1 : ಕಿವಿಗೊಟ್ಟು ಆಲಿಸೋ,
ಇಸ್ರಯೇಲರ ಮೇಷಪಾಲನೇ /
ಜೋಸೆಫನ ವಂಶಜರನು ಕುರಿಹಿಂಡಂತೆ
ಕರೆತಂದವನೇ /
ವಿರಾಜಿಸು, ಕೆರೂಬಿಯರ ಮಧ್ಯೆ
ಆಸೀನನಾದವನೇ //
2 : ಶೋಭಿಸು ಎಫ್ರಯಿಮ್, ಬೆನ್ಯಮಿನ್, ಮನಸ್ಸೆ
ಕುಲಗಳ ಮುಂದೆ /
ತೋರ್ಪಡಿಸು ನಿನ್ನ ಶೌರ್ಯವನು,
ಬಂದು ಜಯಪ್ರದನಾಗು ನಮಗೆ //
3 : ಎಲೈ ದೇವನೇ, ಪುನರುದ್ಧಾರ ಮಾಡೆಮ್ಮನು /
ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು
ರಕ್ಷಣೆಯನು //
4 : ಸ್ವಾಮಿ ದೇವನೇ, ಸರ್ವಶಕ್ತನೆ /
ಅದೆನಿತು ಕಾಲ ನೀ ಮುನಿದಿರುವೆ /
ನಿನ್ನವರ ಮೊರೆಯನಾಲಿಸದಿರುವೆ?//
5 : ರೋದನವನೆ ಅವರಿಗೆ ಅನ್ನವಾಗಿಸಿದೆ / ಹರಿಯುವ ಕಂಬನಿಯನೆ ಪಾನವಾಗಿಸಿದೆ //
6 : ನೆರೆಯವರಿಗೆ ನಮ್ಮನು
ಕಲಹಕಾರಣವಾಗಿಸಿದೆ |
ಶತ್ರುಗಳ ಅಪಹಾಸ್ಯಕೆ ನಮ್ಮನು
ಗುರಿಪಡಿಸಿದೆ ||
7 : ಸರ್ವಶಕ್ತನಾದ ದೇವನೆ, ಉದ್ಧರಿಸೆಮ್ಮನು /
ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು
ರಕ್ಷಣೆಯನು //
8 : ಈಜಿಪ್ಟಿನಿಂದ ದ್ರಾಕ್ಷಾಲತೆಯೊಂದನು ನೀ
ತಂದೆ /
ಅನ್ಯಜನತೆಯನು ಹೊರದೂಡಿ ಅದನು
ನಾಟಿಮಾಡಿದೆ //
9 : ಹದಮಾಡಿದೆ ಅದಕೆ ಬೇಕಾದ ನೆಲವನ್ನೆಲ್ಲಾ /
ಬೇರೂರಿ ಹಬ್ಬಿಕೊಂಡಿತದು ನಾಡಿನಲ್ಲೆಲ್ಲಾ //
10 : ಬೆಟ್ಟಗುಡ್ಡಗಳನಿದೋ ಕವಿದಿವೆ ಅದರ
ಕುಡಿಗಳು /
ದೇವದಾರು ಮರಗಳ ಮೇಲೆ ಹಬ್ಬಿವೆ
ಬಳ್ಳಿಗಳು //
11 : ಹರಡಿವೆ ಅದರ ಕೊಂಬೆಗಳು
ಸಮುದ್ರದವರೆಗೆ /
ಬೆಳೆದಿವೆ ಆ ರೆಂಬೆಗಳು ಮಹಾನದಿಯ
ವರೆಗೆ //
12 : ಕಿತ್ತುಹಾಕಿದೆಯೇಕೆ ಅದರ ಬೇಲಿಯನು?/
ತರಿದುಬಿಡುವವರಲ್ಲವೆ ದಾರಿಗರು
ಅದನು?//
13 : ನಾಶಮಾಡುವುವು ಅದನು
ಕಾಡುಹಂದಿಗಳು /
ತಿಂದುಹಾಕುವುವು ಅದನು ಅರಣ್ಯ
ಮೃಗಗಳು //
14 : ಸರ್ವಶಕ್ತನಾದ ದೇವರೇ, ಮರಳಿ
ಮುಖತೋರಿಸು /
ಪರದಿಂದೀಕ್ಷಿಸಿ ಆ ದ್ರಾಕ್ಷಾಲತೆಯನು
ಪರಾಮರಿಸು //
15 : ಕಾಪಾಡು ನಿನ್ನ ಬಲಗೈ ನೆಟ್ಟು ಸಾಕಿದ
ಸಸಿಯನು /
ಕಾದಿರಿಸು ನಿನಗೆಂದೇ ನೀ ಬೆಳೆಸಿದಾ
ಬಳ್ಳಿಯನು //
16 : ಅದನು ಬೆರಣಿಯಂತೆ
ಸುಟ್ಟುಹಾಕಿದವರಾದರೋ /
ನಿನ್ನ ಕೋಪದೃಷ್ಟಿಯಿಂದಲೆ ನಾಶವಾಗುವರು //
17 : ಕೈ ಹಿಡಿದು ಕಾಪಾಡು ನಿನ್ನ ಬಲಗೈ
ಉದ್ಧರಿಸಿದ ಪುರುಷನನು /
ನಿನಗೆಂದೇ ನೀ ಸಾಕಿ ಬೆಳೆಸಿದಾ ವರಪುತ್ರನನು //
18 : ಆಗ ಬಿಟ್ಟಗಲುವುದಿಲ್ಲ ನಾವೆಂದೆಂದಿಗು
ನಿನ್ನನು /
ಪುನರ್ಜೀವಗೊಳಿಸು, ಮಾಳ್ಪೆವು ನಿನ್ನ
ನಾಮಸ್ಮರಣೆಯನು //
19 : ಸರ್ವಶಕ್ತನಾದ ದೇವನೆ, ಉದ್ಧರಿಸು ನಮ್ಮನು /
ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು
ರಕ್ಷಣೆಯನು //