1 : ಬೇಸಿಗೆಯಲ್ಲಿ ಮಂಜು ಬೀಳುತ್ತದೆಯೇ? ಸುಗ್ಗಿಯಲ್ಲಿ ಮಳೆ ಬರುತ್ತದೆಯೇ? ಹಾಗೆಯೆ ಬುದ್ಧಿಹೀನನಿಗೆ ತೋರುವ ಮಾನಮರ್ಯಾದೆ.
2 : ಕುಪ್ಪಳಿಸುವ ಗುಬ್ಬಿಯಂತೆ, ಹಾರಾಡುವ ಬಾನಕ್ಕಿಯಂತೆ, ಕಾರಣವಿಲ್ಲದೆ ಕೊಟ್ಟ ಶಾಪ ಗಾಳಿ ಪಾಲಾಗುತ್ತದೆ.
3 : ಕುದುರೆಗೆ ಚಬುಕು, ಕತ್ತೆಗೆ ಕಡಿವಾಣ, ಮೂಢನಿಗಾದರೊ ಬೆನ್ನಿಗೆ ಬೆತ್ತ.
4 : ಮೂಢನ ಪ್ರಶ್ನೆಗೆ ಉತ್ತರಕೊಡಬೇಡ; ಮೂರ್ಖನಂತೆ ಕೊಟ್ಟರೆ ನೀನೂ ಆದಿಯೇ ಅವನಂತೆ.
5 : ಮೂಢನಿಗೆ ಅವನ ಮೂರ್ಖತನ ತಿಳಿಯುವಂತೆ ಉತ್ತರಕೊಡು; ಇಲ್ಲವಾದರೆ ತನ್ನನ್ನೆ ಜ್ಞಾನಿಯೆಂದು ಎಣಿಸಿಕೊಂಡಾನು.
6 : ಮೂಢನನ್ನು ದೂತನನ್ನಾಗಿ ಕಳುಹಿಸುವವನು ತನ್ನ ಕಾಲನ್ನು ತಾನೆ ಕಡಿದುಕೊಳ್ಳುವನು, ತನ್ನ ಕೇಡನ್ನು ತಾನೆ ಕುಡಿಯುವನು.
7 : ತುಂಟ ಆಡುವ ಜ್ಞಾನೋಕ್ತಿಯು ಕುಂಟ ಕಾಲಿನ ಜೋಲಾಟವು.
8 : ಮೂಢನಿಗೆ ಕೊಡುವ ಮಾನ ಕವಣೆಗೆ ಕಟ್ಟಿದ ಕಲ್ಲು.
9 : ಮೂಢನ ಬಾಯಿಗೆ ಸಿಕ್ಕಿದ ಜ್ಞಾನೋಕ್ತಿಯು ಕುಡುಕನ ಕೈಗೆ ಸಿಕ್ಕಿದ ಮುಳ್ಳುಗೋಲು.
10 : ಮೂಢರನ್ನೂ ದಾರಿಹೋಕರನ್ನೂ ಕೂಲಿಗೆ ಕರೆಯುವವನು ಯಾರಿಗಾದರೂ ತಗಲಲಿ ಎಂದು ಬಾಣ ಎಸೆಯುವವನಿಗೆ ಸಮಾನ.
11 : ನಾಯಿ ತಾನು ಕಕ್ಕಿದ್ದನ್ನು ನೆಕ್ಕಲು ತಿರುಗಿ ಬರುವುದು; ಮೂಢನು ತಾನು ಮಾಡಿದ ಮೂರ್ಖತನಕ್ಕೆ ಹಿಂದಿರುಗುವನು.
12 : ತಾನೇ ಜ್ಞಾನಿಯೆಂದು ಎಣಿಸಿಕೊಳ್ಳುವವನನ್ನು ನೋಡು; ಅಂಥವನಿಗಿಂತ ಮೂಢನ ಸುಧಾರಣೆ ಹೆಚ್ಚು ಸಾಧ್ಯ.
13 : “ಬೀದಿಯಲ್ಲಿದೆ, ಹೊರಗೆ ಓಡಾಡುತ್ತಿದೆ ಸಿಂಹ”, ಇದು ಮೈಗಳ್ಳನ ಪಿಳ್ಳೆಯ ನೆವ.
14 : ಕೀಲುಗುಣಿಯಲ್ಲಿ ಬಾಗಿಲು ತಿರುಗುವಂತೆ ಸುತ್ತಾಡುತ್ತಾನೆ ಸೋಮಾರಿ ಹಾಸಿಗೆಯಲ್ಲೆ.
15 : ಮೈಗಳ್ಳ ಕೈಹಾಕುತ್ತಾನೆ ತುತ್ತಿಗೆ, ಅದನ್ನು ಬಾಯಿಗೆ ಎತ್ತಲಾರದಷ್ಟು ಆಯಾಸ ಅವನಿಗೆ.
16 : ವಿವೇಕದಿಂದ ಉತ್ತರಿಸಬಲ್ಲ ಏಳು ಬುದ್ಧಿವಂತರಿಗಿಂತ ತಾನೇ ಜ್ಞಾನಿ ಎಂದುಕೊಳ್ಳುತ್ತಾನೆ ಸೋಮಾರಿ.
17 : ಬೇರೆಯವರ ವ್ಯಾಜ್ಯದಲ್ಲಿ ತಲೆಹಾಕುವವನು ಬೀದಿ ನಾಯಿಯ ಬಾಲಎಳೆದ ದಾರಿ ಹೋಕನಿಗೆ ಸಮಾನನು;
18 : ನೆರೆಯವನನ್ನು ಮೋಸಗೊಳಿಸಿ “ತಮಾಷೆಗಾಗಿ ಮಾಡಿದೆ” ಎನ್ನುವನವನು
19 : ಬೆಂಕಿಕೊಳ್ಳಿಗಳನ್ನೂ ಕೊಲ್ಲುವ ಬಾಣಗಳನ್ನೂ ಬೀರುವ ದೊಡ್ಡ ಹುಚ್ಚನಿಗೆ ಸಮಾನನು.
20 : ಸೌದೆಯಿಲ್ಲದಿದ್ದರೆ ಬೆಂಕಿ ಆರುವುದು; ಚಾಡಿಕೋರನಿಲ್ಲದಿದ್ದರೆ ಜಗಳ ಶಮನವಾಗುವುದು.
21 : ಕೆಂಡಕ್ಕೆ ಇದ್ದಲುಬೇಕು, ಬೆಂಕಿಗೆ ಸೌದೆ ಬೇಕು; ವ್ಯಾಜ್ಯ ಕೆರಳಿಸಲು ಜಗಳಗಂಟಿ ಇರಲೇಬೇಕು.
22 : ಚಾಡಿಕೋರನ ಮಾತು ರುಚಿಕರವಾದ ತುತ್ತು; ಹೊಟ್ಟೆಯೊಳಕ್ಕೆ ಗುಳುಕ್ಕನೆ ಇಳಿಯುತ್ತದೆ ಅದು.
23 : ಕೆಟ್ಟ ಹೃದಯದಿಂದ ಸವಿನುಡಿಯು ತುಟಿ, ಬೆಳ್ಳಿ ಮೆರುಗಿನಿಂದ ಥಳಿಸುವ ಮಣ್ಣಿನ ಬೋಕಿ.
24 : ಹಗೆಗಾರನ ತುಟಿಯಲ್ಲಿ ಸ್ನೇಹಭಾವದ ನಟನೆ; ಹೊಟ್ಟೆಯಲ್ಲಾದರೊ ಹುದುಗಿದ ವಂಚನೆ.
25 : ಹಗೆಗಾರ ಸವಿನುಡಿದರೂ ನಂಬಬೇಡ; ಹೃದಯದಲ್ಲಿದೆ ಏಳ್ಮಡಿ ಹೇಯ ಕೃತ್ಯ.
26 : ಹಗೆಯನ್ನು ವಂಚನೆಯಿಂದ ಮರೆಮಾಚಿದ್ದರೂ ಸಭೆಯಲ್ಲಿ ಕೆಟ್ಟತನ ಬಟ್ಟಬಯಲಾಗದಿರದು.
27 : ಗುಂಡಿಯನ್ನು ತೋಡುವವನು ತಾನೇ ಅದರಲ್ಲಿ ಬೀಳುವನು; ಹೊರಳಿಸುವವನ ಮೇಲೆಯೆ ಗುಂಡು ಹೊರಳುವುದು.
28 : ಸುಳ್ಳುನಾಲಿಗೆ ಹಗೆಮಾಡುತ್ತದೆ ಸತ್ಯವನ್ನು; ಹೊಗಳುಭಟ್ಟನ ಬಾಯಿ ತರುತ್ತದೆ ನಷ್ಟವನ್ನು.