Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಕೀರ್ತನೆ


1 : ಹೇ ಪ್ರಭು, ಮುಯ್ಯಿತೀರಿಸುವ ದೇವಾ / ಮುಯ್ಯಿತೀರಿಸಲು ಎದ್ದುಬಾರಯ್ಯಾ //
2 : ಪ್ರಭೂ, ಲೋಕದ ನ್ಯಾಯಾಧಿಪತಿ / ಏಳು, ಗರ್ವಿಗಳಿಗೆ ಮಾಡು ತಕ್ಕಶಾಸ್ತಿ //
3 : ಎಲ್ಲಿಯವರೆಗೆ ಪ್ರಭು, ಎಲ್ಲಿಯವರೆಗೆ?/ ದುರುಳರು ಹಿಗ್ಗುತ್ತಲೆ ಇರಬೇಕು ಹೀಗೆ? //
4 : ಉಬ್ಬಿ ಹೋಗಿಹರು ಕೆಡುಕರೆಲ್ಲರು / ಜಂಬ ಕೊಚ್ಚಿಕೊಳ್ಳುತ್ತಿಹರು ಅವರು //
5 : ನಸುಕಿ ಹಾಕುತಿಹರು ನಿನ್ನ ಪ್ರಜೆಯನು / ಹಿಂಸಿಸುತಿಹರು ನಿನ್ನ ಸ್ವಕೀಯರನು //
6 : ವಧಿಸುತಿಹರು ವಿಧವೆಯರನು, ಪರದೇಶಿಯರನು / ಹತ್ಯಮಾಡುತಿಹರು ಗತಿಯಿಲ್ಲದ ಅನಾಥರನು //
7 : ಅವರಾಡಿಕೊಳ್ಳುತಿಹರು ಪ್ರಭು ನೋಡನೆಂದು / ಯಕೋಬ್ಯರ ಸ್ವಾಮಿದೇವ ವಿಚಾರಿಸನೆಂದು //
8 : ಮೂರ್ಖರೇ, ನಿಮಗೆ ಜ್ಞಾನೋದಯವಾಗುವುದಾವಾಗ? / ಪಶುಪ್ರಾಯರಾದ ಪ್ರಜೆಗಳು ಗಮನಿಸುವುದಾವಾಗ? //
9 : ಕಿವಿಮಾಡಿದವನು ಕೇಳದಿರುವನೋ? / ಕಣ್ಣುಕೊಟ್ಟವನು ನೋಡದಿರುವನೋ? //
10 : ರಾಷ್ಟ್ರಗಳನು ಖಂಡಿಸುವವನು ದಂಡಿಸದಿರುವನೋ? | ಮನುಜರಿಗೆ ಬುದ್ಧಿಕಲಿಸುವವನು ಬುದ್ಧಿಹೀನನೋ? ||
11 : ಮನುಜರಾಲೋಚನೆಗಳು ತಿಳಿದೇ ಇವೆ ಪ್ರಭುವಿಗೆ / ಉಸಿರಿನಷ್ಟೇ ವ್ಯರ್ಥವೆಂದು ಗೊತ್ತಿದೆ ಆತನಿಗೆ //
12 : ಪ್ರಭು, ನಿನ್ನಿಂದ ಶಿಕ್ಷಿತನಾದ ಮಾನವ ಧನ್ಯ / ನಿನ್ನಿಂದ ಧರ್ಮೋಪದೇಶ ಪಡೆದವನು ಧನ್ಯ //
13 : ನೆಮ್ಮದಿ ನೀಡುವೆ ಅವನು ಸಂಕಟದಲಿರುವಾಗ / ದುರುಳರಿಗೆ ನೀನು ಗುಂಡಿಯನು ತೋಡುವಾಗ //
14 : ತಳ್ಳಿಬಿಡಲು ಪ್ರಭು ತನ್ನ ಜನರನು / ಕೈಬಿಡನವನು ತನ್ನ ಸ್ವಕೀಯರನು //
15 : ನ್ಯಾಯತೀರ್ಪು ಮರಳಿ ತಿರುಗುವುದು ನೀತಿಯತ್ತ / ನೇರಮನಸ್ಕರೆಲ್ಲ ಮಾಡುವರು ಅದನು ಸಮರ್ಥ //
16 : ದುರುಳರಿಗೆದುರಾಗಿ ನನ್ನ ಪಕ್ಷ ವಹಿಸುವರಾರು? / ಕೆಡುಕರಿಗೆ ವಿರುದ್ಧ ನನ್ನ ಪರ ನಿಲ್ಲುವವರಾರು? //
17 : ನನಗಿಲ್ಲದಿದ್ದರೆ ಪ್ರಭುವಿನ ಮರುಕ / ಮನೆಯಾಗುತ್ತಿತ್ತೆನಗೆ ಅಧೋಲೋಕ //
18 : ನನ್ನ ಕಾಲು ಜಾರಿಹೋಯಿತು ಎನ್ನುವುದರೊಳಗೆ / ನಿನ್ನ ಅಚಲಪ್ರೀತಿ, ಪ್ರಭು ನೆರವಾಯಿತೆನಗೆ //
19 : ನನ್ನ ಅಂತರಂಗದಲಿ ಏಳಲು ಆಂದೋಲನ / ತಂದಿತೆನ್ನ ಮನಕೆ ಆನಂದ ನಿನ್ನ ಸಾಂತ್ವನ //
20 : ಅನ್ಯಾಯಸ್ಥಾಪಕರಿಗೂ ನಿನಗೂ ಸಂಬಂಧವೆಲ್ಲಿ / ಕೇಡನು ಕಲ್ಪಿಸುತ್ತಾರವರು ಶಾಸನದ ಹೆಸರಿನಲ್ಲಿ //
21 : ಹೊಂಚು ಹಾಕುವರವರು ನೀತಿವಂತರ ಪ್ರಾಣಕೆ / ಮರಣಶಿಕ್ಷೆ ವಿಧಿಸುವರವರು ನಿರಪರಾಧಿಗಳಿಗೆ //
22 : ನನಗೋ ಪ್ರಭುವೇ ಕಲ್ಲು ಕೋಟೆ | ನನಗಾಶ್ರಯ ನೀಡುವ ಪೊರೆಬಂಡೆ ||
23 : ದಂಡಿಸುವನಾ ಕೆಡುಕರನು ಅವರ ಕೆಟ್ಟತನಕ್ಕಾಗಿ / ನಿರ್ಮೂಲ ಮಾಡುವನಾ ಜನರ ದುಷ್ಟತನಕ್ಕಾಗಿ / ನಮ್ಮೊಡೆಯ ದೇವನು ಸಂಹರಿಸಿ ಬಿಡುವನು ಈ ಕಾರಣಕ್ಕಾಗಿ //

· © 2017 kannadacatholicbible.org Privacy Policy