1 : ಕಳುಹಿಸಿ ಕುರಿಗಳನು ಕಪ್ಪಕಾಣಿಕೆ
ಯಾಗಿ ದೇಶಾಧಿಪತಿಗೆ,
ಕಳುಹಿಸಿ ಮರುಭೂಮಿಯ ಸೆಲಾದಿಂದ
ಸಿಯೋನ್ ಪರ್ವತಕೆ.
2 : ಮೋವಾಬಿನ ಮಹಿಳೆಯರು ಅರ್ನೊನ್
ನದಿಯ ಹಾಯ್ಗಡಗಳಲಿ,
ಅಲೆಯುತಿಹರು ಗೂಡಿಂದ
ಹೊರದೂಡಲಾದ ಹಕ್ಕಿ ಮರಿಗಳ ಪರಿ.
3 : ಇಂತೆನ್ನುವರವರು ಯೆಹೂದ ಜನತೆಗೆ:
“ನೀಡಿ ಸಲಹೆಯೊಂದನ್ನು ನಮಗೆ,
ಕೊಡಿ ನ್ಯಾಯ ತೀರ್ಪನೆಮಗೆ,
ಇರುಳಿನಂತಿರಲಿ ನಿಮ್ಮ ನೆರಳು
ಉರಿಬಿಸಿಲೊಳೆಮಗೆ,
ನೆಲೆನೀಡಿ ವಲಸಿಗರಿಗೆ, ದೂಡಬೇಡಿ
ಅಲೆಯುವವರನು ಬಯಲಿಗೆ.
4 : ನೆಲೆನೀಡಿ ಮೋವಾಬ್ ನಾಡಿನಿಂದ
ವಲಸೆಬಂದಿಹ ನಮಗೆ,
ವಿನಾಶಕರಿಗೆ ವಶವಾಗದಂತೆ ಆಶ್ರಯ ನೀಡಿ
ನಮಗೆ.
ನಾಡಿನಿಂದ ನಿರ್ಮೂಲವಾಗುವರು
ವಿಧ್ವಂಸಕರು,
ನಿಂತು ಹೋಗುವುವು ನಾಶವಿನಾಶಗಳು,
ಅಳಿದುಹೋಗುವರು ತುಳಿದು
ಹಾಳುಮಾಡುವವರು.
5 : ಸ್ಥಾಪಿತವಾಗುವುದಾಗ ಅಚಲ ಒಲವಿನ
ಸಿಂಹಾಸನವು,
ಅದನಲಂಕರಿಸುವನು ಪ್ರಾಮಾಣಿಕ ದಾವೀದ
ವಂಶಜನು.
ದೊರಕಿಸುವನಾತ ನ್ಯಾಯ ನೀತಿಯನು,
ಶೀಘ್ರದಲೆ ನೆರವೇರಿಸುವನು
ಸರಿಕಂಡದುದನು.”
6 : ಯೆಹೂದ ಜನತೆ ಪೇಳ್ವರವರಿಗೆ: “ನಮ್ಮ
ಕಿವಿಗೆ ಬಿದ್ದಿದೆ ಮೋವಾಬ್ಯರ ಮದ,
ತಿಳಿದಿದೆ ನಮಗೆ ಅವರ ದುರಹಂಕಾರ,
ಅವರ ಒಣ ಡಂಭಾಚಾರ, ಗರ್ವೋದ್ರೇಕ”.
7 : ಇದಕಾರಣ ಮೋವಾಬ್ಯರೇ ಗೋಳಾಡಲಿ,
ಪ್ರಲಾಪಿಸಲಿ ಪ್ರತಿಯೊಬ್ಬನು
ಮೋವಾಬಿಗಾಗಿ,
ಕೀರ್ ಹರೆಷೆಥಿನ ದೀಪದ್ರಾಕ್ಷಿಯ
ಕಡುಬಿಗಾಗಿ,
ನೆನೆದು ನರಳಿ ಹಲುಬಲಿ ಅದಕ್ಕಾಗಿ.
8 : ನಿಸ್ಸಾರವಾಗಿದೆ ಹೆಷ್ಬೋನಿನ ಹೊಲ, ಸಿಬ್ಮದ
ದ್ರಾಕ್ಷಾಲತೆ,
ಒಮ್ಮೆ ವ್ಯಾಪಿಸಿತ್ತು ಆ ರಾಜ್ಯದ್ರಾಕ್ಷಿ
ಯಜ್ಜೇರಿನವರೆಗೆ,
ಹಬ್ಬಿತ್ತದರ ಶಾಖೆ ಮರುಭೂಮಿಗೆ,
ಸಮುದ್ರದಾಚೆ,
ಮಾಡಿತು ನಾಡಿನೊಡೆಯರನು ಕುಡಿದು
ಮತ್ತರಾಗುವಂತೆ.
9 : ಎಂದೇ ಸಿಬ್ಮದ ದ್ರಾಕ್ಷಾಲತೆಯ ನಿಮಿತ್ತ,
ಕಣ್ಣೀರಿಡುವೆನು ಯಜ್ಜೇರಿನವರ ಸಮೇತ,
ತೋಯಿಸುತಿಹೆನು ಹೆಷ್ಬೋನನು, ಎಲ್ಲಾನನು
ಕಣ್ಣೀರಿಂದ,
ಏಕೆನೆ ಇಲ್ಲವಾಗಿದೆ ಅಲ್ಲಿ ಹಣ್ಣುಹಂಪಲು
ಸುಗ್ಗಿಯ ಗೀತ.
10 : ತೊಲಗಿದೆ ಹೊಲಗಳಿಂದ ಹರ್ಷಾನಂದ,
ಇಲ್ಲವಾಗಿದೆ ತೋಟಗಳಲಿ ಜಯಕಾರದ
ನಾದ,
ದ್ರಾಕ್ಷಾರಸವನು ತೆಗೆವವರಿಲ್ಲ
ಅರಮನೆಗಳಿಂದ,
ಎಂತಲೆ ನಿಂತು ಹೋಗಿಹುದಲ್ಲಿ ಸುಗ್ಗಿಯ
ಗೀತ.
11 : ಮೋವಾಬಿನ ನಿಮಿತ್ತ ಮಿಡಿಯುತಿದೆಯೆನ್ನ
ಮನ ದುಃಖದಿಂದ,
ವೀಣೆಯ ತಂತಿಯಂತೆ ತುಡಿಯುತಿದೆಯೆನ್ನ
ಅಂತರಂಗ ಕೀರ್ ಹೆರೆಷಿನ ನಿಮಿತ್ತ.
12 : ವ್ಯರ್ಥ, ಬೆಟ್ಟಗುಡ್ಡಗಳಿಗೆ ಮೋವಾಬ್ಯರು
ತೀರ್ಥಯಾತ್ರೆಗೈದರೂ,
ವ್ಯರ್ಥ, ಪ್ರಾರ್ಥನೆ ಮಾಡಲು ಅವರು
ಗರ್ಭಗುಡಿಗೆ ಹೋದರೂ.
13 : ಮೋವಾಬ್ಯರ ವಿಷಯವಾಗಿ ಸರ್ವೇಶ್ವರ ಹಿಂದೆ ನುಡಿದ ದೇವೋಕ್ತಿಯಿದೇ:
14 : ಸರ್ವೇಶ್ವರ ಇಂತೆನ್ನುತ್ತಾರೆ: “ಗುಲಾಮಗಿರಿಯ ಕಟ್ಟುನಿಟ್ಟಿನ ಲೆಕ್ಕಾಚಾರದಂತೆ, ಮೂರು ವರ್ಷದೊಳಗೆ ಮೋವಾಬಿನ ವೈಭವವು ಹೀನಾಯಕ್ಕೆ ಈಡಾಗುವುದು. ಅಲ್ಲಿನವರ ಅಗಣ್ಯ ಜನ ಸಂಖ್ಯೆಯಲ್ಲಿ ಅಳಿದುಳಿಯುವವರು ಕೆಲವೇ ದುರ್ಬಲರು”.