1 : ನಲ್ಲ : ಅರಸಕುವರಿಯೇ,
ಕೆರಗಳನ್ನು ಮೆಟ್ಟಿ ನಿಂತಿರುವ ನಿನ್ನ
ಪಾದಗಳೆಷ್ಟು ಚೆಂದ !
ದುಂಡಾದ ನಿನ್ನ ತೊಡೆಗಳು
ಕುಶಲ ಶಿಲ್ಪಿಮಾಡಿದ ಸ್ತಂಭ !
2 : ನಿನ್ನ ಹೊಕ್ಕಳು ಮಿಶ್ರಪಾನಕ ತುಂಬಿದ
ಗುಂಡುಬಟ್ಟಲು
ನಿನ್ನ ಹೊಟ್ಟೆ ನೆಲದಾವರೆಗಳಿಂದ
ಅಲಂಕೃತವಾದ ಗೋಧಿರಾಶಿಯ ಬಟ್ಟಲು
3 : ನಿನ್ನ ಸ್ತನಗಳೆರಡೂ ಹುಲ್ಲೆಯ
ಅವಳಿಮರಿಗಳು.
4 : ದಂತದ ಗೋಪುರ ನಿನ್ನ ಕೊರಳು
ನಿನ್ನ ಕಣ್ಣುಗಳು ಹೋಷ್ಬೋನಿನಲ್ಲಿನ
ಬತ್‍ರಬ್ಬೀಮ್ ಬಾಗಿಲ ಬಳಿ
ಇರುವ ಕೊಳಗಳು
ನಿನ್ನ ಮೂಗು ದಮಸ್ಕದ ಕಡೆ ಇರುವ
ಲೆಬನೋನಿನ ಬುರುಜು.
5 : ನಿನ್ನ ಶಿರ ಎತ್ತರವಾದ ಕಾರ್ಮೆಲ್ ಶಿಖರದಂತೆ
ಗಂಭೀರ
ನಿನ್ನ ತಲೆಗೂದಲಿಗಿದೆ ಥಳಥಳಿಸುವ
ನುಣುಪುಹೊಳಪಿನ ಬಣ್ಣ
ತನ್ನ ತೆಕ್ಕೆಯಲ್ಲಿ ಅರಸನನೇ ಸೆರೆಹಿಡಿಯುವಂಥ
ಆಕರ್ಷಣ.
6 : ಪ್ರೇಮವೇ,
ಸಕಲ ಸೌಭಾಗ್ಯಗಳಿಂದ ನೀನೆಷ್ಟು ಸುಂದರ?
ನೀನೆಷ್ಟು ಮನೋಹರ !
7 : ನೀಳವಾದ ನಿನ್ನ ಆಕಾರವು ಖರ್ಜೂರದ ಮರವು
ನಿನ್ನ ಸ್ತನಗಳು ಅದರ ಗೊಂಚಲುಗಳು.
8 : ಆ ಮರವನು ಹತ್ತಿ ಹಿಡಿಯುವೆನು ರೆಂಬೆಗಳನು
ನಿನ್ನ ಸ್ತನಗಳು ನನಗೆ ದ್ರಾಕ್ಷಿಯ
ಗೊಂಚಲುಗಳು
ಸೇಬುಹಣ್ಣಿನ ಪರಿಮಳದಂತೆ ನಿನ್ನ ಉಸಿರು !
ನಲ್ಲೆ :
9 : ನಿನ್ನ ಚುಂಬನ ಶ್ರೇಷ್ಠವಾದ
ಮಧುಪಾನ
ನನ್ನ ಇನಿಯನ ಬಾಯಲ್ಲಿಳಿಯಲಿ
ಆ ರಸಪಾನ
ನಿದ್ರಿಸುವವನಾ ತುಟಿಗಳಲಿ ಹರಿಯಲಿ
ಆ ಪಾನ !
10 : ನಾನು ನನ್ನ ನಲ್ಲನ ನಲ್ಲೆ
ಆತನ ಆಸೆ ನನ್ನ ಮೇಲೆ !
11 : ಎನ್ನಿನಿಯನೇ, ಬಾ ಹೋಗೋಣ ವನಕೆ
ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವುದಕೆ.
12 : ಬೆಳಗ್ಗೆ ಹೊರಟು ತೋಟಗಳಿಗೆ
ಹೋಗೋಣ ಬಾ
ದ್ರಾಕ್ಷಿ ಚಿಗುರಿದೆಯೋ, ಅದರ
ಹೂ ಅರಳಿದೆಯೋ
ದಾಳಿಂಬೆ ಹೂ ಬಿಟ್ಟಿದೆಯೋ
ನೋಡೋಣ ಬಾ
ಅಲ್ಲೆ ನಿನಗೆ ನನ್ನ ಪ್ರೀತಿಯನರ್ಪಿಸುವೆ ಬಾ.
13 : ಕಾಮಜನಕ ವೃಕ್ಷಗಳು ಹೀರುತ್ತಿವೆ ಪರಿಮಳ
ಒಳ್ಳೊಳ್ಳೆಯ ಬಗೆಬಗೆಯ,
ಹಳೆಹೊಸ ಹಣ್ಣುಗಳ
ನಾನಿಟ್ಟುಕೊಂಡಿರುವೆ, ಪ್ರಿಯನೇ,
ಬಾಗಿಲ ಹತ್ತಿರ ನಿನಗೋಸ್ಕರ.