Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಕೀರ್ತನೆ


1 : ಹೇ ಪ್ರಭು, ನೀಡೆನಗೆ ಸದುತ್ತರವನು / ಕಿವಿಗೊಡು, ದೀನನು, ದಲಿತನು ನಾನು //
2 : ಕಾಪಾಡು ಪ್ರಭು, ನಾ ನಿನ್ನ ಭಕ್ತನು / ಉದ್ಧರಿಸು ನಿನ್ನ ನಂಬಿದ ದಾಸನನು //
3 : ನೀನೆನಗೆ ದೇವನು, ಕರುಣಿಸೆನ್ನನು / ದಿನವೆಲ್ಲ ಪ್ರಭು, ನಿನಗೆ ಮೊರೆಯಿಡುವೆನು //
4 : ನಿನ್ನ ದಾಸನಿಗೆ ನೀಡು ಮನದಾನಂದವನು / ನಿನಗೆ ಅಭಿಮುಖವಾಗಿಸಿರುವೆ ಎನ್ನಾತ್ಮವನು //
5 : ಪ್ರಭು, ನೀನು ದಯಾವಂತನು, ಕ್ಷಮಿಸುವವನು / ಮೊರೆಯಿಡುವವರಿಗೆ ನೀನು ಕೃಪಾಪೂರ್ಣನು //
6 : ಕಿವಿಗೊಡು ಪ್ರಭು, ನನ್ನ ಪ್ರಾರ್ಥನೆಗೆ / ನನ್ನ ವಿಜ್ಞಾಪನೆಗಳ ಕೋರಿಕೆಗೆ //
7 : ಸಂಕಟಬಂದಾಗ ನಿನಗೆ ಮೊರೆಯಿಡುವೆ / ಸದುತ್ತರ ಪಾಲಿಸುವೆಯೆಂದು ನಂಬಿರುವೆ //
8 : ದೇವರುಗಳಲಿ ಪ್ರಭು, ನಿನ್ನಂಥವನಿಲ್ಲ / ನಿನ್ನ ಮಹತ್ಕಾರ್ಯಗಳಿಗೆ ಸಾಟಿಯೇ ಇಲ್ಲ //
9 : ಬರುವುವು ನೀನುಂಟುಮಾಡಿದ ಸಕಲ ಜನಾಂಗಗಳು / ನಿನ್ನ ನಾಮವನು ಘನಪಡಿಸಲು, ನಿನಗೆ ಅಡ್ಡಬೀಳಲು //
10 : ಪ್ರಭು, ನೀನೊಬ್ಬನೇ ದೇವನು / ಅದ್ಭುತಶಾಲಿ, ಮಹೋನ್ನತನು //
11 : ನಿನ್ನ ಸತ್ಯಪಥದಲಿ ನಾ ನಡೆವಂತೆ / ಬೋಧಿಸೆನಗೆ ಪ್ರಭು, ನಿನ್ನ ಮಾರ್ಗವನು // ನಿನ್ನ ನಾಮದಲಿ ಭಯಭಕ್ತಿಯಿರುವಂತೆ / ಅನುಗ್ರಹಿಸೆನಗೆ ನೀ ಏಕಾಗ್ರತೆಯನು //
12 : ಮಾಡುವೆ ದೇವಾ, ನಿನ್ನ ಗುಣಗಾನವನು ಶ್ರದ್ಧೆಯಿಂದ / ಘನಪಡಿಸುವೆ ಸ್ವಾಮಿ, ನಿನ್ನ ಶ್ರೀನಾಮವನು ಅನವರತ //
13 : ನೀನೆನಗೆ ತೋರಿಸಿರುವ ಕರುಣೆ ಮಹತ್ತರವಾದುದಯ್ಯಾ | ಪಾತಾಳದಿಂದ ನನ್ನ ಪ್ರಾಣವನು ಉಳಿಸಿದೆಯಯ್ಯಾ ||
14 : ಗರ್ವಿಗಳೆದ್ದಿಹರು ದೇವಾ, ನನ್ನ ವಿರುದ್ಧವಾಗಿ / ನನ್ನ ಪ್ರಾಣಕೆ ಕಾದಿಹರು ಕ್ರೂರಿಗಳು ಗುಂಪಾಗಿ / ಕಾಣುತ್ತಿಹರವರು ನಿನ್ನನು ಪ್ರಭು, ಅಲಕ್ಷ್ಯವಾಗಿ //
15 : ಪ್ರಭು, ನೀ ದಯಾಳು, ದೇವಾ ನೀ ಕರುಣಾಮೂರ್ತಿ / ಸಹನಶೀಲನು, ಸತ್ಯಸ್ವರೂಪಿ, ಪ್ರೇಮಮೂರ್ತಿ //
16 : ಕಟಾಕ್ಷವಿಟ್ಟು ಕರುಣಿಸೆನ್ನನು / ನೀಡು ನಿನ್ನ ದಾಸನಿಗೆ ಬಲವನು / ರಕ್ಷಿಸು ನಿನ್ನ ದಾಸಿಯ ಮಗನನು //
17 : ನಿನ್ನ ನೆರವು, ಸಾಂತ್ವನ, ನನಗಿದೆಯೆಂದು / ನೀಡೊಂದು ಪ್ರಭು, ಶುಭಸೂಚನೆಯನು / ಅದನೋಡಿ ಶತ್ರು ಪಡಲಿ ಲಜ್ಜೆಯನು //

· © 2017 kannadacatholicbible.org Privacy Policy