನಗರ,
ಮುರಿದು ಬಿದ್ದಿದೆ ಪುರದ್ವಾರ.
13 : ಉಳಿಯುವುವು ಜನಾಂಗಗಳು ಜಗದ ಮಧ್ಯೆ,
ಎಣ್ಣೆಯ ಬೀಜವನು ಉದುರಿಸಿದ ಮೇಲೆ
ಮಿಗುವ ಹೀಚಿನಂತೆ,
ದ್ರಾಕ್ಷಿ ಹಣ್ಣನು ಕೊಯ್ದಮೇಲೆ ಉಳಿದ
ಕೂಳೆಯಂತೆ.
14 : ಆರ್ಭಟಿಸುವರು ಅಳಿದುಳಿದವರು ಆನಂದ
ದಿಂದ,
ಕೊಂಡಾಡುವರು ಸರ್ವೇಶ್ವರನ ಮಹಿಮೆ
ಯನು ಪಡುವಣದಿಂದ.
15 : ಎಂದೇ ಮೂಡಣದವರೇ, ಸನ್ಮಾನಿಸಿರಿ
ಸರ್ವೇಶ್ವರಸ್ವಾಮಿಯನು,
ಕರಾವಳಿಯವರೇ, ಘನಪಡಿಸಿರಿ ಇಸ್ರಯೇಲಿನ
ದೇವರಾದ ಸ್ವಾಮಿಯ ನಾಮವನು.
16 : ಜಗದ ಕಟ್ಟಕಡೆಯಿಂದ ಕೇಳಿಬರುತಿದೆ,
‘ಸತ್ಯಸ್ವರೂಪನಿಗೆ ಸ್ತೋತ್ರ’ ಎಂಬ ಗೀತೆ.
ಆದರೆ ನಶಿಸಿಹೋಗುತ್ತಿರುವೆನು ನಾನು,
ಹೌದು, ನಶಿಸಿ ನಾಶವಾಗುತ್ತಿರುವೆನು,
ಏನೆಂದು ಹೇಳಲಿ ನನ್ನ ಗತಿಯನು.
ಇದೋ, ಬಾಧಿಸುತ್ತಿಹರು ದ್ರೋಹಿಗಳು,
ದ್ರೋಹದ ಮೇಲೆ ದ್ರೋಹವೆಸಗುತಿಹರು.
17 : ಎಲೈ ಭೂನಿವಾಸಿಗಳೇ, ಕೇಳಿರೆಲ್ಲರು,
ಕಾದಿದೆ ನಿಮಗೆ ಭಯಭೀತಿ,
ಕುಳಿ ಮತ್ತು ಬಲೆಯು.
18 : ಬೀಳುವನು ಕುಳಿಯಲ್ಲಿ, ಭಯಭೀತಿಯ
ಸಪ್ಪಳಕ್ಕೆ ಓಡಿಹೋಗುವವನು,
ಸಿಕ್ಕಿ ಬೀಳುವನು ಬಲೆಯಲ್ಲಿ ಕುಳಿಯ
ಹತ್ತಿ ಬರುವವನು.
ತೆರೆದಿವೆ ನೋಡಿ, ಆಕಾಶದ ದ್ವಾರಗಳು,
ಕಂಪಿಸುತ್ತಿವೆ ಬುವಿಯ ಅಸ್ತಿವಾರಗಳು.
19 : ಬಿರುಕು ಬಿಡುವುದು ಭೂಮಿ ಸೀಳುಪಾಳಾಗಿ
ಕತ್ತರಿಸುವುದು ಕದಲಿಹೋಗಿ.
20 : ಓಲಾಡುವುದು ಭೂಮಿ ಅಮಲೇರಿದವನಂತೆ,
ತೂಗಾಡುವುದು ಬಿರುಗಾಳಿಗೆ ಸಿಕ್ಕಿದ
ಗುಡಿಸಲಂತೆ,
ಕುಸಿದು ಬೀಳುವುದು ದ್ರೋಹದ ಭಾರಕೆ,
ಮರಳಿ ಏಳದಂತೆ.
21 : ಆ ದಿನ ಸರ್ವೇಶ್ವರ ದಂಡಿಸುವರು
ಮೇಲಣ ಸೇನಾಶೂರರನು,
ಕೆಳಗಣ ಭೂ ರಾಜರನು.
22 : ತಳ್ಳುವರವರನು ಖೈದಿಗಳ ಗುಂಪಿನಂತೆ
ನೆಲಮಾಳಿಗೆಗೆ,
ಇರುವರವರು ಸೆರೆಯಲಿ ಬಹುದಿನಗಳವರೆಗೆ,
ತದನಂತರ ಗುರಿಯಾಗುವರು ದಂಡನೆಗೆ.
23 : ನಾಚುವನು ಚಂದ್ರ, ಹೇಸುವನು ಸೂರ್ಯ,
ಏಕೆನೆ ಆಳುವರು ಸೇನಾಧೀಶ್ವರ ಸರ್ವೇಶ್ವರ
ಸಿಯೋನ್ ಪರ್ವತದೊಳು,
ಜೆರುಸಲೇಮ್ ನಗರದೊಳು.
ಪ್ರತ್ಯಕ್ಷವಾಗುವುದಾತನ ಮಹಿಮಾ
ಪ್ರಭಾವವು,
ಅಲ್ಲಿನ ಜನನಾಯಕರ ಸಮ್ಮುಖದೊಳು.
ಸ್ತುತಿಗೀತೆ