1 : ಹೊಸಗೀತೆಯನು ಹಾಡಿರಿ
ಪ್ರಭುವಿಗೆ /
ವಿಶ್ವವೆಲ್ಲವು ಹಾಡಲಿ ಆತನಿಗೆ //
2 : ಪ್ರಭುವಿಗೆ ಹಾಡಿರಿ, ಆತನ ನಾಮವನು
ಕೊಂಡಾಡಿರಿ /
ಆತನ ಮುಕ್ತಿಮಾರ್ಗವನು ಪ್ರತಿನಿತ್ಯವೂ
ಸಾರಿರಿ //
3 : ಪ್ರಸಿದ್ಧಪಡಿಸಿರಿ ಆತನ ಘನತೆಯನು
ರಾಷ್ಟ್ರಗಳಿಗೆ |
ಆತನದ್ಭುತ ಕಾರ್ಯಗಳನು ಸಕಲ
ಜನಾಂಗಗಳಿಗೆ ||
4 : ಏಕೆನೆ ಮಹಾತ್ಮನು ಪ್ರಭು, ಬಲು
ಸ್ತುತ್ಯರ್ಹನು |
ಸಕಲ ದೇವರುಗಳಿಗಿಂತಲೂ ಘನ
ಗಂಭೀರನು ||
5 : ಶೂನ್ಯ ಪ್ರತಿಮೆಗಳು ಅನ್ಯರಾಷ್ಟ್ರಗಳ
ದೇವರುಗಳೆಲ್ಲ |
ಪ್ರಭುವಿನಿಂದಲೇ ಉಂಟಾಯಿತು ಆಕಾಶ
ಮಂಡಲವೆಲ್ಲ ||
6 : ಇವೆ ಮಹಿಮೆ, ಮಹತ್ವ, ಆತನ ಸನ್ನಿಧಿಯಲಿ |
ಶಕ್ತಿಸೌಂದರ್ಯ ಆತನ ಗರ್ಭಗುಡಿಯಲಿ ||
7 : ಶಕ್ತಿಸಾಮಥ್ರ್ಯ ಪ್ರಭುವಿನದೇ ಎಂದು |
ಜಗದ ರಾಷ್ಟ್ರಗಳು ಘನಪಡಿಸಲಿ ಆತನನು
ಎಂದೆಂದು ||
8 : ಆತನ ನಾಮಕೆ ತನ್ನಿ ಘನತೆಗೌರವವನು |
ಆತನ ಮಂದಿರಕೆ ಬನ್ನಿ ಕಾಣಿಕೆ ಹೊತ್ತು ||
9 : ಪ್ರಭುವಿಗೆ ಮಣಿಯಿರಿ ಪವಿತ್ರ
ವಸ್ತ್ರಧಾರಿಗಳಂತೆ |
ಅಂಜಿಕೆಯಿಂದ ನಡುಗಲಿ ಜಗವಿಡೀ ಆತನ
ಮುಂದೆ ||
10 : ಪ್ರಭು ರಾಜನೆಂದು ಸಾರಿರಿ ರಾಷ್ಟ್ರಗಳಿಗೆ |
ಕದಲದ ಸ್ಥಿರತೆಯನು ಇತ್ತಿಹನು ಧರೆಗೆ |
ನ್ಯಾಯವಾದ ತೀರ್ಪು ಕೊಡುವನು ಜನಾಂಗಕೆ ||
11 : ಹರ್ಷಿಸಲಿ ಆಕಾಶವು, ಸಂತೋಷಿಸಲಿ
ಭೂಲೋಕವು |
ಗರ್ಜಿಸಲಿ ಸಮುದ್ರವು ಮತ್ತು
ಅದರೊಳಿರುವುದೆಲ್ಲವು ||
12 : ಉಲ್ಲಾಸಿಸಲಿ ಹೊಲಗದ್ದೆಗಳು,
ಪೈರುಪಚ್ಚೆಗಳು |
ಹರ್ಷಧ್ವನಿಗೈಯಲಿ ಕಾಡಿನ ಫಲವೃಕ್ಷಗಳು ||
13 : ಪ್ರಭು ಧರೆಗೆ ನ್ಯಾಯತೀರಿಸಲು ಬಂದೇ
ಬರುವನು ಖರೆಯಾಗಿ |
ಜಗಕು, ಜನತೆಗು ತೀರ್ಪಿಸುವನು
ನೀತಿನಿಯಮಾನುಸಾರವಾಗಿ ||