Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಶಾಯ


1 : ಏನಾಯಿತು? ಜನರೆಲ್ಲರೂ ಮನೆ ಮಾಳಿಗೆಗಳನ್ನು ಏರಿ ಸಡಗರದಿಂದ ಇರುವುದೇಕೆ?
2 : ಊರಿಗೆ ಊರೇ ಆರ್ಭಟಿಸುತ್ತಿರುವಂತಿದೆ! ಯುದ್ಧದಲ್ಲಿ ಸತ್ತ ನಿಮ್ಮ ಯೋಧರೆಲ್ಲ ಕಾದಾಟದಿಂದ ಮಡಿದವರಲ್ಲ.
3 : ನಿಮ್ಮ ಮುಖಂಡರೆಲ್ಲ ಒಟ್ಟಿಗೆ ಪಲಾಯನಗೈದರು; ಒಂದೇ ಒಂದು ಬಾಣವನ್ನು ಬಿಡುವುದಕ್ಕೆ ಮುಂಚೆ ಸೆರೆಹೋದರು. ದೂರಕ್ಕೆ ಪಲಾಯನ ಗೈದಿದ್ದರೂ ಅವರೆಲ್ಲರೂ ಶತ್ರುವಿನ ಕೈಗೆ ಸಿಕ್ಕಿ ಬಿದ್ದಿದ್ದಾರೆ.
4 : “ಆದ್ದರಿಂದ ನನ್ನ ಕಡೆ ನೋಡಬೇಡಿ. ನನ್ನನ್ನು ಸಂತೈಸಲು ಪ್ರಯತ್ನಿಸಬೇಡಿ. ಸತ್ತುಹೋದ ನನ್ನ ಜನರಿಗಾಗಿ ಕಣ್ಣೀರು ಸುರಿಸುತ್ತಿರುವೆನು” ಎಂದೆ ನಾನು.
5 : ಸೇನಾಧೀಶ್ವರ ಸರ್ವೇಶ್ವರಸ್ವಾಮಿ ಕಳುಹಿಸಿರುವ ದಿನವಿದು - ದಿವ್ಯದರ್ಶನದ ಕಣಿವೆಯ ದಿನ, ಗಲಿಬಿಲಿಯ ದಿನ, ತುಳಿದಾಟದ ದಿನ, ಭಯಭ್ರಾಂತಿಯ ದಿನ. ಕೋಟೆಕೊತ್ತಲಗಳನ್ನು ಹೊಡೆದುರುಳಿಸುವ ದಿನ. ಕೂಗಾಟವು ಬೆಟ್ಟದಲ್ಲಿ ಮಾರ್ದನಿಸುವ ದಿನ!
6 : ಏಲಾಮಿನ ಸೈನಿಕರು ಬಿಲ್ಲುಬಾಣಗಳನ್ನೂ, ರಥಾಶ್ವಗಳನ್ನೂ ಸಜ್ಜುಗೊಳಿಸಿರುವರು. ಕೀರಿನವರು ಗುರಾಣಿಗಳನ್ನು ಅಣಿಗೊಳಿಸಿರುವರು.
7 : ನಿಮ್ಮ ಫಲವತ್ತಾದ ತಗ್ಗುಪ್ರದೇಶಗಳು ರಥಗಳಿಂದ ತುಂಬಿರುವುವು. ಅಶ್ವದಳಗಳು ಪುರದ್ವಾರದ ಬಳಿ ಕಾವಲು ನಿಂತಿರುವುವು.
8 : ಜುದೇಯದ ಕೋಟೆ ನೆಲಸಮವಾಯಿತು. ಆಗ ಲೆಬನೋನಿನ ವನಮಂದಿರದ ಕಡೆಗೆ ಕೈ ಚಾಚಿದಿರಿ.
9 : ದಾವೀದನ ಕೋಟೆಯ ಬಿರುಕುಗಳು ಬಹಳವೆಂಬುದನ್ನು ಗಮನಿಸಿದಿರಿ. ಕೆಳಗಿನ ಕೊಳಕ್ಕೆ ನೀರನ್ನು ಹಾಯಿಸಿದಿರಿ.
10 : ಜೆರುಸಲೇಮಿನ ಮನೆಗಳನ್ನು ಪರೀಕ್ಷಿಸಿದಿರಿ. ಕೋಟೆಯ ಗೋಡೆಗಳನ್ನು ಭದ್ರಪಡಿಸಲು ಆ ಮನೆಗಳನ್ನು ಕೆಡವಿಬಿಟ್ಟಿರಿ.
11 : ಎರಡು ಗೋಡೆಗಳ ನಡುವೆ ಹಳೆಯ ಕೊಳದಿಂದ ಹರಿಯುವ ನೀರಿಗಾಗಿ ಜಲಾಶಯವನ್ನು ಕಟ್ಟಿದಿರಿ. ಆದರೆ ಪುರಾತನ ಕಾಲದಿಂದ ನಿಯೋಜಿಸಿ ಇದನ್ನೆಲ್ಲಾ ನಡೆಸಿದಾತನ ಕಡೆಗೆ ಗಮನಕೊಡದೆ ಹೋದಿರಿ.
12 : ಎಂದೇ ಸೇನಾಧೀಶ್ವರ ಸರ್ವೇಶ್ವರಸ್ವಾಮಿ ಆ ದಿನದಂದು ನಿಮಗೆ ಆಜ್ಞಾಪಿಸಿ: “ನೀವು ಅತ್ತು ಪ್ರಲಾಪಿಸಬೇಕು, ತಲೆಬೋಳಿಸಿಕೊಂಡು ಗೋಣಿತಟ್ಟನ್ನು ಉಟ್ಟುಕೊಳ್ಳಬೇಕು” ಎಂದು ಹೇಳಿದರು.
13 : ಆದರೆ ನೀವು ಹರ್ಷಾನಂದಗೊಂಡಿರಿ. ದನಕರುಗಳನ್ನು ಕೊಯ್ದಿರಿ, ಮಾಂಸವನ್ನು ಭುಜಿಸಿ ಮದ್ಯಪಾನ ಮಾಡಿದಿರಿ. “ಇಂದೇ ತಿಂದು ಕುಡಿಯೋಣ. ನಾಳೆ ಬರುತ್ತದೆ ಮರಣ” ಎಂದು ಹೇಳಿಕೊಂಡಿರಿ.
14 : ಇಂತಿರಲು, ಸೇನಾಧೀಶ್ವರ ಸರ್ವೇಶ್ವರ ನನ್ನ ಕಿವಿಯಲ್ಲಿ ಉಸುರಿದ್ದೇನೆಂದರೆ: “ಇವರು ಸಾಯುವತನಕ ಇವರಿಗೆ ಪಾಪಕ್ಷಮೆ ದೊರಕುವುದಿಲ್ಲ. ಸೇನಾಧೀಶ್ವರ ಸರ್ವೇಶ್ವರಸ್ವಾಮಿಯಾದ ನಾನೇ ಇದನ್ನು ನುಡಿದಿದ್ದೇನೆ.” ಮೇಲ್ವಿಚಾರಕನಾದ ಶೆಬ್ನನಿಗೆ ಎಚ್ಚರಿಕೆ
15 : ಸೇನಾಧೀಶ್ವರ ಸರ್ವೇಶ್ವರಸ್ವಾಮಿ ಹೀಗೆ ನುಡಿದಿದ್ದಾರೆ: “ಹೋಗು, ಅರಮನೆಯ ಮೇಲ್ವಿಚಾರಕ ಶೆಬ್ನ ಎಂಬ ಅಧ್ಯಕ್ಷನಿಗೆ ಹೀಗೆಂದು ಹೇಳು:
16 : ನಿನಗೇನು ಕೆಲಸವಿಲ್ಲ? ನಿನಗಾರಿಹರಿಲ್ಲಿ? ತೋಡಿಸಿಕೊಂಡಿರುವೆಯಾ ಗೂಡನ್ನಿಲ್ಲಿ? ಗೋರಿಯನ್ನು ಕೊರೆಯಿಸಿ ಕೊಂಡಿರುವೆಯಾ ಎತ್ತರದ ಬಂಡೆಯಲ್ಲಿ? ಕೆತ್ತಿಸಿಕೊಂಡಿರುವೆಯಾ ನಿನಗೊಂದು ನಿವಾಸವನಿಲ್ಲಿ?
17 : ಎಲೈ ಬಲಾಢ್ಯನೇ, ಸರ್ವೇಶ್ವರ ನಿನ್ನನ್ನು ಬಿಗಿಹಿಡಿದು ದೂರಕ್ಕೆಸೆಯುವರು,
18 : ಚೆಂಡಿನಂತೆ ಉಂಡೆ ಮಾಡಿ ನಿನ್ನನ್ನು ಗಿರ್ರನೆ ಸುತ್ತಿಸಿ ವಿಸ್ತಾರವಾದ ಬಯಲಿಗೆ ಬಿಸಾಡುವರು. ದಣಿಯ ಮನೆಗೆ ಅಪಮಾನ ತಂದವನೇ, ನೀನು ಸಾಯುವುದು ಅಲ್ಲೇ.
19 : ನಿನ್ನನ್ನು ಕೆಲಸದಿಂದ ತೆಗೆದುಬಿಡುವರು, ನಿನ್ನ ಪದವಿಯಿಂದ ತೆಗೆದುಹಾಕುವರು.
20 : “ಆ ದಿನದಂದು, ನನ್ನ ದಾಸನೂ ಹಿಲ್ಕಿಯನ ಮಗನೂ ಆದ ಎಲ್ಯಾಕೀಮನನ್ನು ಬರಮಾಡುವೆನು.
21 : ನಿನ್ನ ವಸ್ತ್ರವನ್ನು ಅವನಿಗೆ ತೊಡಿಸುವೆನು. ನಿನ್ನ ನಡುಕಟ್ಟನ್ನು ಅವನಿಗೆ ಕಟ್ಟುವೆನು. ನಿನ್ನ ಅಧಿಕಾರವನ್ನು ಅವನಿಗೆ ಒಪ್ಪಿಸುವೆನು. ಅವನು ಜೆರುಸಲೇಮಿನ ನಿವಾಸಿಗಳಿಗೂ ಜುದೇಯದ ಮನೆತನಕ್ಕೂ ತಂದೆಯಾಗಿರುವನು.
22 : ದಾವೀದ ಮನೆತನದ ಅಧಿಕಾರವನ್ನು ಅವನ ಹೆಗಲ ಮೇಲೆ ಹೊರಿಸುವೆನು. ಅವನು ತೆರೆದ ಬಾಗಿಲನ್ನು ಯಾರೂ ಮುಚ್ಚರು; ಅವನು ಮುಚ್ಚಿದ ಬಾಗಿಲನ್ನು ಯಾರೂ ತೆರೆಯರು.
23 : ವಸ್ತುಗಳನ್ನು ತಗುಲಿ ಹಾಕುವ ಮೊಳೆಯಂತೆ ಗಟ್ಟಿಯಾದ ಸ್ಥಳದಲ್ಲಿ ಅವನನ್ನು ಬಿಗಿಯಾಗಿ ನಿಲ್ಲಿಸುವೆನು. ಅಲ್ಲದೆ, ಅವನು ತನ್ನ ವಂಶದವರಿಗೆ ಗೌರವಪೀಠವಾಗಿರುವನು.”
24 : “ಬಟ್ಟಲು, ಬಿಂದಿಗೆ ಮುಂತಾದ ಪಾತ್ರೆಗಳನ್ನು ಮೊಳೆಗೆ ತಗಲುಹಾಕುವಂತೆ, ತಂದೆಯ ಮಕ್ಕಳು, ಮೊಮ್ಮಕ್ಕಳೆಲ್ಲರು ಅವನಿಗೆ ನೇತು ಬೀಳುವರು.
25 : ಇದರಿಂದ ಬಿಗಿಯಾಗಿ ಹೊಡೆಯಲಾಗಿದ್ದ ಆ ಮೊಳೆ ಸಡಿಲವಾಗಿ ಕುಸಿದು ಬೀಳುವುದು. ಅದಕ್ಕೆ ತಗಲು ಹಾಕಿದ್ದ ವಸ್ತುಗಳೆಲ್ಲ ಕಳಚಿ ಬೀಳುವುವು. ಇದು ಸರ್ವೇಶ್ವರನಾದ ನನ್ನ ನುಡಿ,” ಎಂದು ಸೇನಾಧೀಶ್ವರ ಸರ್ವೇಶ್ವರಸ್ವಾಮಿ ಹೇಳಿರುವರು.

· © 2017 kannadacatholicbible.org Privacy Policy