Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಜ್ಞಾನೋಕ್ತಿಗಳು


1 : ಕೇಳಿ, ಜ್ಞಾನವೆಂಬಾಕೆ ಕರೆಯುತ್ತಿದ್ದಾಳೆ ವಿವೇಕವೆಂಬಾಕೆ ಕೂಗಿ ಕರೆಯುತ್ತಿದ್ದಾಳೆ !
2 : ಹೆದ್ದಾರಿಯ ಅಕ್ಕಪಕ್ಕದ ದಿಣ್ಣೆಗಳಲ್ಲಿ ಹಾದಿಬೀದಿಗಳ ನಡುವಿನಲ್ಲಿ ನಿಂತಿದ್ದಾಳೆ, ನೋಡಿ.
3 : ನಗರದ ಹೆಬ್ಬಾಗಿಲುಗಳಲ್ಲೂ ಜನಸೇರುವ ಪ್ರವೇಶದ್ವಾರಗಳಲ್ಲೂ ಘೋಷಿಸುತ್ತಿದ್ದಾಳೆ ಹೀಗೆಂದು:
4 : ಮನುಜರೇ, ನಾನು ಕರೆಯುತ್ತಿರುವುದು ನಿಮ್ಮನ್ನೆ ನಾನು ಕೂಗಿ ಕರೆಯುತ್ತಿರುವುದು ಮಾನವ ಕುಲಪುತ್ರರನ್ನೆ.
5 : ಮೂಢರೇ, ಕಲಿತುಕೊಳ್ಳಿ ಜಾಣತನವನ್ನು ಬುದ್ದಿಹೀನರೇ, ಗ್ರಹಿಸಿರಿ ಸನ್ಮತಿಯನ್ನು.
6 : ಕೇಳಿ, ನಾನು ಹೇಳುವ ಮಹತ್ವಪೂರ್ಣವಾದ ವಿಷಯವನ್ನು ನನ್ನ ನಾಲಿಗೆ ನುಡಿಯುವ ಯಥಾರ್ಥವಾದ ಸಂಗತಿಯನ್ನು
7 : ನನ್ನ ಬಾಯಿಂದ ಬರುತ್ತಿರುವುದು ಸತ್ಯ ನನ್ನ ತುಟಿಗೆ ದುಷ್ಟತನ ಅಸಹ್ಯ.
8 : ನನ್ನ ಮಾತುಗಳೆಲ್ಲ ನೀತಿಭರಿತ ಅವುಗಳಲ್ಲಿ ಇಲ್ಲ ಕುಟಿಲ, ಕುತಂತ್ರ.
9 : ತಿಳುವಳಿಕೆ ಉಳ್ಳವನಿಗೆ ಅವೆಲ್ಲ ಸರಳ ಗ್ರಹಿಕೆ ಉಳ್ಳವನಿಗೆ ಅವು ಯಥಾರ್ಥ.
10 : ಅಂಗೀಕರಿಸಿರಿ ಬೆಳ್ಳಿಗಿಂತ ಶ್ರೇಷ್ಠವಾದ ಬೋಧನೆಯನ್ನು ಅಪರಂಜಿಗಿಂತ ಅಪೂರ್ವವಾದ ಉಪದೇಶವನ್ನು.
11 : ಜ್ಞಾನವೆಂಬುದು ಹವಳಕ್ಕಿಂತ ಶ್ರೇಷ್ಠ. ಇಷ್ಟವಸ್ತುಗಳಾವುವು ಅದಕ್ಕೆ ಸಾಟಿಯಿಲ್ಲ.
12 : ಜ್ಞಾನವೆಂಬ ನನಗೆ ಜಾಣ್ಮೆಯೆ ಸಹವಾಸಿ ಯುಕ್ತ ತಿಳುವಳಿಕೆ ನನಗೆ ಸಂಗಾತಿ.
13 : ದೈವಭಯದಿಂದ ಹುಟ್ಟುತ್ತದೆ ಪಾಪದ್ವೇಷ; ಗರ್ವ, ಅಹಂಕಾರ, ದುರಾಚಾರ, ಕಪಟ ಭಾಷಣ ನನಗೆ ಅಸಹ್ಯ.
14 : ಸದಾಲೋಚನೆ, ಸುಜ್ಞಾನ, ವಿವೇಕ ನನ್ನಲ್ಲಿವೆ; ಎಂತಲೇ ಶಕ್ತಿಸಾಮಥ್ರ್ಯ ಹೊಂದಿರುವೆ.
15 : ರಾಜರು ಆಳುವುದು ನನ್ನ ಸಹಾಯದಿಂದ ಅಧಿಪತಿಗಳು ನ್ಯಾಯತೀರ್ಪು ಮಾಡುವುದು ನನ್ನಿಂದ.
16 : ನನ್ನ ಮೂಲಕ ಭೂಪತಿಗಳು ರಾಜ್ಯ ಆಳುವರು ನಾಯಕರು ಭೂಮಿಯ ಮೇಲೆ ದೊರೆತನ ಮಾಡುವರು.
17 : ನನ್ನನ್ನು ಪ್ರೀತಿಸುವವರನ್ನು ನಾನು ಪ್ರೀತಿಸುತ್ತೇನೆ ಹಂಬಲಿಸಿ ಹುಡುಕುವವರು ನನ್ನನ್ನು ಕಂಡುಕೊಳ್ಳುತ್ತಾರೆ.
18 : ನನ್ನಲ್ಲಿವೆ ಶ್ರೀಮಂತಿಕೆ ಮತ್ತು ಘನತೆ ಶಾಶ್ವತ ಸಂಪತ್ತು ಹಾಗೂ ಸಮೃದ್ಧಿ.
19 : ನಾನು ನೀಡುವ ಫಲ ಬಂಗಾರಕ್ಕಿಂತ ಶ್ರೇಷ್ಠ ನನ್ನಿಂದ ದೊರಕುವ ಆದಾಯ ಅಪ್ಪಟ ಬೆಳ್ಳಿಗಿಂತ ಅಮೂಲ್ಯ.
20 : ನಾನು ಹಿಡಿದಿರುವ ಹಾದಿ ನೀತಿಯುತ ನಾನು ನಡೆಯುವುದು ನ್ಯಾಯಪಥ.
21 : ನನ್ನನ್ನು ಪ್ರೀತಿಸುವವರಿಗೆ ದೊರಕಿಸುವೆ ಸಿರಿಸಂಪತ್ತನ್ನು ಬಾಧ್ಯವಾಗಿ ನಾನವರ ಬೊಕ್ಕಸಗಳನ್ನು ತುಂಬಿಸುವೆ ಭರ್ತಿಯಾಗಿ.
22 : ತನ್ನ ಸೃಷ್ಟಿಕ್ರಮದಲ್ಲಿ ಸರ್ವೇಶ್ವರ ನಿರ್ಮಿಸಿದ ನನ್ನನ್ನು ಮೊತ್ತಮೊದಲು ಆತನ ಪುರಾತನ ಕಾರ್ಯಕ್ರಮಗಳಲ್ಲಿ ನಾನೇ ಪ್ರಥಮಳು.
23 : ನಾನು ಸ್ಥಾಪಿಸಲ್ಪಟ್ಟೆ ಪ್ರಾರಂಭದಲ್ಲೆ ಜಗದುತ್ಪತ್ತಿಗೆ ಮುಂಚೆಯೇ ಅನಾದಿಕಾಲದಲ್ಲೆ.
24 : ಜಲನಿಧಿಗಳಾಗಲಿ, ನೀರಿನ ಬುಗ್ಗೆಗಳಾಗಲಿ ಇಲ್ಲದಿರುವಾಗಲೆ ನಾ ಬಂದೆ ಜನ್ಮತಾಳಿ.
25 : ನಾನು ಹುಟ್ಟಿದೆ ಬೆಟ್ಟಗುಡ್ಡಗಳು ಬೇರೂರಿ ನಿಲ್ಲುವುದಕ್ಕೆ ಮೊದಲೆ.
26 : ನಾನು ಜನಿಸಿದೆ ಭೂಮಿಯನ್ನಾಗಲಿ, ಬೈಲನ್ನಾಗಲಿ ನೆಲದ ಅಣುರೇಣನ್ನಾಗಲಿ ಆತ ನಿರ್ಮಿಸದೆ ಇರುವಾಗಲೆ.
27 : ನಾನು ಅಲ್ಲಿದ್ದೆ ಆತ ಆಕಾಶಮಂಡಲವನ್ನು ಸ್ಥಾಪಿಸುವಾಗ ಸಾಗರದ ಮೇಲೆ ಚಕ್ರಾಕಾರದ ಗೆರೆಯನ್ನು ಎಳೆವಾಗ,
28 : ಗಗನವನ್ನು ಮೇಲೆ ಸ್ಥಿರಪಡಿಸುವಾಗ ಸಾಗರದ ಸೆಲೆಗಳನ್ನು ನೆಲೆಗೊಳಿಸಿದಾಗ,
29 : ಜಲಪ್ರವಾಹಗಳು ತನ್ನ ಅಪ್ಪಣೆಯನ್ನು ವಿೂರದ ಹಾಗೆ ಸಮುದ್ರಕ್ಕೆ ಎಲ್ಲೆಕಟ್ಟನ್ನು ನೇಮಿಸುವಾಗ ಭೂಮಿಯ ಅಸ್ತಿಭಾರವನ್ನು ಗೊತ್ತುಮಾಡುವಾಗ.
30 : ನಾನು ಆತನ ಬಳಿ ಕುಶಲ ಶಿಲ್ಪಿಯಂತಿದ್ದೆ ಅನುದಿನವೂ ಆತನಿಗೆ ಆನಂದವನ್ನೀಯುತ್ತಿದ್ದೆ ಸದಾ ಆತನ ಮುಂದೆ ಸಂತೋಷಪಡುತ್ತಿದ್ದೆ.
31 : ಉಲ್ಲಾಸಿಸುತ್ತಿದ್ದೆ ಆತನ ಭುಲೋಕದಲ್ಲಿ ಹರ್ಷಿಸುತ್ತಾ ಇದ್ದೆ ಮಾನವ ಸಂತಾನದಲ್ಲಿ.
32 : ಆದ್ದರಿಂದ ಮಕ್ಕಳೇ, ಕಿವಿಗೊಡಿ ನನಗೀಗ ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರೆಂಬುದು ನಿಜ.
33 : ಉಪದೇಶವನ್ನು ಕೇಳಿ ಬುದ್ಧಿವಂತರಾಗಿರಿ ಅದನ್ನು ನೀವು ನಿರಾಕರಿಸಬೇಡಿ.
34 : ನನ್ನ ಬಾಗಿಲಬಳಿ ಪ್ರತಿದಿನ ಕಾಯುತ್ತಾ ನನ್ನ ಹೊಸಲಿನತ್ತ ನಿರೀಕ್ಷಿಸಿ ನೋಡುತ್ತಾ ನನ್ನ ಮಾತನ್ನು ಆಲಿಸುವವನು ಭಾಗ್ಯವಂತ.
35 : ನನ್ನನ್ನು ಕಂಡುಕೊಳ್ಳುವವನು ಜೀವವನ್ನು ಕಂಡುಕೊಳ್ಳುವನು ಸರ್ವೇಶ್ವರನ ಕೃಪಾಕಟಾಕ್ಷಕ್ಕೆ ಪಾತ್ರನಾಗುವನು.
36 : ನನಗೆ ತಪ್ಪು ಮಾಡುವವನು ತನ್ನಾತ್ಮಕ್ಕೆ ಕೇಡು ಮಾಡುತ್ತಾನೆ ನನ್ನನ್ನು ಹಗೆ ಮಾಡುವವರೆಲ್ಲರು ಮೃತ್ಯುವನ್ನು ಪ್ರೀತಿಸುತ್ತಾರೆ.

· © 2017 kannadacatholicbible.org Privacy Policy