1 : ಹಾಡಿರಿ ಪ್ರಭುವಿಗೆ
ಹೊಸಗೀತೆಯೊಂದನು /
ಎಸಗಿಹನಾತನು ಪವಾಡಕಾರ್ಯಗಳನು /
ಗಳಿಸಿತಾತನ ಕೈ ಪೂತಭುಜ ಗೆಲುವನು //
2 : ಪ್ರಕಟಿಸಿಹನಾ ಪ್ರಭು ತನ್ನ ಮುಕ್ತಿವಿಧಾನವನು /
ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕಾ
ಶಕ್ತಿಯನು //
3 : ಕಂಡು ಬಂದಿತು ಜಗದ ಎಲ್ಲೆಎಲ್ಲೆಗೆ /
ನಮ್ಮ ದೇವ ಸಾಧಿಸಿದ ಜಯಗಳಿಕೆ //
ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು /
ಇಸ್ರಯೇಲ್ ಕುಲದ ಬಗ್ಗೆ ತನ್ನ
ಸತ್ಯತೆಯನು //
4 : ಭೂನಿವಾಸಿಗಳೇ, ಮಾಡಿರಿ ಜಯಕಾರ
ಪ್ರಭುವಿಗೆ /
ಮುದದಿ ಹಾಡಿರಿ, ಮಾಡಿರಿ ಸುಮಧುರ
ಭಜನೆ //
5 : ಪ್ರಭುವನು ಸ್ತುತಿಸಿರಿ ಕಿನ್ನರಿಯೊಂದಿಗೆ /
ಭಜಿಸಿರಿ ಆತನನು ವಾದ್ಯಮೇಳದೊಂದಿಗೆ //
6 : ಊದಿರಿ ಕೊಂಬನು, ತುತೂರಿಯನು /
ಉದ್ಘೋಷಿಸಿರಿ ಪ್ರಭು ರಾಜನನು //
7 : ಗರ್ಜಿಸಲಿ ಸಮುದ್ರವು ಅದರಲ್ಲಿರುವುದೆಲ್ಲವು /
ಕೀರ್ತಿಸಲಿ ಜಗವು, ಅದರೊಳು ವಾಸಿಸುವ
ಜನರೆಲ್ಲರು //
8 : ಚಪ್ಪಾಳೆ ಹೊಡೆಯಲಿ ನದಿಗಳು /
ತಟ್ಟಾಡಲಿ ಬೆಟ್ಟಗುಡ್ಡಗಳು //
9 : ಏಕೆನೆ ಬರುವನಾತ ಇಹಲೋಕಕೆ
ನ್ಯಾಯತೀರಿಸಲು /
ಜಗಕು, ಜನತೆಗು, ನ್ಯಾಯನೀತಿಗನುಸಾರ
ತೀರ್ಪುಕೊಡಲು //