1 : ಸೊಲೊಮೋನನ ಪರಮಗೀತೆ:
ನಲ್ಲೆ :
2 : ಚುಂಬಿಸೆನ್ನನು ನಿನ್ನ ತುಟಿಗಳಿಂದ
ನಿನ್ನ ಪ್ರೀತಿ ಅತಿ ಮಧುರ
ಮಧುಪಾನಕ್ಕಿಂತ.
3 : ನೀನು ಹಚ್ಚಿಕೊಂಡಿರುವ ತೈಲ ಎನಿತು
ಸುವಾಸನೀಯ
ಸುರಿದ ಪರಿಮಳದಂತೆ ವ್ಯಾಪ್ತ ನಿನ್ನ
ನಾಮಾಂಕಿತ
ಕನ್ಯೆಯರೆಲ್ಲರು ನಿನ್ನನು ಪ್ರೀತಿಸದಿರಲು
ಅಸಾಧ್ಯ.
4 : ನನ್ನನ್ನು ತುಸು ಎಳೆ,
ಓಡೋಣ ನಾವು ಮುಂದಕ್ಕೆ;
ಅರಸನಾಗಿರು ನನಗೆ
ಕರೆದೊಯ್ಯಿ ನನ್ನನ್ನು ಅಂತಃಪುರಕ್ಕೆ.
ಹರ್ಷಿಸೋಣ, ಒಂದಿಗೆ ಆನಂದಿಸೋಣ
ಮಧುಪಾನಕ್ಕಿಂತ ನಿನ್ನ ಪ್ರೀತಿ ಸ್ತುತ್ಯಾರ್ಹ
ನಿನ್ನನ್ನು ಪ್ರೀತಿಸುವುದು ಎನಿತು ಸಹಜ !
5 : ಓ ಜೆರುಸಲೇಮಿನ ಮಹಿಳೆಯರೇ,
ನಾನು ಕಪ್ಪಾಗಿರುವೆ ಕೇದಾರಿನ ಗುಡಾರಗಳಂತೆ
ಆದರೂ ಚೆಲುವೆ ಸೊಲೊಮೋನನಾ
ಪರದೆಗಳಂತೆ.
6 : ದಿಟ್ಟಿಸಿ ನೋಡಬೇಡಿ ನನ್ನ ರೂಪವನ್ನೆ
ನಾ ಕಪ್ಪಾಗಿರುವುದು ಸೂರ್ಯನ
ತಾಪದಿಂದಲೆ.
ಸಿಟ್ಟುಗೊಂಡರು ಸಹೋದರರು ನನ್ನ ಮೇಲೆ
ಅಟ್ಟಿದರು ನನ್ನನು ತೋಟಕಾಯುವುದಕ್ಕೆ
ಗಮನ ಕೊಡಲಾಗಲಿಲ್ಲ ನನ್ನ ತನು ತೋಟಕ್ಕೆ.
7 : ನನ್ನ ಪ್ರಾಣಪ್ರಿಯನೇ ಹೇಳು:
ನಿನ್ನ ಮಂದೆಯನ್ನು ನೀನು ಮೇಯಿಸುವುದೆಲ್ಲಿ?
ನಡುಹಗಲಲ್ಲಿ ಅದು ವಿಶ್ರಮಿಸುವುದೆಲ್ಲಿ?
ನಾನೇಕೆ ಅಲೆಯಬೇಕು ಮುಸುಕು
ಹಾಕಿದವಳಂತೆ
ನಿನ್ನ ಗೆಳೆಯರ ಮಂದೆಗಳ ಹಿಂದೆ?
ನಲ್ಲ :
8 : ಸ್ತ್ರೀಯರಲ್ಲಿ ಅತಿ ಸುಂದರಿಯೇ,
ನಿನಗಿದು ಗೊತ್ತಿಲ್ಲವಾದರೆ
ಹೋಗು ಕುರಿಹಿಂಡಿನ ಜಾಡಿನಲ್ಲೆ
ಮೇಯಿಸು ನಿನ್ನ ಮೇಕೆಮರಿಗಳನೆ
ಕುರುಬರ ಗುಡಾರಗಳ ಸಮೀಪದಲ್ಲೆ.
9 : ಫರೋಹನ ರಥವನ್ನೆಳೆದ ಹೆಣ್ಣುಕುದುರೆಗೆ
ಹೋಲಿಸಿರುವೆ ನಾ ನಿನ್ನನು ಪ್ರಿಯಳೇ
10 : ಎಷ್ಟು ಅಂದವಾಗಿವೆ ನಿನ್ನ ಕೆನ್ನೆಗಳು
ಕಿವಿಯೋಲೆಗಳಿಂದ !
ನಿನ್ನ ಕೊರಳು ಕಂಠಹಾರಗಳಿಂದ !
11 : ಮಾಡಿಸುವೆ ನಿನಗೆ ಬಂಗಾರದ ಅಂಚು,
ಬೆಳ್ಳಿಯ ಕುಚ್ಚು.
ನಲ್ಲೆ :
12 : ಅತ್ತ ರಾಜನು ಮಂಚದ ಮೇಲೆ
ಮಲಗಿಕೊಂಡಿರಲು
ಇತ್ತ ಬೀರುತ್ತಿತ್ತು ನನ್ನ ಪರಿಮಳ ತೈಲ
ಸುವಾಸನೆಯನು.
13 : ನನ್ನ ಭಾಗ್ಯಕ್ಕೆ ನನ್ನ ನಲ್ಲ ಸ್ತನಗಳ ಮಧ್ಯೆಯಿರುವ ಪರಿಮಳ ಚೀಲ.
14 : ನನ್ನ ಪಾಲಿಗೆ ನನ್ನ ಪ್ರಿಯನು ಏನ್ಗೆದಿಯ ತೋಟದ ಹೂಗೊಂಚಲು. ನಲ್ಲ :
15 : ಆಹಾ, ನನ್ನ ಪ್ರಿಯಳೇ, ನೀನೆಷ್ಟು
ಚೆಲುವೆ
ಆಹಾ ನೀನೆಷ್ಟು ಕೋಮಲೆ
ನಿನ್ನ ನೇತ್ರಗಳು ಪಾರಿವಾಳಗಳಂತೆ!
16 : ಆಹಾ, ಎನ್ನಿನಿಯಾ, ನೀನೆಷ್ಟು
ಸುಂದರ ನೀನೆಷ್ಟು ಮನೋಹರ !
17 : ನಮ್ಮ ಹಾಸಿಗೆ ಪಚ್ಚೆಪಸರೇ,
ನಮ್ಮ ಮೇಲ್ಛಾವಣಿ ತುರಾಯಿ
ಮರಗಳೇ
ಅದರ ತೊಲೆಗಳು ದೇವದಾರು
ವೃಕ್ಷಗಳೇ.