1 : “ಬಾ ಮನವೇ, ಸಂತೋಷದ ಮೂಲಕ ನಿನ್ನನ್ನು ಪರೀಕ್ಷಿಸುವೆ; ಸುಖಭೋಗವನ್ನು ಅನುಭವಿಸು” ಎಂದು ಮನಸ್ಸಿನಲ್ಲೇ ಹೇಳಿಕೊಂಡೆ. ಆದರೆ ಇದೂ ವ್ಯರ್ಥವೇ ಸರಿ.
2 : “ನಗೆ ಹುಚ್ಚುತನ, ಸುಖಭೋಗ ನಿಷ್ಪ್ರಯೋಜಕ” ಎಂದುಕೊಂಡೆ.
3 : “ದೇಹಕ್ಕೆ ಮಧುಪಾನ ಮಾಡಿಸೋಣ; ಮೂರ್ಖತನದಲ್ಲಿ ತಲ್ಲೀನನಾಗೋಣ; ಜೀವಮಾನದ ಅಲ್ಪ ಕಾಲದಲ್ಲಿ ನರಮಾನವನಿಗೆ ಧರೆಯಲ್ಲಿ ಯಾವುದು ಹಿತ ಎಂದು ತಿಳಿದುಕೊಳ್ಳೋಣ” ಎಂದು ಜ್ಞಾನಾ ಶಕ್ತನಾದ ನಾನು ಮನಸ್ಸಿನಲ್ಲೇ ಅಂದುಕೊಂಡೆ.
4 : ಮಹತ್ಕಾರ್ಯಗಳನ್ನು ಎಸಗಿದೆ: ಮನೆಮಾರುಗಳನ್ನು ಕಟ್ಟಿಸಿಕೊಂಡೆ;
5 : ತೋಟ ಉದ್ಯಾನವನಗಳನ್ನು ಬೆಳೆಸಿದೆ. ಅವುಗಳಲ್ಲಿ ನಾನಾ ತರದ ಫಲವೃಕ್ಷಗಳನ್ನು ನಾಟಿಮಾಡಿಸಿದೆ.
6 : ಬೆಳೆಯುವ ಗಿಡತೋಟಗಳಿಗೆ ನೀರುಹಾಯಿಸಲು ಕೆರೆಕುಂಟೆಗಳನ್ನು ತೋಡಿಸಿದೆ.
7 : ಗಂಡು ಹೆಣ್ಣಾಳುಗಳನ್ನು ಕೊಂಡುಕೊಂಡೆ. ಇವರಿಗಾದ ಮಕ್ಕಳು ನನಗೆ ಹುಟ್ಟುಗುಲಾಮರಾದರು. ಇದಲ್ಲದೆ ಜೆರುಸಲೇಮಿನಲ್ಲಿ ಹಿಂದೆ ಇದ್ದವರೆಲ್ಲರಿಗಿಂತಲೂ ಹೆಚ್ಚು ದನಕುರಿಗಳು ನನಗಾದವು; ನಾನು ಧನವಂತನಾದೆ.
8 : ಬೆಳ್ಳಿಬಂಗಾರಗಳನ್ನೂ ಅರಸರ ಹಾಗೂ ಸಾಮಂತರ ಕಪ್ಪಕಾಣಿಕೆಗಳನ್ನೂ ಶೇಖರಿಸಿಕೊಂಡೆ. ಗಾಯಕಗಾಯಕಿಯರೂ ಭೋಗವಿಲಾಸಕ್ಕಾಗಿ ಹಲವಾರು ಉಪಪತ್ನಿಯರೂ ನನಗಿದ್ದರು.
9 : ಹೀಗೆ ಜೆರುಸಲೇಮಿನಲ್ಲಿ ಹಿಂದೆ ಇದ್ದ ಎಲ್ಲರಿಗಿಂತಲೂ ಅಭಿವೃದ್ಧಿಹೊಂದಿ ಶ್ರೀಮಂತನಾದೆ.
10 : ನನ್ನ ಕಣ್ಣು ಬಯಸಿದ್ದೆಲ್ಲವನ್ನೂ ಅದಕ್ಕೆ ಒಪ್ಪಿಸಿದೆ. ಹೃದಯ ಕೋರಿದ ಸಂತೋಷವನ್ನು ಅದಕ್ಕೆ ನಿರಾಕರಿಸಲಿಲ್ಲ. ನನ್ನ ಮನ ಎಲ್ಲಾ ಕಾರ್ಯಕಲಾಪಗಳಲ್ಲೂ ಉಲ್ಲಾಸಗೊಳ್ಳುತ್ತಿತ್ತು. ಇವೆಲ್ಲ ನನ್ನ ಪ್ರಯಾಸಕ್ಕೆ ದೊರೆತ ಫಲ.
11 : ಆಗ ನಾನೇ ಸ್ವತಃ ಮಾಡಿದ ಎಲ್ಲಾ ಕೆಲಸಕಾರ್ಯಗಳನ್ನೂ ಪಟ್ಟ ಎಲ್ಲ ಪ್ರಯಾಸವನ್ನೂ ಗಮನವಿಟ್ಟು ಪರಿಶೀಲಿಸಿದೆ. ಆದರೆ ಇಗೋ, ಗಾಳಿಯನ್ನು ಹಿಡಿಯಲು ಬೆನ್ನಟ್ಟಿಹೋದಂತೆ ಎಲ್ಲವೂ ವ್ಯರ್ಥ; ಲೋಕದಲ್ಲಿ ಲಾಭಕರವಾದುದು ಏನೂ ಕಾಣಲಿಲ್ಲ.
12 : ರಾಜನ ಪ್ರಯತ್ನವೇ ಹೀಗಾದ ಮೇಲೆ ಮತ್ತೊಬ್ಬನಿಂದ ಏನಾದೀತು? ಆದದ್ದೇ ಆಗುತ್ತದೆ ಎಂದುಕೊಂಡೆ.
13 : ಆಗ “ಬೆಳಕು ಕತ್ತಲೆಗಿಂತ ಶ್ರೇಷ್ಠವಾಗಿರುವಂತೆ ಜ್ಞಾನ ಮೂಢತನಕ್ಕಿಂತ ಶ್ರೇಷ್ಠ” ಎಂದು ಗೋಚರವಾಯಿತು.
14 : “ಜ್ಞಾನಿಗೆ ಹಣೆಯಲ್ಲಿ ಕಣ್ಣು, ಮೂಢನೋ ಕತ್ತಲೆಯಲ್ಲಿ ನಡೆಯುತ್ತಾನೆ”. ಆದರೆ ಇವರಿಬ್ಬರ ಗತಿ ಒಂದೇ ಎಂದು ಕಂಡುಬಂದಿತು.
15 : “ಮೂಢನಿಗೆ ಸಂಭವಿಸುವ ಗತಿ ನನಗೂ ಸಂಭವಿಸುವುದಾದರೆ ನನ್ನ ಹೆಚ್ಚಿನ ಜ್ಞಾನದಿಂದ ಪ್ರಯೋಜನವೇನು? ಇದೂ ವ್ಯರ್ಥವೇ”! ಎಂದುಕೊಂಡೆ.
16 : ಏಕೆಂದರೆ ಮೂಢನನ್ನು ಹೇಗೋ ಹಾಗೆಯೇ ಜ್ಞಾನಿಯನ್ನೂ ಜನರು ನಿರಂತರವಾಗಿ ಮರೆತುಹೋಗುವರು. ಮುಂದಿನ ಕಾಲದವರು ಈಗಿನವರನ್ನೆಲ್ಲ ಮರೆತುಬಿಡುವರು ಎಂಬುದು ನಿಶ್ಚಯ. ನಿಸ್ಸಂದೇಹವಾಗಿ ಮೂಢನಂತೆ ಜ್ಞಾನಿಯು ಮೃತನಾಗುವನು.
17 : ಲೋಕದ ಆಗುಹೋಗುಗಳು ಕೇಡಿಗೆ ಈಡಾಗುವುವೆಂದು ನನಗೆ ಕಂಡುಬಂದಿತು. ಜೀವನವೇ ನೀರಸವೆಂದು ತೋಚಿತು; ಗಾಳಿಯನ್ನು ಹಿಡಿಯಲು ಬೆನ್ನಟ್ಟಿ ಹೋದಂತೆ ಸಮಸ್ತವೂ ವ್ಯರ್ಥವೇ ಸರಿ!
18 : ನನ್ನ ದುಡಿಮೆಯ ಫಲವನ್ನು ಮುಂದಿನವನಿಗೆ ಬಿಟ್ಟುಬಿಡಬೇಕಲ್ಲಾ ಎಂದು ಲೋಕದಲ್ಲಿ ನಾನು ಪಟ್ಟ ಪ್ರಯಾಸದ ಬಗ್ಗೆ ಬೇಸರಗೊಂಡೆ.
19 : ನನ್ನ ನಂತರ ಬರುವವನು ಜ್ಞಾನಿಯೋ ಮೂಢನೋ ಯಾರಿಗೆ ಗೊತ್ತು? ಅವನು ಎಂಥವನಾದರೂ ನಾನು ಲೋಕದಲ್ಲಿ ಬುದ್ಧಿ ಖರ್ಚು ಮಾಡಿ ಗಳಿಸಿದ ದುಡಿಮೆಯ ಫಲಕ್ಕೆಲ್ಲ ಅವನು ಒಡೆಯನಾಗುತ್ತಾನೆ. ಇದು ಸಹ ವ್ಯರ್ಥವೇ.
20 : ಹೀಗಿರಲು, ನಾನು ಲೋಕದಲ್ಲಿ ಕಷ್ಟಪಟ್ಟು ಗಳಿಸಿದ ದುಡಿಮೆಯ ಬಗ್ಗೆ ನಿರಾಶೆಗೊಂಡೆ.
21 : ಒಬ್ಬನು ಜ್ಞಾನದಿಂದಲೂ ತಿಳುವಳಿಕೆ ಇಂದಲೂ ಕೆಲಸಮಾಡಿ ಕಾರ್ಯವನ್ನು ಸಿದ್ಧಿಗೆ ತಂದಮೇಲೆ, ಅದಕ್ಕಾಗಿ ಪ್ರಯಾಸಪಡದವನಿಗೆ ಅದನ್ನು ವಾರಸುದಾರನಾಗಿ ಬಿಡಬೇಕಾಗುತ್ತದೆ. ಇದು ಸಹ ವ್ಯರ್ಥವಲ್ಲವೆ? ಇದು ಅನ್ಯಾಯವಲ್ಲವೇ?
22 : ಲೋಕದಲ್ಲಿ ಮಾನವನು ಹೃತ್ಪೂರ್ವಕವಾಗಿ ಪಡುವ ಪ್ರಯಾಸದಿಂದ ಅವನಿಗೆ ಸಿಗುವ ಲಾಭವಾದರೂ ಏನು?
23 : ಅವನ ಮನಸ್ಸಿಗೆ ನೆಮ್ಮದಿ ಇಲ್ಲ. ಇದು ಸಹ ವ್ಯರ್ಥವೇ ಸರಿ.
23 : ಅವನ ಮನಸ್ಸಿಗೆ ನೆಮ್ಮದಿ ಇಲ್ಲ. ಇದು ಸಹ ವ್ಯರ್ಥವೇ ಸರಿ.
24 : ತಿಂದು, ಕುಡಿದು, ತನ್ನ ದುಡಿಮೆಯಲ್ಲೇ ಸುಖವನ್ನು ಅನುಭವಿಸುವುದಕ್ಕಿಂತ ಮೇಲಾದುದು ಮನುಷ್ಯನಿಗೆ ಯಾವುದು ಇಲ್ಲ. ಇದು ದೇವರಿಂದ ಆದುದು ಎಂದು ಮನಗಂಡೆ.
25 : ದೇವರಿಲ್ಲದೆ ಯಾರಿಗೆ ಊಟ ದೊರಕೀತು? ಅವರಿಲ್ಲದೆ ಸುಖಾನುಭವ ಯಾರಿಗೆ ದೊರಕೀತು?
26 : ದೇವರು ತಾವು ಮೆಚ್ಚಿದವನಿಗೆ ಜ್ಞಾನವನ್ನೂ, ತಿಳುವಳಿಕೆಯನ್ನೂ, ಸುಖಸಂತೋಷವನ್ನೂ ದಯಪಾಲಿಸುತ್ತಾರಲ್ಲವೇ? ಪಾಪಿಗಾದರೋ, ಪ್ರಯೋಜನಕರವಾದುವುಗಳನ್ನು ಕೂಡಿಸಿರುವ ಪ್ರಯಾಸವನ್ನು ಮಾತ್ರ ವಿಧಿಸಿದ್ದಾರೆ. ಆದರೆ ಅವು ತಮಗೆ ಮೆಚ್ಚುಗೆಯಾದವರಿಗೆ ಸೇರಬೇಕಾದವು. ಇದೂ ಕೂಡ ಗಾಳಿಯನ್ನು ಹಿಡಿಯಲು ಬೆನ್ನಟ್ಟಿದಂತೆ ವ್ಯರ್ಥ.