Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಪ.ಗೀ


1 : ರೂಪವತಿ ! ಆಹಾ ! ಎಷ್ಟು ಸುಂದರೆ! ಮುಸುಕಿನೊಳಗಿನ ಕಣ್ಣುಗಳು ಪಾರಿವಾಳಗಳು ನಿನ್ನ ತಲೆಗೂದಲಿನ ನರ್ತನವು ಗಿಲ್ಯಾದ್ ಗುಡ್ಡದಿಂದ ಇಳಿದು ಬರುವ ಆಡು ಮಂದೆಗೆ ಸಮಾನವು.
2 : ನಿನ್ನ ಹಲ್ಲುಗಳ ಹೊಳಪು ಉಣ್ಣೆ ಕತ್ತರಿಸಿ ಸ್ನಾನ ಮಾಡಿಸಿದ ಕುರಿಮಂದೆಯ ಬಿಳುಪು. ಮೇಲೇರುತ್ತಿವೆ ಅವು ಜೋಡಿ ಜೋಡಿಯಾಗಿ ಒಂಟಿಯಾದುದೊಂದು ಇಲ್ಲ ಅವುಗಳಲಿ.
3 : ನಿನ್ನ ತುಟಿ ನಯವಾದ ಕೆಂಪುಪಟ್ಟಿ ಬಿಚ್ಚಿದಾಗ ನೀನೆಷ್ಟು ಸುರೂಪಿಣಿ ! ಮುಸುಕಿನಲ್ಲಿನ ನಿನ್ನ ಕೆನ್ನೆ, ಹೋಳಾಗಿಸಿದ ದಾಳಿಂಬೆ !
4 : ನಿನ್ನ ಕೊರಳು ದಾವೀದನ ನುಣುಪಾದ ಗೋಪುರ ನಿನ್ನ ಕತ್ತಿನ ಹಾರ ಸಾವಿರ ಶೂರರ ಗುರಾಣಿಗಳ ಸರ.
5 : ಹುಲ್ಲೆಯ ಅವಳಿಮರಿಗಳು ನಿನ್ನ ಸ್ತನಗಳೆರಡು ನೆಲದಾವರೆಯ ನಡುವೆ ಮೇಯುತ್ತಿರುವುವು !
6 : ಕತ್ತಲು ಕಳೆಯುವ ಮುನ್ನ ಹೊತ್ತು ಮೂಡುವ ಮುನ್ನ ಪರಿಮಳದ ಬೆಟ್ಟಕೆ ತೆರಳುವೆ ಧೂಪದ ಗುಡ್ಡದೊಳು ಅಡ್ಡಾಡುವೆ.
7 : ನನ್ನ ಪ್ರಿಯಳೇ, ಸರ್ವಾಂಗಸುಂದರಿಯೇ, ನಿನ್ನೊಳು ಯಾವ ಕಳಂಕವು ಇಲ್ಲದಿರುವೆ.
8 : ಬಾ, ವಧುವೆ, ಲೆಬನೋನಿನಿಂದ ಬಾ, ನನ್ನೊಡನೆ ಲೆಬನೋನಿನಿಂದ ಇಳಿದು ಬಾ ಅಮಾನದ ತುದಿಯಿಂದ ಶೆನೀರ್ ಮತ್ತು ಹೆರ್ಮೊನ್ ಶಿಖರಗಳಿಂದ. ಹೊರಟು ಬಾ ಸಿಂಹಗಳ ಗುಹೆಗಳಿಂದ ಚಿರತೆಗಳ ಗುಡ್ಡಗಳಿಂದ.
9 : ನನ್ನ ಪ್ರಿಯಳೇ, ನನ್ನ ವಧುವೇ. ನನ್ನ ಹೃದಯವನ್ನು ನೀನು ಅಪಹರಿಸಿರುವೆ ಒಂದೇ ಕಿರುನೋಟದಿಂದ, ನನ್ನ ಹೃದಯವನ್ನು ವಶಪಡಿಸಿಕೊಂಡಿರುವೆ ನಿನ್ನ ಕಂಠಹಾರದ ಒಂದೇ ರತ್ನದಿಂದ.
10 : ನನ್ನ ಪ್ರಿಯಳೇ, ನನ್ನ ವಧುವೇ, ನಿನ್ನ ಪ್ರೀತಿ ಎಷ್ಟೋ ರಮ್ಯ ! ನಿನ್ನ ಪ್ರೇಮ ಮಧುಪಾನಕ್ಕಿಂತ ಎಷ್ಟೋ ಮಧುರ ! ನಿನ್ನ ತೈಲದ ಪರಿಮಳ ಸುಗಂಧ ದ್ರವ್ಯಗಳಿಗಿಂತ ಎಷ್ಟೋ ಮನೋಹರ !
11 : ನನ್ನ ವಧುವೇ, ಜೇನು ಸುರಿಯುತ್ತಿದೆ ನಿನ್ನ ತುಟಿಗಳಿಂದ ಹಾಲುಜೇನು ಬರುತ್ತಿದೆ ನಿನ್ನ ನಾಲಗೆಯಡಿಯಿಂದ ಲೆಬನೋನಿನ ಸುಗಂಧ ಸೂಸುತ್ತಿದೆ ನಿನ್ನ ಉಡುಪಿನಿಂದ.
12 : ನನ್ನ ಪ್ರಿಯಳು, ನನ್ನ ಮದಲಗಿತ್ತಿ ಸುಭದ್ರವಾದ ಉದ್ಯಾನವನ ಬೇಲಿಯೊಳಗಿನ ಬುಗ್ಗೆ ಮುಚ್ಚಿ ಮುದ್ರಿಸಿದ ಚಿಲುಮೆ.
13 : ನಿನ್ನ ಉದ್ಯಾನದಲ್ಲಿ ಬೆಳೆದಿವೆ ದಾಳಿಂಬೆಯಂಥ ಉತ್ತಮ ಫಲವೃಕ್ಷಗಳು ಜಟಮಾಂಸಿ, ಕರ್ಪೂರ, ಜಟಮಾಂಸಿ, ಕುಂಕುಮ ಕೇಸರಿಗಳು.
14 : ಬೆಳೆದಿವೆ ಪಟ್ಟೆಲವಂಗ ವಿವಿಧ ಸಾಂಬ್ರಾಣಿ ಗಿಡಗಳು ರಸಗಂಧ, ಅಗರುಗಳು ಸಕಲವಿಧ ಶ್ರೇಷ್ಠ ಸುಗಂಧ ಗಿಡಮೂಲಿಕೆಗಳು.
15 : ನಿನ್ನ ತೋಟಗಳಿಗೆ ಬೇಕಾದ ಬುಗ್ಗೆ, ಉಕ್ಕಿಬರುವ ಒರತೆ, ಲೆಬನೋನಿನಿಂದ ಹರಿಯುವ ಕಾಲುವೆ ನಿನ್ನಲ್ಲಿವೆ. ನಲ್ಲೆ :
16 : ಉತ್ತರದ ಗಾಳಿಯೇ ಏಳು ದಕ್ಷಿಣದ ಗಾಳಿಯೇ ಬೀಸು ನನ್ನ ತೋಟದ ಮೇಲೆ ಬಿರುಸಾಗಿ ಬೀಸು ಸುವಾಸನೆಯನ್ನು ದೂರದೂರ ಪಸರಿಸು. ಬರಲಿ ಎನ್ನಿನಿಯನು ನನ್ನ ತೋಟಕೆ ಅತ್ಯುತ್ತಮ ಫಲಗಳನು ತಾನೇ ಭುಜಿಸಲಿಕೆ.

· © 2017 kannadacatholicbible.org Privacy Policy