1 : ಜೆಸ್ಸೆಯನ ಬುಡದಿಂದ ಒಡೆಯುವು
ದೊಂದು ಚಿಗುರು;
ಅದರ ಬೇರಿನಿಂದ ಫಲಿಸುವುದೊಂದು ತಳಿರು.
2 : ನೆಲಸುವುದಾತನ ಮೇಲೆ
ಜ್ಞಾನವಿವೇಕ ದಾಯಕ ಆತ್ಮ;
ಶಕ್ತಿ ಸಮಾಲೋಚನೆಯನ್ನೀಯುವ ಆತ್ಮ;
ಸರ್ವೇಶ್ವರನ ಅರಿವನು, ಭಯವನು
ಹುಟ್ಟಿಸುವ ಆತ್ಮ
ಅಹುದು, ನೆಲಸುವುದಾತನ ಮೇಲೆ
ಸರ್ವೇಶ್ವರನ ಆತ್ಮ
3 : ಸರ್ವೇಶ್ವರನ ಭಯಭಕ್ತಿ ಅವಗೆ
ಪರಿಮಳದಂತೆ.
ತೀರ್ಪಿಡನಾತ ಕಣ್ಣಿಗೆ ತೋಚಿದಂತೆ
ನಿರ್ಣಯಿಸನಾತ ಕಿವಿಗೆ ಬಿದ್ದಂತೆ.
4 : ಆದರೆ ಬಡಬಗ್ಗರಿಗೆ ತೀರ್ಪಿಡುವನು
ನ್ಯಾಯನೀತಿಯಿಂದ
ನಾಡ ದಲಿತರಿಗೆ ನಿರ್ಣಯಿಸುವನು
ಯಥಾರ್ಥತೆಯಿಂದ
ದಂಡಿಸುವನು ಲೋಕವನು ನುಡಿಯೆಂಬ
ದಂಡದಿಂದ
ಕೊಲ್ಲುವನು ಕೆಡುಕರನು ಉಸಿರೆಂಬ
ಕತ್ತಿಯಿಂದ.
5 : ಸದ್ಧರ್ಮವೇ ಆತನಿಗೆ ನಡುಕಟ್ಟು
ಪ್ರಾಮಾಣಿಕತೆಯೇ ಸೊಂಟಪಟ್ಟಿ.
6 : ಬಾಳುವುವು ತೋಳಕುರಿಮರಿಗಳು ಒಂದಿಗೆ
ಮಲಗುವುವು ಮೇಕೆಚಿರತೆಗಳು ಜೊತೆಗೆ
ಮೊಲೆಯುಣ್ಣುವುವು ಕರುಕೇಸರಿಗಳು ಒಟ್ಟಿಗೆ
ನಡೆಸುವುದವುಗಳನು ಚಿಕ್ಕಮಗು
ಮೇಯಿಸುವುದಕೆ.
7 : ಮೇಯುವುವು ಕರಡಿ, ಆಕಳುಗಳು ಒಟ್ಟಿಗೆ
ಮಲಗುವುವು ಅವುಗಳ ಮರಿಗಳು ಜೊತೆಗೆ
ಎತ್ತಿನ ಹುಲ್ಲು ಮೇವಾಗುವುದು ಸಿಂಹಕೆ.
8 : ಆಡುವುದು ಮೊಲೆಗೂಸು ನಾಗರ ಹುತ್ತದ
ಮೇಲೆ
ಕೈ ಹಾಕುವುದು ಮೊಲೆಬಿಟ್ಟ ಮಗು
ಹಾವಿನಬಿಲದ ಒಳಗೆ.
9 : ಹಾನಿಯನು, ಕೇಡನು ಮಾಡರಾರೂ
ನನ್ನ ಪರ್ವತದ ಮೇಲೆ.
ಸಮುದ್ರದಂತೆ ತುಂಬಿರುವುದು
ಸರ್ವೇಶ್ವರನ ಜ್ಞಾನ, ಧರೆಯ ಮೇಲೆ.
10 : ಆ ದಿನದಂದು ಜೆಸ್ಸೆಯನ ಸಂತಾನದ ಕುಡಿ ಸರ್ವಜನಾಂಗಗಳಿಗೆ ಧ್ವಜಪ್ರಾಯವಾಗಿ ನಿಲ್ಲುವುದು. ಆತನನ್ನು ರಾಷ್ಟ್ರಗಳು ಆಶ್ರಯಿಸುವುವು; ವೈಭವದಿಂದಿರುವುದಾತನ ವಿಶ್ರಾಂತಿ ನಿಲಯವು.
11 : ಆ ದಿನದಂದು ಅಸ್ಸೀರಿಯ, ಈಜಿಪ್ಟ್, ಪತ್ರೋಸ್, ಸುಡಾನ್, ಏಲಾಮ್, ಬಾಬಿಲೋನಿಯ, ಹಮಾಥ್ ಹಾಗೂ ಸಮುದ್ರದ ಕರಾವಳಿ - ಈ ಸ್ಥಳಗಳಿಂದ ಸರ್ವೇಶ್ವರ ತಮ್ಮ ಅಳಿದುಳಿದ ಜನರನ್ನು ಬಿಡಿಸಿ ಬರಮಾಡಿಕೊಳ್ಳಲು ಮತ್ತೆ ಕೈನೀಡುವರು.
12 : ಇಸ್ರಯೇಲರಲ್ಲಿ ಸೆರೆಹೋದವರನ್ನು, ಜುದೇಯದಿಂದ ಚದರಿಹೋದವರನ್ನು ಕರೆತರಲು, ಧರೆಯ ಚತುರ್ದಿಕ್ಕುಗಳಿಂದವರನ್ನು ಬರಮಾಡಲು, ರಾಷ್ಟ್ರಗಳಿಗೆ ಗುರುತಾಗಿ ಧ್ವಜವನ್ನು ಆತ ಏರಿಸುವನು.
13 : ತೊಲಗುವುದು ಎಫ್ರಯಿಮಿನ ಹೊಟ್ಟೆಕಿಚ್ಚು, ನಿರ್ಮೂಲವಾಗುವುದು ಜುದೇಯದ ವೈರಿಗಳ ಒಳಸಂಚು. ಎಫ್ರಯಿಮ್, ಜುದೇಯವನ್ನು ಮತ್ಸರಿಸದು; ಜುದೇಯ, ಎಫ್ರಯಿಮನ್ನು ವಿರೋಧಿಸದು.
14 : ಒಟ್ಟಿಗೆ ಎರಗುವರು ಫಿಲಿಷ್ಠಿಯರ ಮೇಲೆ ಪಶ್ಚಿಮದಲ್ಲಿ; ಜೊತೆಯಾಗಿ ಸೂರೆ ಮಾಡುವರು ಜನರನ್ನು ಪೂರ್ವದಲ್ಲಿ; ಗೆಲ್ಲುವರು ಎದೋಮ್ ಮೊವಾಬ್ ನಾಡುಗಳನ್ನು; ಅಧೀನವಾಗಿಸುವರು ಅಮೋನ್ಯ ಜನರನ್ನು.
15 : ಆತ ಬತ್ತಿಸುವನು ಈಜಿಪ್ಟಿನ ಕೊಲ್ಲಿಯನ್ನು, ಒಣಗಿಸುವನು ಬಿಸಿಗಾಳಿಯಿಂದ ಯೂಫ್ರೆಟಿಸ್ ನದಿಯನ್ನು, ಸೀಳುವನದನ್ನು ಏಳು ತೊರೆಗಳನ್ನಾಗಿ. ಈ ಪರಿ ದಾಟುವರು ಜನರು ಕೆರ ಮೆಟ್ಟಿದವರಾಗಿ.
16 : ಈಜಿಪ್ಟನ್ನು ಬಿಟ್ಟು ಬಂದ ಇಸ್ರಯೇಲರಿಗೆ ಮಾರ್ಗವೊಂದು. ಸಿದ್ಧವಾಯಿತು ಅಂತೆಯೆ ಸಿದ್ಧವಾಗುವುದು ರಾಜಮಾರ್ಗವೊಂದು ಅಸ್ಸೀರಿಯದಲ್ಲಿ ಅಳಿದುಳಿದ ಜನರಿಗೆ.