1 : ಮಗನೇ, ನನ್ನ ಜ್ಞಾನೋಪದೇಶವನ್ನು ಆಲಿಸು; ವಿವೇಕದಿಂದ ಕೂಡಿ ನನ್ನ ಬೋಧೆಗೆ ಕಿವಿಗೊಡು.
2 : ಆಗ ನೀನು ವಿವೇಕಶೀಲನಾಗುವೆ; ನಿನ್ನ ತುಟಿಗಳು ತಿಳುವಳಿಕೆಯನ್ನು ಕಾಯ್ದುಕೊಳ್ಳುವುವು.
3 : ವ್ಯಭಿಚಾರಿಣಿಯ ತುಟಿಗಳು ಜೇನುಗರೆಯುತ್ತವೆ; ಎಣ್ಣೆಗಿಂತ ಮೃದು ಅವಳ ವಾಣಿ.
4 : ಕಡೆಗೆ ಅವಳು ಕಹಿ ಮಾಚಿಪತ್ರೆಯಂತೆ, ಹರಿತವಾದ ಇಬ್ಬಾಯಿ ಕತ್ತಿಯಂತೆ.
5 : ಅವಳ ಕಾಲುಗಳು ಮರಣದತ್ತ ಇಳಿಯುತ್ತವೆ, ಹೆಜ್ಜೆಗಳು ಪಾತಾಳದತ್ತ ಕೊಂಡೊಯ್ಯುತ್ತವೆ.
6 : ಜೀವಮಾರ್ಗದ ವಿವೇಚನೆ ಅವಳಿಗಿಲ್ಲ. ಅದರ ಅರಿವೂ ಅವಳಿಗಿರುವುದಿಲ್ಲ. ಅವಳ ನಡತೆಯು ಅಷ್ಟು ಚಂಚಲ.
7 : ಇಂತಿರಲು ಮಗನೇ, ನನಗೆ ಕಿವಿಗೊಡು, ನನ್ನ ಮಾತುಗಳನ್ನು ಬಿಟ್ಟು ಅಗಲದಿರು.
8 : ಅವಳಿಂದ ದೂರವಿರಲಿ ನಿನ್ನ ಮಾರ್ಗ, ಸುಳಿಯದಿರು ಅವಳ ಮನೆಬಾಗಿಲ ಹತ್ತಿರ.
9 : ನಿನ್ನ ಪುರುಷತ್ವ ಪರಾಧೀನವಾದೀತು, ಎಚ್ಚರಿಕೆ! ನಿನ್ನ ಆಯುಷ್ಯ ಕ್ರೂರಿಗಳವಶವಾದೀತು, ಜೋಕೆ!
10 : ನಿನ್ನ ಸಿರಿಸಂಪತ್ತು ಪರರ ಮನೆ ತುಂಬೀತು, ನಿನ್ನ ದುಡಿಮೆಯ ಫಲ ಅನ್ಯನ ಮನೆಸೇರೀತು!
11 : ಕಟ್ಟ ಕಡೆಗೆ ನಿನ್ನ ದೇಹವೆಲ್ಲ ಕರಗಿಹೋದೀತು; ಅಂಗಲಾಚಿ ನೀ ಕೊರಗಬೇಕಾದೀತು ಇಂತೆಂದು:
12 : “ಅಕಟಕಟಾ ಶಿಸ್ತನ್ನೇ ನಾನು ದ್ವೇಷಿಸಿದೆನಲ್ಲಾ! ನನಗೆ ಕೊಡಲಾದ ತಿದ್ದುಪಾಟನ್ನು ತಾತ್ಸಾರಮಾಡಿದೆನಲ್ಲಾ!
13 : ಗುರುಗಳ ಮಾತನ್ನು ಗಮನಿಸದೆ ಹೋದೆನಲ್ಲಾ!
14 : ದೇವಜನರ ಸಭೆಕೂಟಗಳಲ್ಲಿ ಎಲ್ಲಾ ತರದ ನಿಂದೆ ಆಪಾದನೆಗಳಿಗೆ ಗುರಿಯಾದೆನಲ್ಲಾ!”
15 : ನಿನ್ನ ಸ್ವಂತ ಕೊಳದ ನೀರನ್ನೇ ಸೇವಿಸು, ನಿನ್ನ ಬಾವಿಯಿಂದ ಉಕ್ಕಿಬರುವ ಜಲವನ್ನೇ ಕುಡಿ.
16 : ನಿನ್ನ ಬುಗ್ಗೆ ಹೊರಗೆ ಹೋಗುವುದು ಸರಿಯೇ? ನಿನ್ನ ಕಾಲುವೆ ಬೀದಿಚೌಕಗಳಲ್ಲಿ ಹರಡಿಕೊಳ್ಳುವುದು ಹಿತವೇ?
17 : ಅವು ನಿನಗೊಬ್ಬನಿಗೇ ಮೀಸಲಾಗಿರಲಿ; ನಿನ್ನೊಡನೆ ಬೇರೊಬ್ಬನ ಪಾಲಾಗದಿರಲಿ;
18 : ನಿನ್ನ ಬುಗ್ಗೆ ದೇವರಿಂದ ಆಶೀರ್ವಾದ ಹೊಂದಲಿ, ನಿನ್ನ ಆನಂದ ನಿನ್ನ ಯೌವ್ವನ ಕಾಲದ ಹೆಂಡತಿಯಲ್ಲಿರಲಿ.
19 : ಆಕೆ ಮನೋಹರವಾದ ಹರಿಣಿ, ಸುಂದರವಾದ ಜಿಂಕೆಮರಿ, ಆಕೆಯ ಸ್ತನಗಳು ನಿನ್ನನ್ನು ಸರ್ವದಾ ತೃಪ್ತಿಪಡಿಸಲಿ, ಆಕೆಯ ಒಲವಿನಲ್ಲೇ ಸದಾ ತಲ್ಲೀನನಾಗಿರು.
20 : ಮಗನೇ, ಪರಸ್ತ್ರೀಯಲ್ಲಿ ಭ್ರಮೆ ಏಕೆ? ಅನ್ಯಳ ಎದೆ ತಬ್ಬಿಕೊಳ್ಳುವುದೇಕೆ?
21 : ನರನ ಮಾರ್ಗ ಸರ್ವೇಶ್ವರನ ಕಣ್ಣಿಗೆ ಮರೆಯಲ್ಲ; ಆತ ವೀಕ್ಷಿಸುತ್ತಾನೆ ಮನುಷ್ಯನ ನಡತೆಯನ್ನೆಲ್ಲಾ.
22 : ದುರುಳನನ್ನು ಅವನ ದ್ರೋಹಗಳೆ ಆಕ್ರಮಿಸುತ್ತವೆ; ಅವನ ಪಾಪಪಾಶಗಳೇ ಅವನನ್ನು ಬಂಧಿಸುತ್ತವೆ.
23 : ಅವನು ಶಿಸ್ತುಪಾಲನೆಯಿಲ್ಲದೆ ನಾಶವಾಗುತ್ತಾನೆ; ಅತಿ ಮೂರ್ಖತನದಿಂದಲೇ ಮೋಸಹೋಗುತ್ತಾನೆ.