Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಕೀರ್ತನೆ


1 : ಪ್ರಭು, ಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು / ಸಾರುವೆನು ತಲತಲಾಂತರಕು ನಿನ್ನ ಸತ್ಯತೆಯನು //
2 : ನಿನ್ನಚಲ ಪ್ರೀತಿ ಪ್ರಭು, ನನಗೆ ಶಾಶ್ವತ ಸಿದ್ಧ / ನಿನ್ನ ಸತ್ಯತೆ ಆಗಸದಂತೆ ಸ್ಥಿರ ಸ್ಥಾಪಿತ //
3 : ನೀನೆಂದೆ, “ನಾನರಿಸಿದವನೊಡನೆ ಮಾಡಿರುವೆ ಒಪ್ಪಂದ / ನನ್ನ ದಾಸ ದಾವೀದನಿಗಿತ್ತಿರುವೆ ಈ ತೆರನಾದ ಶಪಥ : //
4 : “ಸ್ಥಾಪಿಸುವೆ ಶಾಶ್ವತವಾಗಿ ನಿನ್ನ ಸಂತತಿಯನು / ಸ್ಥಿರಪಡಿಸುವೆ ಯುಗಯುಗಕು ನಿನ್ನ ಸಿಂಹಾಸನವನು”//
5 : ಪ್ರಸಿದ್ಧಪಡಿಸುವುದು ಪ್ರಭು, ಗಗನವು ನಿನ್ನ ಮಹತ್ತನು / ಸಂಕೀರ್ತಿಸುವುದು ಸ್ವರ್ಗೀಯ ಸಭೆ, ನಿನ್ನ ಸತ್ಯತೆಯನು //
6 : ಮೇಘಮಂಡಲದಲಿ ಸಮಾನನಾರು ಪ್ರಭುವಿಗೆ / ದೇವದೂತರೊಳು ಹೋಲಿಕೆ ಯಾವುದು ಆತನಿಗೆ //
7 : ಸ್ವರ್ಗೀಯ ಸಭೆಯಲಿ ಪ್ರತಿಭಾವಂತನು ದೇವನು / ಸುತ್ತಣದೆಲ್ಲ ಪರಿವಾರಕ್ಕಿಂತ ಬಹು ಭೀಕರನು //
8 : ಪ್ರಭೂ, ಶಕ್ತಿಸ್ವರೂಪ, ನಿನ್ನ ಸುತ್ತುವರೆದಿದೆ ಸತ್ಯತೆ / ಸ್ವಾಮಿದೇವಾ, ಸರ್ವೇಶ್ವರಾ, ನಿನಗೆಲ್ಲಿಯದು ಸಮಾನತೆ?//
9 : ಕಡಲ ಕಲ್ಲೋಲಗಳನ್ನೆಲ್ಲ ಅಂಕೆಯಲಿ ಇಡುವವನು ನೀನು / ತರಂಗವೇಳುವಾಗಲು ಕೂಡ ತಡೆಹಿಡಿವವನು ನೀನು //
10 : ಚದರಿಸಿದೆ ನಿನ್ನ ಭುಜಬಲದಿಂದ ಶತ್ರುಗಳನು / ಛೇದಿಸಿ ಕೊಂದುಹಾಕಿದೆ ಆ ರಾಕ್ಷಸ ರಹಬನನು //
11 : ಆಕಾಶವು ನಿನ್ನದು ಪ್ರಭು, ಭೂಮಿಯೂ ನಿನ್ನದೇ / ಜಗವು, ಅದರಲ್ಲಿರುವುದೆಲ್ಲವು, ನಿನ್ನಿಂದಾದುದೇ //
12 : ಉತ್ತರ ದಕ್ಷಿಣಗಳನುಂಟು ಮಾಡಿದವನು ನೀನು / ಸ್ತುತಿಸುತ್ತವೆ ತಾಬೊರ್ ಹೆರ್‍ಮೊನ್ ನಿನ್ನ ನಾಮವನು //
13 : ನಿನ್ನ ಹಸ್ತ ಶಕ್ತಿಯುತ, ಬಲಗೈ ಮಹೋನ್ನತ / ನಿನ್ನ ಭುಜಬಲವಾದರೊ ಪರಾಕ್ರಮರೂಪಿತ //
14 : ನೀತಿನ್ಯಾಯ ನಿನ್ನ ಸಿಂಹಾಸನದಸ್ತಿವಾರ / ಪ್ರೀತಿಸತ್ಯತೆ ನಿನ್ನ ಸಾನ್ನಿಧ್ಯ ಪರಿವಾರ //
15 : ಧನ್ಯರು ಪ್ರಭು, ನಿನಗೆ ಜಯಕಾರ ಹಾಡುವವರು / ನಿನ್ನ ಮುಖದ ಪ್ರಕಾಶದೊಳವರು ನಡೆಯುವರು //
16 : ಆನಂದಿಸುವರವರು ಸದಾ ನಿನ್ನ ನಾಮದಲಿ / ಪ್ರವರ್ಧಿಸುವರವರು ನಿನ್ನ ನ್ಯಾಯನೀತಿಯಲಿ //
17 : ಅವರ ಶಕ್ತಿಸಾಮಥ್ರ್ಯದ ಪ್ರತಿಭೆ ನಿನ್ನದೆ / ನಿನ್ನ ದಯೆಯಿಂದ ನಮಗೆ ಕೋಡುಮೂಡಿದೆ //
18 : ಗುರಾಣಿಯಂತಿಹ ನಮ್ಮ ರಾಜನು ಪ್ರಭುವಿನವನೇ / ಇಸ್ರಯೇಲಿನ ಪರಮಪಾವನ ಸ್ವಾಮಿಗೆ ಸೇರಿದವನೇ //
19 : ಹಿಂದೊಮ್ಮೆ ನೀ ದರ್ಶನವಿತ್ತು ಇಂತೆಂದೆ ನಿನ್ನ ಭಕ್ತರಿಗೆ: / “ರಕ್ಷಾಬಲವನು ಅನುಗ್ರಹಿಸಿರುವೆ ಶೂರವೀರನೋರ್ವನಿಗೆ / ಪ್ರಜೆಗಳಲೊರ್ವ ಯುವಕನನು ಏರಿಸಿರುವೆ ಉನ್ನತಸ್ಥಾನಕೆ //
20 : “ನನ್ನ ದಾಸ ದಾವೀದನನು ಗುರುತಿಸಿರುವೆ / ಪವಿತ್ರ ತೈಲದಿಂದವನನು ಅಭಿಷೇಕಿಸಿರುವೆ //
21 : ನನ್ನ ಕೈಯ ಆಸರೆ ಅವನಿಗಿದೆ ಸತತ / ನನ್ನ ಭುಜಬಲವು ಅವನಿಗೆ ಶಕ್ತಿಯುತ //
22 : ಸಿಗನು ಶತ್ರುವಿನ ಕುತಂತ್ರಕೆ / ಕುಗ್ಗನು ಕೆಡುಕರಾ ದರ್ಪಕೆ //
23 : ಅವನ ಶತ್ರುಗಳನು ಸದೆಬಡಿವೆನು ಅವನ ಮುಂದೆಯೆ / ಅವನ ವಿರೋಧಿಗಳನು ಹತಮಾಡುವೆನು ಅಲ್ಲಿಯೇ //
24 : ನನ್ನ ಪ್ರೀತಿಸತ್ಯತೆಗಳು ಇರುವುವು ಅವನೊಂದಿಗೆ / ನನ್ನ ನಾಮ ಪ್ರಯುಕ್ತ ಕೋಡು ಮೂಡುವುದವನಿಗೆ //
25 : ತೊರೆನದಿಗಳಿಂದ ಸಾಗರದವರೆಗೆ / ಅಧಿಕಾರ ನೀಡುವೆ ಅವನ ಕೈಗೆ //
26 : ‘ನನಗೆ ಪಿತ, ದೈವ, ದುರ್ಗ, ಉದ್ಧಾರಕ, ನೀನು’| ಇಂತೆಂದೇ ನನ್ನನು ಸಂಬೋಧಿಸುವನವನು ||
27 : ಮಾಡುವೆನವನನು ಜೇಷ್ಠ ಪುತ್ರನನ್ನಾಗಿ / ಭೂರಾಜರುಗಳೊಳು ಅತ್ಯುನ್ನತನನ್ನಾಗಿ //
28 : ಇರುವುದು ಎನ್ನಚಲ ಪ್ರೀತಿ ಅವನ ಮೇಲೆ ಶಾಶ್ವತವಾಗಿ / ಅವನೊಡನೆ ನಾ ಮಾಡಿದೊಪ್ಪಂದ ಸ್ಥಿರಸ್ಥಾಯಿಯಾಗಿ //
29 : ಉಳಿಸುವೆನು ಅವನ ಸಂತಾನವನು ನಿರಂತರವಾಗಿ / ಅವನ ಸಿಂಹಾಸನವಿರುವುದು ಗಗನದಂತೆ ಸ್ಥಿರವಾಗಿ //
30 : ಅವನ ಕುವರರು ತೊರೆದರಾದರೆ ನನ್ನ ಧರ್ಮಶಾಸ್ತ್ರವನು / ಉಲ್ಲಂಘಿಸಿ ನಡೆದರಾದರೆ ನನ್ನ ಆಜ್ಞಾವಿಧಿಗಳನು //
31 : ವಿೂರಿ ನಡೆದರಾದರೆ ನನ್ನ ಶಾಸನಗಳನು / ಪರಿಪಾಲಿಸದೆ ಹೋದರೆ ಎನ್ನ ನಿಯಮಗಳನು //
32 : ದಂಡಿಸುವೆನವರ ದ್ರೋಹವನು ದಂಡದಿಂದ / ಶಿಕ್ಷಿಸುವೆನವರ ಅಪರಾಧವನು ಚಾಟಿ ಯಿಂದ //
33 : ಆದರೆ ನನ್ನೊಲವು ಅವನನ್ನು ಕೈಬಿಡದು / ನನ್ನ ಪ್ರಾಮಾಣಿಕತೆಗದು ಚ್ಯುತಿಯಾಗದು //
34 : ಭಂಗಪಡಿಸೆನು ಎನ್ನ ಒಡಂಬಡಿಕೆಯನು / ವಿೂರೆನು ನಾನವನಿಗೆ ಕೊಟ್ಟ ಮಾತನು //
35 : ಮಾಡಿರುವೆ ಪ್ರಮಾಣ ನನ್ನ ಪವಿತ್ರತೆಯ ಮೇಲೆ / ಸುಳ್ಳಾಡಲಾರೆ ದಾವೀದನಿಗೀ ವಿಷಯದ ಮೇಲೆ //
37 : ಅಮರವಾಗಿರುವುದು ಚಂದ್ರನಂತೆ / ಆಗಸದಾ ಪ್ರಮಾಣ ಸಾಕ್ಷಿಯಂತೆ” //
38 : ಇಂತೆಂದ ನೀನೆ ತ್ಯಜಿಸಿರುವೆ ನಿನ್ನಾಭಿಷಿಕ್ತನನು / ತಳ್ಳಿಬಿಟ್ಟಿರುವೆ ಕೋಪಾವೇಶದಿಂದ ಅವನನು //
39 : ಭಂಗಪಡಿಸಿರುವೆ ದಾಸನೊಡನೆ ಮಾಡಿದ ಒಡಂಬಡಿಕೆಯನು / ಮಣ್ಣುಪಾಲಾಗಿಸಿರುವೆ ಅವನ ಪಟ್ಟದ ಆ ಕಿರೀಟವನು //
40 : ಸೀಳಿಬಿಟ್ಟಿರುವೆ ಅವನಾ ಪೌಳಿಗೋಡೆಗಳನು / ಹಾಳುಮಾಡಿಬಿಟ್ಟಿರುವೆ ಕೋಟೆಕೊತ್ತಲಗಳನು //
41 : ಸುಲಿಗೆ ಮಾಡುತಿಹರವನನು ದಾರಿಗರೆಲ್ಲರು / ಪರಿಹಾಸ್ಯಕ್ಕೆ ಈಡುಮಾಡುತಿಹರು ನೆರೆಯವರು //
42 : ಮೇಲಾಗಿಸಿರುವೆ ಅವನ ವಿರೋಧಿಗಳ ಕೈಯನು / ಉಲ್ಲಾಸಗೊಳಿಸಿರುವೆ ಅವನೆಲ್ಲಾ ವೈರಿಗಳನು //
43 : ಮೊಂಡಾಗಿಸಿರುವೆ ಅವನ ಕತ್ತಿಯ ಮೊನೆಯನು / ಕಾಳಗಕೆ ನಿಲ್ಲದಂತಾಗಿಸಿರುವೆ ಅವನನು //
44 : ಕಿತ್ತುಹಾಕಿರುವೆ ಅವನ ರಾಜದಂಡವನು / ನೆಲಕ್ಕೆ ಉರುಳಿಸಿರುವೆ ಅವನ ಸಿಂಹಾಸನವನು //
45 : ಮುಪ್ಪಾಗಿಸಿರುವೆ ಅವನನು ಕಾಲಕ್ಕೆ ಮುಂಚೆ / ನಿನ್ನ ನಿಮಿತ್ತ ಅವನನು ಆವರಿಸಿದೆ ಲಜ್ಜೆ //
46 : ಒಡೆಯಾ, ಚಿರಮರೆಯಾಗಿರುವೆ? ಇನ್ನೆಷ್ಟರವರೆಗೆ? / ನಿನ್ನ ಕೋಪಾಗ್ನಿ ಎಡೆಬಿಡದೆ ಉರಿಯುತ್ತಿರಬೇಕೆ? //
47 : ಎಷ್ಟು ಅಲ್ಪವಾದುದೆನ್ನ ಜೀವಮಾನಕಾಲ / ಎಷ್ಟು ನಶ್ವರ ನೀ ನಿರ್ಮಿಸಿದ ಮಾನವ ಕುಲ! //
48 : ಸಾಯದೆಯೇ ಜೀವಿಸಬಲ್ಲ ನರನಾರು? / ಆ ತಳದಿಂದ ತಪ್ಪಿಸಿಕೊಳ್ಳುವವನಾರು? //
49 : ದಾವೀದನಿಗೆ ಪ್ರಭು, ನೀನಿತ್ತ ವಾಗ್ದಾನವೆಲ್ಲಿ?/ ಗತಕಾಲದಲಿ ನೀ ತೋರಿದಚಲ ಪ್ರೀತಿಯೆಲ್ಲಿ? //
51 : ನಿಂದಿಸುತಿಹರು ಪ್ರಭು, ವೈರಿಗಳು ನಿನ್ನಭಿಷಿಕ್ತನನು / ಹೆಜ್ಜೆಹೆಜ್ಜೆಗು ಅವಮಾನಿಸುತಿಹರು ಶತ್ರುಗಳವನನು /
52 : ಆಮೆನ್, ಆಮೆನ್, ಪ್ರಭುವಿಗೆ ಸರ್ವದಾ ಧನ್ಯವಾದವು //

· © 2017 kannadacatholicbible.org Privacy Policy