1 : ಹಾಡಿರಿ ಶುಭಗೀತೆಯನು ಬಲಪ್ರದನಾದ ದೇವನಿಗೆ / ಮಾಡಿರಿ ಜಯಜಯಕಾರವನು ಯಕೋಬ ಕುಲದೇವನಿಗೆ //
2 : ಆರಂಭಿಸಿ ಸಂಗೀತವನು, ಬಾರಿಸಿ
ಮೃದಂಗವನು /
ನುಡಿಸಿರಿ ಮಧುರ ವೀಣೆಯನು,
ಸ್ವರಮಂಡಲವನು //
3 : ಊದಿರಿ ಕೊಂಬನು ಅಮವಾಸ್ಯೆಯಲಿ /
ಉತ್ಸವದಿನವಾದ ಪೂರ್ಣಿಮೆಯಲಿ //
4 : ದೇವರಿತ್ತ ನಿಯಮವದು ಯಕೋಬ್ಯರಿಗೆ /
ಕೊಟ್ಟಕಟ್ಟಳೆಯದು ಇಸ್ರಯೇಲರಿಗೆ //
5 : ಈಜಿಪ್ಟರಿಗೆದುರಾಗಿ ತೆರಳಿದಂದು /
ಜೋಸೆಪ್ಯರಿಗಾತ ವಿಧಿಸಿದಾಜ್ಞೆಯದು //
6 : ಅಪರಿಚಿತ ವಾಣಿಯೊಂದು ನುಡಿಯಿತೀ
ಮಾತನು:/
“ತಪ್ಪಿಸಿದೆ ನಾನು ಹೆಗಲಮೇಲೆ ನೀ
ಹೊರೆಹೊರುವುದನು
ಬಿಡುಗಡೆ ಮಾಡಿದೆ ಗೂಡೆಯೆತ್ತುವ
ಕೈಗಳನು //
7 : “ಸಂಕಟದಲಿ ಮೊರೆಯಿಟ್ಟಾಗ ವಿಮೋಚಿಸಿದೆ
ನಿನ್ನನು /
ಗುಡುಗುವ ಮೇಘದಿಂದ ಕೊಟ್ಟೆ ನಿನಗೆ
ಸದುತ್ತರವನು /
ಮೆರೀಬಾ ಪ್ರವಾಹಗಳ ಬಳಿ ಪರೀಕ್ಷಿಸಿದೆ
ನಿನ್ನನು,//
8 : “ನನ್ನ ಜನರೇ, ಕಿವಿಗೊಡಿ ನನ್ನ ಬುದ್ಧಿಮಾತಿಗೆ /
ಹಾಗೆ ಮಾಡಿದರೆ ಇಸ್ರಯೇಲರೆ, ಹಿತ
ನಿಮಗೆ, //
9 : “ಇರಬಾರದು ಅನ್ಯದೇವತೆಗಳು ನಿಮ್ಮಲಿ /
ಪರದೇವತೆಗಳ ಪೂಜೆ ಕೂಡದು ನಿಮ್ಮಲಿ,//
10 : “ಈಜಿಪ್ಟಿನಿಂದ ನಿಮ್ಮನು ಕರೆತಂದ ಸ್ವಾಮಿ
ದೇವನು ನಾನು /
ತೆರೆಯಿರಿ ನಿಮ್ಮ ಬಾಯನು, ತುಂಬಿಸಿ
ತೃಪ್ತಿಪಡಿಸುವೆ ನಾನದನು //
11 : “ಆದರೆ ಕೇಳಲಿಲ್ಲಾ ಜನತೆ ನನ್ನ ಮಾತುಗಳನು /
ತೋರಲಿಲ್ಲ ಇಸ್ರಯೇಲರು ನನಗೆ
ವಿಧೇಯತೆಯನು, //
12 : “ಎಂತಲೇ ಕೈಬಿಟ್ಟೆ ಅವರನು
ಹಟಮಾರಿಗಳೆಂದು /
ತಮಗಿಷ್ಟಬಂದಂತೆಯೆ
ನಡೆದುಕೊಳ್ಳಲಿಯೆಂದು, //
13 : “ಒಳಿತಾಗಿರುತ್ತಿತ್ತು ನನ್ನ ಜನರು ನನಗೆ
ಕಿವಿಗೊಟ್ಟಿದ್ದರೆ /
ಮೇಲಾಗಿರುತ್ತಿತ್ತು ಇಸ್ರಯೇಲರು ನನ್ನ ಹಾದಿ
ಹಿಡಿದಿದ್ದರೆ, //
14 : “ಅಡಗಿಸುತ್ತಿದ್ದೆ ಅವರ ಶತ್ರುಗಳನು
ಸುಲಭವಾಗಿ /
ಸದೆಬಡಿಯುತ್ತಿದ್ದೆ ಅವರ ವೈರಿಗಳನು
ಸರಿಯಾಗಿ, //
15 : “ಮುದುರಿಕೊಳ್ಳುತ್ತಿದ್ದರಾ ಎದುರಾಳಿಗಳು
ಅವರ ಮುಂದೆ /
ಅಳಿಯದೆ ಉಳಿದುಕೊಳ್ಳುತ್ತಿತ್ತು ಅವರಿಗಾದ
ದಂಡನೆ ಮುಗಿವಿಲ್ಲದೆ,//
16 : “ನಿಮಗಾದರೋ ಬಡಿಸುತ್ತಿದ್ದೆ ಅತ್ಯುತ್ತಮ
ಗೋದಿಯನು /
ಉಣಿಸುತ್ತಿದ್ದೆ ನಾ ನಿಮಗೆ ಬೆಟ್ಟದ
ಜೇನುತುಪ್ಪವನು” //