1 : ಮೊರೆಯಿಡುವೆನು, ಕೂಗಿ
ಮೊರೆಯಿಡುವೆನು /
ಸ್ವಾಮಿ ದೇವನು ನನಗೆ
ಕಿವಿಗೊಡುವನು //
2 : ಸಂಕಟದ ವೇಳೆಯೊಳು ಸ್ವಾಮಿಯನು ನಾ ಕರೆದೆ / ಇರುಳೆಲ್ಲ ಆಯಾಸವರಿಯದೆ ಕೈಚಾಚಿದೆ / ಎನ್ನ ಮನಸ್ಸಿತ್ತು ದುಃಖಶಮನಗೊಳ್ಳದೆ //
3 : ದೇವರನು ಸ್ಮರಿಸಿ ನಿಟ್ಟುಸಿರಿಡುತಿಹೆನು /
ಹಂಬಲಿಸಿ ಮನದಲೇ ನಾ ಮರುಗುತಿಹೆನು //
4 : ನಿದ್ರಿಸದಂತೆ ನೀನೆನ್ನ ಕಣ್‍ಗಳ ತೆರೆದಿರುವೆ /
ನುಡಿಯಲಾಗದ ತೆರದಿ ನಾ
ತಳಮಳಗೊಂಡಿರುವೆ //
5 : ನೆನಪಿಗೆ ತಂದುಕೊಂಡೆ ಹಳೆಯ ದಿನಗಳನು /
ಸ್ಮರಿಸಿಕೊಂಡೆ ಉರುಳಿ ಹೋದ ವರುಷಗಳನು //
6 : ನಿನ್ನ ಧ್ಯಾನ ಬರುತ್ತದೆ ನೆನಪಿಗೆ ರಾತ್ರಿಯೊಳು /
ಆಲೋಚನೆ ಸುಳಿಯುತ್ತದೆ
ನನ್ನಾಂತರ್ಯದೊಳು /
ಈ ತೆರನ ಪ್ರಶ್ನೆಯೇಳುತ್ತದೆನ್ನ ಮನದೊಳು: //
7 : ಕೈಬಿಟ್ಟುಬಿಡುವನೋ ಪ್ರಭು ಸದಾಕಾಲಕು?/
ಕೃಪೆಯನು ತೋರನೋ ಮತ್ತೆಂದೆಂದಿಗೂ?//
8 : ಆತನಚಲ ಪ್ರೀತಿ ಇನ್ನು ಮಾಯವಾಯಿತೋ?/
ಆತನ ವಾಗ್ದಾನ ತಲತಲಾಂತರಕು
ಮುಗಿಯಿತೋ?//
9 : ಕರುಣೆ ತೋರಲು ದೇವನು
ಮರೆತುಬಿಟ್ಟನೋ?/
ಕರುಳಿಗೆ ಕೋಪದಿಂದ ಬರೆ
ಹಾಕಿಕೊಂಡನೋ?//
10 : ಆಗ ನಾನು “ನೆನೆಯಲೀಪರಿ, ನನ್ನ
ಚಪಲತೆಯೇ ಕಾರಣ /
ಮಾಡುವೆನೀಗ ಪರಾತ್ಪರನಾ ಪವಾಡ
ವರುಷಗಳ ಸ್ಮರಣ”//
11 : ವರ್ಣಿಸುವೆನು ಪ್ರಭುವಿನ
ಮಹತ್ಕಾರ್ಯಗಳೆಲ್ಲವನು /
ಸ್ಮರಿಸುವೆ ನೀನಾದಿಯಿಂದ ನಡೆಸಿದ
ಅದ್ಭುತಗಳನು //
12 : ಧ್ಯಾನಿಸುವೆ ನಾನಿನ್ನ ಕಾರ್ಯಗಳನೆಲ್ಲ /
ಮಾಡುವೆ ಮನನ ನಿನ್ನ ಪವಾಡಗಳನೆಲ್ಲ //
13 : ನಿನ್ನ ಮಾರ್ಗ ದೇವಾ,
ಪರಿಶುದ್ಧವಾದುದಯ್ಯಾ /
ನಮ್ಮ ದೇವರಂತಹ ಮಹಾ
ದೇವರಾರಯ್ಯಾ?//
14 : ಅದ್ಭುತಗಳನು ನಡೆಸುವಂತಹ ದೇವ
ನೀನೆಮಗೆ /
ತೋರ್ಪಡಿಸಿದೆ ನಿನ್ನಾ ಪರಾಕ್ರಮವನು
ಜನತೆಗೆ //
15 : ನಿನ್ನ ಭುಜಬಲದಿಂದ ಯಕೋಬ, ಜೋಸೆಫ್
ವಂಶಜರನು /
ಉದ್ಧಾರ ಮಾಡಿದೆ ನಿನ್ನ ಪ್ರಜೆಗಳಾಗಿಹ ಆ
ಜನರನು //
16 : ಜಲರಾಶಿಗಳು ದೇವಾ, ನಿನ್ನ ಕಂಡವು /
ಕಾಣುತ್ತಲೇ ನಡುಗಿ ತಳಮಳಗೊಂಡವು /
ತಳದವರೆಗೂ ಅಲ್ಲಕಲ್ಲೋಲವಾದವು //
17 : ಮಳೆಗರಿಯಿತಾ ಮೇಘ ಮಂಡಲವು /
ಭೋರ್ಗರೆಯಿತಾಗ ಅಂತರಿಕ್ಷವು /
ಮಿಂಚಿದವು ಎಲ್ಲೆಡೆ ನಿನ್ನಂಬುಗಳು //
18 : ಮೊಳಗಿತು ನಿನ್ನ ಗುಡುಗು ಬಿರುಗಾಳಿಯಲಿ /
ಹೊಳೆಯಿತು ನಿನ್ನ ಮಿಂಚು ಇಡೀ ಲೋಕದಲಿ /
ಕಂಪಿಸಿತೀ ಭೂಮಂಡಲ ನಡುನಡುಗಿ //
19 : ಸಾಗರವನೆ ನೀ ತುಳಿದು ನಡೆದೆ /
ಮಹಾಸಾಗರವನೆ ನೀ ದಾಟಿದೆ /
ಹೆಜ್ಜೆಯ ಗುರುತನೂ ಕಾಣಬಿಡದೆ //
20 : ಕುರುಬನು ತನ್ನ ಕುರಿಮಂದೆಯನು
ಕರೆದೊಯ್ಯುವಂತೆ /
ಮೋಶೆ, ಆರೋನರಿಂದ ನಿನ್ನ ಪ್ರಜೆಗಳನು
ನಡೆಸಿದೆ //