1 : ನಲ್ಲ : ನನ್ನ ಪ್ರಿಯಳೇ, ನನ್ನ ವಧುವೇ,
ಇದೋ ನಾ ಬಂದಿರುವೆ ನನ್ನ
ತೋಟದೊಳಗೆ
ರಕ್ತಬೋಳ ಸುಗಂಧದ್ರವ್ಯಗಳನ್ನು
ಕೂಡಿಸಿರುವೆ.
ಜೇನುಗೂಡನ್ನೂ ಜೇನು ತುಪ್ಪವನ್ನೂ ತಿಂದಿರುವೆ
ದ್ರಾಕ್ಷಾರಸವನ್ನೂ ಹಾಲನ್ನೂ ಕುಡಿದಿರುವೆ.
ಮಿತ್ರರೇ, ತಿನ್ನಿರಿ; ಪ್ರಿಯರೇ, ಕುಡಿಯಿರಿ
ತೃಪ್ತಿಯಾಗುವಷ್ಟು ಪಾನಮಾಡಿರಿ.
ನಲ್ಲೆ :
2 : ನಾ ನಿದ್ರಿಸುತ್ತಿದ್ದರೂ,
ಎಚ್ಚರಗೊಂಡಿತ್ತು ನನ್ನ ಹೃದಯ
ಇದೋ, ಬಾಗಿಲು ತಟ್ಟುತಿಹನು ನನ್ನ
ಇನಿಯ !
ನಲ್ಲ : ನನ್ನ ಪ್ರಿಯಳೇ, ನನ್ನ ಕಾಂತಳೇ,
ಪಾರಿವಾಳವೇ, ಪರಿಪೂರ್ಣಳೇ.
ಬಾಗಿಲು ತೆಗೆ ನನಗೆ.
ನನ್ನ ತಲೆಯೆಲ್ಲಾ ನೆನೆದಿದೆ
ಇಬ್ಬನಿಯಿಂದ
ನನ್ನ ಕೂದಲು ತೊಯ್ದಿದೆ ರಾತ್ರಿಯ
ಮಂಜಿನಿಂದ.
ನಲ್ಲೆ :
3 : ತೆಗೆದುಹಾಕಿರುವೆನಲ್ಲಾ ನನ್ನ
ಅಂಗಿಯನ್ನು
ಮತ್ತೆ ಅದನು ಹಾಕಿಕೊಳ್ಳುವುದೆಂತು?
ತೊಳೆದಿರುವೆನಲ್ಲಾ ನನ್ನ ಪಾದಗಳನು
ಮತ್ತೆ ಅವುಗಳನ್ನು ಕೊಳೆ
ಮಾಡಿಕೊಳ್ಳುವುದೆಂತು?
4 : ನನ್ನ ಕಾಂತನು ಕೈಯೊಡ್ಡಿಹನು ಬಾಗಿಲ
ಸಂದಿನಲಿ
ನನ್ನ ಮನ ಮಿಡಿಯಿತು ನನ್ನಂತರಂಗದಲಿ
5 : ಎದ್ದೆ ನಾನು ನಲ್ಲನಿಗೆ ಬಾಗಿಲ ತೆರೆಯಲೆಂದು
ಅಗುಳಿಯ ಮೇಲೆ ತೊಟ್ಟಿಕ್ಕಿತು ಪರಿಮಳ
ನನ್ನ ಕೈಗಳಿಂದ
ಆ ರಸಗಂಧ ದ್ರವ್ಯ ನನ್ನ ಬೆರಳುಗಳಿಂದ.
6 : ಬಾಗಿಲ ತೆರೆದು ನೋಡಿದೆ ನನ್ನಿನಿಯನಿಗಾಗಿ
ಅಷ್ಟರೊಳಗೆ ಹೋಗಿಬಿಟ್ಟಿದ್ದನವನು
ಹಿಂದಿರುಗಿ.
ನಿಂತಂತಾಯಿತು ಅವನ ದನಿಗೆ ನನ್ನೆದೆಯ
ತುಡಿತ
ಎಷ್ಟೋ ಹುಡುಕಿದೆ, ಆದರೆ ಸಿಗಲಿಲ್ಲ
ಎಷ್ಟೋ ಕೂಗಿದೆ, ಆದರೆ ಉತ್ತರವೇ ಇಲ್ಲ.
7 : ಸುತ್ತುತ್ತಿದ್ದರು ಬೀದಿಗಳಲಿ ಪಹರೆಯವರು
ನನ್ನನ್ನು ಕಂಡುಹಿಡಿದರು,
ಹೊಡೆದು ಗಾಯಗೊಳಿಸಿದರು.
ಕಿತ್ತುಕೊಂಡರು ಮೇಲುಹೊದಿಕೆಯನು
ಆ ಪೌಳಿಗೋಡೆಯ ಕಾವಲುಗಾರರು.
8 : ಜೆರುಸಲೇಮಿನ ಮಹಿಳೆಯರೇ,
ಆಣೆಯಿಟ್ಟು ಹೇಳುತ್ತೇನೆ ನಿಮಗೆ:
“ನೀವು ನನ್ನ ಕಾಂತನನ್ನು ಕಂಡರೆ
ಅನುರಾಗದಿಂದ ನಾನು ಅಸ್ವಸ್ಥಳಾಗಿರುವೆ
ಎಂದೆ ತಿಳಿಸಿರಿ ಅವನಿಗೆ”
ಮಹಿಳೆಯರು:
9 : “ಬೇರೆಯವರ ಕಾಂತರಿಗಿಂತ
ನಿನ್ನ ಕಾಂತನಲ್ಲಿ ಏನು ವಿಶೇಷ?
ಬೇರೆಯವರ ಇನಿಯರಿಗಿಂತ
ನಿನ್ನ ಕಾಂತನಲ್ಲಿ ಅದೇನು ಅತಿಶಯ?
ಸ್ತ್ರೀರತ್ನವೇ, ಹೇಳು ನಮಗೆಂತು ಈ
ಪ್ರಮಾಣ?”
ನಲ್ಲೆ :
10 : ನನ್ನ ನಲ್ಲ, ತೇಜೋಮಯ,
ರಕ್ತವರ್ಣ
ಹತ್ತುಸಾವಿರ ಜನರಲ್ಲಿ ಶ್ರೇಷ್ಠ.
11 : ಅವನ ಶಿರ ಅಪ್ಪಟ ಬಂಗಾರವು
ಅವನ ಕೂದಲು ಕಾಗೆಕಪ್ಪು
12 : ಅವನ ಕಣ್ಣುಗಳು
ತುಂಬುತೊರೆಗಳ ಬಳಿ ತಂಗುವ
ಹಾಲಿನ ಕೊಳದಲಿ ಮೈತೊಳೆವ
ಪಾರಿವಾಳಗಳು.
13 : ಅವನ ಕೆನ್ನೆಗಳು ಕರ್ಣಕುಂಡಲದ ಪಾತಿಗಳು
ಸುಗಂಧ ಸಸ್ಯಗಳು ಬೆಳೆಯುವ ದಿಬ್ಬಗಳು
ಅವನ ತುಟಿಗಳು ಅಚ್ಚ ಪರಿಮಳ ಸೂಸುವ
ಕೆಂದಾವರೆಗಳು.
14 : ಅವನ ಕೈಗಳು ಪೀತರತ್ನಖಚಿತ ಚಿನ್ನದ
ಸಲಾಕೆಗಳು
ಅವನ ದೇಹ ಇಂದ್ರನೀಲಮಯವಾದ
ದಂತಫಲಕವು.
15 : ಅವನ ಕಾಲುಗಳು
ಅಪರಂಜಿಯ ಸುಣ್ಣಪಾದಗಳ ಮೇಲೆ
ನಿಂತಿರುವ ಚಂದ್ರಕಾಂತ ಸ್ತಂಭಗಳು.
ಅವನ ಗಾಂಭೀರ್ಯ ಲೆಬನೋನಿಗೆ
ಸಮಾನ
ದೇವದಾರು ಮರಗಳಂತೆ ರಮಣೀಯ.
16 : ಅವನ ಮಾತು ಮಧುರ
ಅವನು ಸರ್ವಾಂಗ ಸುಂದರ.
ಜೆರುಸಲೇಮಿನ ಮಹಿಳೆಯರೇ,
ಇವನೇ ನನ್ನ ಪ್ರಿಯನು
ಇವನೇ ನನ್ನ ಇನಿಯನು.