Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಪ.ಗೀ


1 : ನಾನು ಶಾರೋನಿನ ನೆಲಸಂಪಿಗೆ ತಗ್ಗಿನ ತಾವರೆ. ನಲ್ಲ :
2 : ನನ್ನ ಪ್ರಿಯಳು ಸ್ತ್ರೀಯರಲ್ಲಿ ಶ್ರೇಷ್ಟಳು ಮುಳ್ಳುಪೊದರಿನ ನಡುವೆ ತಾವರೆಯಂತಿಹಳು. ನಲ್ಲೆ :
3 : ನನ್ನ ಪ್ರಿಯನು ಪುರುಷೋತ್ತಮನು ವನವೃಕ್ಷಗಳ ಮಧ್ಯೆ ಸೇಬಿನಂತಿಹನು. ಕುಳಿತು ಸಂತೋಷಗೊಂಡೆ ನಾನದರ ನೆರಳಿನೊಳು ಸಿಹಿ ನನ್ನ ನಾಲಿಗೆಗೆ ಅದರ ಫಲವು.
4 : ಬರಮಾಡಿಕೊಂಡನು ನನ್ನನು ಔತಣದ ಮನೆಗೆ ನನ್ನ ಮೇಲೆತ್ತಿದನು ‘ಪ್ರೀತಿ’ ಎಂಬ ತನ್ನ ಪತಾಕೆ.
5 : ಅಸ್ವಸ್ಥಳಾಗಿರುವೆನು ಅನುರಾಗದಿಂದ ಉಪಚರಿಸಿ ನನ್ನನು ಸೇಬುಹಣ್ಣುಗಳಿಂದ ಚೇತನಗೊಳಿಸಿರಿ ದೀಪದ್ರಾಕ್ಷೆಯಿಂದ.
6 : ಆತನ ಎಡಗೈ ನನಗೆ ತಲೆದಿಂಬಾಗಿದ್ದರೆ ಆತನ ಬಲಗೈ ನನ್ನನ್ನು ಆಲಂಗಿಸಿದರೆ ಎಷ್ಟು ಚೆನ್ನಾಗಿರುತ್ತಿತ್ತು!
7 : ಜೆರುಸಲೇಮಿನ ಮಹಿಳೆಯರೇ, “ತಾನೇ ಏಳುವುದಕ್ಕೆ ಮುಂಚೆ ನನ್ನ ಪ್ರಿಯನನ್ನು ಎಚ್ಚರಿಸದಿರಿ ಆತನ ವಿಶ್ರಾಂತಿಗೆ ಭಂಗ ತರದಿರಿ” ಎಂದು ನಿಮಗೆ ವಿಧಿಸಿರುವೆ ಆಣೆಯಿಟ್ಟು ವನದ ಹುಲ್ಲೆ ಹರಿಣಿಗಳ ಮೇಲೆ. ನಲ್ಲೆ :
8 : ಅಗೋ, ನನ್ನ ಕಾಂತನ ಸಪ್ಪಳ! ಹಾರಿ ಬರುತಿಹನು ಬೆಟ್ಟಗಳ ಮೇಲೆ ಜಿಗಿದು ಬರುತಿಹನು ಗುಡ್ಡಗಳ ಮೇಲೆ.
9 : ನನ್ನ ಪ್ರಿಯನು ಇಹನು ಜಿಂಕೆಯಂತೆ, ಎಳೆಯ ಹುಲ್ಲೆಯಂತೆ ಇಗೋ, ನಿಂತಿಹನು ಗೋಡೆಯ ಹಿಂಭಾಗದಲೆ, ದೃಷ್ಟಿಸಿ ನೋಡುತಿಹನು ಕಿಟಕಿಗಳಲಿ ಇಣುಕು ಹಾಕುತಿಹನು ಜಾಲಾಂತರಗಳಲಿ.
10 : ನನ್ನ ನಲ್ಲನು ನನ್ನೊಡನೆ ಮಾತಾಡಿ ಹೀಗೆಂದನು: ನಲ್ಲ : ‘ಎದ್ದು ಬಾ, ಪ್ರಿಯತಮೆ, ಬಾ ನನ್ನೊಂದಿಗೆ, ಸುಂದರಿಯೇ,
11 : ಇಗೋ, ಚಳಿಗಾಲ ಕಳೆಯಿತು ಮಳೆಗಾಲ ಮುಗಿಯಿತು.
12 : ಧರೆಯಲ್ಲೆಲ್ಲ ಹೂಗಳು ಅರಳಿವೆ ನಲಿದು ಹಾಡುವ ಕಾಲ ಬಂದಿದೆ ಬೆಳವಕ್ಕಿಯ ಕೂಗು ನಾಡಿನಲ್ಲಿ ಕೇಳಿಸುತ್ತಿದೆ.
13 : ಅಂಜೂರದ ಕಾಯಿಗಳು ಹಣ್ಣಾಗಿವೆ ದ್ರಾಕ್ಷಾಬಳ್ಳಿಗಳು ಹೂಬಿಟ್ಟಿವೆ. ಅದರ ಪರಿಮಳ ಹರಡುತ್ತಿದೆ.’ ನಲ್ಲ : ಎದ್ದು ಬಾ, ನನ್ನ ಪ್ರೇಯಸಿಯೇ ಬಾ ನನ್ನೊಂದಿಗೆ, ಸುಂದರಿಯೇ.
14 : ಬಂಡೆಯ ಬಿರುಕುಗಳಲ್ಲಿ ಸಂದುಗಳ ಮರೆಯಲ್ಲಿ ತಂಗಿರುವ ಪಾರಿವಾಳವೇ ಬಾ. ನಿನ್ನ ರೂಪವನು ನನಗೆ ಕಾಣಿಸು ನಿನ್ನ ದನಿಯನು ನನಗೆ ಕೇಳಿಸು. ನಿನ್ನ ದನಿ ಎನಿತೋ ಇಂಪು! ನಿನ್ನ ರೂಪ ಎನಿತೋ ತಂಪು!
15 : ತೋಟಗಳನು ಹಾಳುಮಾಡುವಾ ನರಿಗಳನ್ನೂ ಮರಿಗಳನ್ನೂ ಹಿಡಿದು ತನ್ನಿ ಹೂಗಳು ಅರಳಿವೆ ನಮ್ಮ ತೋಟಗಳಲಿ. ನಲ್ಲೆ :
16 : ನನ್ನ ಇನಿಯನು ನನ್ನವನೇ, ನಾನು ಅವನವಳೇ ಮೇಯುತಿವೆ ಅವನ ಮುಂದೆ ನೆಲದಾವರೆಗಳ ನಡುವೆ.
17 : ಕತ್ತಲು ಕಳೆಯುವ ಮುನ್ನ ಹೊತ್ತುಮೂಡುವ ಮುನ್ನ ಹೊರಟು ಬಾ, ನನ್ನ ಕಾಂತ ಜಿಂಕೆಯಂತಿರು ಪ್ರಾಯದ ಹುಲ್ಲೆಯಂತಿರು ಬೇತೆರ್ ಪರ್ವತದ ಮೇಲಿರು.

· © 2017 kannadacatholicbible.org Privacy Policy