Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಉಪದೇಶಕ


1 : ನಾನು ಇವೆಲ್ಲವನ್ನು ಪರ್ಯಾಲೋಚಿಸಿ ಇದನ್ನು ಮನಗಂಡೆ: ಸತ್ಪುರುಷರ ಹಾಗೂ ಸುಜ್ಞಾನಿಗಳ ಕಾರ್ಯಗಳೆಲ್ಲವೂ ದೇವರ ಕೈಯಲ್ಲಿವೆ. ತಾವು ಪ್ರೀತಿಗೆ ಪಾತ್ರರೋ ದ್ವೇಷಕ್ಕೆ ಅರ್ಹರೋ ಮಾನವರಿಗೆ ತಿಳಿಯದು. ಮುಂದೆ ಏನು ಕಾದಿದೆ ಎಂಬುದು ಯಾರಿಗೂ ಗೊತ್ತಿಲ್ಲ.
2 : ಎಲ್ಲವೂ ಎಲ್ಲರಿಗೂ ಒಂದೇ ಬಗೆಯಾಗಿ ಸಂಭವಿಸುವುದು; ಸಜ್ಜನನಿಗೂ ದುರ್ಜನನಿಗೂ, ಒಳ್ಳೆಯವನಿಗೂ (ಕೆಟ್ಟವನಿಗೂ), ಶುದ್ಧನಿಗೂ, ಅಶುದ್ಧನಿಗೂ ಬಲಿಯನ್ನರ್ಪಿಸುವವನಿಗೂ ಅರ್ಪಿಸದವನಿಗೂ ಒಂದೇ ಗತಿ ಕಾದಿದೆ; ನಿರ್ದೋಷಿಯಂತೆ ದೋಷಿಯೂ ಇರುವನು; ಆಣೆಯಿಡುವವನ ಹಾಗೆ ಆಣೆಗೆ ಅಂಜುವವನೂ ಇರುವನು.
3 : ಎಲ್ಲರಿಗೂ ಒಂದೇ ಗತಿಯೆಂಬ ಸಂಕಟವು ಲೋಕ ವ್ಯವಹಾರಗಳಲ್ಲೆಲ್ಲಾ ಸೇರಿಕೊಂಡಿದೆ. ಇದಲ್ಲದೆ, ನರಮಾನವರ ಎದೆಯಲ್ಲಿ ಕೆಟ್ಟತನ ತುಂಬಿದೆ; ಅವರು ಬದುಕಿರುವ ತನಕ ಮರುಳುತನ ಅವರ ಮನಸ್ಸನ್ನು ಸೆರೆಹಿಡಿದಿರುತ್ತದೆ. ಆನಂತರ ಸತ್ತವರನ್ನು ಸೇರಿಕೊಳ್ಳುತ್ತಾರೆ.
4 : ಜೀವಿತರ ಗುಂಪಿಗೆ ಸೇರಿದವನಿಗೆ ನಂಬಿಕೆ-ನಿರೀಕ್ಷೆಯುಂಟು; ಸತ್ತ ಸಿಂಹಕ್ಕಿಂತ ಬದುಕಿರುವ ನಾಯಿಯೇ ಲೇಸು.
5 : ಜೀವಿತರಿಗೆ ಖಂಡಿತವಾಗಿ ಸಾಯುತ್ತೇವೆಂಬ ತಿಳುವಳಿಕೆಯಾದರೂ ಉಂಟು. ಸತ್ತವರಿಗಾದರೋ ಯಾವ ತಿಳುವಳಿಕೆಯೂ ಇಲ್ಲ; ಅವರಿಗೆ ಇನ್ನು ಮೇಲೆ ಯಾವ ಪ್ರತಿಫಲವೂ ಇಲ್ಲ; ಅವರ ಹೆಸರನ್ನೂ ಜನರು ಮರೆತುಬಿಡುತ್ತಾರೆ.
6 : ಅವರ ಪ್ರೀತಿ, ದ್ವೇಷ, ಮತ್ಸರ, ಅವರು ಸತ್ತಾಗಲೇ ಅಳಿದು ಹೋಗುತ್ತವೆ. ಇಹಲೋಕದಲ್ಲಿ ನಡೆಯುವ ಯಾವುದರಲ್ಲೂ ಅವರಿಗೆ ಇನ್ನೆಂದಿಗೂ ಪಾಲಿರುವುದಿಲ್ಲ.
7 : ಹೋಗು, ನಿನ್ನ ಅನ್ನವನ್ನು ಸಂತೋಷದಿಂದ ತಿನ್ನು; ದ್ರಾಕ್ಷಾರಸವನ್ನು ಉಲ್ಲಾಸದಿಂದ ಕುಡಿ; ದೇವರು ನಿನ್ನ ನಡತೆಯನ್ನು ಈಗಾಗಲೇ ಮೆಚ್ಚಿಕೊಂಡಿದ್ದಾರೆ. 8ನಿನ್ನ ಬಟ್ಟೆಗಳು ಬೆಳ್ಳಗಿರಲಿ, ತಲೆಗೆ ಎಣ್ಣೆಯ ಕೊರತೆ ಇಲ್ಲದಿರಲಿ.
8 : ಲೋಕದಲ್ಲಿ ದೇವರು ವಿಧಿಸಿರುವ ಈ ನಿರರ್ಥಕ ಜೀವಮಾನದ ನಿರರ್ಥಕ ದಿನದಿನವೂ ನಿನ್ನ ಪ್ರಿಯ ಪತ್ನಿಯೊಡನೆ ಸುಖದಿಂದ ಬದುಕು; ಇಹಲೋಕದ ನಿನ್ನ ಬಾಳಿನಲ್ಲಿ ನೀನು ಪಡುವ ಪಾಡಿಗೆ ಇದೇ ನಿನ್ನ ಪಾಲಿಗೆ ಬಂದ ಪಂಚಾಮೃತ.
10 : ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲ ಪೂರ್ಣಶಕ್ತಿಯಿಂದ ಮಾಡು. ಏಕೆಂದರೆ ನೀನು ಹೋಗಲಿಕ್ಕಿರುವ ಪಾತಾಳದಲ್ಲಿ ಯಾವ ಕೆಲಸವೂ ಯೋಜನೆಯೂ ತಿಳುವಳಿಕೆಯೂ ಜ್ಞಾನವೂ ಇರುವುದಿಲ್ಲ.
11 : ಲೋಕದಲ್ಲಿ ನಾನು ಇನ್ನೊಂದು ವಿಷಯವನ್ನು ಗಮನಿಸಿದೆ; ಓಟ ಪಂದ್ಯದಲ್ಲಿ ವೇಗವಾಗಿ ಓಡುವವನೇ ಯಾವಾಗಲೂ ಗೆಲ್ಲುವನು ಎನ್ನುವಂತಿಲ್ಲ; ಬಲಿಷ್ಠರಿಗೇ ಯುದ್ಧದಲ್ಲಿ ಜಯಗಿಟ್ಟುತ್ತದೆ ಎನ್ನುವಹಾಗಿಲ್ಲ. ಜ್ಞಾನಿಗೆ ಜೀವನಾಂಶ ದೊರಕುವುದು, ಜಾಣನಿಗೆ ಹಣ ಲಭಿಸುವುದು, ಪ್ರವೀಣನಿಗೆ ಪಟ್ಟಪದವಿ ಸಿಕ್ಕುವುದು ಎನ್ನುವಂತಿಲ್ಲ. ಇವರೆಲ್ಲರೂ ಸಮಯ ಸಂದರ್ಭಗಳಿಗೆ ಒಳಪಟ್ಟಿರುತ್ತಾರೆ.
12 : ತನ್ನ ನಿಶ್ಚಿತಕಾಲ ಯಾವಾಗ ಬರುವುದೆಂದು ಮಾನವನಿಗೆ ತಿಳಿಯದು. ಮೀನುಗಳು ಮೋಸಬಲೆಗೂ, ಹಕ್ಕಿಗಳು ಉರುಲುಬಲೆಗೂ, ಸಿಕ್ಕಿ ಬೀಳುವಂತೆ ನರಮಾನವರು ತಮ್ಮ ಮೇಲೆ ತಟ್ಟನೆ ಬೀಳುವ ಕಾಲಪಾಶಕ್ಕೆ ಸಿಕ್ಕಿಕೊಳ್ಳುತ್ತಾರೆ.
13 : ಲೋಕದಲ್ಲಿ ನಾನು ಜ್ಞಾನವನ್ನು ಈ ವಿಧವಾಗಿ ಮನಗಂಡೆ: ಅದು ನನ್ನ ದೃಷ್ಟಿಗೆ ದೊಡ್ಡದಾಗಿ ಕಾಣಿಸಿತು.
14 : ಇಗೋ, ಒಂದು ಚಿಕ್ಕಪಟ್ಟಣ. ಅದರಲ್ಲಿ ಕೆಲವೇ ನಿವಾಸಿಗಳು. ಬಲಿಷ್ಠನಾದ ಅರಸ ಅದಕ್ಕೆ ಮುತ್ತಿಗೆಹಾಕಿದ. ಅದರ ಸುತ್ತಲು ದೊಡ್ಡ ಕೋಟೆ ಎಬ್ಬಿಸಿದ.
15 : ಆಗ ಅಲ್ಲಿದ್ದವರು ತಮ್ಮಲ್ಲೇ ಒಬ್ಬ ಜ್ಞಾನಿಯನ್ನು ಕಂಡುಹಿಡಿದರು. ಅವನು ತನ್ನ ಜ್ಞಾನದಿಂದಲೇ ಆ ಪಟ್ಟಣವನ್ನು ರಕ್ಷಿಸಿದ. ಆದರೆ ಆ ಬಡಜ್ಞಾನಿಯನ್ನು ಆಮೇಲೆ ಯಾರೂ ಸ್ಮರಿಸಲಿಲ್ಲ.
16 : ಇದನ್ನು ನೋಡಿದ ನಾನು, ಶಕ್ತಿಗಿಂತ ಜ್ಞಾನವೇ ಶ್ರೇಷ್ಠ; ಆದರೆ ಜನರು ಆ ಬಡವನ ಜ್ಞಾನವನ್ನು ತಾತ್ಸಾರ ಮಾಡುತ್ತಾರೆ, ಅವನ ಮಾತುಗಳನ್ನು ಗಮನಿಸುವುದಿಲ್ಲ, ಎಂದುಕೊಂಡೆ.
17 : ಹುಚ್ಚರ ಕೂಟದಲ್ಲಿ ಕೇಳಿಬರುವ ಅಧ್ಯಕ್ಷನ ಕೂಗಾಟಕ್ಕಿಂತ ಜ್ಞಾನಿಯ ಮೆಲ್ಲನೆಯ ಮಾತು ಕಿವಿಗೆ ಲೇಸು.
18 : ಯುದ್ಧಾಯುಧಗಳಿಗಿಂತ ಜ್ಞಾನವೇ ಉತ್ತಮ; ಆದರೆ ಒಬ್ಬನೇ ಒಬ್ಬ ಪಾಪಿ ಸಾಕು ಪುಣ್ಯಕೋಟೆಯನ್ನು ಹಾಳುಮಾಡಲು !

· © 2017 kannadacatholicbible.org Privacy Policy