1 : ಪರಾತ್ಪರ ಪ್ರಭುವಿನ
ಮೊರೆಹೊಕ್ಕಿರುವವನು /
ಸರ್ವಶಕ್ತನ ಆಶ್ರಯದಲಿ ಸುರಕ್ಷಿತನು //
2 : ನಾನಾತನಿಗೆ, ‘ನೀನೇ ನನ್ನ ರಕ್ಷಕನೂ /
ದುರ್ಗವೂ ನಾ ನಂಬಿದ ದೇವನು’
ಎನ್ನುವೆನು //
3 : ತಪ್ಪಿಸುವನಾತನು ಬೇಟೆಗಾರನ ಬಲೆಯಿಂದ /
ರಕ್ಷಿಸುವನು ಮಾರಕವಾದ ವ್ಯಾಧಿಯಿಂದ //
4 : ಹುದುಗಿಸುವನು ನಿನ್ನನು ತನ್ನ ಗರಿಗಳ
ತೆಕ್ಕೆಯಲಿ /
ಆಶ್ರಯಪಡೆಯುವೆ ನೀ ಆತನ ರೆಕ್ಕೆಗಳಡಿಯಲಿ /
ರಕ್ಷಣೆಯ ಕವಚವಿದೆ ಆತನು ಕೊಟ್ಟ
ಮಾತಿನಲಿ //
5 : ನೀನು ಅಂಜಬೇಕಾಗಿಲ್ಲ ಇರುಳಿನ ದುರಿತಕೆ /
ಹಗಲಿನಲಿ ಹಾರಿಬರುವ ಬಿರುಸು ಬಾಣಕೆ //
6 : ಕತ್ತಲೆಯಲಿ ಸಂಚರಿಸುವ ವಿಪತ್ತಿಗೆ /
ನಡುಹಗಲಲೆ ಪೀಡಿಸುವ ಜಾಡ್ಯಕೆ //
7 : ಬೀಳಬಹುದು ಸಾವಿರ ಹೆಣಗಳು ಪಕ್ಕದಲೆ /
ಹತ್ತುಸಾವಿರ ಹೆಣಗಳು ನಿನ್ನ ಬಲಗಡೆಯಲೆ /
ಅಂಥ ಕೇಡೊಂದೂ ಬಾರದು ನಿನ್ನ ಪಾಲಿಗೆ //
8 : ನೀನಿದನು ಕಣ್ಣಾರೆ ಕಾಣುವೆ /
ದುರುಳರ ದಂಡನೆಯನು ನೋಡುವೆ //
9 : ಪ್ರಭುವನೆ ನಿನ್ನಾಶ್ರಯವಾಗಿಸಿ
ಕೊಂಡಿರುವುದರಿಂದ /
ಪರಾತ್ಪರನನೆ ನಿನ್ನ ನಿವಾಸ
ಆಗಿಸಿಕೊಂಡದ್ದರಿಂದ //
10 : ಹಾನಿಯೊಂದೂ ನಿನಗೆ ಸಂಭವಿಸದು /
ಕೆಡಕು ನಿನ್ನ ಗುಡಾರದ ಬಳಿ ಸುಳಿಯದು //
11 : ನೀನು ಹೋದೆಡೆಯೆಲ್ಲಾ ನಿನ್ನ ಕಾಯುವುದಕ್ಕೆ /
ಕೊಟ್ಟಿಹನಾತ ಕಟ್ಟಳೆ ತನ್ನ ದೂತರಿಗೆ //
12 : ನಿನ್ನ ಕಾಲು ಕಲ್ಲಿಗೆ ತಾಗದಂತೆ /
ನಿನ್ನನೆತ್ತಿಕೊಳ್ವರವರು ಕೈಗಳಲೆ //
13 : ಸಿಂಹಗಳ ಮೇಲೂ, ಸರ್ಪಗಳ ಮೇಲೂ
ನಡೆಯುವೆ /
ಪ್ರಾಯದ ಸಿಂಹವನು, ಘಟಸರ್ಪವನು
ತುಳಿದುಬಿಡುವೆ //
14 : ಪ್ರಭು : “ನನ್ನ ಭಕ್ತನಾದ್ದರಿಂದ ವಿಮೋಚಿ
ಸುವೆನು ಅವನನು /
ನನ್ನ ನಾಮವನು ಅರಿತವನಾದ್ದರಿಂದ
ರಕ್ಷಿಸುವೆನು //
15 : ನನಗೆ ಮೊರೆಯಿಟ್ಟಾಗ ಕಿವಿಗೊಡುವೆನು /
ಸಂಕಟದೊಳು ಅವನ ಸಂಗಡವಿರುವೆನು /
ಅವನನು ಉದ್ಧರಿಸಿ ಘನಪಡಿಸುವೆನು //
16 : ದೀರ್ಘಾಯುಸ್ಸನ್ನಿತ್ತು ತೃಪ್ತಿಪಡಿಸುವೆನು /
ನಾನು ನೀಡುವ ಮುಕ್ತಿಯನವನಿಗೆ
ಮನಗಾಣಿಸುವೆನು” //