1 : ನಾಳೆ ಕುರಿತು ಕೊಚ್ಚಿಕೊಳ್ಳಬೇಡ; ಇಂದು ಒದಗಲಿರುವುದೇ ನಿನಗೆ ತಿಳಿದಿಲ್ಲ.
2 : ನಿನ್ನ ಬಾಯಿ ಅಲ್ಲ, ಬೇರೆಯವರು ಹೊಗಳಲಿ ನಿನ್ನ; ಆತ್ಮಸ್ತುತಿ ಸಲ್ಲ, ಅನ್ಯರು ಸ್ತುತಿಸಲಿ ನಿನ್ನ.
3 : ಕಲ್ಲು ಭಾರ, ಮರಳು ಭಾರ, ಮೂಢನ ರೇಗಾಟ ಇವೆರಡಕ್ಕೂ ಬಲುಭಾರ.
4 : ಕೋಪವು ಕ್ರೂರ, ಕ್ರೋಧವು ಪ್ರವಾಹ, ಮತ್ಸರದ ಮುಂದೆ ನಿಲ್ಲಬಲ್ಲವರಾರು?
5 : ಮರೆಯಾದ ಪ್ರೀತಿಗಿಂತ ಬಹಿರಂಗವಾದ ಗದರಿಕೆ ಲೇಸು.
6 : ಮಿತ್ರನು ಕೊಡುವ ಗುದ್ದು ಹಿತಕರ; ಶತ್ರುವು ಕೊಡುವ ಮುದ್ದು ಮೋಸಕರ.
7 : ಹೊಟ್ಟೆ ತುಂಬಿದವನಿಗೆ ಜೇನುಕೊಟ್ಟರೂ ಕಹಿ; ಹೊಟ್ಟೆ ಹಸಿದವನಿಗೆ ಏನು ಕೊಟ್ಟರು ಸಿಹಿ.
8 : ಮನೆಬಿಟ್ಟು ಅಲೆಯುವ ವ್ಯಕ್ತಿ, ಗೂಡುಬಿಟ್ಟು ಅಲೆಯುವ ಹಕ್ಕಿ.
9 : ತೈಲ, ಸುಗಂಧ ದ್ರವ್ಯಗಳು ಮನೋಹರ; ಮಿತ್ರನ ಆದರಣೆ, ಸಲಹೆ ಅತಿ ಮಧುರ.
10 : ನಿನಗೂ ನಿನ್ನ ಹೆತ್ತವನಿಗೂ ಮಿತ್ರನಾದವನನ್ನು ಬಿಡಬೇಡ; ಇಕ್ಕಟ್ಟಿನ ದಿನದಲ್ಲಿ ಒಡ ಹುಟ್ಟಿದವರನ್ನು ಆಶ್ರಯಿಸಬೇಡ; ದೂರವಿರುವ ಅಣ್ಣನಿಗಿಂತ ಹತ್ತಿರವಿರುವ ನೆರೆಯವನೆ ಲೇಸು.
11 : ಮಗನೇ, ಜ್ಞಾನಗಳಿಸಿ ನನ್ನ ಮನಸ್ಸನ್ನು ಸಂತೋಷಪಡಿಸು; ಆಗ ನನ್ನ ನಿಂದಕರಿಗೆ ಸರಿಯಾದ ಉತ್ತರ ಸಿಕ್ಕುವುದು.
12 : ಜಾಣ ಕೇಡನ್ನು ಕಂಡು ಅಡಗಿಕೊಳ್ಳುತ್ತಾನೆ; ಕೋಣ ಮುನ್ನುಗ್ಗಿ ಹಾನಿಗೆ ಈಡಾಗುತ್ತಾನೆ.
13 : ಅಪರಿಚಿತನಿಗೆ ಹೊಣೆಯಾದವನ ಬಟ್ಟೆ ಕಿತ್ತುಕೊ; ಅಪರಿಚಿತಳಿಗೆ ಹೊಣೆ ನಿಲ್ಲುವವನನ್ನೆ ಒತ್ತೆ ಇಟ್ಟುಕೊ.
14 : ಮುಂಜಾನೆಯೆ ಅಬ್ಬರದಿಂದ ನೆರೆಯವನನ್ನು ಎಬ್ಬಿಸಿ ಮಾಡುವ ಆಶೀರ್ವಾದ, ಶಾಪವೆಂದೇ ಪರಿಗಣಿಸಲ್ಪಡುವುದು.
15 : ತಂಟೆ ಮಾಡುವ ಹೆಂಡತಿ ತಟತಟನೆ ತೊಟ್ಟಿಕ್ಕುವ ಹನಿ.
16 : ಅಂಥವಳನ್ನು ಅಡಗಿಸಬಲ್ಲವನು ಗಾಳಿಯನ್ನು ಅಡಗಿಸಬಲ್ಲ, ಕೈ ಎಣ್ಣೆ ಜಿಡ್ಡನ್ನೂ ಬಿಗಿಹಿಡಿಯಬಲ್ಲ.
17 : ಕಬ್ಬಿಣ ಕಬ್ಬಿಣವನ್ನು ಹರಿತ ಮಾಡುವಂತೆ ಮಿತ್ರನು ಮಿತ್ರನ ಬುದ್ಧಿಯನ್ನು ಹರಿತ ಮಾಡಬಲ್ಲ.
18 : ಅಂಜೂರವನ್ನು ಕಾಯುವವನು ಅದರ ಹಣ್ಣನ್ನು ತಿನ್ನುವನು; ಯಜಮಾನನನ್ನು ಕಾಯುವವನು ಸನ್ಮಾನವನ್ನು ಸವಿಯುವನು.
19 : ನೀರು ಮುಖಕ್ಕೆ ಮುಖವನ್ನು ಪ್ರತಿಬಿಂಬಿಸುತ್ತದೆ; ಹೃದಯ ಮನುಷ್ಯನಿಗೆ ಮನುಷ್ಯನನ್ನು ತೋರ್ಪಡಿಸುತ್ತದೆ.
20 : ನರಕ ಪಾತಾಳಗಳಿಗೆ ತೃಪ್ತಿಯೇ ಇಲ್ಲ; ಮನುಷ್ಯನ ಕಣ್ಣುಗಳಿಗೂ ತೃಪ್ತಿಯಿಲ್ಲ.
21 : ಬೆಳ್ಳಿಬಂಗಾರಗಳಿಗೆ ಪುಟಕುಲುಮೆಗಳಿಂದ ಶೋಧನೆ; ಮನುಷ್ಯನಿಗೆ ತನ್ನ ಸ್ತುತಿಕೀರ್ತಿಯಿಂದ ಪರಿಶೋಧನೆ.
22 : ಮೂರ್ಖನನ್ನು ಕಾಳಿನ ಸಂಗಡ ಒರಳಿಗೆ ಹಾಕಿ ಒನಕೆಯಿಂದ ಕುಟ್ಟಿದರೂ ಮೂರ್ಖತನ ತೊಲಗದು.
23 : ನಿನ್ನ ಹಿಂಡುಗಳ ಪರಿಸ್ಥಿತಿಯನ್ನು ತಿಳಿದುಕೊ; ನಿನ್ನ ಮಂದೆಗಳನ್ನು ಚೆನ್ನಾಗಿ ನೋಡಿಕೊ.
24 : ಸಿರಿಸಂಪತ್ತು ಶಾಶ್ವತವಲ್ಲ; ಕಿರೀಟ ತಲತಲಾಂತರಕ್ಕೂ ಇರುವುದಿಲ್ಲ.
25 : ಹುಲ್ಲು ಕೊಯ್ದು ತಂದೆಮೇಲೆ, ಗುಡ್ಡದ ಸೊಪ್ಪು ಕೂಡಿಸಿಟ್ಟ ಮೇಲೆ, ಹಸಿ ಹುಲ್ಲು ಚಿಗುರುತ್ತದೆ.
26 : ಕುರಿಗಳಿಂದ ನಿನ್ನ ಬಟ್ಟೆ ಬರೆ; ಆಡುಗಳಿಂದ ನಿನ್ನ ಹೊಲಗದ್ದೆ.
27 : ನಿನ್ನ, ನಿನ್ನ ಮನೆಯವರ ಊಟ ತಿಂಡಿಗೆ, ನಿನ್ನ ದಾಸಿಯರ ಜೀವನಕ್ಕೆ ಮೇಕೆಗಳ ಹಾಲೇ ಸಾಕು.