1 : ಮಕ್ಕಳೇ, ತಂದೆಯ ಉಪದೇಶವನ್ನು ಕೇಳಿರಿ; ವಿವೇಕ ಸಂಪಾದನೆಯತ್ತ ಗಮನ ಕೊಡಿರಿ.
2 : ನಾನು ನಿಮಗೆ ನೀಡುವುದು ಸದುಪದೇಶ; ನೀವು ಅದನ್ನು ಕೈ ಬಿಡಬೇಡಿ.
3 : ನಾನೂ ಕೂಡ ತಂದೆಗೆ ಒಬ್ಬ ಚಿಕ್ಕ ಮಗುವಾಗಿದ್ದೆ, ತಾಯಿಗೆ ಏಕೈಕ ಕುಮಾರನೂ ಕೋಮಲನೂ ಆಗಿದ್ದೆ.
4 : ತಂದೆ ನನಗೆ ಹೀಗೆಂದು ಬೋಧನೆ ಮಾಡಿದ: “ನನ್ನ ಮಾತುಗಳು ಭದ್ರವಾಗಿರಲಿ ನಿನ್ನ ಮನದಲ್ಲಿ; ನನ್ನ ಆಜ್ಞೆಗಳನ್ನು ಕೈಗೊಂಡು ಬಾಳು ಸುಖದಲ್ಲಿ.
5 : ಮರೆಯಬೇಡ, ನನ್ನ ಮಾತಿಗೆ ಓರೆಯಾಗಬೇಡ, ಜ್ಞಾನವನ್ನು ಪಡೆ, ವಿವೇಕವನ್ನು ಗಳಿಸಿಕೊ.
6 : ಜ್ಞಾನವನ್ನು ಕೈಬಿಡದಿದ್ದರೆ, ಅದು ನಿನ್ನನ್ನು ಕಾಪಾಡುವುದು; ನೀನದನ್ನು ಪ್ರೀತಿಸಿದೆಯಾದರೆ, ಅದು ನಿನ್ನನ್ನು ಕಾಯುವುದು.
7 : ಜ್ಞಾನ ಪಡೆಯಬೇಕೆಂಬುದೇ ಜ್ಞಾನಬೋಧೆಯ ಮೂಲಾಂಶ; ನಿನ್ನ ಸರ್ವಸಂಪತ್ತಿನಿಂದ ವಿವೇಕವನ್ನು ಗಳಿಸಿಕೊ.
8 : ಜ್ಞಾನವೆಂಬಾಕೆಯನ್ನು ಶ್ರೇಷ್ಠಳೆಂದು ಭಾವಿಸಿದೆಯಾದರೆ, ಆಕೆ ನಿನ್ನನ್ನು ಸನ್ಮಾನಿಸುವಳು. ನೀನು ಅವಳನ್ನು ಅಪ್ಪಿಕೊಂಡೆಯಾದರೆ, ಆಕೆ ನಿನ್ನನ್ನು ಘನಪಡಿಸುವಳು.
9 : ಅಂದದ ಪುಷ್ಪಮಾಲೆಯನ್ನು ಹಾಕುವಳು ನಿನ್ನ ಕೊರಳಿಗೆ, ಸುಂದರ ಕಿರೀಟವನ್ನು ಮುಡಿಸುವಳು ನಿನ್ನ ತಲೆಗೆ.”
10 : ಮಗನೇ, ನನ್ನ ಮಾತುಗಳನ್ನು ಆಲಿಸಿ ಕೇಳು; ಕೇಳಿದೆಯಾದರೆ ಹೆಚ್ಚುವುವು ನಿನ್ನ ಜೀವನದ ವರ್ಷಗಳು.
11 : ಜ್ಞಾನಮಾರ್ಗವನ್ನು ನಿನಗೆ ಉಪದೇಶಿಸುವೆನು, ಸತ್ಯಮಾರ್ಗದಲ್ಲಿ ನಿನ್ನನ್ನು ನಡೆಸುವೆನು.
12 : ನಡೆಯುವಾಗ ನಿನ್ನ ಹೆಜ್ಜೆಗೆ ತಡೆಯಾಗದು, ನೀ ಓಡುವಾಗ ಮುಗ್ಗರಿಸಿ ಬೀಳಲಾಗದು.
13 : ಸದುಪದೇಶವನ್ನು ಬಿಗಿ ಹಿಡಿದುಕೊ; ಅದೇ ನಿನ್ನ ಜೀವ, ಅದನ್ನು ಕಾಪಾಡಿಕೊ; ಅದೇ ನಿನ್ನ ಜೀವ, ಅದನ್ನು ಕಾಪಾಡಿಕೊ.
14 : ದುಷ್ಟರ ಸಂಘದಲ್ಲಿ ಸೇರಬೇಡ, ಕೆಟ್ಟವರ ಹಾದಿಯಲ್ಲಿ ಕಾಲಿಡಬೇಡ.
15 : ಆ ದುಮಾರ್ಗದಿಂದ ಓರೆಯಾಗು, ದೂರವಾಗು; ಅದರಲ್ಲಿ ನಡೆಯದೆ ಮುಂದಕ್ಕೆ ಸಾಗು.
16 : ಕೇಡು ಮಾಡದಿದ್ದರೆ ಆ ದುರುಳರಿಗೆ ನಿದ್ರೆಬಾರದು, ವಂಚಿಸಿ ಬೀಳಿಸದಿದ್ದರೆ ಅವರಿಗೆ ನಿದ್ರೆ ಹತ್ತದು.
17 : ದುಷ್ಟತನವೇ ಅವರಿಗೆ ಅನ್ನ ಆಹಾರ; ಹಿಂಸಾಚಾರವೇ ಅವರಿಗೆ ಮದುಪಾನ.
18 : ಸಜ್ಜನರ ಮಾರ್ಗ ಪ್ರಾತಃಕಾಲದ ಬೆಳಕಿನಂತೆ; ಅದರ ಬೆಳಕು ಹೆಚ್ಚುತ್ತಿರುತ್ತದೆ ಬಟ್ಟ ಹಗಲವರೆಗೆ.
19 : ದುರ್ಜನರ ಮಾರ್ಗ ಕಗ್ಗತ್ತಲಿನ ಹಾಗೆ, ಎಡವಿಬಿದ್ದ ಸ್ಥಳವೇ ತಿಳಿಯದು ಅವರಿಗೆ.
20 : ಮಗನೇ, ನನ್ನ ಮಾತನ್ನು ಆಲಿಸು, ನನ್ನ ನುಡಿಗಳಿಗೆ ಕಿವಿಗೊಡು.
21 : ಅವು ನಿನ್ನ ಕಣ್ಣಿಗೆ ಮರೆಯಾಗದಿರಲಿ, ನಿನ್ನ ಹೃದಯದೊಳಗೆ ಭದ್ರವಾಗಿರಲಿ.
22 : ಕಂಡುಹಿಡಿಯಬಲ್ಲವನಿಗೆ ಅವು ಜೀವದಾಯಕ; ಇಡೀ ದೇಹಕ್ಕೆ ಅವು ಆರೋಗ್ಯಕರ.
23 : ನಿನ್ನ ಹೃದಯವನ್ನು ಕಾಪಾಡು ಜಾಗರೂಕತೆಯಿಂದ; ಏಕೆಂದರೆ ಜೀವಧಾರೆ ಹೊರಡುವುದು ಅದರಿಂದ.
24 : ಸೊಟ್ಟಮಾತುಗಳನ್ನು ನಿನ್ನಿಂದ ತೊಲಗಿಸು, ಕೆಟ್ಟನುಡಿಗಳನ್ನು ಬಾಯಿಂದ ದೂರಮಾಡು.
25 : ನಿನ್ನ ಕಣ್ಣುಗಳು ನೇರವಾಗಿ ನಾಟಿರಲಿ, ಕಣ್ಣು ರೆಪ್ಪೆಗಳು ಮುಂದಾಗಿ ತೆರೆದಿರಲಿ.
26 : ನೀ ನಡೆವ ದಾರಿ ಸಮನಾಗಿರಲಿ, ನೀ ಕೈಗೊಳ್ಳುವ ಹಾದಿ ದೃಢವಾಗಿರಲಿ.
27 : ತಿರುಗಬೇಡ ಎಡಕ್ಕಾಗಲಿ, ಬಲಕ್ಕಾಗಲಿ; ಕೇಡಿನಿಂದ ನಿನ್ನ ಕಾಲು ದೂರವಿರಲಿ.