Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಜ್ಞಾನೋಕ್ತಿಗಳು


1 : ದ್ರಾಕ್ಷಾರಸದಿಂದ ನಗೆಯಾಟ, ಮಧ್ಯದಿಂದ ಕೂಗಾಟ; ಇವುಗಳಿಂದ ತೂರಾಟಕ್ಕೆ ತುತ್ತಾಗುವವನು ಜ್ಞಾನಿಯಲ್ಲ.
2 : ರಾಜನು ಗರ್ಜಿಸುವ ಸಿಂಹದಂತೆ ಭಯಂಕರನು; ಅವನನ್ನು ಕೆಣಕುವವನು ಪ್ರಾಣಕ್ಕೆ ಅಪಾಯ ತಂದುಕೊಳ್ವನು.
3 : ಕಲಹಕ್ಕೆ ದೂರವಿರುವವನು ಮಾನಕ್ಕೆ ಯೋಗ್ಯನು; ಕಲಹಕ್ಕೆ ಕೈಹಾಕುವ ಪ್ರತಿಯೊಬ್ಬನು ಮೂರ್ಖನು.
4 : ಮೈಗಳ್ಳನು ಮಳೆಗಾಲದಲ್ಲೂ ಹೊಲ ಉಳಲಾರನು; ಸುಗ್ಗಿಕಾಲದಲ್ಲಿ ಅಂಗಲಾಚಿದರೂ ಅವನಿಗೆ ಬೆಳೆಸಿಗಲಾರದು.
5 : ಮಾನವನ ಅಂತರಾಲೋಚನೆಗಳು ಆಳವಾದ ಜಲನಿಧಿ; ವಿವೇಕಿಯಾದ ವ್ಯಕ್ತಿ ಅದನ್ನು ಹೊರತೆಗೆಯಬಲ್ಲ ಸೇದಿ.
6 : ಸ್ನೇಹಿತರೆಂದು ಹೇಳಿಕೊಳ್ಳುವವರು ಬಹುಮಂದಿ; ಆದರೆ ನಂಬಿಗಸ್ತ ಸ್ನೇಹಿತನು ಸಿಗುವುದೆಲ್ಲಿ?
7 : ನಿರ್ದೋಷಿಗಳಾಗಿ ನಡೆಯುತ್ತಾರೆ ನೀತಿವಂತರು; ಅವರು ಗತಿಸಿದ ಮೇಲೂ ಅವರ ಸಂತತಿಯವರು ಭಾಗ್ಯವಂತರು.
8 : ರಾಜನು ನ್ಯಾಯಾಸನದ ಮೇಲೆ ವಿರಾಜಿಸುವಾಗ ಕೆಟ್ಟತನವನ್ನು ತೂರಿಬಿಡುವನು ದೃಷ್ಟಿಯಿಂದ.
9 : “ಹೃದಯವನ್ನು ಪರಿಶುದ್ಧವಾಗಿ ಇಟ್ಟುಕೊಂಡಿದ್ದೇನೆ; ಪಾಪವಿಮುಕ್ತನಾಗಿ ಪವಿತ್ರನಾಗಿದ್ದೇನೆ” ಎಂದು ಹೇಳಬಲ್ಲವನಾರು?
10 : ಕಳ್ಳ ತೂಕಕಲ್ಲುಗಳನ್ನೂ ಕಳ್ಳ ಅಳತೆಪಾತ್ರೆಗಳನ್ನೂ ಬಳಸುವವರನ್ನು ಕಂಡರೆ ಸರ್ವೇಶ್ವರನಿಗೆ ಅಸಹ್ಯ.
11 : ಹುಡುಗನಾದರೂ ನಡತೆಯಲ್ಲೇ ತೋರ್ಪಡಿಸಿಕೊಳ್ಳುವನು ತನ್ನ ಗುಣ ಶುದ್ಧವೋ, ಸತ್ಯವೋ ಎಂಬುದನ್ನು.
12 : ಕೇಳುವ ಕಿವಿ, ನೋಡುವ ಕಣ್ಣು ಇವೆರಡನ್ನು ಉಂಟುಮಾಡಿದವ ಸರ್ವೇಶ್ವರ.
13 : ನಿದ್ದೆಯಲ್ಲೆ ನಿರತನಾಗಿರಬೇಡ, ಬಡವನಾಗಿ ಬಿಡುವೆ. ಕಣ್ಣು ತೆರೆದು ದುಡಿ, ಹೊಟ್ಟೆ ತುಂಬ ಊಟ ಪಡೆವೆ.
14 : ಕೊಳ್ಳುವಾಗ ‘ಅದು ಚೆನ್ನಾಗಿಲ್ಲ, ಇದು ಚೆನ್ನಾಗಿಲ್ಲ’ ಅನ್ನುತ್ತಾನೆ; ಕೊಂಡಾದ ಮೇಲೆ ಮಾಡಿದ ಚೌಕಾಶಿಗಾಗಿ ಹೆಚ್ಚಳ ಪಡುತ್ತಾನೆ.
15 : ಹೊನ್ನು ಉಂಟು, ಹವಳದ ರಾಶಿ ಉಂಟು; ಆದರೆ ತಿಳುವಳಿಕೆಯುಳ್ಳ ತುಟಿಗಳು ಬೆಲೆಮೀರಿದ ಆಭರಣಗಳು.
16 : ಅಪರಿಚಿತನಿಗೆ ಹೊಣೆಯಾದವನ ಬಟ್ಟೆ ಕಿತ್ತುಕೊ; ಅಪರಿಚಿತಳಿಗೆ ಹೊಣೆ ನಿಲ್ಲುವವನನ್ನೆ ಒತ್ತೆ ಇಟ್ಟುಕೊ.
17 : ವಂಚಿಸಿ ಪಡೆದ ಊಟ ಬಲು ರುಚಿ; ಆಮೇಲೆ ಬಾಯಿ ತುಂಬ ಕಲ್ಲುಜಲ್ಲಿ.
18 : ಉದ್ದೇಶಗಳು ಕೈಗೂಡುವುವು ಹಿತಾಲೋಚನೆಯಿಂದ; ಬುದ್ಧಿವಂತರ ಆಲೋಚನೆ ಕೇಳದೆ ಹೂಡಬೇಡ ಯುದ್ಧ.
19 : ಗುಟ್ಟನ್ನು ರಟ್ಟು ಮಾಡದಿರನು ಚಾಡಿಕೋರ; ತುಟಿ ಬಿಗಿಹಿಡಿಯದವನ ಗೊಡವೆ ನಿನಗೆ ಬೇಡ.
20 : ಹೆತ್ತವರನ್ನು ಶಪಿಸುವವನ ದೀಪ ಕಾರಿರುಳಲ್ಲೆ ಆರಿಹೋಗುವುದು ಖಚಿತ.
21 : ಬೇಗಬೇಗನೆ ಬಾಚಿಕೊಂಡ ಮೊದಲ ಸೊತ್ತು, ಕೊನೆಯಲ್ಲಿ ಕಳೆದು ಹೋಗುವುದು ನಿಶ್ಚಿತ.
22 : “ಕೇಡಿಗೆ ಕೇಡು” ಎಂದು ಮುಯ್ಯಿತೀರಿಸುವುದು ಬೇಡ; ಸರ್ವೇಶ್ವರನಲ್ಲಿ ಭರವಸೆಯಿಡು, ಆತ ನಿನ್ನ ಕೈ ಬಿಡ.
23 : ತಾರತಮ್ಯದ ತೂಕದ ಕಲ್ಲು ಸರ್ವೇಶ್ವರನಿಗೆ ಅಸಹ್ಯ; ಮೋಸದ ತಕ್ಕಡಿಯನ್ನು ಬಳಸುವುದು ಸರಿಯಲ್ಲ.
24 : ಮಾನವನ ಸ್ಥಿತಿಗತಿ ಸರ್ವೇಶ್ವರನ ಏರ್ಪಾಡು; ಮನುಷ್ಯ ತನ್ನ ಮಾರ್ಗವನ್ನು ತಾನೇ ಹೇಗೆ ತಿಳಿದಾನು?
25 : ದುಡುಕಿ ದೇವರಿಗೆ ಮುಡಿಕಟ್ಟುವುದು, ಹರಕೆ ಹೊತ್ತ ಮೇಲೆ ವಿಚಾರಮಾಡುವುದು, ಉರುಳಿಗೆ ಸಿಕ್ಕಿಕೊಂಡಂತೆ ಆಗುವುದು.
26 : ಜ್ಞಾನಿಯಾದ ಅರಸ ಚದರಿಸಿಬಿಡುವನು ದುಷ್ಟರನ್ನು; ಅವರ ಮೇಲೆ ಉರುಳಿಸುವನು ಕಣದ ಗುಂಡನ್ನು.
27 : ಮನುಷ್ಯನ ಆತ್ಮ ಸರ್ವೇಶ್ವರನು ಕೊಟ್ಟ ದೀಪ; ಅಂತರಂಗವನ್ನೆಲ್ಲ ಶೋಧಿಸಬಲ್ಲದು ಅದರ ಪ್ರಕಾಶ.
28 : ಪ್ರೀತಿ ಸತ್ಯತೆಗಳು ರಾಜನನ್ನು ಕಾಪಾಡುವ ಕವಚ; ಕರುಣೆಯೇ ಅವನ ಸಿಂಹಾಸನಕ್ಕೆ ಸ್ಥಿರಾಧಾರ.
29 : ಯುವಕರಿಗೆ ಬಲವೆ ಭೂಷಣ; ಮುದುಕರಿಗೆ ನರೆಯೆ ಕಿರೀಟ.
30 : ಗಾಯಗೊಳಿಸುವ ಏಟು ಕೆಟ್ಟದ್ದನ್ನು ತೊಳೆಯಬಲ್ಲ ಮದ್ದು; ಅಂತರಂಗವನ್ನೂ ಮುಟ್ಟಬಲ್ಲದು ಆ ಪೆಟ್ಟು.

· © 2017 kannadacatholicbible.org Privacy Policy