1 : ಮೋವಾಬನ್ನು ಕುರಿತ ದೈವೋಕ್ತಿ
ಇದು:
“ಅಳಿದು ಹಾಳಾಯಿತು ಒಂದೇ ರಾತ್ರಿಯೊಳು,
ಮೋವಾಬಿನ ಆರ್ ಪಟ್ಟಣವು.
ಅಳಿದು ಹಾಳಾಯಿತು ಒಂದೇ ರಾತ್ರಿಯೊಳು,
ಮೋವಾಬಿನ ಕೀರ್ ಪಟ್ಟಣವು.
2 : ಹತ್ತಿಹರು ಗುಡಿಗೋಪುರಗಳನು
ಆಳುವುದಕ್ಕಾಗಿ, ದೀಬೋನಿನವರು,
ಗೋಳಾಡುತಿಹರು ನೆಬೋವಿನಲಿ ಮೇಣ್
ಮೇದೆಬದಲಿ,
ಮೋವಾಬ್ಯರು ತಲೆ ಬೋಳಿಸಿಹರು,
ಗಡ್ಡಕತ್ತರಿಸಿಹರು ದುಃಖದಿಂದ ಎಲ್ಲರು.
3 : ಗೋಣಿತಟ್ಟನುಟ್ಟು ತಿರುಗುತಿಹರು
ಹಾದಿಬೀದಿಗಳಲಿ,
ಕಣ್ಣೀರಿಡುತ ಸೊರಗಿಹರು ಮಳಿಗೆಗಳಲಿ,
ಬೀದಿ ಚೌಕಗಳಲಿ.
4 : ಕೂಗಿಕೊಳ್ಳುತಿಹವು ಹೆಷ್ಬೋನ್
ಎಲೆಯಾಲೆಗಳು,
ಕೇಳಿಬರುತಿಹುದು ಯಹಚಿನವರೆಗೂ
ಅವುಗಳ ರೋದನವು,
ಕಿರಿಚಿಕೊಳ್ಳುತಿಹರು ಮೋವಾಬಿನ
ಸೇನೆಯಾಳುಗಳು,
ತತ್ತರಿಸಿ ಹೋಗಿಹವು ಅವರ ಗುಂಡಿಗೆಗಳು.
5 : ಮೊರೆಯಿಡುತ್ತಿದೆ ಎನ್ನ ಮನ ಮೋವಾಬಿನ
ನಿಮಿತ್ತ,
ಪಲಾಯನ ಗೈದವರು ಓಡುತಿಹರು
ಚೋಯರತ್ತ, ಎಗ್ಲತ್ - ಶೆಲಿಶೀಯ ದತ್ತ,
ಹತ್ತಿಹರು ಲೂಹೀತ್ ದಿಣ್ಣೆಯನ್ನು ಅಳುತ್ತ,
ಪಿಡಿದಿಹರು ಹೊರೋನಯಿಮಿನ ದಾರಿಯನು
ಹಾಳಾದೆವೆಂದು ಧ್ವನಿಗೈಯುತ.
6 : ಬತ್ತಿಹೋಯಿತು ನಿಮ್ರೀಮ್ ನದಿಯು,
ಬಾಡಿಹೋಯಿತು ಹಸಿಹುಲ್ಲು,
ಮುಗಿಯಿತು ಮೇವು,
ಇಲ್ಲವಾಯಿತು ಪಚ್ಚೆಪಸಿರಾವುದು.
7 : ಎಂತಲೇ ವಿಲ್ಲೊ ಕಣಿವೆಯಾಚೆ ಹೊತ್ತು
ಹೋಗುತಿಹರು,
ತಾವು ಗಳಿಸಿದ ಆಸ್ತಿಯನ್ನು, ಕೂಡಿಸಿಟ್ಟ
ಸ್ವತ್ತನ್ನು.
8 : ಹಬ್ಬಿದೆ ಅದರ ಪ್ರಲಾಪ ಮೋವಾಬಿನ
ಎಲ್ಲೆಗಳ ಪರಿಯಂತ,
ವ್ಯಾಪಿಸಿದೆ ಅದರ ಆಕ್ರಂದ ಎಗ್ಲಯಿಮಿನ್,
ಬೆಯೇರ್ ಏಲೀಮಿನತನಕ.
9 : ಹರಿಯುತಿದೆ ದೀಮೋನಿನ ನದಿ
ರಕ್ತಮಯವಾಗಿ,
ಕಾದಿದೆ ದೀಮೋನರಿಗೆ ಇನ್ನೂ ಹೆಚ್ಚಿನ ಹಾನಿ,
ಎರಗಲಿದೆ ಅಳಿದುಳಿದ ಮೋವಾಬ್ಯರ ಮೇಲೆ
ಒಂದು ಕೇಸರಿ.”