1 : ಇವು ಕೂಡ ಸೊಲೊಮೋನನ ಜ್ಞಾನೋಕ್ತಿಗಳು: ಜುದೇಯದ ಅರಸ ಹಿಜ್ಕೀಯನ ಲೇಖಕರು ಸಂಗ್ರಹಿಸಿದ ನುಡಿಗಳು:
2 : ವಿಷಯಗಳನ್ನು ರಹಸ್ಯವಾಗಿಡುವ ದೇವರಿಗೆ ಮಹಿಮೆ; ವಿಷಯಗಳನ್ನು ವಿಮರ್ಶಿಸುವ ರಾಜರಿಗೆ ಹಿರಿಮೆ.
3 : ಆಕಾಶವು ಉನ್ನತ, ಭೂಮಿಯು ಅಗಾಧ, ಅಂತೆಯೇ ರಾಜರ ಮನಸ್ಸು ಅಗೋಚರ.
4 : ಬೆಳ್ಳಿಯಿಂದ ಕಲ್ಮಷವನ್ನು ತೆಗೆದು ಹಾಕಿದರೆ ಅಕ್ಕಸಾಲಿಗನಿಗೆ ದಕ್ಕುವುದು ಚೊಕ್ಕ ಒಡವೆ.
6 : ರಾಜನ ಸನ್ನಿಧಾನದಲ್ಲಿ ನಿನ್ನನ್ನೇ ಹೆಚ್ಚಿಸಿಕೊಳ್ಳಬೇಡ; ದೊಡ್ಡವರಿಗೆ ಏರ್ಪಡಿಸಿದ ಸ್ಥಾನದಲ್ಲಿ ನಿಂತುಕೊಳ್ಳಬೇಡ.
7 : ಘನವಂತರ ಮುಂದೆ ಕೆಳಗಣ ಸ್ಥಾನಕ್ಕೆ ನೂಕಿಸಿಕೊಳ್ಳುವುದಕ್ಕಿಂತ “ಇನ್ನೂ ಮೇಲಕ್ಕೆ ಬಾ” ಎಂದು ಕರೆಸಿಕೊಳ್ಳುವುದು ಲೇಸು.
8 : ದುಡುಕಿ ನೆರೆಯವನ ಮೇಲೆ ವ್ಯಾಜ್ಯಕ್ಕೆ ಓಡಬೇಡ; ಕಡೆಗೆ ಅವನು ನಿನ್ನ ಮಾನಕಳೆದಾಗ ಏನು ಮಾಡುವೆ, ಯೋಚಿಸು
9 : ವ್ಯಾಜ್ಯವನ್ನು ನೆರೆಯವನ ಸಂಗಡವೆ ಚರ್ಚಿಸಿ ತೀರ್ಮಾನಿಸಿಕೊ; ನೆರೆಹೊರೆಯವರ ಗುಟ್ಟನ್ನು ಬಯಲು ಮಾಡಬೇಡ.
10 : ಬಯಲು ಮಾಡಿದರೆ ಕೇಳುವವನು ನಿನ್ನನ್ನೆ ಅವಮಾನ ಗೊಳಿಸಾನು, ನಿನಗೆ ಬರುವ ಅಪಕೀರ್ತಿ ಅಳಿಯದೆ ಉಳಿದೀತು.
11 : ಸಮಯೋಚಿತ ಮಾತು ಬೆಳ್ಳಿ ತಟ್ಟೆಯಲ್ಲಿ ಖಚಿತವಾದ ಬಂಗಾರದ ಹಣ್ಣು.
12 : ಕೇಳುವ ಕಿವಿಗೆ ಕೊಡುವ ಬುದ್ಧಿವಾದವು ಹೊನ್ನಿನ ಮುರುವು, ಅಪರಂಜಿಯ ಆಭರಣವು.
13 : ಸುಗ್ಗಿಯ ಕಾಲದಲ್ಲಿ ಹಿಮದ ತಂಪು ಹೇಗೋ ಹಾಗೆ ಕಳುಹಿಸುವ ಒಡೆಯನಿಗೆ ಪ್ರಾಮಾಣಿಕ ದೂತನೂ ಹಾಗೆ.
14 : ಗಾಳಿಯಿದೆ, ಮೋಡವಿದೆ, ಆದರೆ ಮಳೆಯಿಲ್ಲ; ಕೊಡದೆಯೆ ತಾನೊಬ್ಬ ದಾನಿಯೆಂದು ಕೊಚ್ಚಿಕೊಳ್ಳುವವನೂ ಹಾಗೆಯೆ.
15 : ಸಹನೆಶೀಲತೆಯಿಂದ ಅರಸನನ್ನೂ ಒಲಿಸಿಕೊಳ್ಳಬಹುದು; ಮೃದುವಾದ ನಾಲಿಗೆ ಎಲುಬನ್ನೂ ಮುರಿಯಬಲ್ಲದು.
16 : ಜೇನು ಸಿಕ್ಕಿದರೆ ಅಳತೆಯಿಂದ ತಿನ್ನು, ಮಿತಿ ಮೀರಿದರೆ ವಾಂತಿಯಾದೀತು.
17 : ಪದೇ ಪದೇ ನೆರೆಯವನ ಮನೆಗೆ ಹೋಗಬೇಡ, ಬೇಸರಗೊಂಡು ನಿನ್ನನ್ನು ಹಗೆಮಾಡಾನು.
18 : ನೆರೆಯವನ ವಿರುದ್ಧ ಸುಳ್ಳುಸಾಕ್ಷಿ ಹೇಳುವವನು ಕೊಡತಿಗೆ, ಕತ್ತಿಗೆ, ಹರಿತವಾದ ಬಾಣಕ್ಕೆ ಸಮಾನನು.
19 : ಕಷ್ಟಕಾಲದಲ್ಲಿ ಕಪಟಿಯನ್ನು ನಂಬುವುದು, ಮುರುಕು ಹಲ್ಲನ್ನು, ಕುಂಟಕಾಲನ್ನು ನಂಬಿದಂತಾಗುವುದು.
20 : ಮನಗುಂದಿದವನಿಗೆ ಸಂಗೀತ ಹಾಡುವುದೆಂದರೆ ಚಳಿಯಲ್ಲಿ ಬಟ್ಟೆ ಬಿಚ್ಚಿದ ಹಾಗೆ, ಉರಿಗಾಯಕ್ಕೆ ಉಪ್ಪು ಹಚ್ಚಿದಂತೆ.
21 : ಹಗೆಯವನು ಹಸಿದಿದ್ದರೆ ಅನ್ನ ನೀಡು, ಬಾಯಾರಿದ್ದರೆ ಕುಡಿಯಲು ಕೊಡು.
22 : ಹೀಗೆ ಅವನ ತಲೆಯಮೇಲೆ ಉರಿಕೆಂಡ ಸುರಿವೆ; ಸರ್ವೇಶ್ವರನಿಂದಲೂ ಪ್ರತಿಫಲ ಪಡೆಯುವೆ.
23 : ಮಳೆ ಬರುವುದು ಪಡುವಣ ಗಾಳಿಯಿಂದ; ಮುಖಕ್ಕೆ ಸಿಟ್ಟು ಬರುವುದು ಚಾಡಿ ನಾಲಿಗೆಯಿಂದ.
24 : ಜಗಳಗಂಟಿಯೊಡನೆ ಮಹಡಿ ಮನೆಯಲ್ಲಿರುವುದಕ್ಕಿಂತ ಗುಡಿಸಿಲಿನ ಮೂಲೆಯಲ್ಲಿ ಒಂಟಿಯಾಗಿ ವಾಸಿಸುವುದು ಲೇಸು.
25 : ದೂರನಾಡಿನಿಂದ ಬಂದ ಶುಭವರದಿ, ದಣಿದ ಪ್ರಾಣಕ್ಕೆ ತಣ್ಣೀರ ತೃಪ್ತಿ.
26 : ದುಷ್ಟರಿಗೆ ಬಿಟ್ಟುಕೊಡುವ ನೀತಿವಂತ ಕೆಸರಿನ ಬುಗ್ಗೆಗೆ, ಕೊಳಕು ಚಿಲುಮೆಗೆ ಸಮಾನ.
27 : ಜೇನನ್ನು ಹೆಚ್ಚಾಗಿ ತಿನ್ನುವುದು ಹಿತವಲ್ಲ, ಗೌರವದ ಮೇಲೆ ಗೌರವ ಬಯಸುವುದು ಸರಿಯಲ್ಲ.
28 : ಆತ್ಮಸ್ವಾಧೀನವಲ್ಲದ ಮನುಷ್ಯ ಗೋಡೆ ಬಿದ್ದು ಕಾವಲಿಲ್ಲದ ಹಾಳೂರು.