1 : ಮಗನೇ, ನೀನು ನೆರೆಯವನ ಸಾಲಕ್ಕೆ ಹೊಣೆಯಾಗಿದ್ದರೆ, ಪರನಿಗಾಗಿ ಕೈಮೇಲೆ ಕೈಯಿಟ್ಟು ಪ್ರಮಾಣಮಾಡಿದ್ದರೆ,
2 : ನಿನ್ನ ಮಾತಿನ ಬಲೆಗೆ ಸಿಕ್ಕಿಹಾಕಿಕೊಂಡಿರುವೆ; ನಿನ್ನ ವಾಗ್ದಾನವು ನಿನ್ನನ್ನು ಸೆರೆಹಿಡಿದಿದೆ.
3 : ಮಗನೇ, ನೀನು ನೆರೆಯವನ ಕೈವಶವಾಗಿರುವೆ; ಈ ಪರಿಮಾಡು ತಪ್ಪಿಸಿಕೊಳ್ಳಬೇಕಾದರೆ:
4 : ನಿನ್ನ ಕಣ್ಣುಗಳಿಗೆ ನಿದ್ರೆ ಕೊಡಬೇಡ, ನಿನ್ನಾಕಣ್ಣಿನ ರೆಪ್ಪೆಗಳನ್ನು ಮುಚ್ಚಬೇಡ.
5 : ಬೇಡನಿಂದ ಓಡುವ ಜಿಂಕೆಯಂತೆ, ಬೇಟೆಗಾರನ ಕೈಯಿಂದ ಹಾರಿಹೋಗುವ ಹಕ್ಕಿಯಂತೆ, ಆ ಬಲೆಯಿಂದ ತಪ್ಪಿಸಿಕೊ.
6 : ಎಲೈ ಸೋಮಾರಿಯೇ, ಇರುವೆಯ ಬಳಿಗೆ ಹೋಗು; ಅದರ ನಡವಳಿಕೆಯನ್ನು ನೋಡಿ ಜ್ಞಾನಿಯಾಗು.
7 : ಅದಕ್ಕಿಲ್ಲ ನೋಡು ನಾಯಕ, ಅರಸ, ಅಧಿಪತಿ.
8 : ಆದರೂ ಕೂಡಿಸುತ್ತದೆ ತಿಂಡಿ ಬೇಸಿಗೆಯಲ್ಲಿ, ಸಂಗ್ರಹಿಸುತ್ತದೆ ಧಾನ್ಯ ಸುಗ್ಗಿಯಲ್ಲಿ.
9 : ಸೋಮಾರಿಯೇ, ಎಷ್ಟು ಹೊತ್ತು ನಿದ್ರಿಸುವೆ? ನಿದ್ರೆಯಿಂದ ಯಾವಾಗ ಎಚ್ಚರಗೊಳ್ಳುವೆ?
10 : “ಇನ್ನೂ ಸ್ವಲ್ಪ ನಿದ್ರೆ, ತುಸು ತೂಕಡಿಕೆ” ಎನ್ನುವೆಯಾ? “ಕೊಂಚವೇ ನಿದ್ರೆಗಾಗಿ ಕೈ ಮಡಿಚಿಕೊಳ್ಳುವೆ” ಎನ್ನುವೆಯಾ?
11 : ಬಡತನ ನಿನ್ನ ಮೇಲೆರಗುವುದು ದಾರಿಗಳ್ಳನಂತೆ; ಅಭಾವ ನಿನ್ನ ಮೇಲೆ ಬೀಳುವುದು ಪಂಜುಗಳ್ಳನಂತೆ.
12 : ದುರುಳನೂ ನೀಚನೂ ಆದವನ ನಡತೆಯನ್ನು ನೋಡು: ಅವನ ಬಾಯಿಂದ ಹೊರಡುವುದು ಕುಟಿಲ ಮಾತು.
13 : ಅವನು ಕಣ್ಣು ಮಿಟುಕಿಸುತ್ತಾನೆ, ಕಾಲು ಕೆರೆಯುತ್ತಾನೆ, ಬೆರಳ ಸನ್ನೆಯಿಂದಲೆ ಮಾತಾಡುತ್ತಾನೆ.
14 : ಅವನ ಮನದಲ್ಲಿರುವುದು ಮೂರ್ಖತನ; ಅವನು ಸತತ ಕಲ್ಪಿಸುವುದು ಕೆಡುಕುತನ. ಅವನು ಬಿತ್ತನೆ ಮಾಡುವುದು ಕಾಳಗ, ಕದನ.
15 : ಆದ್ದರಿಂದ ತಟ್ಟನೆ ಒದಗುವುದು ವಪತ್ತು ಮತ್ತೆ ಏಳಲಾಗದಂತಹ ಕಠಿಣ ಆಪತ್ತು.
16 : ಸರ್ವೇಶ್ವರ ಹಗೆಮಾಡುವಂಥಹವು ಆರು:
ಆತ ಖಂಡನೆ ಮಾಡುವಂಥಹವು ಏಳು:
17 : :
ಅಹಂಕಾರ ದೃಷ್ಟಿ,
ಕಪಟವಾಡುವ ನಾಲಿಗೆ,
ನಿರಪರಾಧಿಯನ್ನು ಕೊಲೆಮಾಡುವ ಕೈ,
18 :
ದುರಾಲೋಚನೆಯನ್ನು ಕಲ್ಪಿಸುವ
ಹೃದಯ,
ಕೇಡುಮಾಡಲು ತವಕಪಡುವ ಕಾಲು,
19 :
ಅಸತ್ಯವನ್ನು ಉಸುರುವ ಸುಳ್ಳುಸಾಕ್ಷಿ.
ಸೋದರರಲ್ಲಿ ಜಗಳ ಹುಟ್ಟಿಸುವ ವ್ಯಕ್ತಿ.
20 : ಮಗನೇ, ನಿನ್ನ ತಂದೆಯ ಆಜ್ಞೆಗೆ ಕಿವಿಗೊಡು, ನಿನ್ನ ತಾಯಿಯ ಉಪದೇಶವನ್ನು ತೊರೆಯದೆ ಮಾಡು.
21 : ಅವನ್ನು ನಿರಂತರವಾಗಿ ಹೃದಯಕ್ಕೆ ಬಂಧಿಸಿಕೊ; ಕಂಠಾಭರಣವಾಗಿ ಕೊರಳಿಗೆ ಧರಿಸಿಕೊ.
22 : ನಡೆಯುವಾಗ ಅವು ನಿನಗೆ ಮುಂದಾಳಾಗಿರುವುವು. ಮಲಗುವಾಗ ಅವು ನಿನ್ನನ್ನು ಕಾಯುವುವು. ಎಚ್ಚರಗೊಂಡಾಗ ಅವು ನಿನ್ನೊಡನೆ ಸಂವಾದಿಸುವುವು.
23 : ಏಕೆಂದರೆ ಆಜ್ಞೆಯೇ ಜ್ಯೋತಿ, ಬೋಧನೆಯೇ ಬೆಳಕು, ಶಿಸ್ತಿನಿಂದ ಕೂಡಿದ ಶಿಕ್ಷಣವೇ ಜೀವನಕ್ಕೆ ಮಾರ್ಗ.
24 : ಕೆಟ್ಟ ಹೆಂಗಸರ ಸಹವಾಸದಿಂದ, ಪರಸ್ತ್ರೀಯರ ಮಾತಿನ ಮೋಡಿಯಿಂದ, ಅವು ಕಾಪಾಡಬಲ್ಲವು ನಿನ್ನನ್ನು.
25 : ನಿನ್ನ ಹೃದಯ ಅವಳ ಬೆಡಗನ್ನು ಮೋಹಿಸದಿರಲಿ; ಕಣ್ಣು ಮಿಟುಕಿಸಿ ಅವಳು ನಿನ್ನನ್ನು ವಶಮಾಡಿಕೊಳ್ಳದಿರಲಿ.
26 : ವೇಶ್ಯೆಯನ್ನು ಕೊಂಡುಕೊಳ್ಳಬಹುದು ತುಂಡುರೊಟ್ಟಿಗೆ; ವ್ಯಭಿಚಾರಿಣಿಯೇ ಬೇಟೆಮಾಡುವಳು ನಿನ್ನ ಸಿರಿಪ್ರಾಣಕ್ಕೆ !
27 : ಮಡಿಲಲ್ಲಿ ಬೆಂಕಿಯನ್ನು ಇಟ್ಟುಕೊಂಡರೆ ಬಟ್ಟೆಯನ್ನು ಸುಡದೆ ಸುಮ್ಮನಿರುವುದೆ?
28 : ಧಗ ಧಗಿಸುವ ಕೆಂಡದ ಮೇಲೆ ನಡೆದರೆ ಅಂಗಾಲು ಸುಟ್ಟುಹೋಗದೆ ಇರುವುದೆ?
29 : ಅಂತೆಯೆ ನೆರೆಯವನ ಸತಿಯನ್ನು ಕೂಡುವವನ ಗತಿಯು; ಆಕೆಯನ್ನು ಮುಟ್ಟುವವನು ತಪ್ಪಿಸಿಕೊಳ್ಳನು ದಂಡನೆಯನ್ನು.
30 : ಹಸಿವನ್ನು ನೀಗಿಸಿಕೊಳ್ಳಲು ಕಳವು ಮಾಡಿದರೆ, ಅಷ್ಟು ಹೀಯಾಳಿಸರು ಜನರು ಅಂಥ ಬಡವನನ್ನು.
31 : ಆದರೂ ಕಳವು ಬಯಲಾದರೆ ತೆರಬೇಕಾಗುವುದು ಏಳರಷ್ಟು; ತೆತ್ತೇ ತೀರಿಸಬೇಕಾಗುವುದು ಮನೆಯ ಆಸ್ತಿಪಾಸ್ತಿಯಷ್ಟು.
32 : ವ್ಯಭಿಚಾರಿಯು ಕೇವಲ ಬುದ್ಧಿಶೂನ್ಯನು; ತನ್ನೀ ಕೃತ್ಯದಿಂದ ಸ್ವನಾಶಮಾಡಿಕೊಳ್ಳುವನು.
33 : ಪೆಟ್ಟಿಗೂ ಅಪಕೀರ್ತಿಗೂ ಅವನು ಪಾತ್ರನು; ಅವನಿಗಾಗುವ ಅವಮಾನ ತೊಲಗದು ಎಂದಿಗು.
34 : ಏಕೆಂದರೆ, ಅವಳ ಪತಿಗಾಗುವ ಮತ್ಸರ ಉದ್ರೇಕಗೊಳ್ಳುವುದು; ಕನಿಕರ ತೋರನು, ಮುಯ್ಯಿ ತೀರಿಸುವ ದಿನದಂದು.
35 : ಯಾವ ಪ್ರಾಯಶ್ಚಿತ್ತಕ್ಕೂ ಅವನು ಒಪ್ಪನು; ಎಷ್ಟು ಲಂಚಕೊಟ್ಟರೂ ಒಲಿಯನು, ಮಣಿಯನು.