1 : ಮಗನೇ, ನನ್ನ ಮಾತುಗಳನ್ನು ಅನುಸರಿಸು, ನನ್ನ ಆಜ್ಞೆಗಳನ್ನು ಮನಸ್ಸಿನಲ್ಲಿ ಇಡು.
2 : ಕನೀನಿಕೆಯಂತೆ ನನ್ನ ಕಟ್ಟಳೆಯನ್ನು ಪಾಲಿಸು, ನನ್ನ ಆಜ್ಞೆಗಳನ್ನು ಕೈಗೊಂಡು ಬಾಳು.
3 : ಅವು ನಿನ್ನ ಬೆರಳಿಗೆ ಉಂಗುರವಾಗಿರಲಿ, ನಿನ್ನ ಹೃದಯದ ಹಲಗೆಯಲ್ಲಿ ಬರೆದಿರಲಿ.
4 : ಜ್ಞಾನವನ್ನು ‘ಅಕ್ಕಾ’ ಎಂದು ಕರೆ; ವಿವೇಕವನ್ನು ಆಪ್ತಳೆಂದು ಬಗೆ.
5 : ಅವು ನಿನ್ನನ್ನು ಕಾಪಾಡುವುವು ವ್ಯಭಿಚಾರಿಣಿಯಿಂದ, ಸವಿಮಾತಾಡುವ ಆ ಪರಸ್ತ್ರೀಯಿಂದ.
6 : ಒಮ್ಮೆ ಮನೆಯ ಕಿಟಕಿಯಿಂದ ಇಣಕಿ ನೋಡುವಾಗ,
7 : ಜನ ಸಾಮಾನ್ಯರ ನಡುವೆ, ಯೌವನಸ್ಥರ ಮಧ್ಯೆ ಮತಿಗೆಟ್ಟ ಯುವಕನೊಬ್ಬ ನಡೆವುದನ್ನು ನಾನು ಕಂಡೆ.
8 : ಹೊತ್ತು ಮೀರಿ, ಸಂಜೆಯಾಗಿ, ಕತ್ತಲು ಕವಿದಿದ್ದಾ ರಾತ್ರಿಯಲ್ಲಿ, ಅವನು ಹಾದು ಹೋಗುತ್ತಿದ್ದ ಬೀದಿಯ ಮೂಲೆ ಮನೆಯ ಬಳಿ.
9 : ಒಬ್ಬಾಕೆಯ ಮನೆಯ ಕಡೆಗೆ ಆತ ತಿರುಗುವುದನ್ನು ನಾ ಕಂಡೆ;
10 : ಇಗೋ, ಅವನನ್ನು ಎದುರುಗೊಳ್ಳುತ್ತಾಳೆ ವೇಷಧಾರಿಯಾದ ಕಪಟ ಸ್ತ್ರೀಯೊಬ್ಬಳು.
11 : ಹಟಮಾರಿ, ಕೂಗಾಟದವಳು, ಮನೆಯಲ್ಲಿ ನಿಲ್ಲಲಾರದವಳು
12 : ಹೊಂಚು ಹಾಕುತ್ತಾಳೆ ಅವಳು ಮೂಲೆ ಮೂಲೆಗಳಲ್ಲಿ; ಒಮ್ಮೆ ಬೀದಿಯಲ್ಲಿ ಮತ್ತೊಮ್ಮೆ ಚೌಕಗಳಲ್ಲಿ.
13 : ಅವನನ್ನು ಬಿಗಿಹಿಡಿದು ಮುದ್ದಾಡುತ್ತಾಳೆ. ಲಜ್ಜೆಗೆಟ್ಟ ಮೋರೆಯುಳ್ಳ ಅವಳು ಹೀಗೆನ್ನುತ್ತಾಳೆ:
14 : “ನನ್ನ ಬಯಕೆ ಈಡೇರಲೆಂದು ಬಲಿಯರ್ಪಿಸಿದ್ದೇನೆ; ಇಂದೇ ನನ್ನ ಹರಕೆಯನ್ನು ತೀರಿಸಿದ್ದೇನೆ.
15 : ಎಂತಲೇ ನಿನ್ನನ್ನು ಎದುರುಗೊಳ್ಳಲು ಬಂದೆ ಆಕಾಂಕ್ಷೆಯಿಂದ ಹುಡುಕಿ; ಇಗೋ ನಿನ್ನನ್ನು ಕಂಡು ಕೊಂಡೆ.
16 : ಮೆತ್ತೆ ಸುಪ್ಪತ್ತಿಗೆಯಿಂದ, ಚಿತ್ರವಿಚಿತ್ರ ವಸ್ತುಗಳಿಂದ, ಈಜಿಪ್ಟಿನ ನಾರುಮಡಿಯಿಂದ ಸಿದ್ಧ ಮಾಡಿರುವೆ ಹಾಸಿಗೆಯನ್ನು.
17 : ರಸಗಂಧ, ಅಗರು, ಲವಂಗ ಚಕ್ಕೆಗಳಿಂದ ಅದನ್ನು ಘಮ ಘಮಗೊಳಿಸಿರುವೆ.
18 : ಬೆಳಗಿನ ತನಕ ಬೇಕಾದಷ್ಟು ರಮಿಸೋಣ ಬಾ, ಕಾಮ ವಿಲಾಸಗಳಿಂದ ಸಂತೃಪ್ತಿ ಪಡೆಯೋಣ ಬಾ.
19 : ಯಜಮಾನ ಮನೆಯಲ್ಲಿ ಇಲ್ಲ; ಕೈಗೊಂಡು ಇದ್ದಾನೆ ದೂರ ಪ್ರಯಾಣ.
20 : ಹಣದ ಗಂಟನ್ನು ತೆಗೆದುಕೊಂಡು ಹೋಗಿದ್ದಾನೆ; ಮನೆಗೆ ಬರುವಂತಿಲ್ಲ ಹುಣ್ಣಿಮೆಯ ತನಕ.”
21 : ಹೀಗೆ ಮೋಹಕ ಮಾತುಗಳಿಂದ ಒತ್ತಾಯಪಡಿಸುತ್ತಾಳೆ, ಅತಿಯಾದ ಒಲುಮೆಯಿಂದ ಪುಸಲಾಯಿಸುತ್ತಾಳೆ.
22 : ಮಧ್ಯಸ್ಥಾನಕ್ಕೆ ಹೋಗುವ ಹೋರಿಯಂತೆ, ಬಲೆಗೆ ಸಿಕ್ಕಿ ಬೀಳುವ ಜಿಂಕೆಯಂತೆ,
23 : ಉರುಳಿನತ್ತ ಹಾರುವ ಹಕ್ಕಿಯಂತೆ, ಕರುಳನ್ನು ತಿವಿಯುವ ಬಾಣದಂತೆ, ತನ್ನ ಪ್ರಾಣಕ್ಕಿರುವ ಅಪಾಯವನ್ನು ತಿಳಿಯದೆ, ಅವಳನ್ನು ತಡಮಾಡದೆ ಹಿಂಬಾಲಿಸುತ್ತಾನೆ ಆತ.
24 : ಆದ್ದರಿಂದ ಮಕ್ಕಳೇ, ನನಗೆ ಕಿವಿಗೊಡಿರಿ; ನನ್ನ ಮಾತುಗಳನ್ನು ಆಲಿಸಿರಿ.
25 : ನಿಮ್ಮ ಹೃದಯ ಅವಳ ದಾರಿಯತ್ತ ತಿರುಗದಿರಲಿ; ಅಪ್ಪಿ ತಪ್ಪಿ ನಿಮ್ಮ ಕಾಲು ಅವಳ ಹಾದಿಯನ್ನು ತುಳಿಯದಿರಲಿ.
26 : ಅವಳಿಗೆ ಬಲಿಯಾಗಿ ಬಿದ್ದವರು ಬಹುಮಂದಿ; ಹತರಾದವರೋ ಲೆಕ್ಕವಿಲ್ಲದಷ್ಟು ಮಂದಿ.
27 : ಅವಳ ಮನೆ ಪಾತಾಳಕ್ಕೆ ಹಾದಿ; ಮರಣದ ಗುಡಾರಗಳಿಗೆ ಇಳಿದಾರಿ.