1 : ಪ್ರಭು, ಜೀವೋದ್ಧಾರಕನೇ ಕೇಳು
ನಿನಗೆ ಮೊರೆಯಿಡುವೆ
ಹಗಲಿರುಳು //
2 : ನನ್ನ ಯೋಚನೆ ನಿನ್ನ ಬಳಿಸೇರಲಿ /
ನನ್ನ ಕೂಗು ನಿನ್ನ ಕಿವಿಗೆ ಬೀಳಲಿ //
3 : ಸಂಕಟದಿಂದ ತುಂಬಿದೆ ನನ್ನ ಜೀವನ /
ಪಾತಾಳವ ಸವಿೂಪಿಸಿದೆ ನನ್ನ ಪ್ರಾಣ //
4 : ನಾನಿರುವೆ ಸಮಾಧಿ ಸೇರಲಿರುವವರಂತೆ /
ಇರುವೆ ಶಕ್ತಿಯಿಲ್ಲದ ನರಮಾನವರಂತೆ //
5 : ಇರುವೆ ಹತನಾಗಿ ಸಮಾಧಿ ಸೇರಿದವನಂತೆ /
ಮೃತರಾದವರೊಳು ನಿರಾಕೃತನಾದವನಂತೆ //
ನಿನ್ನಾ ನೆನಕೆಯಿಂದ ಅಳಿದು ಹೋದವನಂತೆ /
ನಿನ್ನಾ ಪಾಲನೆಯಿಂದ ದೂರವಾದವನಂತೆ //
6 : ದಬ್ಬಿರುವೆ ನೀನೆನ್ನನು ಅಧೋಲೋಕಕೆ /
ಅಗಾಧಸ್ಥಳಕೆ, ಗಾಢ ಅಂಧಕಾರಕೆ //
7 : ನಿನ್ನ ಕಡುಕೋಪ ಎರಗಿಬಿಟ್ಟಿದೆ ನನ್ನ ಮೇಲೆ /
ನನ್ನ ಬಾಧಿಸುತ್ತಿವೆ ಅದರ ಕಲ್ಲೋಲ ಮಾಲೆ //
8 : ಆಪ್ತರೂ ಹೇಸಿ ದೂರಸರಿವಂತೆ ಮಾಡಿರುವೆ /
ಬಂಧಿತನಾದ ನಾನು
ಬಿಡಿಸಿಕೊಳ್ಳಲಾಗದಿರುವೆ //
9 : ಮಬ್ಬಾಗಿ ಹೋಗಿವೆ ಕಣ್ಗಳು ಬಾಧೆಯಿಂದ /
ಪ್ರಭೂ, ಕೈಯೊಡ್ಡಿ ಮೊರೆಯಿಡುತ್ತಿರುವೆ
ಸದಾ //
10 : ಮೃತರು ನಿನ್ನದ್ಭುತಗಳನು ಮೆಚ್ಚುವುದುಂಟೆ /
ಸತ್ತ ಜನರೆದ್ದು ನಿನ್ನ ಸ್ತುತಿಸುವುದುಂಟೆ?//
11 : ಸಾರುವುದುಂಟೆ ಸಮಾಧಿಯಲಿ ನಿನ್ನ
ಕೃಪೆಯನು?/
ಅಧೋಲೋಕದಲಿ ನಿನ್ನ
ಪ್ರಾಮಾಣಿಕತೆಯನು?//
12 : ತಿಳಿವರೆ ನಿನ್ನ ಪವಾಡಗಳನು
ಇರುಳ ನಿಶೆಯೊಳು?/
ನಿನ್ನ ನ್ಯಾಯ ನೀತಿಯನು ಮರೆವಾ
ಲೋಕದೊಳು?//
13 : ನಾನಾದರೋ ಪ್ರಭೂ, ಮೊರೆಯಿಡುವೆ ನಿನಗೆ /
ಉದಯದಲೆ ಸೇರುವುದೆನ್ನ ಜಪ ನಿನ್ನ
ಸನ್ನಿಧಿಗೆ //
14 : ಪ್ರಭು, ನನ್ನ ತಳ್ಳಿಬಿಟ್ಟೆಯೇಕೆ?/
ಮುಖವನು ತಿರುಗಿಸಿಕೊಂಡೆಯೇಕೆ?//
15 : ಬಾಲ್ಯದಿಂದಲು ಬಾಧಿತನು, ಮೃತಪ್ರಾಯನು /
ನಿನ್ನ ದಂಡನೆ ಸಹಿಸಿ ಸೊರಗಿದವನು ನಾನು //
16 : ನನ್ನನು ಆವರಿಸಿಕೊಂಡಿದೆ ನಿನ್ನ
ಕಡುಕೋಪಾಗ್ನಿಯು /
ನನ್ನ ಹಾಳುಮಾಡುತ್ತಿದೆ ನಿನ್ನ
ಭಯಂಕರ ದಾಳಿಯು //
17 : ದಿನವೆಲ್ಲಾ ನನ್ನನು ಅವು ಸುತ್ತುಗಟ್ಟಿವೆ /
ಪ್ರವಾಹದಂತೆ ಎನ್ನ ಮೇಲೆ ಹರಿಯುತ್ತಿವೆ //
18 : ಬಂಧುಮಿತ್ರರನು ನನ್ನಿಂದ ದೂರ ಮಾಡಿರುವೆ /
ಅಂಧಕಾರದೊಡನೆ ಸಂಗಾತಿಯ
ನ್ನಾಗಿಸಿರುವೆ //