1 : ಜುದೇಯ ನಾಡಿನ ಅರಸರಾಗಿದ್ದ ಉಜ್ಜೀಯ, ಯೋತಾಮ, ಆಹಾಜ, ಹಿಜ್ಕೀಯ ಇವರ ಕಾಲದಲ್ಲಿ ಜುದೇಯ ಮತ್ತು ಜೆರುಸಲೇಮ್ ನಗರವನ್ನು ಕುರಿತು ಆಮೋಚನ ಮಗನಾದ ಯೆಶಾಯನಿಗೆ ಆದ ದೈವದರ್ಶನ ಇದು:
2 : ಆಕಾಶಮಂಡಲವೇ, ಕೇಳು; ಭೂಮಂಡಲವೇ, ಆಲಿಸು; ಸರ್ವೇಶ್ವರಸ್ವಾಮಿ ಆಡುತ್ತಿರುವ ಮಾತುಗಳಿಗೆ ಕಿವಿಗೊಡು: “ನಾನು ಸಾಕಿ ಸಲಹಿದ ಮಕ್ಕಳೇ ನನಗೆ ದ್ರೋಹವೆಸಗಿದ್ದಾರೆ.
3 : ಎತ್ತು ಯಜಮಾನನನ್ನು, ಕತ್ತೆ ಒಡೆಯನ ಕೊಟ್ಟಿಗೆಯನ್ನು ಬಲ್ಲವು. ಆದರೆ ನನ್ನ ಪ್ರಜೆಗಳಾದ ಇಸ್ರಯೇಲರಿಗೆ ಅಷ್ಟೂ ತಿಳಿದಿಲ್ಲ. ಅವರಿಗೆ ಏನೂ ತಿಳಿಯುವುದಿಲ್ಲ.
4 : ಎಲೈ ಪಾಪಿಷ್ಠ ಜನವೇ, ದೋಷಭರಿತ ಪ್ರಜೆಯೇ, ದುಷ್ಟಪೀಳಿಗೆಯೇ, ಭ್ರಷ್ಟಸಂತಾನವೇ, ನಿಮ್ಮ ಗತಿಯನ್ನು ಏನೆಂದು ಹೇಳಲಿ. ನೀವು ಸರ್ವೇಶ್ವರನನ್ನು ತೊರೆದಿದ್ದೀರಿ. ಇಸ್ರಯೇಲರ ಪರಮಪಾವನ ಸ್ವಾಮಿಯನ್ನು ಧಿಕ್ಕರಿಸಿದ್ದೀರಿ. ಅವರಿಗೆ ಬೆನ್ನುಮಾಡಿ ಬೇರೆಯಾಗಿದ್ದೀರಿ.
5 : ಏಕೆ ಹೆಚ್ಚು ಹೆಚ್ಚಾಗಿ ದ್ರೋಹಗೈದು ದಂಡನೆಗೆ ಗುರಿ ಆಗುತ್ತೀರಿ? ನಿಮ್ಮ ತಲೆತುಂಬ ಗಾಯ, ನಿಮ್ಮ ಹೃದಯವೆಲ್ಲ ದುರ್ಬಲ.
6 : ಅಂಗಾಲಿನಿಂದ ನಡು ನೆತ್ತಿಯವರೆಗೆ ಪೆಟ್ಟು ಬಾಸುಂಡೆ, ಮಾಗದ ಗಾಯಗಳೇ ಹೊರತು ಮತ್ತೇನೂ ಅಲ್ಲ. ಅವನ್ನು ತೊಳೆದು ಕಟ್ಟಿಲ್ಲ. ಎಣ್ಣೆ ಸವರಿ ಮೃದುವಾಗಿಸಿಲ್ಲ.
7 : ನಿಮ್ಮ ನಾಡು ಹಾಳುಬಿದ್ದಿದೆ: ನಿಮ್ಮ ಪಟ್ಟಣಗಳು ಸುಟ್ಟು ಭಸ್ಮವಾಗಿವೆ. ನಿಮ್ಮ ಕಣ್ಮುಂದೆಯೆ ನಿಮ್ಮ ಭೂಮಿಯನ್ನು ಅನ್ಯಜನರು ಕಬಳಿಸುತ್ತಿದ್ದಾರೆ. ಅನ್ಯ ದೇಶಗಳು ನಾಶವಾದಂತೆಯೇ ನಿಮ್ಮ ನಾಡು ಹಾಳಾಗಿದೆ.
8 : ಸಿಯೋನ್ ನಗರವೊಂದೇ ಮುತ್ತಿಗೆಗೆ ತುತ್ತಾದ ಪಟ್ಟಣದಂತೆ, ದ್ರಾಕ್ಷಾತೋಟದ ಅಟ್ಟಣಿಯಂತೆ, ಸೌತೆಹೊಲದ ಗುಡಿಸಿಲಿನಂತೆ ಸುರಕ್ಷತೆಯ ಅವಕಾಶವಿಲ್ಲದೆ ಇದೆ.
9 : ಸೇನಾಧೀಶ್ವರ ಸರ್ವೇಶ್ವರ ಕೆಲವು ಜನರನ್ನಾದರೂ ಉಳಿಸದೆ ಹೋಗಿದ್ದರೆ, ಸೊದೋಮಿನ ಗತಿಯೇ, ಗೊಮೋರದ ದುರ್ದೆಶೆಯೇ ನಮಗೆ ಸಂಭವಿಸುತ್ತಿತ್ತು.
10 : ಸೊದೋಮಿನ ಅಧಿಪತಿಗಳಂತಿರುವವರೇ, ಸರ್ವೇಶ್ವರಸ್ವಾಮಿಯ ಮಾತನ್ನು ಕೇಳಿರಿ. ಗೊಮೋರದ ಪ್ರಜೆಗಳನ್ನು ಹೋಲುವವರೇ, ನಮ್ಮ ದೇವರ ಉಪದೇಶಕ್ಕೆ ಕಿವಿಗೊಡಿ.
11 : ಸ್ವಾಮಿ ಇಂತೆನ್ನುತ್ತಾರೆ: “ನೀವು ಅರ್ಪಿಸುವ ಅಸಂಖ್ಯಾತ ಬಲಿದಾನಗಳಿಂದ ನನಗೇನು ಪ್ರಯೋಜನ? ಟಗರುಗಳು, ಸರ್ವಾಂಗಹೋಮ, ಪುಷ್ಪಪಶುಗಳ ಕೊಬ್ಬು ಇವೆಲ್ಲ ನನಗೆ ಬೇಸರ. ಹೋತ ಹೋರಿಗಳ, ಕುರಿಮರಿಗಳ ರಕ್ತ ನನಗೆ ತಾತ್ಸಾರ.
12 : ನನ್ನ ಸನ್ನಿಧಾನಕ್ಕೆ ಬರುವಾಗ ಇದನ್ನೆಲ್ಲ ತರಬೇಕೆಂದು ನಿಮಗೆ ಹೇಳಿದವರಾರು?
13 : ನಿಮ್ಮ ನೈವೇದ್ಯಗಳನ್ನು ಇನ್ನು ತರಬೇಡಿ, ಅವು ವ್ಯರ್ಥ. ನಿಮ್ಮ ಧೂಪಾರತಿ ನನಗೆ ಅಸಹ್ಯ. ನೀವು ಆಚರಿಸುವ ಹಬ್ಬ ಹುಣ್ಣಿಮೆ, ಸಬ್ಬತ್ ವಿಶ್ರಾಂತಿ, ನಿಮ್ಮ ಸಭೆಕೂಟಗಳು ನನಗೆ ಬೇಡ. ಅಧರ್ಮದಿಂದ ಕೂಡಿದ ಇಂಥ ಸಮಾರಂಭಗಳು ನನಗೆ ಇಷ್ಟವಿಲ್ಲ.
14 : ನಿಮ್ಮ ಹಬ್ಬ ಹುಣ್ಣಿಮೆಗಳು, ಉತ್ಸವ ದಿನಗಳು ನನ್ನ ಮನಕ್ಕೆ ವಿರುದ್ಧ, ಹೊರಲಾಗದ ಭಾರ, ಸಹಿಸಲಾಗದ ಬೇಸರ.
15 : ನೀವು ಕೈಯೆತ್ತಿ ಬೇಡುವಾಗ ನಾನು ಕಣ್ಣು ಮುಚ್ಚಿಕೊಳ್ಳುವೆನು. ನೀವು ಎಷ್ಟೇ ಪ್ರಾರ್ಥನೆಗಳನ್ನು ಮಾಡಿದರೂ ನಾನು ಕಿವಿಗೊಡೆನು, ಏಕೆಂದರೆ ನಿಮ್ಮ ಕೈಗಳು ರಕ್ತಸಿಕ್ತವಾಗಿವೆ.
16 : ತೊಳೆದು ಕೊಳ್ಳಿರಿ, ನಿಮ್ಮನ್ನೆ ಶುದ್ಧಮಾಡಿಕೊಳ್ಳಿರಿ. ಕಣ್ಣಿಗೆ ಕಟ್ಟಿದಂತಿರುವ ನಿಮ್ಮ ದುಷ್ಕ್ರತ್ಯಗಳು ನೀಗಿ ಹೋಗಲಿ.
17 : ಕೇಡನ್ನು ಬಿಟ್ಟು ಒಳಿತನ್ನು ಕೈಗೊಳ್ಳಿರಿ. ನ್ಯಾಯನೀತಿಗಳಲ್ಲಿ ನಿರತರಾಗಿರಿ. ಹಿಂಸಾತ್ಮಕರನ್ನು ತಿದ್ದಿ ಸರಿಪಡಿಸಿರಿ. ಅನಾಥರಿಗೆ ನ್ಯಾಯದೊರಕಿಸಿರಿ. ವಿಧವೆಯರ ಪರವಾಗಿ ವಾದಿಸಿರಿ.
18 : ಸರ್ವೇಶ್ವರಸ್ವಾಮಿ ಇಂತೆನ್ನುತ್ತಾರೆ: “ಬನ್ನಿರಿ, ಈಗ ವಾದಿಸೋಣ. ನಿಮ್ಮ ಪಾಪಗಳು ಕಡುಗೆಂಪಾಗಿದ್ದರೂ ಹಿಮದಂತೆ ಬಿಳುಪಾಗುವುವು. ರಕ್ತಗೆಂಪಾಗಿದ್ದರೂ ಉಣ್ಣೆಯಂತೆ ಬೆಳ್ಳಗಾಗುವುವು.
19 : ನೀವು ಮನಃಪೂರ್ವಕವಾಗಿ ನನಗೆ ವಿಧೇಯರಾದರೆ ಈ ನಾಡಿನ ಸತ್ಫಲವನ್ನು ಸವಿಯುವಿರಿ.
20 : ಇದಕ್ಕೊಪ್ಪದೆ ಪ್ರತಿಭಟಿಸಿದ್ದೇ ಆದರೆ, ಸಾವಿಗೆ ತುತ್ತಾಗುವಿರಿ. ಸ್ವಾಮಿಯಾದ ನಾನೇ ಇದನ್ನು ನುಡಿದಿದ್ದೇನೆ.”
21 : ಅಯ್ಯೋ, ಸುವ್ರತೆಯಂತಿದ್ದ ನಗರಿ ಈಗ ಸೂಳೆಯಂತಿದ್ದಾಳಲ್ಲ ! ನ್ಯಾಯನೀತಿವಂತರಿಗೆ ನೆಲೆಯಾಗಿದ್ದವಳು ಈಗ ಕೊಲೆಪಾತಕರಿಗೆ ಬೀಡಾಗಿದ್ದಾಳಲ್ಲಾ!
22 : ಎಲೌ ನಗರಿಯೇ, ನಿನ್ನ ಬೆಳ್ಳಿ ಕಪ್ಪಾಗಿದೆ. ನಿನ್ನ ದ್ರಾಕ್ಷಾರಸ ನೀರಾಗಿದೆ.
23 : ನಿನ್ನ ಅಧಿಪತಿಗಳೇ ದ್ರೋಹಿಗಳಾಗಿದ್ದಾರೆ, ಕಳ್ಳರ ಗೆಳೆಯರಾಗಿದ್ದಾರೆ. ಎಲ್ಲರೂ ಲಂಚಕೋರರಾಗಿದ್ದಾರೆ. ಕಪ್ಪಕಾಣಿಕೆಗಳಿಗೆ ಕೈಯೊಡ್ಡುತ್ತಾರೆ. ಆದರೆ ಅನಾಥರ ಪರವಾಗಿ ವಾದಿಸುವುದಿಲ್ಲ. ವಿಧವೆಯರ ವ್ಯಾಜ್ಯವನ್ನು ತೀರಿಸುವುದಿಲ್ಲ.
24 : ಇಂತಿರಲು ಒಡೆಯರು, ಸೇನಾಧೀಶ್ವರರು, ಇಸ್ರಯೇಲರ ಪರಾಕ್ರಮಿಯು ಆದ ಸರ್ವೇಶ್ವರ ಹೀಗೆನ್ನುತ್ತಾರೆ: “ಇಗೋ ನನ್ನ ಶತ್ರುಗಳಾದ ನಿಮ್ಮ ಮೇಲೆ ಸೇಡು ತೀರಿಸುವೆನು. ನನ್ನ ವಿರೋಧಿಗಳಾದ ನಿಮ್ಮನ್ನು ಸದೆಬಡಿದು ಶಾಂತನಾಗಿರುವೆನು.
25 : ನಿಮ್ಮ ಮೇಲೆ ಕೈ ಮಾಡುವೆನು. ನಿಮ್ಮ ಲೋಹವನ್ನು ಪುಟಹಾಕಿ ನಿಮ್ಮ ಕಲ್ಮಷವನ್ನು ಪೂರ್ತಿಯಾಗಿ ಕರಗಿಸಿಬಿಡುವೆನು.
26 : ಪೂರ್ವದಲ್ಲಿದ್ದಂತೆ ನಿಮಗೆ ನ್ಯಾಯಾಧಿಪತಿಗಳನ್ನೂ ಮಂತ್ರಿಗಳನ್ನೂ ಮತ್ತೆ ನೇಮಿಸುವೆನು. ಆಗ ಜೆರುಸಲೇಮ್ ‘ಧರ್ಮಪುರಿ’, ‘ಸುವ್ರತ ನಗರಿ’ ಎನಿಸಿಕೊಳ್ಳುವುದು.
27 : ಸಿಯೋನಿನ ಉದ್ಧಾರ ನ್ಯಾಯನೀತಿಯಿಂದ; ಅದಕ್ಕೆ ಹಿಂದಿರುಗುವವರ ಉದ್ಧಾರ ಸತ್ಸಂಬಂಧದಿಂದ;
28 : ನಾಶವಾಗುವರು ದ್ರೋಹಿಗಳೂ ಪಾಪಿಗಳೂ ಒಟ್ಟಾಗಿ; ನಿರ್ಮೂಲವಾಗುವರು ಸ್ವಾಮಿಯನ್ನು ತೊರೆದವರು ನಿಶ್ಚಯವಾಗಿ.
29 : ನೀವು ಬಯಸಿದ ಎಲ್ಲಾ ಮರಗಳನ್ನು ಪೂಜಿಸಿದ್ದಕ್ಕಾಗಿ ಹೇಸುವಿರಿ: ಪವಿತ್ರವನಗಳನ್ನು ನಿರ್ಮಿಸಿದ್ದಕ್ಕಾಗಿ ನಾಚಿಕೆ ಪಡುವಿರಿ.
30 : ಎಲೆ ಒಣಗಿದ ಮರಗಳಂತೆ ಆಗುವಿರಿ. ಜಲವಿಲ್ಲದ ವನದಂತಾಗುವಿರಿ.
31 : ಒಣಹುಲ್ಲಿನ ಮೆದೆಗೆ ಬೆಂಕಿಯ ಕಿಡಿಬಿದ್ದು ಸುಟ್ಟುಹೋಗುವಂತೆ ನಿಮ್ಮಲ್ಲಿನ ಬಲಿಷ್ಟರು ತಮ್ಮ ದುಷ್ಕ್ರತ್ಯಗಳಿಂದಲೇ ನಾಶವಾಗುವರು. ಈ ವಿನಾಶವನ್ನೂ ಯಾರಿಂದಲೂ ತಡೆಗಟ್ಟಲಾಗದು.