1 : ಹೊಕ್ಕಿದರು ದೇವಾ, ಮ್ಲೇಚ್ಫರು ನಿನ್ನ ಸ್ವಂತನಾಡನು / ಹೊಲೆ ಮಾಡಿಹರು ನಿನ್ನ ಪವಿತ್ರ ದೇವಾಲಯವನು / ಹಾಳುದಿಬ್ಬವನ್ನಾಗಿಸಿಹರು ಜೆರುಸಲೇಮ್ ನಗರವನು //
2 : ಅರ್ಪಿಸಿದರು ನಿನ್ನ ದಾಸರಾ ಶವಗಳನು
ಗಗನ ಪಕ್ಷಿಗಳಿಗೆ /
ಹಾಕಿದರು ನಿನ್ನ ಭಕ್ತರ ಮಾಂಸವನು
ಕಾಡುಮೃಗಗಳಿಗೆ //
3 : ನೀರಂತೆ ಚೆಲ್ಲಿಹರಾ ನೆತ್ತರನು ಜೆರುಸಲೇಮ್
ಸುತ್ತಲು /
ನಮ್ಮವರ ಶವಗಳನು ಹೂಳಲು ಯಾರೂ
ಇಲ್ಲದಿರಲು //
4 : ನಿಂದಾಸ್ಪದರಾದೆವು ನೆರೆಹೊರೆಯ
ಜನಾಂಗಗಳಿಗೆ /
ಗುರಿಯಾದೆವು ಸುತ್ತಣವರ
ಹಾಸ್ಯಕುಚೋದ್ಯಗಳಿಗೆ //
5 : ನಿನ್ನ ಕೋಪತಾಪ ಹೇ ಪ್ರಭೂ, ಇನ್ನೆಷ್ಟರವರೆಗೆ? / ಉರಿಯುತ್ತಿರಬೇಕೆ ಸದಾ ನಿನ್ನ ರೋಷಾಗ್ನಿಯ ಧಗೆ?//
6 : ಸುರಿ ರೌದ್ರವನು ನಿನ್ನನರಿಯದಾ ಮ್ಲೇಚ್ಫರ
ಮೇಲೆ /
ನಿನ್ನ ಶ್ರೀನಾಮವನು ಉಚ್ಚರಿಸದಾ ರಾಜ್ಯಗಳ
ಮೇಲೆ //
7 : ನುಂಗಿಬಿಟ್ಟರಾ ಜನರು ಯಕೋಬ
ವಂಶದವರನು /
ಹಾಳು ಮಾಡಿ ಬಿಟ್ಟರವರ ನಿವಾಸ ಸ್ಥಳಗಳನು //
8 : ಹೊರಿಸಬೇಡ ಪೂರ್ವಿಕರ ತಪ್ಪುಗಳನು ನಮ್ಮ
ಮೇಲೆ /
ಉರಿಸಂಕಟದಲ್ಲಿರುವೆವು, ತೋರೆಮಗೆ
ಕರುಣೆಯನೀಗಲೆ //
9 : ದೇವಾ, ಮುಕ್ತಿದಾತ, ನೆರವಾಗು ನಿನ್ನ
ನಾಮಮಹಿಮೆಯ ನಿಮಿತ್ತ /
ಪಾಪಗಳನು ಅಳಿಸಿ ನಮ್ಮನುದ್ಧರಿಸು ನಿನ್ನ
ನಾಮದ ಪ್ರಯುಕ್ತ //
10 : “ಅವರ ದೇವರೆಲ್ಲಿ?” ಎಂದು ಮ್ಲೇಚ್ಫರು
ಆಡಿಕೊಳ್ಳುವುದೇಕೆ?/
ಆಗಲಿ ಪ್ರತೀಕಾರ ನಿನ್ನ ಸೇವಕರ ರಕ್ತ
ಸುರಿಸಿದವರಿಗೆ /
ಆಗರ್ಥವಾಗುವುದವರಿಗೆ; ಕಾಣಲಿ ಅದು
ನಮ್ಮ ಕಣ್ಗಳಿಗೆ //
11 : ಸೆರೆಹೋಗಿರುವವರ ನರಳಾಟಕೆ ಕಿವಿಗೊಡು
ನೀನು /
ನಿನ್ನ ಶಕ್ತಿ ಕಾದಿಡಲಿ ಸಾವಿಗೀಡಾಗಿರುವ
ಅವರನು //
12 : ಪ್ರಭು, ನಿನ್ನನು ನಿಂದಿಸಿದ ಅನ್ಯಜನರ ಮೇಲೆ /
ಎರಗಲಿ ಏಳ್ಮಡಿ ದಂಡನೆ ಅವರೆದೆಯ
ಮೇಲೆ //
13 : ಆಗ ಸಲ್ಲಿಸುವೆವು ಸದಾಕಾಲ ಕೃತಜ್ಞತೆಯನು
ನಿನಗೆ /
ಸ್ಮರಿಸುವೆವು ನಿನ್ನ ಮಹಿಮೆಯನು
ತಲತಲಾಂತರದವರೆಗೆ /
ಹೇ ದೇವಾ, ನಾವು ನಿನ್ನ ಪ್ರಜೆ, ನೀ ಪಾಲಿಸುವ
ಮಂದೆ //