Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಶಾಯ


1 : ಇಗೋ, ಸರ್ವೇಶ್ವರ ವೇಗವಾಗಿ ಚಲಿಸುವ ಮೇಘಗಳ ಮೇಲೆ ಈಜಿಪ್ಟಿಗೆ ಬರುವರು. ಅವರ ಮುಂದೆ ಈಜಿಪ್ಟಿನ ವಿಗ್ರಹಗಳು ನಡುಗುವುವು. ಈಜಿಪ್ಟಿನವರ ಹೃದಯ ಕರಗಿ ನೀರಾಗುವುದು.
2 : ಸರ್ವೇಶ್ವರ ಇಂತೆನ್ನುತ್ತಾರೆ: “ನಾನು ಈಜಿಪ್ಟಿನವರಲ್ಲಿ ಒಳ ಜಗಳವನ್ನು ಎಬ್ಬಿಸುವೆನು. ಅಣ್ಣತಮ್ಮಂದಿರು, ನೆರೆಹೊರೆಯವರು, ನಗರನಗರಗಳು, ರಾಜ ರಾಜರುಗಳು ಪರಸ್ಪರ ಕಾದಾಡುವರು.
3 : ಈಜಿಪ್ಟಿನವರ ಚೈತನ್ಯ ಉಡುಗಿಹೋಗುವುದು. ಅವರ ಯೋಜನೆಗಳು ಭಂಗವಾಗುವುವು. ಜನರು ವಿಗ್ರಹಗಳನ್ನು, ಮಂತ್ರಗಾರರನ್ನು, ಪ್ರೇತವಿಚಾರಕರನ್ನು, ಕಣಿಹೇಳುವವರನ್ನು ಆಶ್ರಯಿಸುವರು.”
4 : “ಇದಲ್ಲದೆ ಈಜಿಪ್ಟಿನವರನ್ನು ಕ್ರೂರ ಅರಸನ ವಶಕ್ಕೆ ಒಪ್ಪಿಸುವೆನು. ರಾಜನು ದಬ್ಬಾಳಿಕೆಯಿಂದ ಅವರನ್ನು ಆಳುವನು. ಇದು ಸರ್ವಶಕ್ತ ಸರ್ವೇಶ್ವರನ ನುಡಿ.”
5 : ನೈಲ್ ನದಿಯ ನೀರು ಬತ್ತಿಹೋಗುವುದು. ಅದರ ಪ್ರಭಾವ ಕ್ರಮೇಣ ಒಣಗಿಹೋಗುವುದು.
6 : ಕಾಲುವೆಗಳು ನಾರುವುವು. ಈಜಿಪ್ಟಿನ ಉಪನದಿಗಳು ಇಳಿದು ಇಂಗಿಹೋಗುವುವು.
7 : ನದಿಯ ತೀರಗಳು ಬರಡಾಗುವುವು. ನದಿಯಲ್ಲಿ ಬಿದ್ದ ಬೀಜಗಳೆಲ್ಲ ಒಣಗಿ ಗಾಳಿಗೆ ತೂರಿಹೋಗುವುವು.
8 : ಬೆಸ್ತರು ಕಣ್ಣೀರಿಡುವರು; ಗಾಳಹಾಕುವವರು ಗೋಳಿಡುವರು; ಬಲೆಬೀಸುವವರು ಸೊರಗಿ ಹೋಗುವರು.
9 : ನಯವಾದ ನಾರುಮಡಿಯನ್ನು ಮತ್ತು ಬಿಳೀ ಬಟ್ಟೆಯನ್ನು ನೇಯುವವರೆಲ್ಲ ಹತಾಶರಾಗುವರು.
10 : ನಾಡಿನ ಜವಳಿ ವ್ಯಾಪಾರಿಗಳು, ಕೂಲಿಯಾಳುಗಳು ಚಿಂತಾಕ್ರಾಂತರಾಗುವರು.
11 : “ಚೋಯನಿನ ಅಧಿಪತಿಗಳು ಮಂದಮತಿಗಳು. ಫರೋಹನ ಮುಖ್ಯಮಂತ್ರಿಗಳು ಕೊಡುವುದು ಹುಚ್ಚು ಆಲೋಚನೆಗಳನ್ನೇ. ‘ನಾವು ಪುರಾತನ ವಿದ್ವಾಂಸರ ವಂಶಜರು. ಉÁಜರ್ಷಿಗಳ ಸಂತತಿಯವರು’ ಎಂದು ನೀವು ಫರೋಹನಿಗೆ ಹೇಳಲು ಸಾಧ್ಯವೇ?
12 : ಈಜಿಪ್ಟಿನ ಅರಸನೇ, ನಿನ್ನ ವಿದ್ವಾಂಸರೆಲ್ಲಿ? ಅವರೇ ನಿನಗೆ ತಿಳುವಳಿಕೆ ಕೊಡಲಿ. ಈಜಿಪ್ಟಿನ ವಿರೋಧವಾಗಿ ಸೇನಾಧೀಶ್ವರ ಸರ್ವೇಶ್ವರ ಯೋಚಿಸಿರುವುದನ್ನು ಅವರೇ ನಿನಗೆ ತಿಳಿಯಪಡಿಸಲಿ.
13 : ಚೋಯನಿನ ಅಧಿಪತಿಗಳು ಮಂದಮತಿಗಳು. ನೋಫಿನ ಮುಖ್ಯಮಂತ್ರಿಗಳು ಮೋಸಗಾರರು. ಈಜಿಪ್ಟ್ ಜನಾಂಗದ ಮೂಲೆಗಲ್ಲಿನಂತಿದ್ದವರೇ ಜನರನ್ನು ತಪ್ಪುದಾರಿಗೆ ಎಳೆದಿದ್ದಾರೆ.
14 : ಸರ್ವೇಶ್ವರ ಅವರ ಮನಸ್ಸಿನಲ್ಲಿ ಚಂಚಲಭಾವವನ್ನು ಮೂಡಿಸಿದ್ದಾರೆ. ಅಮಲೇರಿದವನು ಕಕ್ಕುತ್ತಾ ಅತ್ತಿತ್ತ ಓಲಾಡುವ ಪ್ರಕಾರ ಈಜಿಪ್ಟಿನವರು ತಮ್ಮ ಒಂದೊಂದು ಕೆಲಸಕಾರ್ಯದಲ್ಲೂ ಅಸ್ಥಿರರಾಗಿರುವಂತೆ ಮಾಡಿದ್ದಾರೆ.
15 : ಹೀಗೆ ಈಜಿಪ್ಟಿಗೆ ತಲೆಯಾಗಲಿ ಬಾಲವಾಗಲಿ, ತಾಳೆಯಾಗಲಿ ತೃಣವಾಗಲಿ ನೆರವಾಗಲು ಸಾಧ್ಯವಿಲ್ಲದಂತಾಗಿದೆ. ಈಜಿಪ್ಟ್, ಅಸ್ಸೀರಿಯದವರ ಪರಿವರ್ತನೆ
16 : ಆ ದಿನದಂದು ಈಜಿಪ್ಟಿನವರು ಹೆಂಗಸರಂತೆ ಅಂಜುಬುರುಕರಾಗುವರು; ಸೇನಾಧೀಶ್ವರ ಸರ್ವೇಶ್ವರ ತಮ್ಮನ್ನು ದಂಡಿಸಲು ಕೈಯೆತ್ತುವಾಗ ಅವರು ಭಯಪಟ್ಟು ನಡುಗುವರು.
17 : ಜುದೇಯ ನಾಡು ಈಜಿಪ್ಟಿನವರಿಗೆ ಭಯಂಕರವಾಗಿರುವುದು. ಆ ನಾಡಿನ ಹೆಸರನ್ನು ಕೇಳಿದ್ದೇ ತಡ, ಪ್ರತಿಯೊಬ್ಬನೂ ಬೆಚ್ಚಿಬೀಳುವನು. ಪ್ರತಿಯೊಬ್ಬನೂ ಸೇನಾಧೀಶ್ವರ ಸರ್ವೇಶ್ವರಸ್ವಾಮಿ ಈಜಿಪ್ಟಿನ ವಿರುದ್ಧ ಮಾಡಿರುವ ಸಂಕಲ್ಪವನ್ನು ತಿಳಿದು ನಿಬ್ಬೆರಗಾಗುವನು.
18 : ಆ ದಿನದಂದು ಈಜಿಪ್ಟಿನ ನಾಡಿನಲ್ಲಿ ಐದು ಪಟ್ಟಣಗಳಲ್ಲಿ ಕಾನಾನಿನ (ಹಿಬ್ರು) ಭಾಷೆಯನ್ನಾಡುವ ಜನರು ತುಂಬಿರುವರು. ಅವರು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ಶರಣರೆಂದು ಪ್ರಮಾಣ ಮಾಡುವರು. ಆ ಪಟ್ಟಣಗಳಲ್ಲಿ ಒಂದಕ್ಕೆ “ರವಿಪುರ” ಎಂಬ ಹೆಸರಿರುವುದು.
19 : ಆ ದಿನದಂದು ಈಜಿಪ್ಟಿನ ನಡುವೆ ಸರ್ವೇಶ್ವರಸ್ವಾಮಿಗೆ ಒಂದು ಬಲಿಪೀಠವಿರುವುದು ಮತ್ತು ನಾಡಿನ ಗಡಿಯಲ್ಲಿ ಸ್ವಾಮಿಯ ಸ್ಥಂಭ ಇರುವುದು.
20 : ಇವು ಈಜಿಪ್ಟ್ ದೇಶಕ್ಕೆ ಸರ್ವೇಶ್ವರ ಸ್ವಾಮಿಯ ಸಂಕೇತವಾಗಿಯೂ ಸಾಕ್ಷಿಯಾಗಿಯೂ ಇರುವುವು. ಅವರು ತಮ್ಮನ್ನು ಬಾಧಿಸುವವರ ವಿರುದ್ಧ ಸರ್ವೇಶ್ವರಸ್ವಾಮಿಗೆ ಮೊರೆಯಿಟ್ಟಾಗ, ಸ್ವಾಮಿಯು ವೀರನಾದ ರಕ್ಷಕನೊಬ್ಬನನ್ನು ಕಳುಹಿಸುವರು. ಆತನು ಆ ಜನರನ್ನು ಬಿಡುಗಡೆಮಾಡಿ ಉದ್ಧರಿಸುವನು.
21 : ಸರ್ವೇಶ್ವರಸ್ವಾಮಿಯೇ ಈಜಿಪ್ಟಿನವರಿಗೆ ತಿಳಿಯಪಡಿಸುವರು. ಜನರು ಸ್ವಾಮಿಯನ್ನು ಅರಿತುಕೊಂಡು, ಯಜ್ಞನೈವೇದ್ಯಗಳನ್ನು ಕಾಣಿಕೆಯಾಗಿ ಸಮರ್ಪಿಸುವರು, ಹೊತ್ತ ಹರಕೆಗಳನ್ನು ನೆರವೇರಿಸುವರು.
22 : ಇದಲ್ಲದೆ ಸರ್ವೇಶ್ವರ ಈಜಿಪ್ಟಿನವರನ್ನು ದಂಡಿಸುವರು, ಗಾಯಗೊಳಿಸಿದರೂ ಗುಣಪಡಿಸುವರು. ಈಜಿಪ್ಟಿನವರು ಸ್ವಾಮಿಯ ಕಡೆಗೆ ತಿರುಗಿಕೊಳ್ಳುವರು. ಸ್ವಾಮಿ ಅವರ ಮೊರೆಯನ್ನು ಆಲಿಸಿ ಅವರನ್ನು ಗುಣಪಡಿಸುವರು.
23 : ಆ ದಿನದಂದು ಈಜಿಪ್ಟ್ ಮತ್ತು ಅಸ್ಸೀರಿಯದ ನಡುವೆ ಹೆದ್ದಾರಿ ಇರುವುದು. ಅಸ್ಸೀರಿಯದವರು ಈಜಿಪ್ಟಿಗೂ ಈಜಿಪ್ಟಿನವರು ಅಸ್ಸೀರಿಯಕ್ಕೂ ಸಂಚಾರ ಮಾಡುವರು. ಈಜಿಪ್ಟಿನವರು ಅಸ್ಸೀರಿಯದವರೊಡನೆ ಸೇರಿ ಸರ್ವೇಶ್ವರಸ್ವಾಮಿಯನ್ನು ಆರಾಧಿಸುವರು.
24 : ಆ ದಿನದಂದು ಇಸ್ರಯೇಲ್ ಈಜಿಪ್ಟಿನೊಂದಿಗೂ ಅಸ್ಸೀರಿಯದೊಂದಿಗೂ ಸೇರುವುದು. ಈ ಮೂರು ರಾಷ್ಟ್ರಗಳು ಇಡೀ ಜಗಕ್ಕೆ ಆಶೀರ್ವಾದದ ಕೇಂದ್ರವಾಗಿ ಪರಿಣಮಿಸುವುವು.
25 : “ನನ್ನ ಪ್ರಜೆಯಾದ ಈಜಿಪ್ಟ್, ನನ್ನ ಕೈಚಳಕದ ಅಸ್ಸೀರಿಯಾ, ನನ್ನ ಸೊತ್ತಾದ ಇಸ್ರಯೇಲ್ ನಿಮಗೆ ಶುಭಮಂಗಳ,” ಎಂದು ಅವುಗಳನ್ನು ಸರ್ವಶಕ್ತ ಸರ್ವೇಶ್ವರ ಸ್ವಾಮಿ ಆಶೀರ್ವದಿಸುವರು.

· © 2017 kannadacatholicbible.org Privacy Policy