Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಜ್ಞಾನೋಕ್ತಿಗಳು


1 : ಶಿಸ್ತನ್ನು ಹಾರೈಸುವವನು ಶಿಕ್ಷಣ ಪ್ರಿಯನು; ತಿದ್ದುವಿಕೆಯನ್ನು ಹಗೆಮಾಡುವವನು ಪಶುಪ್ರಾಯನು.
2 : ಒಳ್ಳೆಯವನು ಸರ್ವೇಶ್ವರನ ದಯೆಯನ್ನು ಗಳಿಸುವನು; ಕೆಟ್ಟವನ ಕುಯುಕ್ತಿ ದೈವಖಂಡನೆಯನ್ನು ಪಡೆಯುವುದು.
3 : ದುಷ್ಟತನದಿಂದ ಯಾವನೂ ಸ್ಥಿರತೆಯನ್ನು ಗಳಿಸಿಲ್ಲ; ಶಿಷ್ಯನ ಬೇರನ್ನು ಯಾರೂ ಕದಲಿಸುವಂತಿಲ್ಲ.
4 : ಗುಣವಂತ ಸತಿ ಗಂಡನ ತಲೆಗೆ ಕಿರೀಟ; ಲಜ್ಜೆಗೆಟ್ಟ ಹೆಂಡತಿ ಆತನ ಎಲುಬಿಗೆ ಕ್ಷಯ.
5 : ಸತ್ಪುರುಷನ ಉದ್ದೇಶ ನ್ಯಾಯಯುತ; ದುಷ್ಟರ ಆಲೋಚನೆ ಮೋಸಭರಿತ.
6 : ದುರುಳರ ಮಾತು ಜೀವಕ್ಕೆ ಉರುಳು; ಸಜ್ಜನರ ಮಾತು ಪ್ರಾಣಕ್ಕೆ ನೆರವು.
7 : ದುರ್ಜನರು ನೆಲಕ್ಕುರುಳಿ ನಿರ್ಮೂಲರಾಗುವರು; ಸಜ್ಜನರ ತಲೆಮಾರು ಸ್ಥಿರವಾಗಿ ನಿಲ್ಲುವುದು.
8 : ಬುದ್ಧಿವಂತನನ್ನು ಅವರ ಬುದ್ಧಿಗೆ ತಕ್ಕಂತೆ ಜನ ಹೊಗಳುವರು; ವಕ್ರಬುದ್ಧಿಯುಳ್ಳವನನ್ನಾದರೊ ಅವರು ತೆಗಳುವರು.
9 : ಹೊಟ್ಟೆಗಿಲ್ಲದೆ ಜಟ್ಟಿಯೆನಿಸಿಕೊಳ್ಳುವವನಿಗಿಂತ ಕಷ್ಟದಿಂದ ದುಡಿವ ಸಾಧಾರಣ ಬಂಟನೆ ಲೇಸು.
10 : ಒಳ್ಳೆಯವನು ದನಕರುಗಳಿಗೂ ದಯೆತೋರುವನು; ಕೆಟ್ಟವನು ತೋರುವ ಕರುಣೆಯು ಕ್ರೂರತನವಾಗುವುದು.
11 : ಉತ್ತು ವ್ಯವಸಾಯ ಮಾಡುವವನು ಹೊಟ್ಟೆ ತುಂಬ ಉಣ್ಣುವನು; ವ್ಯರ್ಥಕಾರ್ಯಗಳಲ್ಲಿ ಆಸಕ್ತಿಯುಲ್ಳವನು ಮತಿಹೀನನು.
12 : ಕೆಡುಕರ ಕೋಟೆ ಪುಡಿಪುಡಿಯಾಗುವುದು; ಒಳ್ಳೆಯವರ ಬುಡ ಫಲಬಿಡುವುದು.
13 : ಮಾತಿನ ದೋಷದಿಂದ ಕೆಡುಕನು ಬೋನಿಗೆ ಬೀಳುವನು; ನೀತಿವಂತನು ಆಪತ್ತಿನಿಂದ ತಪ್ಪಿಸಿಕೊಳ್ಳುವನು.
14 : ಮಾತುಬಲ್ಲವನು ಬದುಕುವನು ಸಂತುಷ್ಟನಾಗಿ; ಕೈಯಿರುವವನು ಬಾಳುವನು ಬಹುಮಾನಿತನಾಗಿ.
15 : ಮೂರ್ಖನ ನಡತೆ ಸ್ವಂತ ಮೆಚ್ಚುಗೆಗೆ; ಬುದ್ದಿವಂತ ಕಿವಿಗೊಡುವನು ಉಚಿತಾಲೋಚನೆಗೆ.
16 : ಮೂರ್ಖನ ಸಿಟ್ಟು ತಟ್ಟನೆ ರಟ್ಟಾಗುವುದು; ಜಾಣನು ನಿಂದೆಯನ್ನು ಮರೆಮಾಚುವನು.
17 : ಸತ್ಯವಾದಿ ಪ್ರಾಮಾಣಿಕ ಸಾಕ್ಷಿ; ಸುಳ್ಳುಸಾಕ್ಷಿ ಕಪಟ ವಾಚಾಳಿ.
18 : ಕತ್ತಿ ಇರಿತದಂತೆ ದುಡುಕನ ಮಾತು; ಹುಣ್ಣಿಗೆ ಮದ್ದುಹಾಕಿದಂತೆ ಜ್ಞಾನಿಗಳ ಮಾತು.
19 : ಸತ್ಯವಾದಿಯ ಮಾತು ಶಾಶ್ವತ; ಮಿಥ್ಯವಾದಿಯ ಮಾತು ಕ್ಷಣಿಕ.
20 : ಕೇಡನ್ನು ಕಲ್ಪಿಸುವವರ ಮನದಲ್ಲಿ ಮೋಸ; ಒಳಿತನ್ನು ಬಯಸುವವರ ಮನದಲ್ಲಿ ಉಲ್ಲಾಸ.
21 : ಸಜ್ಜನರಿಗೆ ಸಂಭವಿಸದು ಯಾವ ಕೆಡುಕು; ದುರ್ಜನರಿಗೆ ತುಂಬಿತುಳುಕುವುದು ಕೇಡು.
22 : ಮಿಥ್ಯವಾದಿಗಳು ಸರ್ವೇಶ್ವರನಿಗೆ ಹೇಸು; ಸತ್ಯವಾದಿಗಳು ಆತನಿಗೆ ಲೇಸು.
23 : ಜಾಣನು ತನ್ನ ಜ್ಞಾನವನ್ನು ಮುಚ್ಚಿಡುವನು; ಮೂಢನು ತನ್ನ ಮೂರ್ಖತನವನ್ನು ಪ್ರಕಟಿಸುವನು.
24 : ಚೂಟಿಯಾದವನು ಆಳುವನು ಯಜಮಾನನಾಗಿ; ಮೈಗಳ್ಳನು ಬಾಳುವನು ಗುಲಾಮನಾಗಿ.
25 : ಚಿಂತೆ ಮನಸ್ಸನ್ನು ಕುಗ್ಗಿಸುತ್ತದೆ; ಸವಿಮಾತು ಅದನ್ನು ಹಿಗ್ಗಿಸುತ್ತದೆ.
26 : ನೀತಿವಂತ ನೆರೆಯವನಿಗೆ ದಾರಿತೋರಿಸುವನು; ಅನೀತಿವಂತನು ಅವನಿಗೆ ದಾರಿ ತಪ್ಪಿಸುವನು.
27 : ಮೈಗಳ್ಳನು ಬೇಟೆಯಾಡಿದ್ದನ್ನೂ ಬೇಯಿಸನು; ಚೂಟಿಯಾದವನ ಪಾಲಿಗೆ ಬರುವುದು ಸಂಪತ್ತು.
28 : ಸನ್ಮಾರ್ಗದಿಂದ ಜೀವಲಾಭ; ದುರ್ಮಾರ್ಗದಿಂದ ಮರಣ ಪ್ರಾಪ್ತಿ.

· © 2017 kannadacatholicbible.org Privacy Policy