1 : ಮನಃಪೂರ್ವಕವಾಗಿ ಪ್ರಭು, ನಿನ್ನ
ಕೊಂಡಾಡುವೆನು /
ನಿನ್ನದ್ಭುಕಾರ್ಯಗಳೆಲ್ಲವನು ನಾ
ವರ್ಣಿಸುವೆನು //
2 : ಪರಾತ್ಪರನೇ, ಮಾಡುವೆನು ನಿನ್ನ ನಾಮಸ್ತುತಿ /
ಹರ್ಷಾನಂದಗೊಳ್ವೆನು ದೇವಾ, ನಿನ್ನಲ್ಲತಿ //
3 : ನಿನ್ನ ಕಂಡು ನನ್ನ ವೈರಿಗಳು ಗೈದರು ಪಲಾಯನ /
ಎದ್ದು ಬಿದ್ದು ಅವರೆಲ್ಲರೂ ಹೊಂದಿದರು
ವಿನಾಶನ //
4 : ನ್ಯಾಯಪೀಠದಲಿ ಕುಳಿತೆನ್ನ ವ್ಯಾಜ್ಯತೀರಿಸಿದೆ /
ನೀತಿಗನುಸಾರವಾಗಿ ನ್ಯಾಯ ಸ್ಥಾಪಿಸಿದೆ //
5 : ಭ್ರಷ್ಟರನು ದಂಡಿಸಿದೆ, ರಾಷ್ಟ್ರಗಳನು ಖಂಡಿಸಿದೆ /
ಎಂದೆಂದೂ ಹೆಸರಿಲ್ಲದಂತೆ ಅವರನು
ಅಳಿಸಿಹಾಕಿದೆ //
6 : ನಿಶ್ಯೇಷವಾಗಿ ಹೋದರು ವಿರೋಧಿಗಳು /
ನಾಶವಾಗಿ ಹೋದವು ಅವರ ನಗರಗಳು /
ಇಲ್ಲವಾದವು ಅವರ ಯಾವ ನೆನಪುಗಳು //
7 : ಪ್ರಭುವಿನ ರಾಜ್ಯಾಡಳಿತ ಶಾಶ್ವತ / ಆತನ ನ್ಯಾಯ ಪೀಠ ಸುಸ್ಥಾಪಿತ //
8 : ಜಗಕೆ ನ್ಯಾಯ ತೀರಿಸುವನು ನೀತಿಗನುಸಾರ /
ಜನಾಂಗಕೆ ತೀರ್ಪುಕೊಡುವನು
ಸತ್ಯಕ್ಕನುಸಾರ //
9 : ದಲಿತರಿಗೆ ಪ್ರಭು ದುರ್ಗಸ್ಥಾನ /
ಆಪತ್ತಿನಲ್ಲಿ ಆಶ್ರಯ ಸ್ಥಾನ //
10 : ನಿನ್ನನು ಅರಸುವವರನು ಹೇ ಪ್ರಭು,
ನೀ ಕೈ ಬಿಡುವವನಲ್ಲ /
ನಿನ್ನಲ್ಲಿ ಭರವಸೆ ಇಡುವರು
ನಿನ್ನ ನಾಮವನರಿತವರೆಲ್ಲ //
11 : ಸಂಕೀರ್ತಿಸಿರಿ ಸಿಯೋನಿನಲಿ ವಾಸಿಸುವ
ಪ್ರಭುವನು /
ಪ್ರಕಟಿಸಿರಿ ಜನತೆಗೆ ಆತನ
ಮಹತ್ಕಾರ್ಯಗಳನು //
12 : ರಕ್ತಪಾತ ಲೆಕ್ಕಿಸಿ ಸೇಡು ತೀರಿಸುವಾತ /
ದೀನದಲಿತರ ಮೊರೆಯನೆಂದಿಗು
ಮರೆಯನಾತ //
13 : ಮೃತ್ಯುವಿನ ಬಾಯಿಂದೆನ್ನ ಬದುಕಿಸುವ
ಪ್ರಭು, ಕನಿಕರಿಸು /
ವೈರಿ-ವಿರೋಧಿಗಳೆನಗೆ ಗೈದ ಕಿರುಕುಳವನು,
ನೀ ಗಮನಿಸು //
14 : ಆಗ ಸಿಯೋನ್ ನಗರಿಯ ದ್ವಾರದಲೆ
ನಿಲ್ಲುವೆನು /
ನಿನ್ನ ಗುಣಾತಿಶಯಗಳನು
ಪ್ರಸಿದ್ಧಪಡಿಸುವೆನು /
ನೀನಿತ್ತ ಮುಕ್ತಿಗಾಗಿ ಆನಂದಗೊಳ್ಳುವೆನು //
15 : ಬಿದ್ದರು ಹೊರನಾಡಿಗರು ತಾವು ತೋಡಿದ
ಗುಣಿಯಲೆ /
ಸಿಕ್ಕಿಕೊಂಡಿತವರ ಕಾಲು ಅವರೊಡ್ಡಿದ
ಬಲೆಯಲೆ //
16 : ಪ್ರಭುವಿತ್ತ ನ್ಯಾಯತೀರ್ಪೇ ಆತನಿಗೆ ಪ್ರಚಾರಕ /
ದುಷ್ಟರ ಗೈದ ಕುಯುಕ್ತಿಯೇ ಅವರಿಗೆ
ಸಂಹಾರಕ //
18 : ದರಿದ್ರರನು ದೇವರು ಎಂದಿಗು
ಮರೆಯುವುದಿಲ್ಲ /
ನಿರ್ಗತಿಕರ ನಿರೀಕ್ಷೆ ಕೈಗೂಡದೆ ಇರುವುದಿಲ್ಲ //
19 : ಎದ್ದೇಳು ಪ್ರಭೂ, ಜಯ ದೊರಕದಿರಲಿ
ನರಮಾನವನಿಗೆ /
ನಡೆಯಲಿ ನಿನ್ನ ಮುಂದೆಯೆ ನ್ಯಾಯನಿರ್ಣಯ
ಜನಾಂಗಗಳಿಗೆ //
20 : ಮೂಡಿಸು ಹೇ ಪ್ರಭೂ, ಅವರಲಿ
ಭಯಭ್ರಾಂತಿಯನು /
ಕಲಿಸು ಜನಾಂಗಕೆ ತಾವು
ಹುಲು ಮಾನವರೆಂಬುದನು //