1 : ಹೇ ಪ್ರಭೂ, ನಿನ್ನ ಗುಣಗಾನ
ಮಂಗಳಕರ /
ಪರಾತ್ಪರನೆ, ನಿನ್ನ ನಾಮಭಜನೆ ಹಿತಕರ //
2 : ಪ್ರಾತಃಕಾಲದಲೆ ನಿನ್ನ ಪ್ರೀತಿಯನು |
ರಾತ್ರಿಕಾಲದಲೆ ನಿನ್ನ ಸತ್ಯತೆಯನು ||
3 : ವರ್ಣಿಸುವುದುಚಿತ ವೀಣಾ
ಸ್ವರಮಂಡಲದಿಂದ /
ಕೊಳಲ ದನಿಯಿಂದ, ಕಿನ್ನರಿಯ
ನಾದಸ್ವರದಿಂದ //
4 : ನಿನ್ನ ಕಾರ್ಯಗಳಿಂದ ಪ್ರಭು, ನನ್ನನು
ಆನಂದಗೊಳಿಸಿರುವೆ /
ನಿನ್ನಾ ಕಾರ್ಯಗಳ ನೋಡಿ, ನಾನು
ಉಲ್ಲಾಸದಿಂದ ಹಾಡುವೆ //
5 : ಪ್ರಭು, ನಿನ್ನ ಕೃತ್ಯಗಳೆನಿತೋ ಅಮೂಲ್ಯ /
ನಿನ್ನಾಲೋಚನೆಗಳು ಎನಿತೋ ಅಶೋಧ್ಯ //
6 : ಇದನರಿಯನು ಪಶುಪ್ರಾಯನು /
ಇದ ತಿಳಿಯನು ಬುದ್ಧಿಹೀನನು //
7 : ದುರುಳರು ಚಿಗುರಬಹುದು ಹುಲ್ಲಿನಂತೆ /
ಕೆಡುಕರು ಅರಳಬಹುದು ಹೂವಿನಂತೆ /
ಅವರ ಅಳಿವಂತೂ ಕಟ್ಟಿಟ್ಟ ಬುತ್ತಿಯಂತೆ //
8 : ನೀನಾದರೊ ಪ್ರಭು, ಸರ್ವದಾ ಇರುವೆ /
ಮಹೋನ್ನತದೊಳು ವಿರಾಜಿಸುತ್ತಿರುವೆ //
9 : ಕಾಡುಕೋಣದ ಕೊಂಬಿನ ಬಲವನು
ನನಗಿತ್ತಿರುವೆ /
ಚೈತನ್ಯದ ತೈಲದಿಂದ ನನ್ನನು ಅಭ್ಯಂಜಿಸಿರುವೆ //
10 : ನಿನ್ನ ಶತ್ರುಗಳ ವಿನಾಶ ನಿಶ್ಚಿತ /
ಕೆಡುಕರೆಲ್ಲ ಚದರಿ ಪೋಪುದು ಖಚಿತ //
11 : ನಾ ಕಣ್ಣಾರೆ ಕಂಡಿರುವೆ ಶತ್ರುಗಳಿಗಾದ ದುರ್ಗತಿಯನು / ಕಿವಿಯಾರೆ ಕೇಳಿರುವೆ ನನ್ನ ವಿರೋಧಿಗಳಿಗಾದ ವಿಪತ್ತನು //
12 : ಬೆಳೆಯುವರು ಸಜ್ಜನರು ಖರ್ಜೂರದ
ವೃಕ್ಷದಂತೆ /
ವೃದ್ಧಿಯಾಗುವರು ಲೆಬನೋನಿನ
ದೇವದಾರಿನಂತೆ //
13 : ಅವರಿರುವರು ಪ್ರಭುವಿನಾಲಯದಲೆ ನೆಟ್ಟ
ಸಸಿಗಳಂತೆ /
ನಮ್ಮ ದೇವಾಂಗಳದಿ ಹುಲುಸಾಗಿ ಬೆಳೆವ
ಮರಗಳಂತೆ /
14 :
ಫಲಿಸುವರು ಮುಪ್ಪಿನಲೂ, ಶೋಭಿಸುವರು
ಪಚ್ಚೆಪಸಿರಂತೆ //
15 : ಈ ಪರಿ ಪಡೆವುದು ಸಾಕ್ಷ್ಯ ಪ್ರಭುವಿನಾ
ಸತ್ಯಸಂಧತೆ /
ಆತನೇ ನನಗೆ ಪೊರೆಬಂಡೆ, ಆತನಲ್ಲಿಲ್ಲ ವಕ್ರತೆ //