1 : ನಲ್ಲೆ : ನನ್ನ ಸಹೋದರನು,
ನನ್ನ ತಾಯಿಯ ಹಾಲ ಕುಡಿದವನು
ನೀನಾಗಿದ್ದರೆ ಚೆನ್ನಾಗಿರುತ್ತಿತ್ತಲ್ಲಾ !
ಆಗ ನಿನ್ನನ್ನು ಕಂಡು ಹೊರಗಡೆಯೆ
ಮುದ್ದಿಸಬಹುದಿತ್ತಲ್ಲಾ
ಯಾರು ನನ್ನನ್ನಾಗ ನಿಂದಿಸುತ್ತಿರಲಿಲ್ಲವಲ್ಲಾ !
2 : ಆಗ ನಿನ್ನನ್ನು ಕರೆದುಕೊಂಡು ಹೋಗುತ್ತಿದ್ದೆ
ನನ್ನನ್ನು ಹೆತ್ತ ತಾಯಿಯ ಮನೆಗೆ
ಅಲ್ಲೆ ಉಪದೇಶ ಮಾಡಬಹುದಾಗಿತ್ತು
ನೀನು ನನಗೆ
ದ್ರಾಕ್ಷಿಯ ಮಿಶ್ರಪಾನಕವನ್ನು ನಾ ಕೊಡುತ್ತಿದ್ದೆ
ನಿನಗೆ
ದಾಳಿಂಬೆ ರಸವನ್ನು ಕುಡಿಸುತ್ತಿದ್ದೆ ನಿನಗೆ.
3 : ನನಗೆ ತಲೆದಿಂಬಾಗಲಿ ನಿನ್ನ ಎಡಗೈ ನನ್ನನ್ನು ತಬ್ಬಿಕೊಳ್ಳಲಿ ನಿನ್ನ ಬಲಗೈ.
4 : “ಜೆರುಸಲೇಮಿನ ಮಹಿಳೆಯರೇ,
ತಾನೇ ಏಳುವುದಕ್ಕೆ ಮುಂಚೆ
ನನ್ನ ಪ್ರಿಯನನ್ನು ಎಚ್ಚರಿಸದಿರಿ
ಅವನ ವಿಶ್ರಾಂತಿಗೆ ಭಂಗ ತರದಿರಿ”
ಎಂದು ನಾನು ನಿಮಗೆ ಆಣೆಯಿಟ್ಟು
ಹೇಳುತ್ತೇನೆ.
ಮಹಿಳೆಯರು :
5 : ನಲ್ಲನನು ಒರಗಿಕೊಂಡು
ಅಡವಿಯಿಂದ ಬರುವ ಈಕೆ ಯಾರು?
ನಲ್ಲೆ : ಎಬ್ಬಿಸಿದೆ ನಿನ್ನನ್ನು ಸೇಬುಮರದ
ಅಡಿಯಲಿ
ನಿನ್ನ ತಾಯಿ ಪ್ರಸವವೇದನೆಯಿಂದ
ಹಡೆದಾ ಸ್ಥಳದಲಿ
ನಿನ್ನನ್ನು ಆಕೆ ಗರ್ಭಧರಿಸಿದಾ
ಜಾಗದಲಿ.
6 : ನಿನ್ನ ವಕ್ಷದಲಿ, ನಿನ್ನ ಹಸ್ತಗಳಲಿ
ಧರಿಸಿಕೊ ನನ್ನನ್ನು ಪ್ರೇಮ ಮುದ್ರೆಯಾಗಿ.
ಪ್ರೀತಿ ಮೃತ್ಯುವಿನಷ್ಟು ಶಕ್ತಿಶಾಲಿ !
ಮತ್ಸರ ಪಾತಾಳದಷ್ಟು ಕ್ರೂರಿ
ಅದರ ಜ್ವಾಲೆ ಬೆಂಕಿಯ ಉರಿ
ಧಗಧಗಿಸುವ ಕೋಪಾಗ್ನಿ.
7 : ನಂದಿಸಲಾರವು ಪ್ರೀತಿಯನ್ನು ಜಲರಾಶಿಗಳು
ಮುಳುಗಿಸಲಾರವು ಅದನು ಪ್ರವಾಹಗಳು.
ಪ್ರೀತಿಯನು ಗಳಿಸಲು
ಮನೆಮಾರುಗಳ ಮಾರಿದರೂ
ತಿರಸ್ಕಾರವೆ ಅಂಥವನಿಗೆ ಸಿಗುವುದು.
ಆರನೇ ಗೀತೆ
ಸೋದರರು:
8 : ಇನ್ನೂ ಸ್ತನ ಬಾರದ ತಂಗಿ ನಮಗಿದ್ದಾಳೆ
ನಾವೇನು ಮಾಡೋಣ ಅವಳನ್ನು ವರಿಸಲು
ಬಂದರೆ?
9 : ಅವಳೊಂದು ಕೋಟೆಯಾದರೆ
ಕಟ್ಟುವೆವು ಬುರುಜನ್ನು ಬೆಳ್ಳಿಯಿಂದ.
ಅವಳೊಂದು ಬಾಗಿಲಾದರೆ
ಭದ್ರಪಡಿಸುವೆವು ದೇವದಾರು ಮರಗಳಿಂದ.
ನಲ್ಲೆ :
10 : ನಾನೊಂದು ಕೋಟೆ, ನನ್ನ ಸ್ತನಗಳೇ
ಬುರುಜುಗಳು
ಆತನ ದೃಷ್ಟಿಯಲ್ಲಿ ನಾ ಹೊಂದುವೆನು
ಶಾಂತಿಯನು.
11 : ಸೊಲೊಮೋನನಿಗಿತ್ತು ಬಾಲ್ಹಾಮೋನಿ
ನಲ್ಲಿ ಒಂದು ದ್ರಾಕ್ಷಾ ತೋಟ
ಅದನು ಗುತ್ತಿಗೆಗೆ ಕೊಡಲು
ಮೇಲ್ವಿಚಾರಕರಿಗೆ ವಹಿಸಿದ.
ಪ್ರತಿಯೊಬ್ಬ ಗುತ್ತಿಗೆಗಾರ
ತೆರಬೇಕಾಗಿತ್ತು ಸಾವಿರ ಬೆಳ್ಳಿನಾಣ್ಯ.
12 : ಸೊಲೊಮೋನನನೇ,
ಆ ಸಾವಿರ ಬೆಳ್ಳಿನಾಣ್ಯ ನಿನಗೇ ಇರಲಿ
ಮೇಲ್ವಿಚಾರಕರಿಗೆ ಇನ್ನೂರು ನಾಣ್ಯ ಸೇರಲಿ.
ಆದರೆ ನನ್ನ ದ್ರಾಕ್ಷಾತೋಟ ನನ್ನ ವಶದಲೇ
ಇರಲಿ.
13 : ತೋಟಗಳಲಿ ವಾಸವಾಗಿರುವವಳೇ,
ನನಗೆ ಕೇಳಮಾಡು ನಿನ್ನ ದನಿ
ಗೆಳೆಯರು ಕಾದಿದ್ದಾರೆ ಅದಕ್ಕಾಗಿ.
ನಲ್ಲೆ :
14 : ಸುಗಂಧಸಸ್ಯ ಪರ್ವತದಿಂದಲೆ
ಜಿಂಕೆಯಂತೆ, ಪ್ರಾಯದ ಹುಲ್ಲೆಯಂತೆ
ತ್ವರೆಮಾಡಿ ಬಾ ನನ್ನಿನಿಯನೇ.